Viral Video: ಬಾಳೆಹಣ್ಣು ಕದಿಯಲು ಹೋಗಿ ತಾಯಿಯ ಕೈಯಲ್ಲಿ ಸಿಕ್ಕಿಬಿದ್ದ ಮರಿ ಆನೆಯ ಮುದ್ದಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆ ಸಂದರ್ಭದಲ್ಲಿ ತಾಯಿ ಆನೆ ಮಾಡಿದ ಕೆಲಸಕ್ಕೆ ಜನ ಫಿದಾ ಆಗಿದ್ದಾರೆ. ತಾಯಿ ಮತ್ತು ಮರಿಯ ಈ ಮುದ್ದಾದ ವಿಡಿಯೋ ಸಖತ್ ಕ್ಯೂಟ್ ಆಗಿದೆ.

ಅನೆಮರಿಯ ಮುದ್ದಾದ ವಿಡಿಯೋ ವೈರಲ್

ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವುದು ಅಮ್ಮಂದಿರ ಸ್ವಭಾವ. ಅದು ಮನುಷ್ಯರಿರಲಿ ಅಥವಾ ಪ್ರಾಣಿಗಳಿರಲಿ, ತಾಯಿಯ ಪ್ರೀತಿ ಮತ್ತು ಕಾಳಜಿಗೆ ಯಾವತ್ತೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದೀಗ ಇದಕ್ಕೆ ಸಾಕ್ಷಿ ಎಂಬಂತಿರುವ ಒಂದು ಮುದ್ದಾದ ಆನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಬಾಳೆಹಣ್ಣು ಕದಿಯಲು ಹೋದ ತನ್ನ ಪುಟ್ಟ ಕಂದನಿಗೆ ತಾಯಿ ಆನೆ ಕಲಿಸಿದ ಪಾಠ ಎಲ್ಲರ ಮುಖದಲ್ಲೂ ನಗು ಮೂಡಿಸಿದೆ. ಹಾಗಾದರೆ ಈ ವಿಡಿಯೋದಲ್ಲಿ ನಡೆದಿದ್ದೇನು ಗೊತ್ತಾ?

ಬಾಳೆಹಣ್ಣು ಕಂಡು ಆಸೆಪಟ್ಟ ಆನೆ ಮರಿ!

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪುಟ್ಟ ಆನೆಯೊಂದು ಅಂಗಡಿಯ ಮುಂದೆ ಇಟ್ಟಿರುವ ಬಾಳೆಹಣ್ಣಿನ ಬಳಿ ಬರುತ್ತದೆ. ಅಲ್ಲಿ ಬಾಳೆಹಣ್ಣಿನ ಗೊಂಚಲನ್ನು ನೋಡಿದ ಮರಿ ಆನೆಗೆ ಅದನ್ನು ತಿನ್ನುವ ಆಸೆಯಾಗುತ್ತದೆ. ತಕ್ಷಣವೇ ತನ್ನ ಸೊಂಡಿಲನ್ನು ಚಾಚಿ ಬಾಳೆಹಣ್ಣಿನ ಗೊಂಚಲನ್ನು ಎತ್ತಿಕೊಳ್ಳುತ್ತದೆ. ಯಾರಿಗೂ ಗೊತ್ತಾಗದಂತೆ ಬಾಳೆಹಣ್ಣು ತೆಗೆದುಕೊಂಡು ಹೋಗಬಹುದು ಎಂದುಕೊಂಡು ನಿಧಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡಲು ಪ್ರಯತ್ನಿಸುತ್ತದೆ.

ಮರಿಯ ಕಳ್ಳತನ ಕಂಡು ಸುಮ್ಮನಿರದ ತಾಯಿ ಆನೆ!

ಮರಿ ಆನೆ ಬಾಳೆಹಣ್ಣು ಹಿಡಿದು ಮುಂದೆ ಸಾಗುತ್ತಿದ್ದಂತೆ ಅಲ್ಲಿಗೆ ತಾಯಿ ಆನೆ ಬರುತ್ತದೆ. ತನ್ನ ಕಂದನ ಕೈಯಲ್ಲಿರುವ ಬಾಳೆಹಣ್ಣನ್ನು ನೋಡಿದ ತಾಯಿಗೆ ಅದರ ಕಿತಾಪತಿ ತಕ್ಷಣ ಅರ್ಥವಾಗುತ್ತದೆ. ತಕ್ಷಣವೇ ತನ್ನ ಸೊಂಡಿಲಿನಿಂದ ಮರಿ ಆನೆಯ ಸೊಂಡಿಲಿನಲ್ಲಿದ್ದ ಬಾಳೆಹಣ್ಣಿನ ಗೊಂಚಲನ್ನು ತೆಗೆದುಕೊಂಡು, ಅದನ್ನು ಎಲ್ಲಿಂದ ತಂದಿತ್ತೋ ಅಲ್ಲೇ ಮತ್ತೆ ಇಡುತ್ತದೆ. ಅಷ್ಟೇ ಅಲ್ಲ, ಮಗುವಿನ ತಪ್ಪನ್ನು ತಿದ್ದುವ ರೀತಿಯಲ್ಲಿ ವರ್ತಿಸುತ್ತದೆ. ತಾಯಿ ಆನೆಯ ಈ ನಡೆ ನೋಡಿದರೆ, ಮಕ್ಕಳಿಗೆ ಪ್ರೀತಿ ತೋರಿಸುವುದಷ್ಟೇ ಅಲ್ಲ, ತಪ್ಪು ಮಾಡಿದಾಗ ಸರಿಯಾದ ಪಾಠ ಕಲಿಸುವುದೂ ಮುಖ್ಯ ಎಂಬ ಸಂದೇಶ ಸಿಗುತ್ತದೆ.

ನೆಟ್ಟಿಗರ ಮನಗೆದ್ದ ತಾಯಿ-ಮಗುವಿನ ಮುದ್ದಾದ ವಿಡಿಯೋ!

ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 'ಅಮ್ಮ ಅಂದ್ರೆ ಅಮ್ಮನೇ ಬಿಡಿ!', 'ಮಗುವಿನ ಕಿತಾಪತಿ ತಾಯಿಗೆ ಗೊತ್ತಾಗದೇ ಇರುತ್ತಾ?', 'ಕದ್ದಿದ್ದನ್ನು ಮತ್ತೆ ವಾಪಸ್ ಇಡಿಸಿದ ತಾಯಿ ಸೂಪರ್' ಎಂದಿದ್ದಾರೆ. ಇನ್ನು ಕೆಲವರು ಇದುವೆ ನಿಜವಾದ ಪೇರೆಂಟಿಂಗ್, ತಾಯಿ ಆನೆಯ ಶಿಸ್ತನ್ನು ಮೆಚ್ಚಿಕೊಂಡಿದ್ದಾರೆ. ಮಕ್ಕಳಿಗೆ ತಪ್ಪು-ಸರಿ ತಿಳಿಸಿಕೊಡುವ ಜವಾಬ್ದಾರಿ ತಾಯಿಯದ್ದೇ ಎಂಬುದನ್ನು ಈ ದೃಶ್ಯ ನೆನಪಿಸುತ್ತದೆ ಎಂದು ಹೇಳುತ್ತಿದ್ದಾರೆ.

ಇದು AI ವಿಡೀಯೋನಾ?

ಇನ್ನು ಹಲವು ಜನರು ವಿಡಿಯೋ ನೋಡಿ ಇದು AI ವಿಡಿಯೋ ಎಂದಿದ್ದಾರೆ. ಎಲ್ಲವೂ ನೈಜ್ಯದಂತೆ ಕಂಡರು, ಮರಿ ಆನೆಯ ಸೊಂಡಿಲಿನಿಂದ ಬಾಳೆಹಣ್ಣನ್ನು ತೆಗೆಯುವಾಗಚಿತ್ರ ಬದಲಾದಂತೆ ಕಾಣುತ್ತದೆ. ಹಾಗಾಗಿ ಜನ ಇದನ್ನು AI ಎಂದೂ ಸಹ ಹೇಳುತ್ತಿದ್ದಾರೆ. ವಿಡಿಯೋ ಯಾವುದಾದರೇನೂ, ಜನರ ಮನಗೆದ್ದಿದ್ದಂತೂ ನಿಜಾ.

View post on Instagram