ಶಮಾ ಅಲಿ ಹಾಗೂ ಕೇಶವ್ ಸಹ್ನಾನ್ ಇಬ್ಬರೂ ಬಾಲ್ಯದಿಂದಲೂ ಅತ್ಯುತ್ತಮ ಗೆಳೆಯರು. ಗೆಳೆತನ ಪ್ರೀತಿಗೆ ತಿರುಗಿ ಮದುವೆಯಾಗಲು ಇಚ್ಛಿಸಿದ್ದಾರೆ. ಯಾರೊಬ್ಬರಿಗೂ ನೋವು ನೀಡಲು ಇಷ್ಟಪಡದ ಈ ಜೋಡಿ ಎರಡೂ ಸಂಪ್ರದಾಯಗಳನ್ವಯ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಪ್ರೀತಿಗಿಂತ ಧರ್ಮ ದೊಡ್ಡದಲ್ಲ ಎಂದಿದ್ದಾರೆ. ಜಾತಿ, ಧರ್ಮ, ಗೌರವ ಎಂದು ಪ್ರೇಮಿಗಳನ್ನು ದೂರ ಮಾಡುವ ಪ್ರಕರಣಗಳು ನಡೆಯುತ್ತಿರುವಾಗ, ಈ ಬ್ಯೂಟಿಫುಲ್ ಲವ್ ಸ್ಟೋರಿಯನ್ನು ಓದಲೇಬೇಕು.

ಭೇಟಿಯಾಗಿದ್ದು ಹೇಗೆ?

ಶಮಾ ಅಲಿ ಹಾಗೂ ಕೇಶವ್ ಸಹ್ನಾನ್ ಇಬ್ಬರೂ ಹೈ ಸ್ಕೂಲ್ ಗೆಳೆಯರು. ಶಾಲಾ ದಿನಗಳಲ್ಲೇ ಕೇಶವ್ ಮೇಲೆ ಸಾಹಾಗೆ ಕ್ರಶ್ ಇತ್ತು. ಆದರೆ ಹೇಳಿಕೊಳ್ಳಲು ಆಗಿರಲಿಲ್ಲ. ಇಷ್ಟೇ ಅಲ್ಲದೇ, ಇಬ್ಬರ ಅಭಿರುಚಿಗಳೂ ಒಂದೇ ಆಗಿದ್ದರು. ಮ್ಯೂಸಿಕ್, ಪೇಂಟಿಂಗ್ ಹಾಗೂ ಆರ್ಟ್ ಇಬ್ಬರಿಗೂ ಬಹಳ ಇಷ್ಟ. ಇದೇ ಕಾರಣಕ್ಕೇನೋ ಇಬ್ಬರೂ ಅತ್ಯುತ್ತಮ ಗೆಳೆಯರಾಗಿದ್ದರು.

ಡೇಟಿಂಗ್ ಹೇಗೆ ಪ್ರಾರಂಭವಾಯ್ತು?

ಕೇಶವ್ ತನ್ನ 10ನೇ ತರಗತಿಯ ಬೋರ್ಡ್ ಎಕ್ಸಾಂ ಮುಗಿಸಿ ಲಂಡನ್ ಗೆ ಹಾರಿದ್ದ, ಹೀಗಿದ್ದರೂ ಶಮಾ ಜೊತೆಗಿನ ಗೆಳೆತನ ಮರೆತಿರಲಿಲ್ಲ. ಫೋನ್ ಮೂಲಕ ಸಂಭಾಷಣೆ ಮುಂದುವರೆದಿದ್ದು, ಗೆಳೆತನವೂ ಮತ್ತಷ್ಟು ಆಳವಾಯ್ತು. ಇತ್ತ ತನ್ನ 12ನೇ ತರಗತಿಯ ಬೋರ್ಡ್ ಎಕ್ಸಾಂ ಮುಗಿಸಿದ ಶಮಾ ಲಂಡನ್ ನಲ್ಲಿರುವ ಫ್ಯಾಷನ್ ಕಾಲೇಜಿಗೆ ಉನ್ನತ ವ್ಯಾಸಂಗಕ್ಕೆಂದು ಸೇರುತ್ತಾರೆ. ಈ ಮೂಲಕ ಇಬ್ಬರೂ ಗೆಳೆಯರು ಒಂದೇ ದೇಶದಲ್ಲಿ ಶಿಕ್ಷಣ ಮುಂದುವರೆಸುತ್ತಾರೆ. ಹೀಗಿದ್ದರೂ ಪರಸ್ಪರ ಭೇಟಿಯಾಗಲು ಮಾತ್ರ ಎರಡು ವರ್ಷಗಳೇ ಹಿಡಿದಿದ್ದವು. ಅಂದು ಬಹಳ ವರ್ಷಗಳ ಬಳಿಕ ಶಮಾಳನ್ನು ಭೇಟಿಯಾಗಲು ತೆರಳಿದ್ದ ಕೇಶವ್ ಆಕೆಯನ್ನು ಕಂಡು ತನಗಾಕೆಯ ಮೇಲಿರುವುದು ಪ್ರೀತಿ ಎಂದು ಅರಿತುಕೊಂಡಿದ್ದಾನೆ. ಇನ್ನು ಪರಸ್ಪರ ಗೆಳೆಯರಾಗಿದ್ದ ಅವರಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳವುದೂ ಕಷ್ಟವಾಗಿರಲಿಲ್ಲ.

ಪ್ರೇಮ ನಿವೇದನೆ:

ಬಿಡುವಿಲ್ಲದ ಕೆಲಸದ ನಡುವೆಯೂ, ಶಿಕ್ಷಣ ಮುಗಿಸಿ ತಾಯ್ನಾಡಿಗೆ ಮರಳುವಷ್ಟರಲ್ಲಿ ಈ ಇಬ್ಬರು ಗೆಳೆಯರನ್ನು ಸಮಯ ಹಾಗೂ ಅದೃಷ್ಟವೇ ಹತ್ತಿರ ತಂದಿತ್ತು. ದೆಹಲಿಯಲ್ಲಿ ಒಟ್ಟಾಗಿ ಉದ್ಯೋಗಕ್ಕೆ ಸೇರಿದ ಈ ಜೋಡಿ, ತಮ್ಮ ತಂದೆ ತಾಯಿಗೆ ತಮ್ಮಿಚ್ಛೆಯನ್ನು ತಿಳಿಸಲು ನಿರ್ಧರಿಸಿದರು. ಇದರ ಅನ್ವಯ ಇಬ್ಬರೂ ತಮ್ಮ ಹೆತ್ತವರಿಗಾಗಿ ಔತಣ ಕೂಟ ಏರ್ಪಡಿಸಿದ್ದಾರೆ. ಈ ಮೂಲಕ ತಾವು ಪರಸ್ಪರ ಇಷ್ಟ ಪಡುತ್ತರುವುದನ್ನು ಹೆತ್ತವರಿಗೆ ತಿಳಿಸಿದ್ದಾರೆ. ಮಕ್ಕಳ ಇಚ್ಛೆಯೇ ತಮ್ಮಿಚ್ಛೆ ಎಂಬುವಂತೆ ಹೆತ್ತವರೂ ಒಪ್ಪಿದ್ದಾರೆ.

ತಂದೆ ತಾಯಿಯ ಒಪ್ಪಿಗೆ ಪಡೆದ ಈ ಜೋಡಿ ತಮ್ಮ ಮದುವೆಯ ತಯಾರಿ ನಡೆಸಲು ಆರಂಭಿಸಿದೆ. ಯಾರೊಬ್ಬರಿಗೂ ನೋವು ನೀಡಲು ಇಷ್ಟಪಡದ ಈ ಜೋಡಿ ಹಿಂದೂ ಹಾಗೂ ಮುಸ್ಲಿಂ ಈ ಎರಡೂ ಸಂಪ್ರದಾಯದಂತೆ ಮದುವೆಯಾಗಲು ಯೋಚಿಸಿದೆ. ಪ್ರೀತಿಸಿದವರು ಮೊದಲು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿ-ಪತಿಗಳಾಗಿದ್ದೃಆಎ. ತದ ನಂತರ ಮುಸ್ಲಿಂ ಸಂಪ್ರದಾಯದಂತೆ ನಿಕಾ ಆಗಿ ಜೀವಮಾನವಿಡೀ ಜೊತೆಯಾಗಿರುತ್ತೇವೆಂದು ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ತಮ್ಮ ಪ್ರೀತಿಗಿಂತ ಧರ್ಮ ದೊಡ್ಡದಲ್ಲ ಎಂಬ ಸಂದೇಶ ನೀಡಿದ್ದಾರೆ.