ಅಯ್ಯಯ್ಯಬ್ಬಾ! ಮಕ್ಕಳನ್ನಾದ್ರೂ ನಿಭಾಯಿಸ್ಬೋದು, ಈ ಪತಿಯೆಂಬೋ ಪತ್ನಿಯವಲಂಬಿ ಪ್ರಾಣಿಯನ್ನಾಗಲ್ಲಪ್ಪ ಅನ್ನೋರು ನೀವಾದ್ರೆ ಈಗ ವಿಜ್ಞಾನ ಕೂಡಾ ನಿಮ್ಮ ಬೆನ್ನಿಗೆ ನಿಂತಿದೆ. ಹೌದು, ವೆಬ್‌ಸೈಟ್ ಟುಡೇ ಡಾಟ್ ಕಾಮ್ ನಡೆಸಿದ ಸರ್ವೆಯ ಫಲಿತಾಂಶ ಗಂಡಸರಿಗೆ ಅಚ್ಚರಿ ತರಬಹುದು, ಆದರೆ, ಹೆಂಗಸರಿಗೆ ಅನುಭವವೇ ಆಗಿದೆ. ಮಕ್ಕಳನ್ನು ನೋಡಿಕೊಳ್ಳುವುದಕ್ಕಿಂತಾ ಹೆಚ್ಚು ಒತ್ತಡ ಪತಿ ಮಹಾಶಯ ನೀಡುತ್ತಾನೆ ಎಂದು ಅಧ್ಯಯನ ವರದಿ ಹೇಳಿದೆ. ವಿವಾಹಿತ ಮಹಿಳೆಯರಿಗೆ ಅತಿಯಾದ ಒತ್ತಡ ನೀಡುವ ಸಂಗತಿಗಳ ಕುರಿತು ನಡೆಸಿದ ಸರ್ವೆಯಲ್ಲಿ ಬಂದ ಈ ಫಲಿತಾಂಶ ಖಂಡಿತಾ ತಮಾಷೆಯ ವಿಷಯವಲ್ಲ. 

ಮಾನಸಿಕವಾಗಿ, ದೈಹಿಕವಾಗಿ ಹೆಣ್ಣನ್ನು ಹೈರಾಣಿಗಿಸೋ ಗರ್ಭಪಾತ!

ಈ ಅಧ್ಯಯನವನ್ನು ಇಂದಿನ ಜಗತ್ತಿನಲ್ಲಿ ತಾಯಂದಿರು ಅನುಭವಿಸುವ ಸಾಮಾನ್ಯ ಒತ್ತಡಗಳನ್ನು ಕುರಿತಾಗಿ ನಡೆಸಲಾಗಿದ್ದು, ಸಾಮಾನ್ಯವಾಗಿ ಪತ್ನಿಯು ಪತಿಗಿಂತ ಎರಡು ಪಟ್ಟು ಕೆಲಸ ಮಾಡುತ್ತಾಳೆ. ಇನ್ನೂ ಕೆಲವು ಬಾರಿ ಪತಿ ಸಹಾಯಕ್ಕೆ ಬಂದರೂ ಆತನ ಕೆಲಸ ತನಗೆ ಸರಿ ಹೋಗದ ಕಾರಣ ಪತ್ನಿಯೇ ಅಚ್ಚುಕಟ್ಟಾಗಿ ಮನೆಯ ಕೆಲಸವೆಲ್ಲವನ್ನೂ ಮೈಮೇಲೆಳೆದುಕೊಂಡು ಮಾಡುವುದಿದೆ. ಒಟ್ಟಿನಲ್ಲಿ ತಾಯಿಯಾದ ಮಹಿಳೆ 24/7 ಮಾಡಿದರೂ ಮುಗಿಯದ ಕೆಲಸ. 

ಏಳು ಸಾವಿರಕ್ಕೂ ಅಧಿಕ ತಾಯಂದಿರು ಈ ಸರ್ವೆಯಲ್ಲಿ ಭಾಗವಹಿಸಿದ್ದು, ತಮಗೆ ಯಾವ ಸಂಗತಿಗಳು ಒತ್ತಡ ನೀಡುತ್ತವೆ, ಪತಿ ಹಾಗೂ ಮಕ್ಕಳೊಂದಿಗಿನ ಜೀವನ, ಜವಾಬ್ದಾರಿ ಹಂಚಿಕೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇವರಲ್ಲಿ ಶೇ.46ರಷ್ಟು ಮಹಿಳೆಯರು, ಮಕ್ಕಳಿಗಿಂತ ಹೆಚ್ಚಾಗಿ ತಮಗೆ ಒತ್ತಡವನ್ನು ನೀಡುವುದು ಪತಿರಾಯ ಎಂದಿದ್ದಾರೆ! ಅದಕ್ಕಿಂತಾ ಶಾಕಿಂಗ್ ಎಂದರೆ, ತಾಯಿಯ ಸರಾಸರಿ ಒತ್ತಡದ ಮಟ್ಟ 10ಕ್ಕೆ 8.5ರಷ್ಟು ಎಂಬುದು! ಅಂದರೆ ತಾಯಂದಿರು ಸದಾ ಒತ್ತಡದ ತುತ್ತತುದಿಯಲ್ಲೇ ಇರುತ್ತಾರೆಂದಾಯಿತು. 

ಕನಸಿನ ಕುದುರೆಯೇರಿ ಗುರಿ ಸೇರಿದ ಸಾಧಕಿಯರು!

ಆದರೆ ಏಕೆ?

ಪೋಷಕರಾಗೋದು ಸುಲಭದ ಮಾತಲ್ಲ. ತನ್ನನ್ನು ನೋಡಿಕೊಳ್ಳಲೇ ಹೆಣಗಾಡುವ ವ್ಯಕ್ತಿಯು ಇದ್ದಕ್ಕಿದ್ದಂತೆ ಇನ್ನು ಒಂದೆರಡು ಜೀವಗಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ಅವರಿಗೆ ಅತ್ಯುತ್ತಮ ಜೀವನ ಕೊಡಿಸುವ ಸಲುವಾಗಿ ಬದುಕನ್ನು ಸವೆಸುವ ಕಾಯಕಲ್ಪವಿದು. ಅಂಥದರಲ್ಲಿ ಪತಿಯು ಸಹಕಾರ ನೀಡದೇ ತಾನೂ ಒಬ್ಬ ಪತ್ನಿಗೆ ಹೊರೆಯಾದರಂತೂ ಕಷ್ಟ ಕಷ್ಟ. 
ನಾಲ್ವರಲ್ಲಿ ಮೂವರು ತಾಯಂದಿರು ಮನೆಯ ಎಲ್ಲ ಕೆಲಸ ಹಾಗೂ ಮಕ್ಕಳ ಸಂಪೂರ್ಣ ಜವಾಬ್ದಾರಿ ತಮ್ಮ ಹೆಗಲ ಮೇಲೇ ಇದೆ ಎಂದು ಹೇಳಿದ್ದಾರೆ. ಇನ್ನು ಐವರಲ್ಲಿ ಒಬ್ಬ ತಾಯಿ, ತನಗೆ ಪತಿಯ ಕಡೆಯಿಂದ ಯಾವುದೇ ಸಹಾಯ ದೊರೆಯುವುದಿಲ್ಲ ಎಂದು ದೂರಿದ್ದಾರಲ್ಲದೆ, ಕೆಲಸ ಮುಗಿಸಲು ತಮಗೆ ದಿನದ 24 ಗಂಟೆಗಳು ಸಾಲುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಸಿಂಗಲ್ ಮದರ್ ಆದವರ ಕತೆಯಂತೂ ಕೇಳುವುದೇ ಬೇಡ. ಇತರೆ ತಾಯಂದಿರಿಗಿಂತ ಬಹಳ ಹೆಚ್ಚು ಒತ್ತಡದಲ್ಲಿ ಇವರು ನರಳುತ್ತಿರುತ್ತಾರೆ ಎಂಬುದು ಅಧ್ಯಯನ ಕಂಡುಕೊಂಡಿದೆ. 
ಇದನ್ನು ಕಡೆಗಣಿಸುವ ಹಾಗಿಲ್ಲ. ಏಕೆಂದರೆ ಒತ್ತಡವು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಕೆಟ್ಟದಾಗಿದ್ದು, ಕಾಲಾಂತರದಲ್ಲಿ ಹತ್ತು ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಹುದು. ಆರೋಗ್ಯದಲ್ಲಿ ಏರುಪೇರಿನಿಂದ ಹಿಡಿದು, ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿಸಲು ಶಕ್ತವಾದುದು. ಹೀಗಾಗಿ, ನಿಮಗೂ ಪತಿಯೇ ದೊಡ್ಡ ತಲೆನೋವಾಗಿದ್ದಲ್ಲಿ ಅವರ ಬಳಿ ಈ ಕುರಿತು ಮಾತನಾಡಿ. ದಿನಸಿ ವಸ್ತುಗಳ ಶಾಪಿಂಗ್, ಪಾತ್ರೆ ತೊಳೆಯುವುದು, ಅಡಿಗೆ, ಮಕ್ಕಳನ್ನು ನೋಡಿಕೊಳ್ಳುವುದು ಹೀಗೆ ಮನೆಯ ಎಲ್ಲ ಜವಾಬ್ದಾರಿಗಳನ್ನೂ ಸಮನಾಗಿ ಹಂಚಿಕೊಳ್ಳಿ. ಪತ್ನಿಗೆ ಬಾಯಿಮಾತಿನಲ್ಲಿ ಕಾಳಜಿ ತೋರುವ ಪತಿಗಿಂತಾ ಆಡದೆ ಮಾಡುವವನು ರೂಢಿಯೊಳಗುತ್ತಮನು ಎನಿಸುತ್ತಾನೆ. ಇಷ್ಟಕ್ಕೂ ಯಶಸ್ವೀ ವೈವಾಹಿಕ ಜೀವನದ ಗುಟ್ಟು ಸುಖದುಃಖಗಳೆರಡನ್ನೂ ಸಮನಾಗಿ ಹಂಚಿಕೊಳ್ಳುವುದರಲ್ಲಿದೆ ಎಂಬುದನ್ನು ಮರೆಯಬೇಡಿ.