ವ್ಯಾಲೆಂಟೈನ್ಸ್ ಡೇ ಹತ್ತಿರ ಬರ್ತಿದೆ ಎನ್ನೋದೇ ಪ್ರೇಮಿಗಳಿಗೊಂದು ಸಂಭ್ರಮ. ಹೇಗೆ ಈ ದಿನವನ್ನು ಸ್ಪೆಷಲ್ ಆಗಿಸುವುದು ಎಂಬ ಪ್ರಶ್ನೆಯೂ ಜೊತೆಗೆ ಕಾಡುತ್ತದೆ. ರೋಸ್, ಗ್ರೀಟಿಂಗ್ ಕಾರ್ಡ್, ಚಾಕೋಲೇಟ್ಸ್ ಕೊಡುವುದೆಲ್ಲ ಹಳತಾದವು. ಈ ವರ್ಷ ಸ್ವಲ್ಪ ಬೇರೆ ಏನಾದರೂ ಮಾಡಿನೋಡೋಣ ಎನ್ನುವವರಿಗೆ ಇಲ್ಲಿವೆ ಕೆಲ ಐಡಿಯಾಗಳು.

ಸ್ಪೋರ್ಟ್ಸ್ ಡೇ
ಇಬ್ಬರೂ ಸಾಹಸಪ್ರಿಯರು ಎಂದಾದಲ್ಲಿ ಇದನ್ನು ಯೋಜಿಸಿ. ಸ್ಪೋರ್ಟ್ಸ್ ಡೇ ಎಂದ ಮಾತ್ರಕ್ಕೆ ಇಬ್ಬರೂ ರೇಸ್‌ನಲ್ಲಿ ಓಡಬೇಕಿಲ್ಲ. ಬದಲಿಗೆ, ಡರ್ಟ್ ಬೈಕಿಂಗ್ ಟ್ರೈ ಮಾಡಬಹುದು. ವಾಲ್ ಕ್ಲೈಂಬಿಂಗ್, ಜಕ್ಕೂರ್‌ನಲ್ಲಿ ಪ್ಯಾರಾಸೇಲಿಂಗ್, ನಂದಿ ಬೆಟ್ಟ ಬಳಿ ಪ್ಯಾರಾಗ್ಲೈಡಿಂಗ್, ಇನ್ನು ಕೆಲ ರೆಸಾರ್ಟ್‌ಗಳಲ್ಲಿ ಸಿಗುವ ಪೇಂಟ್ ಬಾಲ್, ಝೋರ್ಬಿಂಗ್, ಟ್ರಕ್ಕಿಂಗ್, ಗುಹೆಗೆ ಭೇಟಿ ಮುಂತಾದವನ್ನು ಒಟ್ಟಿಗೆ ಮಾಡುವುದರಿಂದ ಇದು ಸದಾ ನೆನಪಿನಲ್ಲುಳಿವ ಜೊತೆಗೆ, ಇಬ್ಬರ ಬಾಂಡಿಂಗ್ ಗಟ್ಟಿಯಾಗುತ್ತದೆ. 

ಒಂದೇ ಕೆನ್ನೆಗೆ ಮುತ್ತಿಟ್ಟ ಹುಡುಗಿಯ ನೆನಪಲ್ಲಿ...

ಬಾರ್ ಹಾಪಿಂಗ್
ಬೆಂಗಳೂರಿನಲ್ಲಿ ಬ್ರೀವರೀಸ್‌ಗೆ ಕೊರತೆ ಇಲ್ಲ. ಅಲ್ಲಿ ನಿಮ್ಮ ಪಾರ್ಟ್ನರ್ ಜೊತೆ ತೆರಳಿ ಗಂಟೆಗಟ್ಟಲೆ ಹರಟುತ್ತಾ ನಿಧಾನವಾಗಿ ಡ್ರಿಂಕ್ಸ್ ಹೀರಬಹುದು. ಆಲ್ಕೋಹಾಲ್ ಬೇಡವೆಂದಲ್ಲಿ ಮಾಕ್‌ಟೇಲ್‌ಗಳಲ್ಲೇ ಮಜಾ ನೋಡಬಹುದು. ಬಾರ್ ಹಾಪಿಂಗ್ ಎಂದ ಕೂಡಲೇ ಕೇವಲ ಕುಡಿತವಲ್ಲ, ಇದನ್ನು ಬಿಂಜ್ ಈಡಿಂಗ್ ದಿನವಾಗಿಸಬಹುದು. ಅಂದರೆ, ಸಣ್ಣ ಪುಟ್ಟ ಫೇವರೇಟ್ ಸ್ಥಳಗಳಿಗೆ ಹೋಗಿ ಹೊಸ ಹೊಸ ಆಹಾರಗಳನ್ನು ಸೇವಿಸಿ, ಅಲ್ಲಿಂದ ಮತ್ತೊಂದು ಕಡೆ ತಿನ್ನಲು ಹೋಗಬಹುದು. ಇಡೀ ದಿನವನ್ನು ಇಬ್ಬರಿಗೂ ಇಷ್ಟವಾದದ್ದನ್ನು ತಿನ್ನುತ್ತಾ, ಹೊಸತನ್ನು ಟ್ರೈ ಮಾಡುತ್ತಾ ಕಳೆಯಿರಿ. 

ಮೂವಿ ಮ್ಯಾರಥಾನ್ ಡೇ
ತೀರಾ ಹೊರ ಹೋಗುವುದನ್ನು ಇಷ್ಟ ಪಡದ ಪ್ರೇಮಿಗಳು ಮನೆಯಲ್ಲೇ ಇದ್ದು, ಇಡೀ ದಿನ ಒಂದಾದ ಮೇಲೊಂದರಂತೆ ರೊಮ್ಯಾಂಟಿಕ್ ಮೂವಿಗಳನ್ನು ನೋಡುತ್ತಾ, ಸಂಗಾತಿಯ ತೋಳುಗಳಲ್ಲಿ ಕಳೆದು ಹೋಗಬಹುದು. 

ಕಪಲ್ ಮಸಾಜ್ ಡೇ
ಕಪಲ್ ಮಸಾಜ್‌ನ ಲಾಭ ತಿಳೀಬೇಕಂದ್ರೆ ಒಮ್ಮೆ ಅನುಭವ ಪಡೆದುಕೊಳ್ಳಬೇಕು. ಒತ್ತಡ ನಿವಾರಣೆ ಜೊತೆಗೆ, ನಿಮ್ಮ ದೇಹ ರಿಲ್ಯಾಕ್ಸ್ ಆಗುವುದರಿಂದ ಪಾರ್ಟ್ನರ್ ಬಗೆಗೆ ರೊಮ್ಯಾಂಟಿಕ್ ಫೀಲಿಂಗ್ ಚೆನ್ನಾಗಿ ಬರುತ್ತದೆ. 

ಯಾವ ದೇಶದಲ್ಲಿ ಹೇಗೆ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ?

ಲವ್ ಲೆಟರ್ ಡೇ
ಲವ್ ಲೆಟರ್‌ಗಳು ಇತಿಹಾಸ ಸೇರಿರುವ ಈ ದಿನಗಳಲ್ಲಿ, ಇಂದಿನವರಿಗೆ ಅದರ ಸೌಂದರ್ಯದ ಅರಿವಾಗುವುದು ಬೇಡವೇ? ವಾಟ್ಸಾಪ್ ಮೆಸೇಜ್‌ಗಿಂತ ಕೈಯ್ಯಲ್ಲಿ ಬರೆದ ಬರಹ ಹೆಚ್ಚು ಸ್ಪೆಶಲ್ ಎನಿಸುತ್ತದೆ. ಲವ್ ಲೆಟರ್‌ನ ನಿರೀಕ್ಷೆಯೇ ಇರದ ಸಂದರ್ಭದಲ್ಲಿ ಅಂಥದ್ದೊಂದು ನಿಮ್ಮ ಸಂಗಾತಿಯ ಕೈ ಸೇರಿದರೆ ಜೀವನಪೂರ್ತಿ ಅವರದನ್ನು ಜೋಪಾನ ಮಾಡಿಟ್ಟು, ಅದೆಷ್ಟು ವಿಶೇಷವೆನಿಸಿತೆಂಬುದನ್ನು ನಿಮಗೆ ಸಾದರಪಡಿಸುತ್ತಾರೆ. ಇದರಲ್ಲಿ ಯಾವ ಕಟ್ಟುಪಾಡೂ ಇಲ್ಲ, ಮನಸ್ಸಿಗೆ ಬಂದಿದ್ದೆಲ್ಲವನ್ನೂ ತೋಚಿದಂತೆ ಬರೆಯಬಹುದು. ಅದು ಕೇವಲ ನಿಮ್ಮವರು ಓದುವುದಾದ್ದರಿಂದ ಮುಜುಗರದ ಅಗತ್ಯವಿಲ್ಲ. 

ಅಮ್ಯೂಸ್‌ಮೆಂಟ್ ಪಾರ್ಕ್
ಅಮ್ಯೂಸ್‌ಮೆಂಟ್ ಪಾರ್ಕಿಗೆ ಹೋಗುವುದಾದರೆ, ಇಡೀ ದಿನದ ಚಟುವಟಿಕೆಗಳನ್ನು ಯೋಜಿಸುತ್ತಾ ಕೂರುವ ಅಗತ್ಯವೇ ಬೀಳುವುದಿಲ್ಲ. ಒಂದಿಡೀ ದಿನ ಇಬ್ಬರೂ ಒಟ್ಟಿಗೆ ಆಡಬಹುದಾದ, ನೋಡಬಹುದಾದ ಹಲವಷ್ಟು ಇಲ್ಲಿರುತ್ತವೆ. ಹಾಗಾಗಿ, ವಿ ಡೇಯಂದು ವಂಡರ್‌ ಲಾ ಅಥವಾ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಹೋಗಬಹುದು. ಮೈಸೂರಿನವರೆಗೆ ಹೋಗಿ ವಾಟರ್‌ ಪಾರ್ಕ್‌ನಲ್ಲಿ ಆಡಬಹುದು ಕೂಡಾ. 

ಅಡುಗೆ ಕ್ಲಾಸ್
ಪ್ರೇಮಿಗಳಿಬ್ಬರೂ ಜೊತೆಯಾಗಿ ನಿಮ್ಮ ಇಷ್ಟದ ಡಿನ್ನರ್‌ಗೆ ತಯಾರಿ ನಡೆಸಿ, ಅಡುಗೆ ಮುಗಿಸಿ, ಮನೆಯ ಟೆರೇಸ್‌ನಲ್ಲೇ ಟೇಬಲ್ ರೆಡಿ ಮಾಡಿ, ಕ್ಯಾಂಡಲ್ ಹಚ್ಚಿ, ಬಲೂನ್ ಹಾಗೂ ಇತರೆ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಿ, ಬಳಿಕ ಎದುರುಬದಿರಾಗಿ ಕುಳಿತು ಊಟ ಮಾಡುವ ಸುಖವಿದೆಯಲ್ಲ... ಇಂಥದೊಂದು ಪ್ರಯತ್ನ ಮಾಡಿದಲ್ಲಿ ಜೀವನಪರ್ಯಂತ ಈ ನೆನಪು ಹಸಿರಾಗಿರುವುದರಲ್ಲಿ ಅನುಮಾನವಿಲ್ಲ. 

ಆ ಹುಡುಗಿ ನನಗೆ ಬಿದ್ದಿದ್ದಾಳಾ? ಗೊತ್ತಾಗೋದು ಹೇಗೆ?