ಮಕ್ಕಳಿಗೆ ಡ್ರೆಸ್ ಹಾಕುವುದೆಂದರೆ ಅಮ್ಮಂದಿರಿಗೆ ತಲೆನೋವಿನ ಕೆಲಸ. ಅವರಿಗಿಷ್ಟವಾಗುವ ಡ್ರೆಸ್ ಯಾವುದೆಂದು ತಿಳಿಯುವುದರೊಳಗೆ ಅಮ್ಮಂದಿರು ಸುಸ್ತಾಗಿರುತ್ತಾರೆ. ರಗಳೆ, ರಂಪಾಟವಿಲ್ಲದೆ ಮಕ್ಕಳನ್ನು ರೆಡಿ ಮಾಡುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ.
ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕಿದೆ. ಆಗಲೇ ಲೇಟಾಗಿದೆ ಎಂದು ಬೇಗ ಬೇಗ ರೆಡಿಯಾಗಿ ನಾಲ್ಕು ವರ್ಷದ ಮಗಳಿಗೆ ಡ್ರೆಸ್ ಹಾಕಲು ಹೋದರೆ ಹೈಡ್ರಾಮಾವೇ ಶುರುವಾಯ್ತು. ‘ಅಮ್ಮಾ ನಂಗೆ ಈ ಬ್ಲ್ಯೂ ಡ್ರೆಸ್ ಬೇಡ. ಪಿಂಕ್ ಕಲರ್ ಡ್ರೆಸ್ ಕೊಡು’ ಸರಿಯಪ್ಪ ಎಂದು ಪಿಂಕ್ ಕಲರ್ ಡ್ರೆಸ್ ತೆಗೆದುಕೊಂಡು ಬಂದರೆ ‘ಅಯ್ಯೋ ಇದು ಮೈಗೆಲ್ಲ ಚುಚ್ಚುತ್ತೆ, ಬೇಡ ನಂಗೆ’ ಮತ್ತೊಂದು ನೆಪದೊಂದಿಗೆ ರಂಪಾಟ. ಕೊನೆಗೆ ಅವಳನ್ನೇ ವಾಡ್‍ರೋಪ್ ಮುಂದೆ ನಿಲ್ಲಿಸಿ ನನ್ನೊಳಗಿನ ಎಲ್ಲ ಟ್ಯಾಲೆಂಟ್ ಬಳಸಿ ಒಂದು ಡ್ರೆಸ್ ಓಕೆ ಮಾಡಿಸುವಾಗ ಸುಸ್ತಾಗಿ ಹೋಗಿತ್ತು. ನಿಮಗೂ ಕೂಡ ಇಂಥ ಅನುಭವಗಳು ಖಂಡಿತಾ ಆಗಿರುತ್ತವೆ. ಹೊರಗಡೆ ಹೊರಟಾಗ ಇಲ್ಲವೆ ಡ್ರೆಸ್ ಖರೀದಿಗೆ ಮಾಲ್‍ಗೋ, ಶಾಪ್‍ಗೋ ಹೋದಾಗ ನಾನಾ ನೆಪಗಳನ್ನು ಮುಂದಿಟ್ಟುಕೊಂಡು ದೊಡ್ಡವರನ್ನು ಕೀಲುಗೊಂಬೆಗಳಂತೆ ಆಡಿಸುವುದರಲ್ಲಿ ಮಕ್ಕಳು ನಿಸ್ಸೀಮರು. ಇಂಥ ಸಂದರ್ಭಗಳಲ್ಲೆಲ್ಲ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ ಎಂಬ ಸಂದಿಗ್ಧತೆ ಪೋಷಕರದ್ದು. ಊಟ ಮಾಡುವ ವಿಷಯದಲ್ಲಿ ಮಕ್ಕಳು ಹೇಗೆ ದೊಡ್ಡವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೋ ಅದೇ ರೀತಿ ಡ್ರೆಸ್ ವಿಚಾರದಲ್ಲೂ ಒಂದಲ್ಲ ಒಂದು ಕಿರಿಕ್ ಮಾಡೇ ಮಾಡುತ್ತಾರೆ. ಹಾಗಾದ್ರೆ ಮಕ್ಕಳು ಖುಷಿಯಿಂದ ಡ್ರೆಸ್ ಹಾಕಿಕೊಳ್ಳುವಂತೆ ಮಾಡೋದು ಹೇಗೆ?
1.ಕಂಫರ್ಟ್ ನೀಡುವ ಡ್ರೆಸ್ ಆರಿಸಿ: ಕೆಲವು ಡ್ರೆಸ್‍ಗಳು ನೋಡಲು ಗ್ರ್ಯಾಂಡ್ ಆಗಿರುತ್ತವೆ. ಆದರೆ, ಅದರಲ್ಲಿರುವ ಮಣಿಗಳು, ಎಂಬ್ರಾಯಿಡರಿ ವರ್ಕ್ ಮಕ್ಕಳ ಮೃದು ಚರ್ಮಕ್ಕೆ ತಾಕಿ ಕಿರಿಕಿರಿ ಉಂಟು ಮಾಡುತ್ತವೆ. ಇದೇ ಕಾರಣಕ್ಕೆ ಅಂಥ ಡ್ರೆಸ್‍ಗಳನ್ನು ಮಕ್ಕಳು ಬೇಡವೆಂದು ಹೇಳುವ ಸಾಧ್ಯತೆಯೂ ಇರುತ್ತದೆ. ಇನ್ನು ಕೆಲವೊಂದು ಡ್ರೆಸ್‍ಗಳಿಗೆ ಬಳಸಿರುವ ಬಟ್ಟೆ ಮೃದುವಾಗಿರುವುದಿಲ್ಲ, ಜೊತೆಗೆ ಸೆಕೆಯ ಅನುಭವ ನೀಡುತ್ತವೆ. ಆದಕಾರಣ ಡ್ರೆಸ್ ಖರೀದಿಸುವಾಗ ಆದಷ್ಟು ಕಾಟನ್ ಬಟ್ಟೆಗಳನ್ನೇ ಖರೀದಿಸಿ. ಇವು ಮೃದುವಾಗಿರುವ ಜೊತೆಗೆ ಧರಿಸಿದ ಬಳಿಕ ಮಕ್ಕಳಿಗೆ ಕಂಫರ್ಟ್ ನೀಡುತ್ತವೆ.
ಮಗುವಿನ ಲಾಲನೆ ಪಾಲನೆಯಲ್ಲಿ ಅಪ್ಪಯಾಕೆ ಅಮ್ಮನಂತಾಗಬಾರದು?
2.ಮಗು ಸಮ್ಮತಿಸಿದ ಡ್ರೆಸ್‍ಗಳನ್ನೇ ಖರೀದಿಸಿ: ಡ್ರೆಸ್ ಖರೀದಿಸಲು ಹೋದಾಗ ಸಾಮಾನ್ಯವಾಗಿ ಎಲ್ಲ ಪೋಷಕರು ಮಾಡುವ ತಪ್ಪೆಂದರೆ ತಮಗಿಷ್ಟವಾದ ಡ್ರೆಸ್‍ಗಳನ್ನೇ ಆರಿಸುವುದು. ಆದರೆ, ನೀವು ಇಷ್ಟಪಟ್ಟ ಡ್ರೆಸ್ ನಿಮ್ಮ ಮಗುವಿಗೂ ಇಷ್ಟವಾಗಬೇಕೆಂದೇನಿಲ್ಲ. ನಿಮಗೆ ಎಷ್ಟೇ ಇಷ್ಟವಾಗಿದ್ದರೂ ಮಕ್ಕಳು ಬೇಡವೆಂದ ಡ್ರೆಸ್‍ಗಳನ್ನು ಖರೀದಿಸಬೇಡಿ. ಒಂದು ವೇಳೆ ಅಂಥ ಡ್ರೆಸ್‍ಗಳನ್ನು ನೀವು ಖರೀದಿಸಿದರೂ ಅದು ವಾರ್ಡ್‍ರೋಪ್ವೊಳಗೆ ಬೆಚ್ಚಗಿರುತ್ತದೆಯೇ ಹೊರತು ಮಗು ಧರಿಸಲು ಇಷ್ಟಪಡುವುದಿಲ್ಲ. ಆದಕಾರಣ ಶಾಪಿಂಗ್‍ಗೆ ಹೋಗುವಾಗ ಮಗುವನ್ನು ಮರೆಯದೆ ಕರೆದುಕೊಂಡು ಹೋಗಿ ಹಾಗೂ ಅವರಿಗೆ ಡ್ರೆಸ್ ಹಾಕಿ ಫಿಟ್ಟಿಂಗ್ ಸರಿಯಿದೆಯೇ, ಧರಿಸಿದ ಬಳಿಕ ಕಂಫರ್ಟ್ ನೀಡುತ್ತದೆಯೋ ಎಂಬುದನ್ನು ಪರಿಶೀಲಿಸಿ. ಅಷ್ಟೇ ಅಲ್ಲ, ಅವರ ಬಳಿಯೇ ಈ ಡ್ರೆಸ್ ಓಕೆನಾ ಕೇಳಿ. ಅವರು ಸಮ್ಮತಿಸಿದರೆ ಮಾತ್ರ ಖರೀದಿಸಿ.
3.ಮಗುವನ್ನು ಮಾನಸಿಕವಾಗಿ ಸಿದ್ಧಪಡಿಸಿ: ಮದುವೆ. ಬರ್ತ್‍ಡೇ ಪಾರ್ಟಿ, ಗೃಹಪ್ರವೇಶ....ಹೀಗೆ ಯಾವುದೇ ಕಾರ್ಯಕ್ರಮವಾಗಿದ್ದರೂ ಅದರ ಬಗ್ಗೆ ಅವರಿಗೆ ಒಂದು ದಿನ ಮುಂಚಿತವಾಗಿಯೇ ಮಾಹಿತಿ ನೀಡಿ. ನಾಳೆ ನಾವು ಈ ಕಾರ್ಯಕ್ರಮಕ್ಕೆ ಅಥವಾ ಸ್ಥಳಕ್ಕೆ ಹೋಗುತ್ತಿದ್ದೇವೆ. ನೀನು ಈ ಡ್ರೆಸ್ ಹಾಕಿಕೊಳ್ಳುತ್ತೀಯಾ ಎಂದು ಕೇಳಿ ಅವರನ್ನು ಒಪ್ಪಿಸಲು ಪ್ರಯತ್ನಿಸಿ. ಒಂದು ವೇಳೆ ಅವರು ಇದೇ ಡ್ರೆಸ್ ಬೇಕೆಂದರೆ ಅವರ ಆಯ್ಕೆಯನ್ನು ಗೌರವಿಸಿ.
ಪುಟಾಣಿ ಕಂದಮ್ಮಗಳೇಕೆ ಕೂಕ್ ಆಟಕ್ಕೆ ಕೇಕೆ ಹಾಕುತ್ತವೆ?
4.ಆಯ್ಕೆ ಸೀಮಿತವಾಗಿರಲಿ: ಡ್ರೆಸ್ ಆಯ್ಕೆ ಸ್ವಾತಂತ್ರ್ಯವನ್ನು ಮಕ್ಕಳಿಗೇ ನೀಡಿ. ಆದರೆ, 2-3 ಡ್ರೆಸ್‍ಗಳನ್ನಷ್ಟೇ ತೋರಿಸಿ ಅವುಗಳಲ್ಲೇ ಒಂದನ್ನು ಆಯ್ಕೆ ಮಾಡುವಂತೆ ತಿಳಿಸಿ. ಒಂದು ವೇಳೆ ನೀವು ಎಲ್ಲ ಡ್ರೆಸ್‍ಗಳನ್ನು ತೋರಿಸಿ ಆಯ್ಕೆ ಮಾಡುವಂತೆ ಹೇಳಿದರೆ ಮಕ್ಕಳಿಗೆ ಯಾವ ಡ್ರೆಸ್ ಆರಿಸಬೇಕು ಎಂಬುದು ತಿಳಿಯದೆ ಗೊಂದಲ ಉಂಟಾಗಬಹುದು. ಇದರಿಂದ ಅವರು ಕ್ಷಣಕ್ಕೊಮ್ಮೆ ತಮ್ಮ ಆಯ್ಕೆಯನ್ನು ಬದಲಾಯಿಸಿ ನಿಮಗೂ ಗೊಂದಲ ಹುಟ್ಟಿಸುತ್ತಾರೆ ಹುಷಾರ್.
5.ಡ್ರೆಸ್ ವೈಶಿಷ್ಟ್ಯವನ್ನು ವಿವರಿಸಿ: ಒಂದು ಡ್ರೆಸ್ ಆಯ್ಕೆಯಾದ ಬಳಿಕ ಅದರ ವೈಶಿಷ್ಟ್ವನ್ನು ವಿವರಿಸಲು ಮರೆಯಬೇಡಿ. ಅಂದರೆ ಆ ಡ್ರೆಸ್ ಎಲ್ಲಿ ಖರೀದಿಸಿದ್ದು, ಅದನ್ನು ಹಾಕಿಕೊಂಡರೆ ಹೇಗೆ ಕಾಣಿಸುತ್ತಾರೆ ಎಂಬುದನ್ನು ವಿವರಿಸಿ. ಒಂದು ವೇಳೆ ಆ ಡ್ರೆಸ್ ಯಾರಾದರೂ ಗಿಫ್ಟ್ ನೀಡಿದ್ದಾಗಿದ್ರೆ ಇಂಥವರು ತಂದಿದ್ದು ಎಂದು ತಿಳಿಸಿ. ಎಷ್ಟೋ ಬಾರಿ ಗಿಫ್ಟ್ ನೀಡಿದ ವ್ಯಕ್ತಿಯ ಬಗ್ಗೆ ಮಕ್ಕಳಿಗೆ ಪ್ರೀತಿ, ಅಟ್ಯಾಚ್‍ಮೆಂಟ್ ಇದ್ದರೆ ಮರುಮಾತನಾಡದೆ ಆ ಡ್ರೆಸ್ ಧರಿಸಲು ಖುಷಿಯಿಂದಲೇ ಒಪ್ಪಿಗೆ ನೀಡುತ್ತಾರೆ.
ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಪಾಠ ಮಾಡುವುದು ಹೇಗೆ ಗೊತ್ತಾ?
6.ಕನ್ನಡಿ ಮುಂದೆ ನಿಲ್ಲಿಸಿ: ಡ್ರೆಸ್ ಹಾಕಿದ ಬಳಿಕ ಮಗುವನ್ನು ಕನ್ನಡಿ ಮುಂದೆ ನಿಲ್ಲಿಸಿ, ‘ನೀನು ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದೀಯಾ’ ಎಂದು ಹೊಗಳಿ. ಹುಡುಗಿಯಾಗಿದ್ದರೆ ‘ಬಾರ್ಬಿ ಡಾಲ್’, ‘ಪ್ರಿನ್ಸಸ್’ ಎಂದೆಲ್ಲ ಹಾಡಿ ಹೊಗಳಿದರೆ ಸಾಕು, ಅವರು ಮರುಮಾತಿಲ್ಲದೆ ನಿಮ್ಮ ದಾರಿಗೆ ಬರುತ್ತಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 15, 2020, 6:43 PM IST