ಬಾಲ್ಯದಲ್ಲಿ ತಾಯಿ ಹೇಳಿದ ಒಂದು ಮಾತು ಅಮೆರಿಕದ ಜಾನ್ ಪಾಲ್ ಡಿಜೋರಿಯಾ ಅವರ ಬದುಕನ್ನೇ ಬದಲಿಸಿತು. ಎರಡು ಸಲ ಬೀದಿಗೆ ಬಿದ್ದರೂ ಜಾನ್ ಪಾಲ್ ಡಿಜೋರಿಯಾ ಅವರು ತಾಯಿಯ ಮಾತು ಮರೆಯಲಿಲ್ಲ. ಇಂದು ಅವರು ಅಮೆರಿಕದ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.
ಬೆಂಗಳೂರು(ನ.02): ಒಂದು ಕ್ರಿಸ್ಮಸ್ ದಿನ ತಾಯಿ ನೀಡಿದ ಕೇವಲ 10 ಸೆಂಟ್ ನಾಣ್ಯ, ಆರು ವರ್ಷದ ಬಾಲಕನ ಜೀವನದ ದೃಷ್ಟಿಕೋನವನ್ನೇ ಬದಲಿಸಿತು. ಅಂದು ತಾಯಿ ಹೇಳಿದ ಮಾತು ಆ ಬಾಲಕನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ಮುಂದೆ ಎರಡು ಬಾರಿ ನಿರಾಶ್ರಿತರಾಗಿ ಕಾರಿನಲ್ಲೇ ಬದುಕಬೇಕಾದ ಪರಿಸ್ಥಿತಿ ಎದುರಿಸಿದರೂ, ಕೋಟ್ಯಂತರ ಸಂಪತ್ತಿನ ಒಡೆಯನಾದ ಬಳಿಕವೂ ಆತ ಆ ಪಾಠವನ್ನು ಮರೆಯಲಿಲ್ಲ. ಇಂದು ಉದ್ಯಮಿಯಾಗಿ ಮಾತ್ರವಲ್ಲದೆ, ಸಮಾಜಸೇವೆಯ ಮೂಲಕವೂ ಗುರುತಿಸಿಕೊಂಡಿರುವ ಆ ವ್ಯಕ್ತಿಯೇ ಜಾನ್ ಪಾಲ್ ಡಿಜೋರಿಯಾ.
ಅಮೆರಿಕದ ಉದ್ಯಮಿ ಜಾನ್ ಪಾಲ್ ಡಿಜೋರಿಯಾ ಅವರು ಕೂದಲಿನ ಆರೈಕೆ ಉತ್ಪನ್ನಗಳ ಕಂಪನಿ ಜಾನ್ ಪಾಲ್ ಮಿಚೆಲ್ ಸಿಸ್ಟಮ್ಸ್ ಮತ್ತು ಪ್ರೀಮಿಯಂ ಮದ್ಯದ ಬ್ರ್ಯಾಂಡ್ ಪ್ಯಾಟ್ರನ್ನ ಸಂಸ್ಥಾಪಕರಾಗಿದ್ದಾರೆ. ಕಷ್ಟದ ದಿನಗಳನ್ನು ಸ್ವತಃ ಅನುಭವಿಸಿರುವ ಅವರು, ನಿರ್ಗತಿಕರಿಗೆ ನೆರವಾಗುವುದು, ಅನಾಥ ಮಕ್ಕಳಿಗೆ ಆಹಾರ ಒದಗಿಸುವುದು, ಉದ್ಯೋಗಾವಕಾಶ ಕಲ್ಪಿಸುವುದು, ತಿಮಿಂಗಿಲಗಳ ರಕ್ಷಣೆ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರು ಹಾಗೂ ಮಕ್ಕಳಿಗೆ ಸಹಾಯ ಮಾಡುವುದನ್ನು ತಮ್ಮ ಜೀವನದ ಪ್ರಮುಖ ಗುರಿಯಾಗಿಸಿಕೊಂಡಿದ್ದಾರೆ.
ಆ ಒಂದು ನಾಣ್ಯ ಕಲಿಸಿದ ಜೀವನಪಾಠ!
ಜಾನ್ ಪಾಲ್ ಡಿಜೋರಿಯಾ ಅವರಿಗೆ ಆರು ವರ್ಷ ವಯಸ್ಸಾಗಿದ್ದಾಗ, ಒಂದು ಕ್ರಿಸ್ಮಸ್ ಸಂದರ್ಭದಲ್ಲಿ ಅವರ ತಾಯಿ ಜಾನ್ ಮತ್ತು ಅವರ ಸಹೋದರನಿಗೆ ತಲಾ ಒಂದು ಡೈಮ್ (10 ಸೆಂಟ್) ನೀಡಿದರು. ಆ ಹಣವನ್ನು ಏಕೆ ಕೊಟ್ಟಿದ್ದಾರೆ ಎಂಬ ಕುತೂಹಲದಿಂದ ಬಾಲಕರು ತಾಯಿಯನ್ನು ನೋಡಿದರು. ಲಾಸ್ ಏಂಜಲೀಸ್ ನಗರದ ಮಧ್ಯಭಾಗದಲ್ಲಿದ್ದ ಡಿಪಾರ್ಟ್ಮೆಂಟ್ ಸ್ಟೋರ್ ಹೊರಗೆ ಗಂಟೆ ಬಾರಿಸುತ್ತಿದ್ದ ವ್ಯಕ್ತಿಯೊಬ್ಬರ ಪಕ್ಕದಲ್ಲಿ ಇಟ್ಟಿದ್ದ ಬಕೆಟ್ಗೆ ಆ ನಾಣ್ಯವನ್ನು ಹಾಕುವಂತೆ ತಾಯಿ ಸೂಚಿಸಿದರು.
ಆ ಕಾಲದಲ್ಲಿ ಆ ಹಣದಲ್ಲಿ ಕೆಲವು ಕ್ಯಾಂಡಿ ಬಾರ್ಗಳನ್ನು ಖರೀದಿಸಬಹುದಿತ್ತು. ಹೀಗಾಗಿ, ತಮ್ಮ ಹಣವನ್ನು ಏಕೆ ಬೇರೆಯವರಿಗೆ ನೀಡಬೇಕು ಎಂದು ಬಾಲಕರು ಪ್ರಶ್ನಿಸಿದರು. ಆಗ ಅವರ ತಾಯಿ, “ಇದು ಸಾಲ್ವೇಶನ್ ಆರ್ಮಿ. ನಿಜವಾಗಿಯೂ ಸಂಕಷ್ಟದಲ್ಲಿರುವ ಜನರಿಗೆ ಈ ಸಂಸ್ಥೆ ನೆರವಾಗುತ್ತದೆ. ಮಕ್ಕಳೇ, ನಿಮ್ಮ ಬಳಿ ಎಷ್ಟೇ ಹಣವಿದ್ದರೂ, ನಿಮಗಿಂತಲೂ ಹೆಚ್ಚು ಅಗತ್ಯವಿರುವವರು ಯಾವಾಗಲೂ ಇರುತ್ತಾರೆ ಎಂಬುದನ್ನು ನೆನಪಿಡಿ. ಸ್ವಲ್ಪವೇ ಆಗಿದ್ದರೂ, ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಿ,” ಎಂದು ತಿಳಿಸಿದರು. ತಾಯಿ ಹೇಳಿದ ಈ ಮಾತು ಜಾನ್ ಪಾಲ್ ಡಿಜೋರಿಯಾ ಅವರ ಜೀವನದುದ್ದಕ್ಕೂ ಮಾರ್ಗದರ್ಶಕವಾಯಿತು.
ಎರಡು ಬಾರಿ ನಿರಾಶ್ರಿತರಾದರೂ ಛಲ ಬಿಡಲಿಲ್ಲ!
ಬಾಲ್ಯದಲ್ಲಿ ಬಡತನವನ್ನು ಕಂಡಿದ್ದ ಡಿಜೋರಿಯಾ ಅವರ ಜೀವನದಲ್ಲಿ ಮುಂದೆ ಮತ್ತಷ್ಟು ಕಠಿಣ ಸಂದರ್ಭಗಳು ಎದುರಾದವು. ಅವರು ತಮ್ಮ ಜೀವನದಲ್ಲಿ ಎರಡು ಬಾರಿ ನಿರಾಶ್ರಿತರಾಗಿದ್ದರು. ಆದರೂ, ಆ ಪರಿಸ್ಥಿತಿಗಳಿಂದ ಹೊರಬಂದು ಯಶಸ್ವಿ ಉದ್ಯಮಿಯಾದರು.
ಮೊದಲ ಬಾರಿಗೆ ಅವರು 22ನೇ ವಯಸ್ಸಿನಲ್ಲಿ ನಿರಾಶ್ರಿತರಾದರು. ವಾಹನ ಪ್ರದರ್ಶನವೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಮರಳಿದಾಗ, ಅವರ ಪತ್ನಿ ಬ್ಯಾಂಕ್ನಲ್ಲಿದ್ದ ಹಣವನ್ನೆಲ್ಲ ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ಎರಡು ವರ್ಷದ ಮಗನನ್ನು ಮನೆಯಲ್ಲೇ ಬಿಟ್ಟು, ತಾನು ಹೊರಟಿರುವುದಾಗಿ ಪತ್ರವೊಂದನ್ನು ಇಟ್ಟು ಹೋಗಿದ್ದರು. ಬಾಡಿಗೆ ಮತ್ತು ವಿದ್ಯುತ್ ಸೇರಿದಂತೆ ಇತರ ಬಿಲ್ಗಳೂ ಪಾವತಿಯಾಗಿರಲಿಲ್ಲ. ಮನೆ ಮಾಲೀಕರು ಅವರನ್ನು ಹೊರಹಾಕಲು ಸಿದ್ಧತೆ ನಡೆಸುತ್ತಿದ್ದರು.
ಆ ಸಮಯದಲ್ಲಿ ಅವರ ಬಳಿ ಇದ್ದದ್ದು, ಪ್ರತಿ ಕೆಲವು ಗಂಟೆಗಳಿಗೊಮ್ಮೆ ನೀರು ತುಂಬಿಸಬೇಕಾಗಿದ್ದ 1951ರ ಕ್ಯಾಡಿಲಾಕ್ ಕಾರು. ಕುಟುಂಬ ಸಮೇತ ಅದೇ ಕಾರಿನಲ್ಲಿ ವಾಸಿಸುವ ಪರಿಸ್ಥಿತಿ ಎದುರಾಯಿತು. ಖಾಲಿ ನಿವೇಶನಗಳಲ್ಲಿ ಬಿದ್ದಿದ್ದ ಕೂಲ್ಡ್ ಡ್ರಿಂಕ್ಸ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ಹಿಂದಿರುಗಿಸುವ ಮೂಲಕ ಸಿಗುತ್ತಿದ್ದ ಎರಡು ಅಥವಾ ಐದು ಸೆಂಟ್ ಹಣದಿಂದ ಜೀವನ ಸಾಗಿಸಲು ಪ್ರಯತ್ನಿಸಿದರು. ಕೊನೆಗೆ, ಲೀ ಮೆಯರ್ಸ್ ಎಂಬ ಬೈಕರ್ ಸ್ನೇಹಿತರೊಬ್ಬರು ತಮ್ಮ ಬಳಿ ಖಾಲಿಯಿದ್ದ ಕೋಣೆಯಲ್ಲಿ ವಾಸಿಸಲು ಅವಕಾಶ ನೀಡಿದರು.
1980ರಲ್ಲಿ ಡಿಜೋರಿಯಾ ಮತ್ತೊಮ್ಮೆ ನಿರಾಶ್ರಿತರಾದರು. ಕೂದಲಿನ ಆರೈಕೆ ಉತ್ಪನ್ನಗಳ ಕಂಪನಿಯನ್ನು ಆರಂಭಿಸಲು ಯೋಜಿಸಿದ್ದ ಅವರಿಗೆ ಯುರೋಪಿನ ಹೂಡಿಕೆದಾರರೊಬ್ಬರು 5 ಲಕ್ಷ ಡಾಲರ್ ಹಣಕಾಸು ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಹೂಡಿಕೆದಾರರು ಹಿಂದೆ ಸರಿದರು. ಆಗ ಡಿಜೋರಿಯಾ ಮತ್ತು ಕೇಶ ವಿನ್ಯಾಸ ತಜ್ಞ ಪಾಲ್ ಮಿಚೆಲ್ ತಲಾ 350 ಡಾಲರ್ ಹೂಡಿಕೆ ಮಾಡಿ 1980ರಲ್ಲಿ ಜಾನ್ ಪಾಲ್ ಮಿಚೆಲ್ ಸಿಸ್ಟಮ್ಸ್ ಕಂಪನಿಯನ್ನು ಆರಂಭಿಸಿದರು. ಕಂಪನಿ ಸ್ಥಾಪಿಸುವ ಮೊದಲು ಡಿಜೋರಿಯಾ ತಮ್ಮ ಕಾರಿನಲ್ಲೇ ವಾಸಿಸುತ್ತಿದ್ದರು. ಮುಂದೆ 1989ರಲ್ಲಿ ಅವರು ದಿ ಪ್ಯಾಟ್ರನ್ ಸ್ಪಿರಿಟ್ಸ್ ಕಂಪನಿಯ ಸಹ-ಸಂಸ್ಥಾಪಕರಾದರು.
ಯಶಸ್ಸು ಹಂಚಿಕೊಳ್ಳದಿದ್ದರೆ ಅದು ಸೋಲಿಗೆ ಸಮಾನ!
ತಮ್ಮ ಜೀವನದ ಅನುಭವಗಳಿಂದ ರೂಪುಗೊಂಡ ತತ್ವವನ್ನು ಡಿಜೋರಿಯಾ ಅವರು “Success Unshared Is Failure” ಎಂದು ಹೇಳುತ್ತಾರೆ. ಅಂದರೆ, ಯಶಸ್ಸನ್ನು ಇತರರೊಂದಿಗೆ ಹಂಚಿಕೊಳ್ಳದಿದ್ದರೆ ಅದು ಸೋಲಿಗೆ ಸಮಾನ ಎಂಬುದು ಅವರ ನಿಲುವು. ಇದೇ ಶೀರ್ಷಿಕೆಯಲ್ಲಿ ಅವರ ಆತ್ಮಕಥೆಯೂ ಪ್ರಕಟವಾಗಿದೆ.
2011ರಲ್ಲಿ ಡಿಜೋರಿಯಾ ಅವರು ವಾರನ್ ಬಫೆಟ್, ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ಸೇರಿದಂತೆ ಹಲವು ಶ್ರೀಮಂತ ವ್ಯಕ್ತಿಗಳು ಆರಂಭಿಸಿದ ‘ಗಿವಿಂಗ್ ಪ್ಲೆಡ್ಜ್’ ಅಭಿಯಾನಕ್ಕೆ ಸಹಿ ಹಾಕಿದರು. ತಮ್ಮ ಸಂಪತ್ತಿನ ಕನಿಷ್ಠ ಅರ್ಧ ಭಾಗವನ್ನು ಸಮಾಜಸೇವೆಗೆ ನೀಡುವುದಾಗಿ ಅವರು ಪಣ ತೊಟ್ಟರು.
ತಮ್ಮ ಬದ್ಧತಾ ಪತ್ರದಲ್ಲಿ, “ಇಂದು ನನಗೆ ದೊರೆತಿರುವ ಸಂಪತ್ತಿನ ಅರ್ಧ ಭಾಗವನ್ನಾದರೂ, ಸಾಧ್ಯವಾದರೆ ಅದಕ್ಕಿಂತ ಹೆಚ್ಚಿನದನ್ನೂ, ನನ್ನ ಟ್ರಸ್ಟ್ ಮತ್ತು ಕುಟುಂಬದ ಮೂಲಕ ಈಗಲೂ ಮುಂದೆಯೂ ಜಗತ್ತಿನ ಒಳಿತಿಗಾಗಿ ಬಳಸಲು ಯೋಜಿಸಿದ್ದೇನೆ,” ಎಂದು ಬರೆದಿದ್ದರು.
ಅದೇ ವರ್ಷ ತಮ್ಮ ಕುಟುಂಬದೊಂದಿಗೆ ಸೇರಿ ಅವರು ‘ಜೆಪೀಸ್ ಪೀಸ್, ಲವ್ ಆ್ಯಂಡ್ ಹ್ಯಾಪಿನೆಸ್ ಫೌಂಡೇಶನ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆಹಾರ ಭದ್ರತೆ, ನಿರಾಶ್ರಿತರು ಮತ್ತು ಮಾಜಿ ಸೈನಿಕರಿಗೆ ನೆರವು, ಪ್ರಾಣಿಗಳ ರಕ್ಷಣೆ ಹಾಗೂ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಈ ಸಂಸ್ಥೆಯ ಪ್ರಮುಖ ಕಾರ್ಯಕ್ಷೇತ್ರಗಳಾಗಿವೆ.
13 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು!
ಡಿಜೋರಿಯಾ ಅವರ ಪ್ರತಿಷ್ಠಾನದ ಪ್ರಮುಖ ಯೋಜನೆಗಳಲ್ಲಿ ‘ಗ್ರೋ ಅಪಲಾಚಿಯಾ’ ಕೂಡಾ ಒಂದು. ಈ ಯೋಜನೆಯಡಿ ಕುಟುಂಬಗಳಿಗೆ ತಮ್ಮದೇ ಆದ ತರಕಾರಿ ಮತ್ತು ಆಹಾರ ಬೆಳೆಗಳನ್ನು ಬೆಳೆಯುವ ತರಬೇತಿ ನೀಡಲಾಗುತ್ತದೆ. 2009ರಲ್ಲಿ ಈ ಯೋಜನೆಗೆ ಡಿಜೋರಿಯಾ ಆರಂಭಿಕವಾಗಿ 1.5 ಲಕ್ಷ ಡಾಲರ್ ದೇಣಿಗೆ ನೀಡಿದ್ದರು. ಬಳಿಕ ಅವರ ಪ್ರತಿಷ್ಠಾನದ ಮೂಲಕವೂ ಈ ಕಾರ್ಯ ಮುಂದುವರಿದಿದೆ.
ಯೋಜನೆಯ ಮಾಹಿತಿಯ ಪ್ರಕಾರ, ಇದುವರೆಗೆ 13,000ಕ್ಕೂ ಹೆಚ್ಚು ಕುಟುಂಬಗಳು ಸುಮಾರು 80 ಲಕ್ಷ ಪೌಂಡ್ಗಳಷ್ಟು ಆಹಾರ ಉತ್ಪನ್ನಗಳನ್ನು ಬೆಳೆಯಲು ನೆರವು ಪಡೆದಿವೆ. ಇದರಿಂದ ಕುಟುಂಬಗಳಿಗೆ ಆಹಾರ ಭದ್ರತೆ ಹೆಚ್ಚಿಸುವುದರ ಜೊತೆಗೆ, ಸ್ವಾವಲಂಬನೆಯತ್ತ ಸಾಗಲು ಸಹಾಯವಾಗಿದೆ.
ಉದ್ಯೋಗಿಗಳಿಗೂ ಸಮಾಜಸೇವೆಗೆ ಅವಕಾಶ!
ಸಮಾಜಕ್ಕೆ ನೆರವಾಗಬೇಕು ಎಂಬ ತತ್ವವನ್ನು ಡಿಜೋರಿಯಾ ತಮ್ಮ ವ್ಯವಹಾರಗಳಲ್ಲೂ ಅಳವಡಿಸಿಕೊಂಡಿದ್ದಾರೆ. ಅವರ ಕಂಪನಿಯಲ್ಲಿ ಉದ್ಯೋಗಿಗಳು ಸ್ವಯಂಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಒಟ್ಟು 2,664 ಗಂಟೆಗಳ ವೇತನ ಸಹಿತ ರಜೆಯ ವ್ಯವಸ್ಥೆಯಿದೆ ಎಂದು ವರದಿಯಾಗಿದೆ.
ಬಾಲ್ಯದಲ್ಲಿ ತಾಯಿ ಕಲಿಸಿದ ಪಾಠವೇ ಇಂದಿಗೂ ಅವರ ಜೀವನದ ತತ್ವವಾಗಿದೆ. “ನಿಮಗಿಂತ ಹೆಚ್ಚು ಅಗತ್ಯವಿರುವವರು ಯಾವಾಗಲೂ ಇರುತ್ತಾರೆ. ನಿಮ್ಮ ಬಳಿ ಸ್ವಲ್ಪವೇ ಇದ್ದರೂ, ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಿ” ಎಂಬ ಆ ಮಾತು, ಎರಡು ಬಾರಿ ನಿರಾಶ್ರಿತರಾಗಿದ್ದ ವ್ಯಕ್ತಿಯೊಬ್ಬರು ಯಶಸ್ವಿ ಉದ್ಯಮಿಯಾಗಿ ಬೆಳೆದ ಬಳಿಕವೂ ಸಮಾಜಸೇವೆಯನ್ನು ತಮ್ಮ ಜೀವನದ ಕೇಂದ್ರವಾಗಿಟ್ಟುಕೊಳ್ಳಲು ಪ್ರೇರಣೆಯಾಯಿತು.


