ಪುಟಾಣಿ ಕಂದಮ್ಮಗಳೇಕೆ ಕೂಕ್ ಆಟಕ್ಕೆ ಕೇಕೆ ಹಾಕುತ್ತವೆ?
ಕೂಕ್ ಆಟಕ್ಕೆ ವಯಸ್ಸಾಗುವುದಿಲ್ಲ. ರಾಮ, ಕೃಷ್ಣನ ಕಾಲದಲ್ಲೂ ಇತ್ತು, ಇಂದಿಗೂ ಇದೆ. ಅದರಲ್ಲೂ ಪುಟ್ಟ ಮಕ್ಕಳನ್ನು ಆಟ ಆಡಿಸಲು ಈ ಹುಡುಕುವ ಆಟದಷ್ಟು ಮಜವಾದುದು ಇನ್ನೊಂದಿಲ್ಲ. ಹಸುಗೂಸು ಕೂಡಾ ಕೂಕ್ ಮಾಡಿದರೆ ಕೇಕೆ ಹಾಕುತ್ತದೆ.
ಕಣ್ಣಿಗೆ ಎರಡು ಕೈಗಳನ್ನು ಮುಚ್ಚಿಕೊಂಡು ಕೂಕ್ ಎಂದರೆ ಆರು ತಿಂಗಳ ಮಗು ಕೂಡಾ ಜೋರಾಗಿ ನಗುತ್ತದೆ. ಮತ್ತೊಂದು ತಿಂಗಳು ಕಳೆದರೆ ಖುಷಿಯಲ್ಲಿ ಅವು ನಿಮ್ಮ ಕೈ ತೆಗೆಯುತ್ತವೆ. ಆ ನಂತರದಲ್ಲಿ ಸೋಫಾ ಹಿಂದೆಯೋ, ಬಾಗಿಲ ಹಿಂದೆಯೋ ಅಡಗಿ ಕೂಕ್ ಮಾಡಿ ಬಗ್ಗಿ ನೋಡುವುದು ಮಕ್ಕಳಿಗೆ ಇನ್ನಿಲ್ಲದ ಖುಷಿ ಕೊಡುತ್ತದೆ. ವರ್ಷದ ಹತ್ತಿರವಾಗುತ್ತಲೇ ನೀವು ಅಡಗಿಕೊಂಡಲ್ಲಿಗೆ ಮಕ್ಕಳು ಹುಡುಕಿಕೊಂಡು ಬರುತ್ತವೆ.
ವಿಡಿಯೋದಲ್ಲಿ ಅಪ್ಪ ಮಗು ಕೂಕ್ ಆಡುವುದನ್ನು ನೋಡಿಯೂ ಮಕ್ಕಳು ಸಖತ್ ಎಂಜಾಯ್ ಮಾಡುತ್ತಾರೆ. ಮಕ್ಕಳಿಗೆ ಈ ಆಟ ಅದೆಷ್ಟು ಇಷ್ಟವೆಂದರೆ ಕೆಲವೊಮ್ಮೆ ಗಂಟೆಗಟ್ಟಲೆ ನೀವು ಈ ಆಟ ಆಡಿಸುತ್ತಲೇ ಸಮಯ ಕಳೆಯುತ್ತೀರಿ. ಹಿಂದೆ ನಾವು ಇದೇ ಆಟ ಆಡಿ ಬೆಳೆದಿದ್ದೇವೆ. ಈಗ ಮಕ್ಕಳೊಂದಿಗೆ ಇದೇ ಆಟ ಆಡುತ್ತಿದ್ದೇವೆ. ಸಾವಿರಾರು ವರ್ಷಗಳಿಂದಲೂ ಈ ಹುಡುಕುವ ಆಟ ಜಗತ್ತಿನಾದ್ಯಂತ ಎಲ್ಲೆಡೆ ಮಗುವನ್ನು ರಂಜಿಸುತ್ತಲೇ ಬಂದಿದೆ. ಅಂಥ ವಿಶೇಷತೆ ಈ ಆಟದಲ್ಲಿ ಏನಿದೆ? ಮಕ್ಕಳೇಕೆ ಇದನ್ನು ಅಷ್ಟೊಂದು ಇಷ್ಟ ಪಡುತ್ತಾರೆ?
ಪಾಕೆಟ್ ಮನಿಯೇ ಮಕ್ಕಳ ಮನಿ ಮ್ಯಾನೇಜ್ಮೆಂಟ್ ಗುರು!
ಯಾವುದಾದರೂ ವಸ್ತು ಅಥವಾ ವ್ಯಕ್ತಿ ಕಣ್ಣಿನಿಂದ ಮರೆಯಾದ ಮೇಲೆ ಮತ್ತೆ ಮರಳುವುದು ಮಕ್ಕಳಿಗೆ ಬಹಳ ಸರ್ಪ್ರೈಸ್ ಎನಿಸುತ್ತದೆ. ಇದೇ ಕಾರಣಕ್ಕೆ ಅವು ಖುಷಿಯಿಂದ ನಗುತ್ತವೆ ಎನ್ನುವುದು ಒಂದು ಸಿದ್ಧಾಂತ. ನಮಗಿದು ಸಿಲ್ಲಿ ಎನಿಸಬಹುದು. ಆದರೆ, ಪ್ರಪಂಚವನ್ನು ಹೊಸದಾಗಿ ನೋಡುತ್ತಿರುವ ಮಕ್ಕಳಿಗೆ ಇದು ಹೊಸತು. ತಮ್ಮ ಸುತ್ತಲು ಆಗುವುದೆಲ್ಲವೂ ಕಲಿಕೆಯೇ.
ನವಜಾತ ಶಿಶುಗಳು ಗೊಂದಲದಲ್ಲಿದ್ದು, ನಿಧಾನವಾಗಿ ಸುತ್ತಲೂ ಏನಾಗುತ್ತಿದೆ ಎಂಬುದನ್ನು ಅರಿಯಬೇಕಾಗುತ್ತದೆ.
ಯಾರಾದರೂ ದೂರದಿಂದ ಕರೆದರೆ ಅವರು ಅಲ್ಲೇ ಇದ್ದಾರೆ ಎಂಬುದು ನಮಗೆ ತಿಳಿಯುತ್ತದೆ, ಬಾಲ್ ಸೋಫಾ ಕೆಳಗೆ ಹೋದರೆ ಕಣ್ಣಿನಿಂದ ಮರೆಯಾದರೂ ಅದು ಅಲ್ಲೇ ಇದೆ ಎಂಬುದು ನಮಗೆ ಗೊತ್ತು. ಆದರೆ, ಮಕ್ಕಳಿಗೆ ಈ ಬಗ್ಗೆ ಗೊತ್ತಾಗುವುದಕ್ಕೆ ಸಮಯ ಬೇಕಾಗುತ್ತದೆ. ಅವರಿದನ್ನು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ.
ಕಲಿಕೆಯ ಮಾರ್ಗ
ಸ್ವಿಟ್ಜರ್‌ಲ್ಯಾಂಡ್‌ನ ಡೆವಲಪ್‌ಮೆಂಟಲ್ ಸೈಕಾಲಜಿಸ್ಟ್ ಜೀನ್ ಪಿಯಾಜೆಟ್ ಮಕ್ಕಳ ಈ ನಡವಳಿಕೆಯನ್ನು ಆಬ್ಜೆಕ್ಟ್ ಪರ್ಫಾರ್ಮೆನ್ಸ್ ಪ್ರಿನ್ಸಿಪಲ್ ಎಂದು ಕರೆದಿದ್ದಾರೆ. ಅವರು ಹೇಳುವಂತೆ ಮಕ್ಕಳು ಮೊದಲ ಎರಡು ವರ್ಷಗಳನ್ನು ಈ ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಾ ಕಳೆಯುತ್ತಾರೆ. ಈ ಆಟವು ಮಕ್ಕಳಿಗೆ ಮನರಂಜನೆಯಷ್ಟೇ ಅಲ್ಲ, ಉತ್ತಮ ಕಲಿಕಾ ಮಾರ್ಗ ಕೂಡಾ. ಯಾವುದಾದರೂ ವಸ್ತುವು ಕಣ್ಣಿಗೆ ಕಾಣಿಸದಿದ್ದಾಗ ಕೂಡಾ ಅದು ಅಲ್ಲಿಯೇ ಇರುತ್ತದೆ ಎಂಬುದನ್ನು ಮಕ್ಕಳು ಮತ್ತೆ ಮತ್ತೆ ಪರೀಕ್ಷಿಸುವ ಮೂಲಕ ಅರಿಯಲು ಈ ಆಟ ಸಹಾಯ ಮಾಡುತ್ತದೆ.
ಮಕ್ಕಳಿಗೆ ಕತೆ ಹೇಳೋದ್ರಿಂದ ಏನೆಲ್ಲ ಲಾಭ ಗೊತ್ತಾ?
ಮಗುವಿನ ಬೆಳವಣಿಗೆಗೆ ಸಹಕಾರಿ
ಈ ಆಟವು ಮಕ್ಕಳ ಸೆನ್ಸ್ ಜಾಗೃತವಾಗಿರುವಂತೆ ನೋಡಿಕೊಳ್ಳುತ್ತದೆ. ಅವರ ಮೋಟಾರ್ ಸ್ಕಿಲ್ಸ್ ಬೆಳೆಯಲು ಸಹಾಯವಾಗುತ್ತದೆ, ಜೊತೆಗೆ ಅವರ ದೃಷ್ಟಿಯ ಚಲನೆಯನ್ನು ಹೆಚ್ಚು ಬಲಗೊಳಿಸುತ್ತದೆ. ಇಷ್ಟೇ ಅಲ್ಲ, ಈ ಆಟವು ಮಕ್ಕಳಲ್ಲಿ ಹಾಸ್ಯಪ್ರಜ್ಞೆ ಮೂಡಿಸಲು ಹಾಗೂ ಸೋಷ್ಯಲ್ ಡೆವಲಪ್‌ಮೆಂಟ್‌ಗೆ ಸಹಾಯವಾಗುತ್ತದೆ.
ಈ ಆಟವು ಉತ್ತಮ ಜೋಕ್‌ಗಿರಬೇಕಾದ ಮೂಲಸಂಗತಿಗಳನ್ನೇ ಬಳಸುತ್ತದೆ. ಅಂದರೆ ಆಶ್ಚರ್ಯ ಹಾಗೂ ನಿರೀಕ್ಷೆಗಳ ಉತ್ತಮ ಬ್ಯಾಲೆನ್ಸ್ ಇದರಲ್ಲಿದ್ದು- ಇದನ್ನು ಬಹುತೇಕ ಎಲ್ಲ ಮಕ್ಕಳೂ ಇಷ್ಟಪಡುತ್ತಾರೆ.
ಪ್ರಯೋಗವೊಂದರಲ್ಲಿ ದೊಡ್ಡವರು ಅಡಗಿಕೊಂಡು ಏಳುವಾಗ ಬೇರೆಯ ವ್ಯಕ್ತಿಯೇ ಎದ್ದರು, ಮತ್ತೊಂದರಲ್ಲಿ ವ್ಯಕ್ತಿಯು ಅಡಗಿಕೊಂಡ ಸ್ಥಳವಲ್ಲದೆ ಬೇರೆ ಸ್ಥಳದಿಂದ ಎದ್ದು ಬಂದ- ಈ ಸಂದರ್ಭಗಳಲ್ಲಿ ಸರ್ಪ್ರೈಸ್ ಹೆಚ್ಚಿದ್ದರೂ ಮಕ್ಕಳು ಸಣ್ಣದಾಗಿ ನಕ್ಕರು ಬಿಟ್ಟರೆ ಯಾವಾಗಿನಂತೆ ಜೋರಾಗಿ ನಗಲಿಲ್ಲ. ಮುಂದಿನ ಫಲಿತಾಂಶ ಹೀಗಿರಬಹುದು ಎಂಬ ನಿರೀಕ್ಷೆಯಿದ್ದು ಅದೇ ಆದಾಗ ಮಕ್ಕಳಿಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಸಂಶೋಧಕರು ಈ ಬಗ್ಗೆ ವಿವರಣೆ ಕಂಡುಕೊಂಡರು.