ಲವ್‌ ಬರ್ಡ್ಸ್‌ಗಳಿಗೆ ಸಿಹಿ ಮುತ್ತುಗಳೇ ಪರಪಂಚ. ಆದ್ರೆ ಈ ಮುತ್ತುಗಳೇ ಗಿನ್ನಿಸ್ ದಾಖಲೆಯಾದ್ರೆ ಹೇಗಿರುತ್ತೆ ಹೇಳಿ? ಜಸ್ಟ್ 30 ಸೆಕೆಂಡ್‌ನಲ್ಲಿ 195 ಕಿಸ್ ಕೊಡಲು ನಿಮ್ಮಿಂದ ಸಾಧ್ಯಾನಾ? ಈ ರೋಮ್ಯಾಂಟಿಕ್ ಕಪಲ್‌ನ ಮುತ್ತುಗಳ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.  

ಬ್ರೆಜಿಲ್: ಪ್ರೀತಿಯನ್ನು ವ್ಯಕ್ತಪಡಿಸಲು ಸಾವಿರಾರು ದಾರಿಗಳಿವೆ. ಆದರೆ ಬ್ರೆಜಿಲ್‌ನ ಈ ಜೋಡಿ ತಮ್ಮ ಪ್ರೀತಿಯನ್ನು ವಿಶ್ವ ದಾಖಲೆಯನ್ನಾಗಿ (Guinness World Record) ಪರಿವರ್ತಿಸಿದೆ. ಕೇವಲ 30 ಸೆಕೆಂಡ್‌ಗಳಲ್ಲಿ ಬರೋಬ್ಬರಿ 195 ಬಾರಿ ಮುತ್ತಿಕ್ಕಿ ಹುಬ್ಬೇರಿಸಿದೆ.

ಅಂತರಾಷ್ಟ್ರೀಯ ಚುಂಬನ ದಿನದ (International Kissing Day) ಅಂಗವಾಗಿ ಬ್ರೆಜಿಲ್‌ನ ರೆನಾಟೊ ಬೈಮಾ ಗೈಯಾ ಮತ್ತು ಅವರ ಗೆಳತಿ ನಾಯರಾ ರೋಬರ್ಟಾ ರಿಬೈರೋ ಡಿ ಮರಿನ್ಸ್ ಈ ವಿಶಿಷ್ಟ ಸಾಹಸವನ್ನು ಮಾಡಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಏನಿದೆ ವಿಡಿಯೋದಲ್ಲಿ?

ವೈರಲ್ ವಿಡಿಯೋದಲ್ಲಿ ರೆನಾಟೊ ಅತ್ಯಂತ ವೇಗವಾಗಿ ತಮ್ಮ ಗೆಳತಿಯ ಕೆನ್ನೆಗೆ ಸತತವಾಗಿ ಮುತ್ತಿಕ್ಕುವುದನ್ನು ಕಾಣಬಹುದು. ಈ ಸಮಯದಲ್ಲಿ ನಾಯರಾ ಮುಗುಳ್ನಗುತ್ತಾ ನಿಂತಿರುತ್ತಾರೆ. ಸರಿಯಾಗಿ 30 ಸೆಕೆಂಡ್ ಮುಗಿಯುವಷ್ಟರಲ್ಲಿ ರೆನಾಟೊ 195 ಬಾರಿ ಚುಂಬಿಸಿರುತ್ತಾರೆ. ಇದನ್ನು ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆ ಎಂದು ಘೋಷಿಸಲಾಗಿದೆ.

ಯಾರು ಈ ರೆನಾಟೊ?

32 ವರ್ಷದ ರೆನಾಟೊ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಇವರಿಗೆ ದಾಖಲೆಗಳನ್ನು ಬರೆಯುವುದು ಒಂದು ಗೀಳು. ಈ ಹಿಂದೆಯೇ ಅವರು ಅತೀ ವೇಗವಾಗಿ 10 ಪುಸ್ತಕಗಳನ್ನು ಜೋಡಿಸಿ ಬೀಳಿಸುವ ಮತ್ತು ಅತಿ ಹೆಚ್ಚು ಬಾರಿ ಕಾಲುಗಳನ್ನು ತಿರುಗಿಸುವ ದಾಖಲೆಗಳನ್ನು ಬರೆದಿದ್ದಾರೆ. ವಿಶೇಷವೆಂದರೆ ರೆನಾಟೊ ಎಡಿಎಚ್‌ಡಿ (ADHD-ಗಮನದ ಕೊರತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ) ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಎಡಿಎಚ್‌ಡಿ ಸಮಸ್ಯೆ ಇರುವವರು ಕೂಡ ತಮ್ಮ ಗುರಿಯನ್ನು ಸಾಧಿಸಬಹುದು ಎಂದು ತೋರಿಸಿಕೊಡಲು ನಾನು ಇಂತಹ ಸಾಹಸಗಳನ್ನು ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಮುಂದಿನ ಗುರಿ ಜಪಾನ್ ದಾಖಲೆ!

ಈಗ 30 ಸೆಕೆಂಡ್ ದಾಖಲೆ ಬರೆದಿರುವ ಈ ಜೋಡಿ, ಮುಂದಿನ ದಿನಗಳಲ್ಲಿ 1 ನಿಮಿಷದಲ್ಲಿ (60 ಸೆಕೆಂಡ್) ಅತಿ ಹೆಚ್ಚು ಮುತ್ತಿಕ್ಕುವ ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಪ್ರಸ್ತುತ ಈ ದಾಖಲೆ ಜಪಾನ್ ಜೋಡಿಯ ಹೆಸರಿನಲ್ಲಿದ್ದು, ಅವರು 60 ಸೆಕೆಂಡ್‌ನಲ್ಲಿ 277 ಬಾರಿ ಮುತ್ತಿಕ್ಕಿದ್ದಾರೆ.

ನೆಟ್ಟಿಗರ ತಮಾಷೆಯ ಕಾಮೆಂಟ್ಸ್

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು ಈ ದಾಖಲೆ ಬರೆಯಲು ಬಾಯಿ ಇರಬಾರದು, ಹಕ್ಕಿಯ ಕೊಕ್ಕಿನಂತಿರಬೇಕು! ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ಟೆಕ್ನಿಕಲ್ ಆಗಿ ನೋಡಿದರೆ ಇದು ಒಂದೇ ಮುತ್ತು, ಅವರು ಕೆನ್ನೆಯಿಂದ ಬಾಯಿ ತೆಗೆಯಲೇ ಇಲ್ಲ ಎಂದು ಕಾಲೆಳೆದಿದ್ದಾರೆ. ಇಷ್ಟು ಹೊತ್ತು ನಿರಂತರವಾಗಿ ನಗುತ್ತಾ ನಿಂತಿರುವುದಕ್ಕೆ ಆಕೆಗೆ ಪ್ರತ್ಯೇಕ ದಾಖಲೆ ಕೊಡಬೇಕು ಎಂದು ಹಲವರು ನಾಯರಾ ಅವರ ತಾಳ್ಮೆಯನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಬ್ಬರು ನನಗೂ ಮದುವೆಯಾಗಲಿ, ಆಮೇಲೆ ನೋಡಿ ಈ ದಾಖಲೆಯನ್ನು ನಾನೇ ಮುರಿಯುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ರೋಮ್ಯಾಂಟಿಕ್ ದಾಖಲೆಯ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ.

Scroll to load tweet…