How to keep snakes away from home: ಯಾವುದೇ ದುಬಾರಿ ರಾಸಾಯನಿಕ ಬಳಸದೆ, ಹಾವುಗಳಿಗೆ ಹಾನಿ ಮಾಡದೆ, ಅಡುಗೆಮನೆಯಲ್ಲಿರುವ ಕೇವಲ 1 ಬೆಳ್ಳುಳ್ಳಿ ಬಳಸಿ ಅವುಗಳನ್ನು ಹತ್ತಿರವೂ ಸುಳಿಯದಂತೆ ಮಾಡಬಹುದು! ಆ ಸಿಂಪಲ್ ಟ್ರಿಕ್ ಇಲ್ಲಿದೆ ನೋಡಿ.

ಮಳೆಗಾಲದಲ್ಲಿ ಅಥವಾ ಬೇಸಿಗೆಯ ಸೆಖೆಗೆ ತಂಪು ಹುಡುಕಿಕೊಂಡು ಮನೆ, ಕಾಂಪೌಂಡ್ ಹಾಗೂ ಅಂಗಳಕ್ಕೆ ಹಾವುಗಳು ಬರುವುದು ಸಾಮಾನ್ಯ. ಮನೆಯಲ್ಲಿ ಚಿಕ್ಕ ಮಕ್ಕಳು, ಸಾಕುಪ್ರಾಣಿಗಳು ಇರುವಾಗ ಇದು ತೀವ್ರ ಆತಂಕ ಹುಟ್ಟಿಸುತ್ತದೆ. ಹಾವುಗಳಿಗೆ ತೊಂದರೆ ಕೊಡದೆ, ಅವು ಮನೆ ಅಥವಾ ಅಂಗಳದ ಆಸುಪಾಸಿಗೂ ಸುಳಿಯದಂತೆ ತಡೆಯಲು ಈ ಕೆಳಗಿನ ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು.

1. ಹಾವುಗಳು ಬರದಂತೆ ತಡೆಯಲು ಮೊದಲ ಮುನ್ನೆಚ್ಚರಿಕೆ

ಆಹಾರದ ತ್ಯಾಜ್ಯ ಎಸೆಯಬೇಡಿ: ಮನೆ ಸುತ್ತಮುತ್ತ ಉಳಿದ ಊಟ, ಕಸ ಎಸೆಯುವುದರಿಂದ ಇಲಿ, ಹೆಗ್ಗಣ ಮತ್ತು ಕಪ್ಪೆಗಳು ಹೆಚ್ಚಾಗುತ್ತವೆ. ಇವುಗಳನ್ನು ಬೇಟೆಯಾಡಲು ಹಾವುಗಳು ಸುಲಭವಾಗಿ ಮನೆಯೊಳಗೆ ನುಗ್ಗುತ್ತವೆ.

ರಂಧ್ರ ಮತ್ತು ಬಿರುಕುಗಳನ್ನು ಮುಚ್ಚಿ: ಕಾಂಪೌಂಡ್ ಗೋಡೆ, ಮೆಟ್ಟಿಲು ಅಥವಾ ಅಂಗಳದಲ್ಲಿರುವ ಬಿರುಕು ಹಾಗೂ ಇಲಿ ಬಿದ್ದಿರುವ ರಂಧ್ರಗಳನ್ನು ಮೊದಲಿಗೆ ಸಿಮೆಂಟ್ ಹಾಕಿ ಮುಚ್ಚಿ.

2. ಹಾವುಗಳನ್ನು ಓಡಿಸುವ ನೈಸರ್ಗಿಕ ಸ್ಪ್ರೇ ಮತ್ತು ಮನೆಮದ್ದುಗಳು

ಹಾವುಗಳಿಗೆ ವಾಸನೆಯ ಗ್ರಹಣ ಶಕ್ತಿ (Smell Sense) ತುಂಬಾ ತೀಕ್ಷ್ಣವಾಗಿರುತ್ತದೆ. ಈ ಕೆಳಗಿನ ತೀವ್ರ ವಾಸನೆಗೆ ಅವು ಹತ್ತಿರವೂ ಸುಳಿಯುವುದಿಲ್ಲ

ದಾಲ್ಚಿನ್ನಿ ಎಣ್ಣೆ (Cinnamon Oil): ದಾಲ್ಚಿನ್ನಿ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಮನೆ ಸುತ್ತ ಮತ್ತು ಬಾಗಿಲುಗಳ ಬಳಿ ಸ್ಪ್ರೇ ಮಾಡಿದರೆ ಹಾವುಗಳು ಆ ದಿಕ್ಕಿಗೆ ಬರುವುದಿಲ್ಲ.

ಬಿಳಿ ವಿನೆಗರ್ (White Vinegar): ವಿನೆಗರ್ ಅನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಮನೆ ಸುತ್ತಮುತ್ತ ಸ್ಪ್ರೇ ಮಾಡಿ. ಇದರ ತೀಕ್ಷ್ಣ ಹುಳಿ ವಾಸನೆ ಹಾವುಗಳಿಗೆ ಇಷ್ಟವಾಗುವುದಿಲ್ಲ.

ಸಲ್ಫರ್ ಪೌಡರ್ (ಗಂಧಕದ ಪುಡಿ): ಹಳದಿ ಬಣ್ಣದ ಸಲ್ಫರ್ ಪುಡಿಯನ್ನು ಕಾಂಪೌಂಡ್ ಗಡಿಯ ಸುತ್ತ ಗೆರೆಯಂತೆ ಹಾಕಿದರೆ, ಅದರ ರಾಸಾಯನಿಕ ವಾಸನೆಗೆ ಹಾವುಗಳು ಗಡಿ ದಾಟಿ ಒಳಗೆ ಬರುವುದಿಲ್ಲ.

ಮನೆಯಲ್ಲೇ ತಯಾರಿಸುವ ಬೆಳ್ಳುಳ್ಳಿ ಸ್ಪ್ರೇ: ಬೆಳ್ಳುಳ್ಳಿ ಎಸಳುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ರುಬ್ಬಿದ ಬೆಳ್ಳುಳ್ಳಿ ಪೇಸ್ಟ್‌ಗೆ ಸಾಕಷ್ಟು ನೀರನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಟೀ ಸೋಸುವ ಜಾಲರಿ (Tea Strainer) ಅಥವಾ ತೆಳುವಾದ ಹತ್ತಿ ಬಟ್ಟೆಯ ಮೂಲಕ ಆ ನೀರನ್ನು ಸೋಸಿ (ಫಿಲ್ಟರ್ ಮಾಡಿ). ಆಗ ಬೆಳ್ಳುಳ್ಳಿಯ ಸಿಪ್ಪೆ, ತಿರುಳು (ಚರಟ) ಜಾಲರಿಯಲ್ಲೇ ಉಳಿಯುತ್ತದೆ ಮತ್ತು ಕೇವಲ ಘಾಟು ವಾಸನೆಯುಳ್ಳ ಶುದ್ಧ ನೀರು ಮಾತ್ರ ಕೆಳಗೆ ಬಟ್ಟಲಿಗೆ ಬೀಳುತ್ತದೆ. ಆ ನೀರನ್ನು ಸ್ಪ್ರೇ ಬಾಟಲಿಗೆ ತುಂಬಿಸಬೇಕು. ಇದನ್ನು ಕತ್ತಲೆಯ ಮೂಲೆಗಳು, ಪೊದೆಗಳು ಮತ್ತು ಕಾಂಪೌಂಡ್ ಬಳಿ ಸ್ಪ್ರೇ ಮಾಡಿದರೆ ಬೆಳ್ಳುಳ್ಳಿಯ ಖಾರವಾದ ವಾಸನೆಗೆ ಹಾವುಗಳು ಕಾಲ್ಕಿಳುತ್ತವೆ.

3. ಮನೆ ಸುತ್ತಮುತ್ತ ಬೆಳೆಸಬೇಕಾದ 'ಹಾವು ನಿರೋಧಕ ಗಿಡಗಳು' (Snake Repellent Plants)

ಈ ಗಿಡಗಳನ್ನು ಅಂಗಳದಲ್ಲಿ ಅಥವಾ ಕುಂಡಗಳಲ್ಲಿ ಬೆಳೆಸಿದರೆ ಹಾವುಗಳು ಬರುವುದಿಲ್ಲ

ಲೆಮನ್‌ಗ್ರಾಸ್ (Lemongrass - ನಿಂಬೆ ಹುಲ್ಲು): ಇದರ ಸಿಟ್ರಸ್ ಪರಿಮಳವು ಹಾವುಗಳಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತದೆ.

ಚೆಂಡು ಹೂವಿನ ಗಿಡ (Marigold): ಚೆಂಡು ಹೂವಿನ ಗಿಡದ ಬೇರುಗಳು ಮತ್ತು ಹೂವಿನ ಘಾಟು ವಾಸನೆಗೆ ಹಾವುಗಳು ಹತ್ತಿರ ಸುಳಿಯುವುದಿಲ್ಲ.

ಸರ್ಪಗಂಧ (Snake Root): ಆಯುರ್ವೇದದಲ್ಲಿ ಪ್ರಸಿದ್ಧವಾಗಿರುವ ಸರ್ಪಗಂಧ ಗಿಡದ ವಾಸನೆಗೆ ಹಾವುಗಳು ಹೆದರಿ ದೂರ ಓಡುತ್ತವೆ.

ಬೆಳ್ಳುಳ್ಳಿ ಬಳ್ಳಿ (Garlic Creeper): ಈ ಬಳ್ಳಿಯ ಎಲೆಗಳನ್ನು ಉಜ್ಜಿದರೆ ತೀವ್ರ ಬೆಳ್ಳುಳ್ಳಿಯ ವಾಸನೆ ಬರುತ್ತದೆ, ಇದು ಹಾವುಗಳಿಗೆ ಅಲರ್ಜಿ.

ನಾಗದಾಳಿ / ನಾಗದಮನಿ ಗಿಡ: ಸಾಂಪ್ರದಾಯಿಕ ಆಯುರ್ವೇದ ಗಿಡವಾಗಿದ್ದು, ಹಾವು ನಿರೋಧಕ ಶಕ್ತಿ ಹೊಂದಿದೆ.

ಸ್ನೇಕ್ ಪ್ಲಾಂಟ್ & ಕಳ್ಳಿ ಗಿಡಗಳು (Cactus): ಇವುಗಳ ಮೊನಚಾದ ಎಲೆಗಳು ಮತ್ತು ಮುಳ್ಳುಗಳಿರುವ ಕಾರಣ ಹಾವುಗಳು ಇವುಗಳ ಮೇಲೆ ತೆವಳಲು ಇಷ್ಟಪಡುವುದಿಲ್ಲ.