ಸಂಕ್ರಾಂತಿ ಸಮೀಪಿಸುತ್ತಿದೆ. ಇದರ ಪ್ರಮುಖ ಆಕರ್ಷಣೆಯೇ ಎಳ್ಳು ಬೆಲ್ಲ. 'ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ...' ಎಂದು ಹಾರೈಸಿ, ಮನೆ ಮನೆಗೆ ತೆರಳಿ ಕಬ್ಬು, ಹಣ್ಣಿನೊಂದಿಗೆ ಎಳ್ಳು ಬೀರಿ ಬಂದಾಗಲೇ ಹಬ್ಬಕ್ಕೊಂದು ಕಳೆ.

ಈ ಚಳಿಗಾಲದಲ್ಲಿ ದೇಹದಲ್ಲಿ ತೈಲಾಂಶ ಹೆಚ್ಚಾಗಬೇಕೆಂದು ತಿನ್ನುವ ಈ ವಿಶೇಷ ಆಹಾರದಲ್ಲಿ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಅಗತ್ಯವಾದ ವಸ್ತುಗಳೆಡೆಗೆ ಹೆಚ್ಚಿನ ಗಮನಹರಿಸುವುದು ಅನಿವಾರ್ಯ. ಅದೂ ಅಲ್ಲದೇ ಬಣ್ಣ ಹಾಕಿದ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು. ನೋಡಲು ಚೆಂದ ಕಾಣುವಂತೆ, ಅಗತ್ಯವಾದ ವಸ್ತುಗಳನ್ನೇ ಹಾಕಿ, ಮಾಡಿದರೊಳಿತು. 

ಮಕರ ಸಂಕ್ರಾಂತಿಗೇಕೆ ಎಳ್ಳು ಬೆಲ್ಲ ತಿನ್ನಬೇಕು?

ಕೇವಲ ಎಳ್ಳು, ಬೆಲ್ಲ, ಕೊಬ್ಬರಿ, ಶೇಂಗಾ ಹಾಗೂ ಪುಟಾಣಿ ಬೆರೆಸಿ ಮಾಡುವ ಈ ಎಳ್ಳು ಬೆಲ್ಲ ರುಚಿ ರುಚಿಯಾಗಬೇಕೆಂದರೆ ಮಾಡುವ ರೀತಿ ಹಾಗೂ ಇವುಗಳನ್ನು ಸಮ ಪ್ರಮಾಣದಲ್ಲಿ ಬೆರೆಸುವುದು ಮುಖ್ಯ. 

ಮಾರುಕಟ್ಟೆಯಲ್ಲಿ ಎಲ್ಲವೂ ಸಿದ್ಧವಾಗಿಯೇ ಸಿಗುತ್ತಾದರೂ, ಪ್ರತಿಯೊಂದೂ ವಸ್ತುಗಳನ್ನು ಪ್ರತ್ಯೇಕವಾಗಿ ತಂದು, ಶುಚಿಗೊಳಿಸಿ, ನಮಗೆ ಅಗತ್ಯದಷ್ಟು ಬೆರೆಸಿಕೊಂಡರೆ ರುಚಿಯೂ ಹೆಚ್ಚುತ್ತದೆ, ಸಾಕಷ್ಟು ದಿನಗಳ ಕಾಲವಿಟ್ಟು ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು

ಎಳ್ಳು-200 ಗ್ರಾಂ
ಬೆಲ್ಲ- 1 ಕೆ.ಜಿ.ಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು.

ಕೊಬ್ಬರಿ- 1 ಕೆ.ಜಿ. ಬಿಸಿಲಿಗೆ ಹಾಕಿ, ಸಿಪ್ಪೆ ತೆಗೆದು, ಸಣ್ಣದಾಗಿ ಹೆಚ್ಚಿಕೊಳ್ಳಬೇಕು.

ಪುಟಾಣಿ- 250 ಗ್ರಾಂ, ಬಿಸಿಲಿಗೆ ಹಾಕಿಟ್ಟುಕೊಳ್ಳಬೇಕು.

ಶೇಂಗಾ: 1 ಕೆ.ಜಿ. ಒಳ್ಳೆ ಗುಣಮಟ್ಟದ ಶೇಂಗಾವನ್ನುಮಂದ ಜ್ವಾಲೆಯಲ್ಲಿ ಹುರಿದು, ಸಿಪ್ಪೆ ತೆಗೆದು. ಸ್ವಚ್ಛಗೊಳಿಸಕೊಳ್ಳಬೇಕು. ಬಿಳಿ ಬಿಳಿಯಾಗಿ ಕಂಡರೆ ರುಚಿಯೂ ಹೆಚ್ಚು, ನೋಡಲೂ ಚೆಂದ.

ನಿಮ್ಮ ನಿಮ್ಮ ರುಚಿಗೆ ಹಾಗೂ ಆರೋಗ್ಯದ ಅಗತ್ಯಕ್ಕೆ ತಕ್ಕಂತೆ ಮೇಲಿನ ವಸ್ತುಗಳನ್ನು ಹೆಚ್ಚು ಕಮ್ಮಿ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ತಿನ್ನುವ ಎಳ್ಳು ಬೆಲ್ಲ ರುಚಿಯಾಗಿರುವುದಲ್ಲದೇ, ಆರೋಗ್ಯದ ಅಗತ್ಯಗಳನ್ನೂ ಪೂರೈಸಬೇಕಷ್ಟೆ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣವಾಗಿ ಸಿಗುವ ವಸ್ತುಗಳನ್ನು ಹಾಕದಿದ್ದರೆ ಒಳ್ಳೆಯದು.