Home remedy to remove moss, ಮಳೆಗಾಲ ಶುರುವಾಗ್ತಿದ್ದಂತೆ ಪಾಚಿ ಸಮಸ್ಯೆ ಕಾಡೋಕೆ ಶುರುವಾಗುತ್ತೆ. ಗೋಡೆ ಒಳಗೆ ನೀರು ಹೋಗಿ ಬಣ್ಣ ಕೂಡ ಮಾಸುತ್ತೆ. ಇದಕ್ಕೆಲ್ಲ ಪರಿಹಾರ ಏನು ಗೊತ್ತಾ? 

ಮಳೆಗಾಲ (Rain) ಶುರು ಆಗ್ತಿದಂತೆ ಒಂದೊಂದೇ ಸಮಸ್ಯೆ ಶುರು ಆಗುತ್ತೆ. ಮನೆ ಮುಂದೆ, ಅಕ್ಕ – ಪಕ್ಕ ನೀರು ನಿಲ್ಲೋದಲ್ದೆ, ಕೆಲವೊಮ್ಮೆ ಇದು ಕೊಳೆತ ವಾಸನೆ ಬರುತ್ತೆ. ಸೊಳ್ಳೆ ಕಾಟ ಹೆಚ್ಚಾಗೋದಲ್ದೆ, ಪಾಚಿ ಕಟ್ಟಿಕೊಳ್ಳಲು ಶುರುವಾಗುತ್ತೆ. ಹಳ್ಳಿ ಹಾಗೂ ವಿಪರೀತ ಮಳೆ ಬೀಳುವ ಪ್ರದೇಶದಲ್ಲಿ ಈ ಪಾಚಿ ಸಾಮಾನ್ಯ ಸಮಸ್ಯೆ. ಮನೆ ಹೊರಗೆ ಪಾಚಿ (moss) ಕಟ್ಟಿಕೊಂಡ್ರೆ ಹೇಗೋ ಸಹಿಸಿಕೊಳ್ಬಹುದು, ಆದ್ರೆ ಗೋಡೆಗೆ ಕಟ್ಟಿಕೊಳ್ಳುವ ಪಾಚಿ, ಗೋಡೆ ಬಣ್ಣ ಹಾಳು ಮಾಡಿ, ಸೌಂದರ್ಯವನ್ನು ಕೆಡಿಸುತ್ತೆ. ಬೇಸಿಗೆ ಬರ್ತಿದ್ದಂತೆ ಈ ಒಣಗಿದ ಪಾಚಿ ತೆಗೆದು ಮತ್ತೆ ಬಣ್ಣ ಹಚ್ಚೋದು ಪ್ರತಿ ವರ್ಷ ಕಷ್ಟಸಾಧ್ಯ. ಮಳೆಗಾಲದಲ್ಲಿ ಈ ಪಾಚಿ ಸಮಸ್ಯೆ ಕಾಡ್ಬಾರದು ಅಂದ್ರೆ ಒಂದು ಟಿಪ್ಸ್ ನೀವು ಫಾಲೋ ಮಾಡ್ಬಹುದು.

ಪಾಚಿ ಬೆಳೆಯಲು ಕಾರಣ ಏನು? : ಮಳೆಗಾಲದಲ್ಲಿ ಛಾವಣಿ (roof)ಯ ಮೇಲೆ ನೀರು ಸಂಗ್ರಹವಾಗುತ್ತೆ. ಹಳೆಯ ಬಿರುಕುಗಳು, ನೀರು ಹೋಗಲು ಸರಿಯಾದ ಇಳಿಜಾರು ಇಲ್ದೆ ಇರೋದು, ಕಳಪೆ ವಾಟರ್ಪ್ರೂಫಿಂಗ್ ತೇವಾಂಶಕ್ಕೆ ಪ್ರಮುಖ ಕಾರಣ. ಈ ಎಲ್ಲ ಸಮಸ್ಯೆ ಇದ್ದಾಗ ನೀರು ನಿಧಾನವಾಗಿ ಗೋಡೆ ಒಳಗೆ ಹೋಗಲು ಶುರುವಾಗುತ್ತೆ. ಈ ನೀರು ಗೋಡೆ ಬಣ್ಣವನ್ನು ಹಾಳು ಮಾಡುತ್ತೆ. ಪ್ಲಾಸ್ಟರ್ ಉದುರಲು ಶುರುವಾಗುತ್ತೆ. ಶಿಲೀಂಧ್ರ ಅಥವಾ ಕೆಟ್ಟ ವಾಸನೆ ಕಾಣಿಸಿಕೊಳ್ಬಹುದು. ಇದ್ರಿಂದ ಗೋಡೆ ದುರ್ಬಲವಾಗುವ ಅಪಾಯವೂ ಇದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂತ ಇದನ್ನು ನಿರ್ಲಕ್ಷ್ಯ ಮಾಡೋದು ಸೂಕ್ತವಲ್ಲ.

ಪಾಚಿ ಕಟ್ಟಿಕೊಳ್ಳದಂತೆ ಏನು ಮಾಡ್ಬೇಕು? : ಮಳೆಗಾಲದಲ್ಲಿ ಗೋಡೆಗೆ ಪಾಚಿ ಕಟ್ಟಿಕೊಳ್ಳಬಾರದು ಅಂದ್ರೆ ನೀವು ಸುಣ್ಣ ಮತ್ತು ಇದ್ದಿಲನ್ನು ಬಳಸಬೇಕು. ಇದು ಪಾಚಿ ಸಮಸ್ಯೆಗೆ ಒಳ್ಳೆಯ ಪರಿಹಾರ. ಮೊದಲು ಮನೆಯ ಛಾವಣಿಯನ್ನು ಕ್ಲೀನ್ ಮಾಡಿ. ಅಲ್ಲಿರುವ ಮಣ್ಣು, ಧೂಳು, ಪಾಚಿಯನ್ನು ಮೊದಲು ತೆಗೀರಿ. ಛಾವಣಿಯಲ್ಲಿ ಎಲ್ಲಾದ್ರೂ ಬಿರುಕಿದ್ರೆ ಅದನ್ನು ಸಿಮೆಂಟ್ ಬಳಸಿ ಕ್ಲೋಸ್ ಮಾಡಿ. ನಂತ್ರ ಇದ್ದಿಲನ್ನು ನೀವು ಚಿಕ್ಕದಾಗಿ ಪುಡಿ ಮಾಡಿ. ಒಂದು ಬಕೆಟ್ ತೆಗೆದುಕೊಳ್ಳಿ. ಅದಕ್ಕೆ ಸುಣ್ಣ ಹಾಕಿ. ಅದಕ್ಕೆ ಇದ್ದಿಲನ್ನು ಹಾಕಿ. ನಿಧಾನವಾಗಿ ನೀರನ್ನು ಹಾಕಿ ಅದನ್ನು ಮಿಕ್ಸ್ ಮಾಡಿ. ದ್ರಾವಣ ಬಣ್ಣ ಹರಡುವಂತೆ ಹರಡುವ ದ್ರವವಾಗುವವರೆಗೆ ನೀರನ್ನು ಮಿಕ್ಸ್ ಮಾಡಿ. ನಂತ್ರ ಇದನ್ನು ಛಾವಣಿ ಮೇಲೆ ಹಾಕ್ತಾ ಬನ್ನಿ. ಬಣ್ಣ ಹಚ್ಚಿದಂತೆ ಈ ಮಿಶ್ರಣವನ್ನು ಹಾಕ್ತಾ ಬರಬೇಕು.

ಹಳೆ ವೈಪರ್ ಅಥವಾ ಪೊರಕೆಯನ್ನು ಬಳಸಿ ನೀವು ಈ ಮಿಶ್ರಣವನ್ನು ಛಾವಣಿ ಮೇಲೆ ಹಾಕಿ. ಇದು ಸಂಪೂರ್ಣವಾಗಿ ಒಣಗಲು 24 ರಿಂದ 48 ಗಂಟೆ ತೆಗೆದುಕೊಳ್ಳುತ್ತದೆ. ಇದು ಸಂಪೂರ್ಣವಾಗಿ ಒಣಗಿದ ಮೇಲೆ ನೀವು ಮತ್ತೊಮ್ಮೆ ಇದೇ ಮಿಶ್ರಣವನ್ನು ಹಾಕಬೇಕು. ಇದು ನಿಮ್ಮ ಛಾವಣಿಯನ್ನು ತೇವಾಂಶದಿಂದ ರಕ್ಷಿಸುತ್ತದೆ. ಮಳೆ ನೀರು ಗೋಡೆ ಮೂಲಕ ಒಳಗೆ ಹೋಗೋದನ್ನು ಇದು ತಪ್ಪಿಸುತ್ತದೆ. ಇದು ಶಿಲೀಂಧ್ರ ಮತ್ತು ಪಾಚಿಯನ್ನು ದೂರವಿಡುತ್ತದೆ. ಇದ್ದಿಲು ತೇವಾಂಶವನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಎರಡೂ ಒಟ್ಟಿಗೆ ಛಾವಣಿಯ ಬಲವನ್ನು ಹೆಚ್ಚಿಸುತ್ತದೆ. ಸುಣ್ಣ ಮತ್ತು ಇದ್ದಿಲಿನಂತಹ ಅಗ್ಗದ ವಸ್ತುವನ್ನು ಬಳಸಿ ನೀವು ಮನೆಯಲ್ಲಿಯೇ ಸುಲಭವಾಗಿ ಪಾಚಿ ಸಮಸ್ಯೆಗೆ ಮುಕ್ತಿ ನೀಡಬಹುದು. ಮಾರುಕಟ್ಟೆಯಲ್ಲಿ ಪಾಚಿ ತೆಗೆಯಲು ಕೆಲ ಕೆಮಿಕಲ್ ಲಭ್ಯವಿದೆ. ಆದ್ರೆ ಇದು ಇದ್ದಿಲು – ಸುಣ್ಣದಷ್ಟು ಪರಿಣಾಮಕಾರಿ ಅಲ್ಲ ಎನ್ನುತ್ತಾರೆ ಬಲ್ಲವರು.