ರಾಜ್ಯದಲ್ಲಿ ಕಳೆದ ವರ್ಷ 5,503 ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು, 2,048 ಮಂದಿ ಸಾವನ್ನಪ್ಪಿದ್ದಾರೆ. ತಂಬಾಕು ಸೇವನೆ ಮತ್ತು ಧೂಮಪಾನದಿಂದ ಈ ರೋಗದ ಅಪಾಯ ಹೆಚ್ಚಾಗಿದ್ದು, ನವೆಂಬರ್ ತಿಂಗಳನ್ನು ಜಾಗೃತಿ ಮಾಸವಾಗಿ ಆಚರಿಸಲಾಗುತ್ತಿದೆ.
ಬೆಂಗಳೂರು (ನ.4) ರಾಜ್ಯದಲ್ಲಿ ಕಳೆದ ವರ್ಷ 5,503 ಮಂದಿಯಲ್ಲಿ ಹೊಸದಾಗಿ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿದ್ದು, 2,048 ಮಂದಿ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್ ತಿಂಗಳನ್ನು ಶ್ವಾಸಕೋಶ ಕ್ಯಾನ್ಸರ್ ಜಾಗೃತಿ ಮಾಸವಾಗಿ ಆಚರಿಸುತ್ತಿರುವುದಾಗಿ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ನಿರ್ದೇಶಕ ಡಾ. ಆರ್.ಕೃಷ್ಣಪ್ಪ ತಿಳಿಸಿದ್ದಾರೆ.
ಹೊಸ ಕ್ಯಾನ್ಸರ್ ಪ್ರಕರಣಗಳೆಷ್ಟು?
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ 2025ರಲ್ಲಿ ಒಟ್ಟು 89,215 ಹೊಸ ಕ್ಯಾನ್ಸರ್ ಪ್ರಕರಣಗಳು ಅಂದಾಜಿಸಲಾಗಿದ್ದು, ಇದರಲ್ಲಿ ಶ್ವಾಸಕೋಶ ಕ್ಯಾನ್ಸರ್ ಪಾಲು ಶೇ.6.1ರಷ್ಟಿದೆ. ಪುರುಷರಲ್ಲಿ ಕಾಣಿಸಿಕೊಳ್ಳುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಮಾಣ ಶೇ.9.6ರಷ್ಟಿದ್ದರೆ, ಮಹಿಳೆಯರಲ್ಲಿ ಶೇ.3.5ರಷ್ಟಿದೆ. ಈ ಕಾಯಿಲೆಯಿಂದ 1,377 ಪುರುಷರು ಹಾಗೂ 671 ಮಹಿಳೆಯರು ಕಳೆದ ವರ್ಷ ಸಾವನ್ನಪ್ಪಿದ್ದಾರೆ.
ತಂಬಾಕು ಸೇವನೆ, ಧೂಮಪಾನದಿಂದ ಶ್ವಾಸಕೋಶ ಕ್ಯಾನ್ಸರ್ ಅಪಾಯ ಹೆಚ್ಚು. ಈ ಬಗ್ಗೆ ಅರಿವು ಮೂಡಿಸಲು ನವೆಂಬರ್ ತಿಂಗಳು ಶ್ವಾಸಕೋಶ ಕ್ಯಾನ್ಸರ್ ಜಾಗೃತಿ ಮಾಸ ಆಚರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಒಂದರಲ್ಲೇ 15,693 ಹೊಸ ಕ್ಯಾನ್ಸರ್ ಪ್ರಕರಣ
ಬೆಂಗಳೂರು ಒಂದರಲ್ಲೇ 2025ರಲ್ಲಿ 15,693 ಹೊಸ ಕ್ಯಾನ್ಸರ್ ಪ್ರಕರಣ ವರದಿಯಾಗಿದ್ದು, ಈ ಪೈಕಿ 1,028 ಪ್ರಕರಣಗಳು ಶ್ವಾಸಕೋಶ ಕ್ಯಾನ್ಸರ್ಗೆ ಸಂಬಂಧಿಸಿವೆ. 692 ಪುರುಷರು ಹಾಗೂ 336 ಮಹಿಳೆಯರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು, 240 ಪುರುಷರು ಹಾಗೂ 123 ಮಹಿಳೆಯರು ಸೇರಿದಂತೆ ಒಟ್ಟು 363 ಮಂದಿ ಸಾವನ್ನಪ್ಪಿದ್ದಾರೆ. ಕಿದ್ವಾಯಿ ಆಸ್ಪತ್ರೆಯಲ್ಲಿ ವರದಿಯಾಗುವ ಪ್ರಕರಣದಲ್ಲಿ ಸರಾಸರಿ ಶೇ.6 ರಷ್ಟು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳಾಗಿವೆ. ಹೀಗಾಗಿ ರೋಗದ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲೇ ಪತ್ತೆಹಚ್ಚುವಿಕೆ, ಸೂಕ್ತ ಚಿಕಿತ್ಸೆ ಹಾಗೂ ನಿರಂತರ ವೈದ್ಯಕೀಯ ಮೇಲ್ವಿಚಾರಣೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.






