Asianet Suvarna News Asianet Suvarna News

ಕೊನೆಗೂ ಪ್ರೀತಿಯಲ್ಲಿ ಗೆದ್ದಿದ್ದು ನಾನಾ? ಅವನಾ?

ಪ್ರೀತಿಗೆ ಇತಿಶ್ರೀ ಹಾಡಿದ ಮೇಲೆ ನೆಮ್ಮದಿಯಾಗಿದ್ದೀನಿ ಎನ್ನುವುದಂತೂ ಗ್ಯಾರಂಟಿ. ಪ್ರೀತಿ ಇದಿಯಾ? ಇಲ್ಲವಾ? ಇದ್ದರೆ ಈ ಕಿತ್ತಾಟ ಏಕೆ? ಈ ಪ್ರಶ್ನೆಗಳಿಗೆ ಈಗ ಜಾಗವಿಲ್ಲ. ಪ್ರೀತಿಯಲ್ಲಿ ಬಿದ್ದ ಹುಡುಗಿಯೊಬ್ಬಳ ಮಾತುಗಳು ಇಲ್ಲಿವೆ ನೋಡಿ. 

Soliloquy  of girl who fell in love
Author
Bengaluru, First Published May 8, 2019, 3:43 PM IST

ಪ್ರೀತಿಯ ಬಗ್ಗೆ ಬರೆಯೋದಕ್ಕೆ ರಿಸ್ಟ್ರಿಕ್ಷನ್ ಇದೆ. ಯಾಕೆಂದರೆ ಪ್ರೀತಿ ಮುಂದೆ ಗೆದ್ದವಳು ನಾನು. ಪ್ರೀತಿನ ಸೋಲಿಸಿ ದವಳು. ಆ ಪ್ರೀತಿ ಸೋತಾಗ ಅವನೂ ಸತ್ತ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟವಳು. ನನ್ನಿಷ್ಟದ ಪುಸ್ತಕದಲ್ಲಿ ‘ಪ್ರೀತಿಸುವವರನ್ನು ಕೊಂದುಬಿಡಿ’ ಅಂತ ನಿರ್ದಾಕ್ಷಿಣ್ಯವಾಗಿ ಹೇಳಲಾಗಿದೆ.

ಅದು ಸಾಧ್ಯನಾ ಅಂತ ಯೋಚಿಸುತ್ತಿದ್ದೆ, ಆದರೆ ಪುಸ್ತಕದ ಕೊನೆ ಪುಟ ಓದೋ ಹೊತ್ತಿಗೆ ನಾನು ಪ್ರೀತಿಸಿದವನು ಸತ್ತಿದ್ದ. ಅಷ್ಟಕ್ಕೂ ಅವನೇನು ನನ್ನನ್ನು ಪ್ರೀತಿಸಿದ್ದನಾ ಎನ್ನುವುದು ಕೊನೆವರೆಗೂ ಪ್ರಶ್ನೆಯಾಗೇ ಉಳಿದಿತ್ತು. ಪ್ರೀತಿಯಲ್ಲಿ ಪೊಸೆಸಿವ್‌ನೆಸ್‌ಗೆ ನನ್ನ ಬಲಿ ಕೊಟ್ಟನಾ? ಅದೂ ಗೊತ್ತಿಲ್ಲ. ಆದರೆ ಇತಿಶ್ರೀ ಹಾಡಿದ ಮೇಲೆ ನೆಮ್ಮದಿಯಾಗಿದ್ದೀನಿ ಎನ್ನುವುದಂತೂ ಗ್ಯಾರಂಟಿ. ಪ್ರೀತಿ ಇದಿಯಾ? ಇಲ್ಲವಾ? ಇದ್ದರೆ ಈ ಕಿತ್ತಾಟ ಏಕೆ? ಈ ಪ್ರಶ್ನೆಗಳಿಗೆ ಈಗ ಜಾಗವಿಲ್ಲ.  ಸಲ್ಲದ ಉಪಮೇಗಳನ್ನ ಅವನಿಗಂತ ನಾನು ಕೊಟ್ಟಿರಲಿಲ್ಲ. ಅವನಿಗಾಗಿ ಕವಿತೆ, ಕವನ, ಕಥೆ ಯಾವುದೂ ಬರೆಯಬೇಕು ಎನಿಸಿರಲಿಲ್ಲ.

ಮುಂದೊಂದು ದಿನ ಮರೆತುಬಿಡಬಹುದು ಎನಿಸಿದಂತದ್ದನ್ನ ಮಾತ್ರ ಪದಗಳಿಗೆ ತರುತ್ತಿದ್ದೆ. ಯಾರದ್ದೋ ಸಂತೋಷಕ್ಕಲ್ಲ, ಮೆಚ್ಚುಗೆಗಲ್ಲ. ಕೇವಲ ನನ್ನ ಖುಷಿಗೆ. ಮರೆಯಬಾರದು ಎಂಬ ಬಯಕೆಗೆ. ಅವನೇನು ಮರೆಯುವ ಜೀವವಲ್ಲ ಎನ್ನುವ ನಂಬಿಕೆಗೆ ಮಣೆ ಇಟ್ಟು ಪದಗಳಲ್ಲಿ ಅವನನ್ನ ಕಟ್ಟಿ ಹಾಕುವ ಪ್ರಯತ್ನ ಮಾಡಿರಲಿಲ್ಲ. ಆಗ ನನ್ನ ಸಾಲುಗಳಿಗೆ ಅವನು ಎಟುಕದಷ್ಟು ಎತ್ತರದಲ್ಲಿ ನಾನವನನ್ನು ಕಂಡಿದ್ದೆ ಎನ್ನುವುದೂ ಇನ್ನೊಂದು ಕಾರಣ. ಅದೇ ಅವನ ಪಾಲಿಗೆ ಪ್ರಶ್ನೆಯಾಗಿದ್ದು ಕಣ್ಣಿಗೆ ಕಂಡ ಖುಷಿಯನ್ನೆಲ್ಲಾ ಬರೆದಿದ್ದೀಯಾ ಅದರಲ್ಲೆಲ್ಲೂ ನಾನಿಲ್ಲ ಏಕೆ ಎನ್ನುವುದು? ಅವನೇನು ಕ್ಷಣಿಕ ಖುಷಿ ಎನ್ನುವ ಭಾವ ಇರಲಿಲ್ಲ ನನಗೆ.

ಆದರೂ ಅವನ ಖುಷಿಗೆಂದು ಒಂದೆರೆಡು ಬಾರಿ ಬರೆದು ಕೊಟ್ಟಿದ್ದೆ. ಅದು ನನಗೂ ಹಿಡಿಸದ್ದು, ನನ್ನ ಮನಸ್ಸಿಗೇ ಒಗ್ಗದ್ದು. ಇನ್ನು ಅವನಿಗಿನ್ನೇಗೆ ಒಗ್ಗೀತು? ಬರೆದವಳಿಗೇ ಹಿಡಿಸದ್ದು ಬರೆಸಿಕೊಂಡವನಿಗೆ ಹಿಡಿಸೀತೇ? ಹಾಗೂ ಆಗುತ್ತಿತ್ತು ಬಹುಶಃ ನಿಜ ಪ್ರೀತಿ ನನ್ನ ಮೇಲವನಿಗಿದ್ದಿದ್ದರೆ. ಸಮಯದ ಪರಿವೆ ಅರಿಯದೆ ಕರ್ತವ್ಯ ಎನ್ನುತ್ತಿದ್ದವಳಿಗೆ ಸಮಯ ಆಯಿತೆಂದು ನೆನಪಿಸುತ್ತಿದ್ದದ್ದೆ ಅವನ ಬಗೆಗಿದ್ದ ಭಯ. ಮಾತನಾಡದೆ ಕೆಲಸದಲ್ಲಿ ತೊಡಗಿದರೆ ಎಲ್ಲಿ ದೂರಾಗುವನೋ ಎಂಬ ಭಯದಿಂದ ಕರ್ತವ್ಯಕ್ಕೆ ದ್ರೋಹ ಬಗೆದ್ದಿದಿದೆ.

ಅದಾಗದಿದ್ದಾಗ ಕರ್ತವ್ಯ ಪಾಲನೆಯಲ್ಲಿ ಮುಳುಗಿದ್ದಿದೆ. ಅದೇ ಕಾರಣಕ್ಕೆ ದೂರಾದ ಅವನಿಗೆ ಕ್ಷಮೆ ಕೇಳಿ ನೀನೇ ಜೀವ, ನೀನೆ ಪ್ರಾಣ, ನೀನಿದ್ದರೆ ಕರ್ತವ್ಯವೂ ಬೇಡ ಎಂದು ಪುಸಲಾಯಿಸಿದ್ದಿದೆ. ಅದಕ್ಕೆಲ್ಲ ಅವನಿಟ್ಟ ಹೆಸರು ಅವಶ್ಯಕತೆ, ಆದರೆ ನನಗಲ್ಲಿ ಕಂಡದ್ದು ಪ್ರೀತಿ ಮಾತ್ರ. ಅಲ್ಲೆಲ್ಲೋ ಪ್ರಾಣಗಳು ಹೋಗುತ್ತಿವೆ ಎಂದು ತಿಳಿದಾಗ ಇದ್ದೆಲ್ಲವನ್ನೂ ಕೊಟ್ಟು ಬರಿಗೈ ಆಗಿದ್ದೆ. ತುಸು ಸುಧಾರಿಸಿಕೊಂಡು ನೋಡಿದಾಗಲೇ ಗೊತ್ತಾಗಿದ್ದು ಕೈ ಬೆರಳಿನಲ್ಲಿದ್ದ ಅವನ ಪ್ರೀತಿ ಉಂಗುರವನ್ನೂ ನಾನು ಕೊಟ್ಟುಬಿಟ್ಟಿದ್ದೆ ಎನ್ನುವುದು.

ನನ್ನ ಬುದ್ಧಿಗೆ ನನ್ನ ಮೇಲೇ ಕೋಪ ಬಂದಿತಾದರೂ ಅವನು ಕರುಣಾಮಯಿ ಈ ನನ್ನ ದಡ್ಡತನವನ್ನು ದೊಡ್ಡದು ಮಾಡದೆ ಕ್ಷಮಿಸುತ್ತಾನೆ ಎಂದುಕೊಂಡಿದ್ದ ನನಗೆ ಅದೇ ವಿಚಾರಕ್ಕೆ ಸ್ವಾರ್ಥಿ ಎಂದಾಗಲೇ ಪ್ರೀತಿ ಅವನಲ್ಲಿಲ್ಲ ಎಂದು ಖಾತ್ರಿಯಾಗಿದ್ದು. ಹುಚ್ಚು ಪ್ರೀತಿಯನ್ನ ತುಸು ಹೆಚ್ಚು ದಿನ ಮುಂದುವರೆಸಿದ್ದೆ ನಾನು. ಅದು ಅವನಿಗೆ ಹೊರೆಯಾಗಿ ನಾನು ಹೆಣಭಾರವಾಗುವವರೆಗೂ. ಕೊನೆಗೂ ಅವನು ಸಾಯುವ ದಿನ ಬಂದೇ ಬಿಟ್ಟಿತು. ಸಾಯಿಸಲೇ ಬೇಕಾಯಿತು. ನಿಜ ಪ್ರೀತಿಗಾಗಿ ಸೆಣಸಾಡಿದವಳು ಆ ಹೆಸರಿನ ಪ್ರೀತಿಯನ್ನು ಸಾಯಿಸದೆ ನಿಜ ಪ್ರೀತಿ ಕಾಣದೆಂದು ಅರಿತಾಗ ಅವನಿಗೆ ಸಾವು.

ನನ್ನ ಪ್ರೀತಿ ಸಾಯಲಿಲ್ಲ. ಸಾಯುವುದಕ್ಕೆ ಅದು ಅವನು ಮಾಡಿದ ಪ್ರೀತಿಯಲ್ಲ. ಆದರೆ ಪ್ರೀತಿಸಿದವನಂತೂ ಸತ್ತ. ಈಗ ಆ ಪ್ರೀತಿ ಏನಿದ್ದರೂ ಕನಸಿನ ಹುಡುಗನಿಗೆ. ಮುಂದೊಂದು ದಿನ ಕನಸಿನ ಹುಡುಗ ಬಂದಾಗ ಆ ಪ್ರೀತಿಯನ್ನೆಲ್ಲ ಧಾರೆ ಎರೆದು ನನ್ನವನಾಗಿಸಿಕೊಳ್ಳುವುದಕ್ಕೆ. ಈಗ ಮನದಲ್ಲಿ ನೋವಿಲ್ಲ. ಸಾವಿನ ಸೂತಕವೂ ಇಲ್ಲ. ಸತ್ತದ್ದು ಅವನ್ಯಾರೋ, ಹಿಂದೆ ಪ್ರೀತಿಸಿದವನು, ರಕ್ತ ಸಂಬಂಧಿಯಲ್ಲ, ಭಾವ ಸಂಬಂಧವೂ ಉಳಿದಿಲ್ಲ. ಸೂತಕವಿನ್ನೆಲ್ಲಿ?

ಇಷ್ಟೊಂದು ಬರೆಯಲು ಪ್ರೇರೇಪಿಸಿದವ ಸತ್ತಿರಲು ಸಾಧ್ಯವಿಲ್ಲ ಎಂದುಕೊಂಡರೆ ಅದಕ್ಕೂ ಸಿದ್ಧ ಉತ್ತರವಿದೆ. ಇಂದು ಅವನ ಪುಣ್ಯತಿಥಿ. ಸತ್ತವನ ಫೋಟೋ ಕೂಡ ಇಲ್ಲ ಪೂಜಿಸುವುದಕ್ಕೆ, ಮುಖಚರ್ಯೆಯೂ ಇದೀಗ ಅಸ್ಪಷ್ಟ. ನೆನಪುಗಳೂ
ಸತ್ತಾಗಿದೆ. ಸೋತು ಗೆದ್ದ ಭಾವ ನನ್ನಲಿದೆ. ಅದನ್ನು ಕೊಟ್ಟ ಆ ವ್ಯಕ್ತಿ ಗುರುವಷ್ಟೇ. ಬದುಕ ಕಲಿಸಿದ ಗುರು. 

- ಭರತ ಪ್ರಣತಿ 

Follow Us:
Download App:
  • android
  • ios