ಶಸ್ತ್ರಚಿಕಿತ್ಸೆ ಮಾಡಿ ವ್ಯಕ್ತಿಯ ಹೊಟ್ಟೆಯಿಂದ 300 ಮೊಳೆ ತೆಗೆದ ವೈದ್ಯರು, ಮಹಿಳೆ ಹೊಟ್ಟೆಯಲ್ಲಿ 40 ಉಗುರು, ಕೂದಲು, ನಾಣ್ಯಗಳು ಪತ್ತೆ, ಗಾಜಿನ ಚೂರು, ಬ್ಲೇಡ್, ತುಕ್ಕು ಹಿಡಿದ ಕಬ್ಬಿಣ ತಿನ್ನುವ ವ್ಯಕ್ತಿ ಮುಂತಾದ ಹೆಡ್‌ಲೈನ್‌ಗಳನ್ನು ಆಗಾಗ ಪೇಪರ್‌ಗಳಲ್ಲಿ, ಟಿವಿಯಲ್ಲಿ ನೋಡುತ್ತಲೇ ಇರುತ್ತೇವೆ. ಅಲ್ಲಾ, ಅನ್ನ ತಿಂದು ಜೀರ್ಣಿಸಿಕೊಳ್ಳಲೇ ನಾವು ಪರದಾಡುವಾಗ ಇವರು ಮೆಟಲ್ ತಿಂದು ಮೈಮರೆಯೋದು ಹೇಗಪ್ಪಾ? ಕಡ್ಲೆ ಕಡಿಯೋಕೆ ಹಲ್ಲು ಮುರಿದು ಹೋಗೋ ಭಯ ಕಾಡುತ್ತೆ, ಇನ್ನಿವರು ಕಬ್ಬಿಣದ ಕಡಲೆಯನ್ನೂ ಕಚಕಚ ಎಂದು ತಿನ್ನುತ್ತಾರಲ್ಲಾ, ಇವರೇನು ಐರನ್ ಮ್ಯಾನ್‌ಗಳಾ ಎಂದು ಆಶ್ಚರ್ಯವಾಗದಿರದು. ಆದರೆ, ಇವರೇನು ಗಿನ್ನಿಸ್ ದಾಖಲೆ ಮಾಡುವ ಚಟಕ್ಕೆ ಹೀಗೆ ಕಸ ಹಾಗೂ ಮೆಟಲ್ ಈಟರ್ಸ್ ಆಗಿಲ್ಲ, ಇದೊಂದು ಮಾನಸಿಕ ಕಾಯಿಲೆ ಸ್ವಾಮಿ.

Cancer ರೋಗಿಗಿಳಿಗೆ....ಕೆಮೋಯಿಂದ ಕೂದಲುದುರಿದರೆ ಮದ್ದು!

ಹೌದು, ಇದನ್ನು ಪೀಕಾ ಎನ್ನುತ್ತಾರೆ. ಆಹಾರವಲ್ಲದ್ದನ್ನು ತಿನ್ನುವ ಈ ದುರಭ್ಯಾಸ ಒಂದು ಈಟಿಂಗ್ ಡಿಸಾರ್ಡರ್ ಆಗಿದ್ದು, ಸ್ಕೀಜೋಫ್ರೀನಿಯಾ, ಇಂಟೆಲೆಕ್ಚುಯಲ್ ಡಿಸೆಬಿಲಿಟಿ, ಆಟಿಸಂ ಮುಂತಾದ ಇತರೆ ಮಾನಸಿಕ ಕಾಯಿಲೆಗಳೊಂದಿಗೆ ಇದು ಕಾಣಿಸಿಕೊಳ್ಳುವ ಸಂಭವ ಹೆಚ್ಚು. ಸಾಮಾನ್ಯವಾಗಿ ಮಣ್ಣು, ಕೊಳೆ, ಪೇಯಿಂಟ್ ಫ್ಲೇಕ್‌ಗಳನ್ನು ಬಹುತೇಕ ಪೀಕಾ ಈಟಿಂಗ್ ಡಿಸಾರ್ಡರ್ ಇರುವವರು ತಿನ್ನುತ್ತಾರೆ. ಗಂಭೀರ ಕೇಸ್‌ಗಳಲ್ಲಿ ಗಮ್, ಕೂದಲು, ಸಿಗರೇಟ್ ಆ್ಯಶ್, ಮೆಟಲ್ಸ್ ಮುಂತಾದವನ್ನು ತಿನ್ನುತ್ತಾರೆ. 

ಪೀಕಾಗೆ ಇಂಥದ್ದೇ ಕಾರಣವೆಂದಿಲ್ಲವಾದರೂ ಸಾಮಾನ್ಯವಾಗಿ ಬಾಲ್ಯದಿಂದಲೇ ಬೇಡದ್ದನ್ನು ತಿನ್ನುವ ಈ ಅಭ್ಯಾಸ ಆರಂಭವಾಗುತ್ತದೆ. ನೀವು ನಂಬುವುದಿಲ್ಲ, ಸುಮಾರು ಜನಸಂಖ್ಯೆಯ ಶೇ.4ರಿಂದ ಶೇ.26ರಷ್ಟು ಮಂದಿಗೆ ಹೀಗೆ ಆಹಾರೇತರ ವಸ್ತುಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಅದರಲ್ಲೂ ಕಳೆದೊಂದು ದಶಕದಲ್ಲಿ ಪೀಕಾ ಕಾಯಿಲೆಗಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಡಬಲ್ ಆಗಿದೆ ಎನ್ನುತ್ತದೆ ಹೆಲ್ತ್‌ಕೇರ್ ಕಾಸ್ಟ್ ಹಾಗೂ ಯುಟಿಲೈಜೇಶನ್ ಪ್ರಾಜೆಕ್ಟ್. 

'ಸಾಮಾನ್ಯವಾಗಿ ಇಂಥ ನಡುವಳಿಕೆಯನ್ನು ವ್ಯಕ್ತಿಯು ತನ್ನ ಆತಂಕವನ್ನು ಮರೆ ಮಾಚಲು ಬಳಸುತ್ತಿರುತ್ತಾನೆ. ವ್ಯಕ್ತಿಯ ದೇಹದಲ್ಲಿ ಐರನ್ ಹಾಗೂ ಜಿಂಕ್ ಕೊರತೆ ಇದ್ದಾಗಲೂ ಈ ವರ್ತನೆ ಕಂಡುಬರುತ್ತದೆ,' ಎನ್ನುತ್ತಾರೆ ಓಹಿಯೋ ಯೂನಿವರ್ಸಿಟಿಯ ಮನಶಾಸ್ತ್ರಜ್ಞ ಯೇಗರ್. 

ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ, ಯಾವುದಕ್ಕೆ ಒಳಿತು?

ಆತಂಕ, ಖಿನ್ನತೆ ಹಾಗೂ ಈಟಿಂಗ್ ಡಿಸಾರ್ಡರ್‌ಗಳ ಮಧ್ಯೆ ಒಂದು ಕನೆಕ್ಷನ್ ಇದೆ ಎಂದು ವಿವರಿಸುತ್ತಾರೆ ಅವರು. ಇದಕ್ಕೆ ಪ್ರಥಮ ಚಿಕಿತ್ಸೆಯೇ ವ್ಯಕ್ತಿಯ ದೇಹದಲ್ಲಿ ಮಿನರಲ್ಸ್ ಹಾಗೂ ನ್ಯೂಟ್ರಿಯೆಂಟ್ಸ್‌ ಕೊರತೆ ಇದೆಯೇ ಎಂದು ಪರಿಶೀಲಿಸುವುದು. ಇಂಥ ಕೊರತೆ ಇದ್ದಾಗ ಅದಕ್ಕಾಗಿ ಸಪ್ಲಿಮೆಂಟ್ಸ್ ನೀಡಿದಾಗ ಹಲವಾರು ಪೀಕಾ ರೋಗಿಗಳು ಆಶ್ಚರ್ಯಕರ ರೀತಿಯಲ್ಲಿ ವಾಸಿಯಾಗಿದ್ದಾರೆ. ನಂತರದ ಚಿಕಿತ್ಸಾ ವಿಧಾನದಲ್ಲಿ ವೈದ್ಯರು ಥೆರಪಿಯನ್ನು ಬಳಸುತ್ತಾರೆ. 

ಇನ್ನು ಈಗಾಗಲೇ ಹೊಟ್ಟೆಯಲ್ಲಿ ಸಾಕಷ್ಟು ಬೇಡದ, ಜೀರ್ಣವಾಗದ ವಸ್ತುಗಳನ್ನು ತುಂಬಿಕೊಂಡು ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದರೆ, ಅಂಥವರಿಗೆ ಲ್ಯಾಪರೋಟೋಮಿ ಮಾಡಲಾಗುತ್ತದೆ. ಈ ವಿಧಾನದಲ್ಲಿ ಶಸ್ತ್ರಚಿಕಿತ್ಸಾ ತಜ್ಞರು ಹೊಟ್ಟೆಯ ಗೋಡೆಯಲ್ಲಿ ದೊಡ್ಡ ಕೊರೆತ ಮಾಡಿ, ಒಳಗೆ ಸೇರಿಕೊಂಡ ವಸ್ತುಗಳನ್ನು ತೆಗೆದು ಹಾಕುತ್ತಾರೆ.

ಪೀಕಾ ಇರುವ ವ್ಯಕ್ತಿಯು ಹೊಟ್ಟೆನೋವು, ಮಲವಿಸರ್ಜನೆಯಲ್ಲಿ ರಕ್ತ, ಹಲ್ಲು ಮುರಿದು ಹೋಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದೈಹಿಕ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋದಾಗಲೇ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇರುವುದು ಬೆಳಕಿಗೆ ಬರುವುದು ಹೆಚ್ಚು. 

ಪ್ರಸವದ ನಂತರ ಶೇಪ್ ಬರಲು ಹೀಗ್ ಮಾಡಿ....

ಬೇಗ ಚಿಕಿತ್ಸೆ ತೆಗೆದುಕೊಂಡಷ್ಟೂ ಕಾಯಿಲೆ ಗುಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ, ನಿಮ್ಮ ಸುತ್ತಮುತ್ತಲೂ ಯಾರಿಗಾದರೂ ಪೀಕಾ ಸಮಸ್ಯೆ ಇದೆ ಎಂಬುದು ಅರಿವಿಗೆ ಬಂದರೆ, ಮೊದಲು ಅವರಲ್ಲಿ ಗೌರವಯುತವಾಗಿ ಮಾತನಾಡಿ. ಪ್ರೀತಿಯಿಂದ ವಿಷಯ ತಿಳಿಸಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಎಂದು ಸಲಹೆ ನೀಡುತ್ತಾರೆ ಯೇಗರ್.