Asianet Suvarna News Asianet Suvarna News

ಮೊಬೈಲ್ ಬಳಕೆಗೆ ಮಿತಿ ಹಾಕ್ಕೊಳ್ಳಲೂ ಕೆಲವು ಆ್ಯಪ್ಸ್ ಇವೆ, ಬಳಸೋದು ಹೇಗಪ್ಪಾ?

ಗ್ಯಾಜೆಟ್ ಬಳಕೆ ಮಿತಿ ಮೀರಿ ವ್ಯಸನದ ರೂಪಕ್ಕೆ ತಿರುಗಿದೆ. ಹರೆಯದವರಂತೂ ಅಂತರ್ಜಾಲದಲ್ಲಿ ಮುಳುಗಿ ನೈಜ ಜೀವನದಲ್ಲಿ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಕ್ರೀನ್ ಸಮಯ ಕಡಿಮೆಗೊಳಿಸಲು, ನಿಗದಿತ ಸಮಯಕ್ಕೆ ಮಾತ್ರವೇ ಅಂತರ್ಜಾಲದ ಬಳಕೆ ಮಾಡಲು ಸಹಾಯವಾಗುವಂತೆ ಹಲವು ಆಪ್ ಗಳು ಲಭ್ಯ ಇವೆ. ಅವುಗಳನ್ನು ಟ್ರೈ ಮಾಡಿ ಗ್ಯಾಜೆಟ್ ಗಳ ಕನಿಷ್ಠ ಬಳಕೆಗೆ ಆದ್ಯತೆ ನೀಡಿ.

 

How to minimum screen use, download some app for that
Author
First Published Nov 19, 2022, 1:12 PM IST

ಸೋಷಿಯಲ್ ಮೀಡಿಯಾ ವ್ಯಸನ ಹಲವರಿಗೆ ಮಿತಿ ಮೀರಿದೆ. ಏನಾದರೊಂದು ಕಮೆಂಟ್ ಹಾಕುವುದು, ಅದಕ್ಕೆ ಲೈಕ್ ಬಂತಾ ಇಲ್ಲವಾ ಎಂದು ಚೆಕ್ ಮಾಡುವುದು, ಬರದಿದ್ದರೆ ನೊಂದುಕೊಳ್ಳುವುದು, ಬಂದರೆ ಏನೋ ಸಾಧಿಸಿದಂತೆ ಬೀಗುವುದು. ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಇದು ಸಣ್ಣ ಉದಾಹರಣೆ ಮಾತ್ರ. ಹಲವು ವಿಭಿನ್ನ ಅಪಾಯಕಾರಿ ಆಯಾಮಗಳನ್ನು ಇಲ್ಲಿ ನೋಡಬಹುದು. ವಿಚಿತ್ರ ಎಂದರೆ, ಇತ್ತೀಚೆಗೆ ಸೋಷಿಯಲ್ ಮೀಡಿಯಾ ವ್ಯಸನವನ್ನು ದೂರವಿಡಲೆಂದು ಹಲವಾರು ಆಪ್ ಗಳು ಕೂಡ ಬಂದಿವೆ. ಸೋಷಿಯಲ್ ಮೀಡಿಯಾ ಆಪ್ ಗಳನ್ನು ದೂರವಿಡಲು ಮತ್ತಷ್ಟು ಆಪ್ ಗಳು! ನಾವೆಲ್ಲರೂ ಇಂದು ಆನ್ ಲೈನ್ ನಲ್ಲಿ ದಿನದ ಸಾಕಷ್ಟು ಸಮಯ ಕಳೆಯುತ್ತಿದ್ದೇವೆ. ಇದು ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ, ನಮ್ಮ ದೈನಂದಿನ ಕೆಲಸಕಾರ್ಯಗಳು ಸುಗಮವಾಗಿ ಸಾಗದಷ್ಟು. ಇನ್ನು ಕೆಲವು ಸಮಯದಲ್ಲಿ ಎಲ್ಲರ ಕೈಗೆ 5ಜಿ ಕೂಡ ಲಭ್ಯವಾಗಲಿದೆ. ಹೇಗೆ ಪರಿಸ್ಥಿತಿ ನಿಯಂತ್ರಿಸಬೇಕು ಎನ್ನುವುದೇ ಗೊತ್ತಾಗದ ಸನ್ನಿವೇಶ ನಿರ್ಮಾಣವಾದರೆ ಅಚ್ಚರಿಯಿಲ್ಲ. ಹೀಗಾಗಿ, ಡಿಜಿಟಲ್ ಮಾಧ್ಯಮಗಳ ಕನಿಷ್ಠ ಬಳಕೆಗೆ (ಮಿನಿಮಲಿಸಂ) ಆದ್ಯತೆ ನೀಡುವ ಟ್ರೆಂಡ್ ಅನ್ನು ಆರಂಭಿಸಬೇಕಿದೆ. ಇದು ಡಿಜಿಟಲ್ ಡಿಟಾಕ್ಸ್ ಗಿಂತ ಭಿನ್ನವಾದ ನೋಟ.

ಮಹಾರಾಷ್ಟ್ರದ (Maharashtra) ಸಾಂಗ್ಲಿ ಜಿಲ್ಲೆಯ ವಡಗಾಂವ ಎಂಬ ಗ್ರಾಮದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಅಲಾರಾಂ ಮೊಳಗುತ್ತದೆ. ಎಲ್ಲರೂ ತಮ್ಮ ತಮ್ಮ ಮೊಬೈಲ್ (Mobile) ಗಳನ್ನು ಮುಂದಿನ 90 ನಿಮಿಷಗಳ ಕಾಲ ಪಕ್ಕಕ್ಕೆ ಇಡುತ್ತಾರೆ. ಮಕ್ಕಳು (Children) ಈ ಸಮಯದಲ್ಲಿ ಓದಲು ಶುರು ಮಾಡಿದರೆ, ಹಿರಿಯರು ಪರಸ್ಪರ ಭೇಟಿ, ಮಾತುಕತೆಯಲ್ಲಿ ತೊಡಗುತ್ತಾರೆ. ಇಷ್ಟು ಸಮಯ ಅವರು ಮೊಬೈಲ್ ಮುಟ್ಟುವುದಿಲ್ಲ. ಇದು ಡಿಜಿಟಲ್ ಡಿಟಾಕ್ಸ್ (Digital Detox). ಆದರೆ, ಡಿಜಿಟಲ್ ಮಿನಿಮಲಿಸಂ (Minimalism) ಎಂದರೆ ಹೀಗಲ್ಲ. ಇಲ್ಲಿ, ಗ್ಯಾಜೆಟ್ ಗಳನ್ನು ಸಂಪೂರ್ಣವಾಗಿ ಪಕ್ಕ ಇಡಬೇಕೆಂದಿಲ್ಲ. ಬದಲಿಗೆ, ಏನು ಮಾಡಬೇಕು ಎನ್ನುವುದರ ಬಗ್ಗೆ ಎಚ್ಚರಿಕೆಯಿಂದ ವರ್ತಿಸಬೇಕು. ಗ್ಯಾಜೆಟ್ ಗಳ ಅಧಿಕ ಬಳಕೆಗೆ ಇದು ನಿಯಂತ್ರಣ ಹೇರುತ್ತದೆ. ಆಯ್ಕೆ ಮಾಡಿಕೊಂಡ ಸವಾಲುಗಳನ್ನು ಪೂರ್ಣಗೊಳಿಸಲು ಪ್ರೇರಣೆ ನೀಡುತ್ತದೆ.

ಮಗು ಜೊತೆಯಲ್ಲಿರುವಾಗ ಗ್ಯಾಡೆಜ್ಟ್‌ ಬಳಸ್ತೀರಾ ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ ಜೋಕೆ

ಡಿಜಿಟಲ್‌ ಬಳಕೆ ಕಡಿಮೆ ಮಾಡೋದ್‌ ಹ್ಯಾಗೆ?
ಮೂರು ತತ್ವಗಳ ಆಧಾರದ ಮೇಲೆ ಡಿಜಿಟಲ್ ಬಳಕೆಯನ್ನು ಕಡಿಮೆ ಮಾಡಬಹುದು.  ಅಸ್ತವ್ಯಸ್ತತೆ ಎನ್ನುವುದು ದುಬಾರಿ, ಅತ್ಯುತ್ತಮ ಕಾರ್ಯ ಕಷ್ಟ ಆದರೆ, ಉದ್ದೇಶಪೂರ್ವಕ ನಡೆ ತೃಪ್ತಿಕರ... ಎನ್ನುವ ತತ್ವದ ಮೇಲೆ ಡಿಜಿಟಲ್‌ ಮಿನಿಮಲಿಸಂ ವಿಧಾನವನ್ನು ಅನುಸರಿಸಬಹುದು ಎನ್ನುತ್ತಾರೆ ತಜ್ಞರು. ಇಲ್ಲಿ ಉದ್ದೇಶ ಎಂದರೆ, ಮೊಬೈಲ್ ಅಥವಾ ಯಾವುದೇ ಗ್ಯಾಜೆಟ್ (Gadget) ಬಳಕೆ ಉದ್ದೇಶಕ್ಕೆ ಸೀಮಿತವಾಗಬೇಕು. ಅದೂ ಸಹ ಸಮಯದ ಮಿತಿಯಲ್ಲಿರಬೇಕು. ಈ ಉದ್ದೇಶ ಸಾಧನೆಗೆ ಹಲವು ಆಪ್ (App) ಗಳು ನೆರವಿಗೆ ಬರಬಲ್ಲವು.

World Eye Sight Day: ಈಗೀಗ ಕಣ್ಣು ಹಾಳಾಗುವುದೇ ಅತೀ ಗೆಜೆಟ್ ಬಳಕೆಯಿಂದ

ಅಂತರ್ಜಾಲದಿಂದ (Internet) ದೂರವಿರಲು ಆಪ್!
ಫ್ರೀಡಮ್ (Freedom), ಕೋಲ್ಡ್ ಟರ್ಕಿ, ರೆಸ್ಕ್ಯೂಟೈಮ್, ಟಾಗಲ್, ಸ್ಟೇಫೋಕಸ್ಡ್, ಫೋಕಸ್ ಮಿ, ಸೆಲ್ಫ್ ಕಂಟ್ರೋಲ್... ಇವೆಲ್ಲ ಕೇವಲ ಶಬ್ದಗಳಲ್ಲ. ಇವು ಗ್ಯಾಜೆಟ್ ಬಳಕೆ ಕಡಿಮೆ ಮಾಡಲು ಅಸ್ತಿತ್ವಕ್ಕೆ ಬಂದಿರುವ ಆಪ್ ಗಳು! ಇವು ಒಂದು ಆಪ್ ನಿಂದ ಇನ್ನೊಂದಕ್ಕೆ ಜಂಪ್ ಆಗುವುದನ್ನು ತಡೆಯುತ್ತವೆ. ಇತರ ಆಪ್ ಗಳ ಕಾರ್ಯವನ್ನು ಸ್ಥಗಿತಗೊಳಿಸುತ್ತವೆ. ಬ್ಲಾಕ್ ಲಿಸ್ಟ್ (Blocklist) ಸಿದ್ಧಪಡಿಸುತ್ತವೆ. ನಿಗದಿತ ಆಪ್ ದಿನದ ಕೆಲವು ಸಮಯ ಮಾತ್ರ ಕಾರ್ಯನಿರ್ವಹಿಸುವಂತೆ ಮಾಡುತ್ತವೆ. ಆನ್ ಲೈನ್ (Online) ನಲ್ಲಿ ಹೆಚ್ಚು ಸಮಯ ಕಳೆಯದಂತೆ ಎಚ್ಚರಿಕೆ ನೀಡುತ್ತವೆ.

ಕೋವಿಡ್ (Covid) ಬಳಿಕ ಮಕ್ಕಳು ಸೇರಿದಂತೆ ಎಲ್ಲರ ಸ್ಕ್ರೀನ್ ವ್ಯಸನ (Screen Addiction) ಹೆಚ್ಚಾಗಿದೆ. 13-18ರ ವಯೋಮಾನದವರ ಮೊಬೈಲ್ ಬಳಕೆ ಗಮನಾರ್ಹವಾಗಿ ಹೆಚ್ಚಿದೆ. ಈ ಮಕ್ಕಳು ಏಕಾಂಗಿ ಭಾವನೆ (Loneliness), ಜನರೊಂದಿಗೆ ಬೆರೆಯದೆ ಇರುವ ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆ ಆನ್ ಲೈನ್ ಸುರಕ್ಷಿತ ಹಾಗೂ ಸರಳವೆನಿಸುತ್ತದೆ. ಇಂತಹ ಮಕ್ಕಳನ್ನು ಡಿಜಿಟಲ್ ಮಿನಿಮಲಿಸಂಗೆ ಒಳಪಡಿಸುವುದು ಅತ್ಯಗತ್ಯ ಎನ್ನುತ್ತಾರೆ ಮನೋತಜ್ಞರು. ಈ ಆಪ್ ಗಳು ಇದಕ್ಕೆ ಸಹಕಾರಿಯಾಗಬಲ್ಲವು.

 

Follow Us:
Download App:
  • android
  • ios