ಇದು ಈ ಹೆಣ್ಣುಮಗಳೊಬ್ಬಳ ಸಮಸ್ಯೆ ಮಾತ್ರ ಅಲ್ಲ, ನಮ್ಮಲ್ಲಿ ಹೆಚ್ಚಿನ ಹೆಣ್ಮಕ್ಕಳು ಈ ಸಮಸ್ಯೆ ಎದುರಿಸುತ್ತಾರೆ. ಮುಗಿಸಲೇ ಬೇಕಾದ ಆಫೀಸ್‌ ಹಾಗೂ ಮನೆ ಕೆಲಸದ ಹೊರೆ. ಅದರ ನಡುವೆ ಮಕ್ಕಳ ಗಲಾಟೆ. ಆಗ ರೇಗಿ ಹೋಗುತ್ತೆ. ಮಕ್ಕಳಿಗೆ ಬೈದು, ಹೊಡೆದು ಅವರು ಅಳುತ್ತ ಕೂತಾಗ ಸಮಾಧಾನ ಮಾಡಲೂ ಆಗದೇ ಸುಮ್ಮನಿರಲೂ ಮನಸ್ಸಾಗದೇ ಪೇಚಾಡಿಕೊಳ್ಳುತ್ತೇವೆ. ಬೈಯದೇ, ಹೊಡೆಯದೇ ತುಂಟ ಮಕ್ಕಳನ್ನು ಸಂಭಾಳಿಸಬಹುದಾ ಅನ್ನುವುದು ಈ ಕಾಲದ ಆಲ್‌ಮೋಸ್ಟ್‌ ಎಲ್ಲ ಹೆತ್ತವರ ಮುಂದಿರುವ ಪ್ರಶ್ನೆ.

ತಾಯ್ತನ ಫೀಲ್ ಮಾಡಿಕೊಳ್ಳಬೇಕಾ? 2ನೇ ಮಗುವಿನ ಬಗ್ಗೆ ಯೋಚಿಸಿ...!

ತುಂಟಾಟವನ್ನು ಕೆಲಸಕ್ಕೆ ಕನ್ವರ್ಟ್‌ ಮಾಡಿ

ಬೈಯದೇ ಮಕ್ಕಳನ್ನು ಪೋಷಿಸಬೇಕು ಅನ್ನೋ ನಿರ್ಧಾರ ಗಟ್ಟಿಯಾಗಿದ್ದರೆ ಖಂಡಿತಾ ಪಾಲನೆ ಮಾಡಬಹುದು. ನೀವು ಸೂಕ್ಷ್ಮವಾಗಿ ಗಮನಿಸಿ, ಮಕ್ಕಳು ಬೈದಾಗ ಹೆದರಿ ಆ ಕೆಲಸ ಮಾಡದೇ ಇರುತ್ತದೆ. ಅದನ್ನೇ ಅವರಿಗೆ ಆಟದ ಮೂಲಕ ಅಥವಾ ಟಾಸ್ಕ್‌ ನೀಡುವ ಮೂಲಕ ಕಲಿಸಿದರೆ ಅವರದನ್ನು ಲೈಫ್‌ಲಾಂಗ್‌ ಅಳವಡಿಸಿಕೊಂಡು ಬಿಡುತ್ತಾರೆ. ಇದಕ್ಕೆ ಹೆಚ್ಚು ಟೈಮ್‌ ಬೇಕಾಗುತ್ತೆ. ಅಷ್ಟುಟೈಮ್‌ ನಮ್ಮಲ್ಲಿಲ್ಲ ಅಂತ ಹೇಳಬಹುದು. ಆದರೆ, ನೀವು ಬೈದು ರಂಪ ಮಾಡಿ, ಮತ್ತೆ ಅಳುತ್ತ ಕೂತ ಮಗುವನ್ನು ಸಂಭಾಳಿಸಿ ಅಥವಾ ಸಂಭಾಳಿಸದೇ ಒದ್ದಾಡುವ ಹೊತ್ತಲ್ಲಿ ಈ ಕೆಲಸವನ್ನು ಆರಾಮವಾಗಿ ಮುಗಿಸಬಹುದು. ಆಗ ನಿಮ್ಮ ಮನಸ್ಸೂ ಫ್ರೆಶ್‌ ಆಗಿರುತ್ತದೆ.

ಉದಾಹರಣೆಗೆ ನಿಮ್ಮ ಮಗ ಮನೆಯೆಲ್ಲ ನೀರು ಚೆಲ್ಲಿ ಬಹಳ ತುಂಟಾಟ ಮಾಡುತ್ತಾನೆ ಅಂದುಕೊಳ್ಳಿ. ಅಂದರೆ ಅವನಿಗೆ ನೀರಲ್ಲಿ ಆಟ ಆಡುವುದು ಬಹಳ ಖುಷಿ ಅಂತಾಯ್ತು. ಒಂದಿಷ್ಟುಪುಟ್ಟಪುಟ್ಟಪಾತ್ರೆ ಕೊಟ್ಟು ಅದನ್ನು ತೊಳೆಯಲು ಅವನಿಗೆ ಪ್ರೇರೇಪಿಸಿ. ಮೊದ ಮೊದಲು ಇದರಿಂದ ನಿಮ್ಮ ಕೆಲಸ ದುಪ್ಪಟ್ಟಾಗಬಹುದು. ಆದರೂ ಅವನ ಕೆಲಸವನ್ನು ಹೊಗಳಿ ಏನಾದ್ರೂ ಸಣ್ಣಪುಟ್ಟಗಿಫ್ಟ್‌ ನೀಡಿ. ಕ್ರಮೇಣ ಆತ ತನ್ನ ತುಂಟಾಟವನ್ನು ಕೆಲಸದತ್ತ ತಿರುಗಿಸುತ್ತಾನೆ. ಮಗಳು ಪದೇ ಪದೇ ಸೋಫಾದ ಮೇಲೆ ಹತ್ತಿ ಹಾರಿ ರಾಡಿ ಎಬ್ಬಿಸುತ್ತಾಳೆ, ಕಾಲಲ್ಲಿ ಕೊಳೆ ಮೆತ್ತಿಕೊಂಡು ಬರುತ್ತಾಳೆ. ಮಗಳಿಗೆ ಬಟ್ಟೆತೊಳೆದು ಜಾಲಾಡಿಸಿ ಒಣ ಹಾಕೋ ಕೆಲಸ ಹೇಳಿ ಕೊಡಿ. ಮೆಷಿನ್‌ನ ಹಂಗಿಲ್ಲದೇ ಅವಳ ಬಟ್ಟೆಅವಳೇ ತೊಳೆದುಕೊಳ್ಳೋದನ್ನು ಕೆಲವೇ ದಿನದಲ್ಲಿ ಕಲಿಯುತ್ತಾಳೆ.

ಸೆಲೆಬ್ರಿಟಿ ಅಮ್ಮಂದಿರು ಮಕ್ಕಳನ್ನು ಹೇಗೆ ನೋಡ್ಕೋತಾರೆ?

ಮಕ್ಕಳು ಹೇಳಿದ ಕೆಲಸವನ್ನು ಕೂಡಲೇ ಮಾಡುತ್ತಾರೆ ಅಂತಲ್ಲ, ಒಂದಿನ ಮಾಡಿದ್ರು ಅಂತ ಮರು ದಿನವೂ ಇದೇ ಕೆಲಸ ಮಾಡಬಹುದು ಅಂತನೂ ಅಲ್ಲ. ಅವರಿಗೆ ಮತ್ತೆ ಮತ್ತೆ ಕೆಲಸದಲ್ಲಿ ಆಸಕ್ತಿ ಬರುವ ಹಾಗೆ ಕ್ರಿಯೇಟಿವ್‌ ಐಡಿಯಾ ಕೊಡಬೇಕು. ಪಾತ್ರೆ ತೊಳೆಯುವಾಗ ಪೇಪರ್‌ ಬೋಟ್‌ ಮಾಡಿ ಒಂದು ಪಾತ್ರೆಯಲ್ಲಿ ಅದನ್ನು ತೇಲಬಿಟ್ಟು ಆಟ ಆಡ್ಕೊಂಡು ಕೆಲಸ ಮಾಡೋ ಹಾಗೆ ಮಾಡಬಹುದು.

ಇದೆಲ್ಲಕ್ಕಿಂತ ಮುಖ್ಯವಾದ ಇನ್ನೊಂದು ವಿಷಯ

ಕಾರ್ಟೂನ್‌ಗಳನ್ನು ಹೆಚ್ಚೆಚ್ಚು ನೋಡುವ, ಅದಕ್ಕೆ ಅಡಿಕ್ಟ್ ಆಗಿರುವ ಮಕ್ಕಳನ್ನು ಈ ರೀತಿ ಸಂಭಾಳಿಸೋದು ಕಷ್ಟ. ಕೆಟ್ಟಹಠ ಅವರಿಗಿರುತ್ತೆ. ಇಂಥದ್ದಕ್ಕೆಲ್ಲ ಅವರು ಬಗ್ಗಲ್ಲ. ಅಂಥ ಮಕ್ಕಳಿಗೆ ನಿರ್ಲಕ್ಷ್ಯವೇ ಮದ್ದು. ಅವರ ತುಂಟಾಟಕ್ಕೆ ಯಾವುದೇ ರೆಸ್ಪಾನ್ಸ್‌ ತೋರಿಸಿದೇ ನಿರ್ಲಕ್ಷಿಸಿದರೆ ಕ್ರಮೇಣ ಮಗು ನಮ್ಮ ದಾರಿಗೆ ಬರುತ್ತೆ. ಆದರೆ ಅದಕ್ಕೂ ಮೊದಲು ಕಾರ್ಟೂನ್‌ ಚಟ ಬಿಡಿಸಬೇಕು. ದಿನಕ್ಕೆ ಅರ್ಧ ಅಥವಾ ಒಂದು ಗಂಟೆ ಮಾತ್ರ ಟೈಮ್‌ ಫಿಕ್ಸ್‌ ಮಾಡಬೇಕು. ಇದೆಲ್ಲ ಒಂದೆರಡು ದಿನದಲ್ಲಿ ಆಗುವಂಥಾದ್ದಲ್ಲ. ಈಗ ಶುರು ಮಾಡಿದರೆ ಒಂದಿಷ್ಟುದಿನಗಳಾದ ಮೇಲೆ ಮಕ್ಕಳನ್ನು ಸುಧಾರಿಸೋದು ಸುಲಭವಾಗುತ್ತೆ.

ನಿಮ್ಗೆ ಸಿಟ್ಟು ಬರದಂತೆ ಮಾಡಲು..

ಮನೆಕೆಲಸ, ಜವಾಬ್ದಾರಿಯ ನಡುವೆ ಮಕ್ಕಳೂ ಕಿರಿಕಿರಿ ಮಾಡುತ್ತಿದ್ದರೆ ಸಿಟ್ಟು ಬಂದೇ ಬರುತ್ತೆ. ಆದರೆ ಹೆತ್ತವರು ತಮ್ಮ ಖುಷಿಗಾಗಿ ಒಂದಿಷ್ಟುಹೊತ್ತು ಮೀಸಲಿಟ್ಟರೆ ಮಕ್ಕಳನ್ನು ಸಿಟ್ಟಲ್ಲದೇ ಸಂಭಾಳಿಸಬಹುದು ಅನ್ನುತ್ತೆ ಇತ್ತೀಚಿನ ಅಧ್ಯಯನ. ಜೊತೆಗೆ ದಿನಕ್ಕೆ ಸ್ವಲ್ಪ ಹೊತ್ತು ಯೋಗ, ಪ್ರಾಣಾಯಾಮ, ಧ್ಯಾನಕ್ಕೆ ಮೀಸಲಿಟ್ಟರೆ ಮನಸ್ಸು ಲವಲವಿಕೆಯಿಂದ ಇರುತ್ತೆ. ಮಕ್ಕಳ ತುಂಟತನವನ್ನೂ ಎನ್‌ಜಾಯ್‌ ಮಾಡಬಹುದು. ಮನೆ ಕೆಲಸ ಎಲ್ಲ ಒಂದೇ ದಿನದಲ್ಲಿ ಮುಗಿಸ್ತೀನಿ ಅನ್ನುವ ಹಠ ಬೇಡ. ನಿಧಾನಕ್ಕೆ ಎನ್‌ಜಾಯ್‌ ಮಾಡ್ಕೊಂಡು ಕೆಲಸ ಮಾಡ್ತಿದ್ರೆ ಅದು ಹೊರೆ ಅನಿಸಲ್ಲ. ಮಕ್ಕಳು ನಾವು ಹೇಳೋದನ್ನು ಕೇಳೋದಕ್ಕಿಂತ ನಾವು ಮಾಡೋದನ್ನು ತಾವೂ ಮಾಡುತ್ತವೆ. ಸೋ, ನಿಮ್‌ ಮಗು ಹೇಗಿರಬೇಕು ಅನ್ನುವುದು ನಿಮ್ಮ ಕನಸೋ ಹಾಗೇ ನೀವಿರಿ, ಅಷ್ಟೇ!