ಫೆಬ್ರವರಿ ಬಂತೆಂದರೆ ಯುವಜನತೆಯಲ್ಲಿ ಹಬ್ಬದ ಸಂಭ್ರಮ ಶುರು. ಸಿಂಗಲ್ ಇರುವವರಿಗೆ ಪ್ರಪೋಸ್ ಮಾಡುವ, ಮಾಡಿಸಿಕೊಳ್ಳುವ ತವಕ, ಮಿಂಗಲ್ ಆದವರಿಗೆ ತಮ್ಮ ಜೀವನದ ಸ್ಪೆಶಲ್ ವ್ಯಕ್ತಿಗೆ ದಿನವನ್ನು ಸ್ಪೆಶಲ್ ಆಗಿಸಿ ಅವರು ತಮಗೆಷ್ಟು ಸ್ಪೆಶಲ್ ಎಂಬುದನ್ನು ಸಾರಿ ಹೇಳುವ ತವಕ. ಪ್ರೀತಿಗೆ ಜಾತಿ, ಧರ್ಮ, ಗಡಿಗಳ ಹಂಗಿಲ್ಲ. ವಿಶ್ವಾದ್ಯಂತ ಪ್ರೇಮಿಸುವವರಿಗೆಲ್ಲರಿಗೂ ಪ್ರೇಮಿಗಳ ದಿನವೆಂಬುದು ವಿಶೇಷವೇ. ಆದರೆ, ಅದರ ಆಚರಣೆ ಮಾತ್ರ ದೇಶದಿಂದ ದೇಶಕ್ಕೆ ಕೊಂಚ ವಿಭಿನ್ನವಾಗಿರಬಹುದು. ವ್ಯಾಲೆಂಟೈನ್ಸ್ ಡೇಯನ್ನು ಯಾವ ದೇಶದಲ್ಲಿ ಹೇಗೆ ಆಚರಿಸುತ್ತಾರೆ ಎಂದು ತಿಳಿದುಕೊಳ್ಳೋದೇ ಒಂದು ಖುಷಿ. 

ಅರ್ಜೆಂಟೀನಾ
ಅರ್ಜೆಂಟೀನಾದಲ್ಲಿ ವ್ಯಾಲೆಂಟೈನ್ಸ್ ಡೇ ಎಂದು ಆಚರಿಸುವುದಿಲ್ಲ. ಬದಲಿಗೆ ಜುಲೈನಲ್ಲಿ “ದಿ ವೀಕ್ ಆಫ್ ಸ್ವೀಟ್‌ನೆಸ್” ಆಚರಿಸಲಾಗುತ್ತದೆ. ಈ ಒಂದು ವಾರ ಪ್ರೇಮಿಗಳು ಪರಸ್ಪರ ಮುತ್ತುಗಳನ್ನು, ಸ್ವೀಟ್ ಹಾಗೂ ಚಾಕೋಲೇಟ್‌ಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಾರೆ. 

ಫ್ರ್ಯಾನ್ಸ್
1415ರಲ್ಲಿ ಜೈಲಿನಲ್ಲಿದ್ದ ಓರ್ಲಿಯಾನ್ಸ್‌ನ ರಾಜ ಚಾರ್ಲ್ಸ್ ತನ್ನ ಪತ್ನಿಗೆ ಅಲ್ಲಿಂದಲೇ ಲವ್ ಲೆಟರ್‌ಗಳನ್ನು ಬರೆದು ಕಳುಹಿಸುತ್ತಿದ್ದ ಕಾರಣ ವ್ಯಾಲೆಂಟೈನ್ ಡೇ ಕಾರ್ಡ್ ಮೊದಲು ಹುಟ್ಟಿದ್ದೇ ಫ್ರ್ಯಾನ್ಸ್‌ನಲ್ಲಿ ಎಂಬ ನಂಬಿಕೆ ಇದೆ. ಫ್ರ್ಯಾನ್ಸ್‌ನ ವ್ಯಾಲೆಂಟೈನ್ ಎಂಬ ಹಳ್ಳಿಯೊಂದು 12ನೇ ಶತಮಾನದಲ್ಲೇ ರೊಮ್ಯಾನ್ಸ್‌ನ ಕೇಂದ್ರಸ್ಥಾನವಾಗಿ ಗುರುತಿಸಿಕೊಂಡಿದೆ. ಫೆಬ್ರವರಿ 12ರಿಂದ 14ರವರೆಗೆ ಈ ಊರಿನ ಮರಗಳು, ಮನೆಗಳು, ಪಾರ್ಕ್ ಎಲ್ಲವೂ ಲವ್ ಕಾರ್ಡ್‌ಗಳು, ಗುಲಾಬಿ ಹೂಗಳು, ಮದುವೆ ಪ್ರಪೋಸಲ್ ‌ಕಾರ್ಡ್‌ಗಳಿಂದ ತುಂಬಿ ತುಳುಕುತ್ತಿರುತ್ತದೆ. 

ದಕ್ಷಿಣ ಕೊರಿಯಾ
ಇಲ್ಲಿನ ಜೋಡಿಗಳು ಪ್ರತಿ ತಿಂಗಳ 14ನ್ನು ಕೂಡಾ ಪ್ರೇಮಿಗಳ ದಿನವಾಗಿ ಆಚರಣೆ ಮಾಡುತ್ತಾರೆ. ಅಂದರೆ, ಮೇ 14 ಗುಲಾಬಿಗಳ ದಿನವಾಗಿದ್ದರೆ, ಜೂನ್ 14 ಮುತ್ತುಗಳ ದಿನ, ಡಿಸೆಂಬರ್ 14 ಅಪ್ಪುಗೆಯ ದಿನ ಇತ್ಯಾದಿ. ಪಾಪ, ಸಿಂಗಲ್ ಇರುವವರು ಏಪ್ರಿಲ್ 14ನ್ನು ಬ್ಲ್ಯಾಕ್ ಡೇ ಎಂದು ಆಚರಿಸುತ್ತಾ ಅದಕ್ಕಾಗಿ ಬ್ಲ್ಯಾಕ್ ನೂಡಲ್ಸ್ ಸೇವಿಸುತ್ತಾರೆ. 

ಫಿಲಿಪೈನ್ಸ್
ಫಿಲಿಪೈನ್ಸ್‌ನಲ್ಲಿ ವ್ಯಾಲೆಂಟೈನ್ಸ್ ಡೇ ದಿನ ಬಹಳಷ್ಟು ಜೋಡಿಗಳಿಗೆ ಸರ್ಕಾರಿ ಹಣದಲ್ಲಿ ಸಾಮೂಹಿಕ ವಿವಾಹ ನೆರವೇರಿಸಲಾಗುತ್ತದೆ. 

ಅವಳು ನಂಗೆ ಬಿದ್ಲಾ? ಗೊತ್ತಾಗೋದು ಹೇಗೆ?

ಘಾನಾ
ಘಾನಾದಲ್ಲಿ ಫೆಬ್ರವರಿ 14ನ್ನು ರಾಷ್ಟ್ರೀಯ ಚಾಕೋಲೇಟ್ ದಿನ ಎಂದು ಆಚರಿಸಲಾಗುತ್ತದೆ. 2007ರಲ್ಲಿ ಸರ್ಕಾರ ದೇಶದ ಟೂರಿಸಂ ಹೆಚ್ಚಿಸಲು ಈ ಕ್ರಮ ಕೈಗೊಂಡಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಕೋಕೋ ಉತ್ಪಾದಿಸುವ ದೇಶ ಇದಾಗಿದ್ದರಿಂದ ಫೆ.14ರಂದು ಇಲ್ಲಿಗೆ ಬಂದ ಪ್ರವಾಸಿಗರೆಲ್ಲರೂ ಚಾಕೋಲೇಟ್ ದಿನದ ಸಂಭ್ರಮಕ್ಕೆ ಸಾಕ್ಷಿಯಾಗಿ, ಒಂದಿಷ್ಟು ಚಾಕೋಲೇಟ್‌ಗಳನ್ನು ಖರೀದಿಸಲು ಮರೆಯುವುದಿಲ್ಲ. 

ಬಲ್ಗೇರಿಯಾ
ಪ್ರೇಮಿಗಳ ದಿನವನ್ನು ಬಲ್ಗೇರಿಯಾದಲ್ಲಿ ವೈನ್ ತಯಾರಕರ ದಿನವಾಗಿ ಆಚರಿಸಲಾಗುತ್ತದೆ. ಹಿರಿಯ ಹಾಗೂ ಕಿರಿಯ ಜೋಡಿಗಳು ಈ ದಿನ ಜೊತೆಯಾಗಿ ಸ್ಥಳೀಯ ವೈನ್ ಕುಡಿಯುತ್ತಾ ಸಂಭ್ರಮಿಸುತ್ತಾರೆ. 

ವೇಲ್ಸ್
ವೇಲ್ಸ್‌ನಲ್ಲಿ ಪ್ರೇಮಿಗಳ ದಿನವನ್ನು ಬಹಳ ವಿಶಿಷ್ಠವಾಗಿ ಆಚರಿಸಲಾಗುತ್ತದೆ. ಜನವರಿ 25ರಂದು ಇಲ್ಲಿ ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಅಂದು ಅಲ್ಲಿನ ಜೋಡಿಗಳೆಲ್ಲರೂ ಸುಂದರ ವಿನ್ಯಾಸದ ಮರದ ಚಮಚಗಳನ್ನು ಪರಸ್ಪರ ನೀಡಿಕೊಳ್ಳುತ್ತಾರೆ. ಈ ಸಂಪ್ರದಾಯ 16ನೇ ಶತಮಾನದಿಂದಲೂ ಮುಂದುವರಿದುಕೊಂಡು ಬಂದಿದೆ. 

ಮದುವೆಗೆ ಸಪ್ತಪದಿಯಾದ್ರೆ ಪ್ರೀತಿಗೆ ಸಪ್ತದಿನ; ವ್ಯಾಲೆಂಟೆನ್ಸ್ ವೀಕ್ ಬಗ್ಗೆ ನಿಮಗೇನು ಗೊತ್ತು?...

ಸ್ಪೇನ್
ಅಕ್ಟೋಬರ್ 9ರಂದು ಸ್ಪೇನ್‌ನ ವ್ಯಾಲೆನ್ಸಿಯಾದಲ್ಲಿ ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಇಂದು ಪುರುಷರು ಸಣ್ಣ ಸ್ಟ್ಯಾಚ್ಯೂಗಳನ್ನು ತಯಾರಿಸಿ ತಮ್ಮ ಪ್ರೀತಿಯ ಹುಡುಗಿಗೆ ನೀಡುತ್ತಾರೆ. ಅಂದು ಇಲ್ಲಿನ ರಸ್ತೆಗಳಲ್ಲಿ ಪೆರೇಡ್ ಕೂಡಾ ನಡೆಸಲಾಗುತ್ತದೆ. 

ಚೀನಾ
ಮಾರ್ಚ್ 15ರಂದು ಚೀನಾದಲ್ಲಿ ಸಿಸ್ಟರ್ಸ್ ಮೀಲ್ ಫೆಸ್ಟಿವಲ್ ನಡೆಸಲಾಗುತ್ತದೆ. ಅಂದು ಮಹಿಳೆಯರು ಬೆಳ್ಳಿಯ ಆಭರಣಗಳನ್ನು ಧರಿಸಿ, ಸುಂದರವಾದ ಉಡುಗೆಗಳನ್ನು ತೊಟ್ಟು ಬಣ್ಣದ ಅಕ್ಕಿಯಿಂದ ಹಲವಾರು ಆಹಾರಗಳನ್ನು ತಯಾರಿಸುತ್ತಾರೆ. ಅದನ್ನು ರೇಶ್ಮೆಯ ವಸ್ತ್ರದಲ್ಲಿ ಬಡಿಸಿ, ರಸ್ತೆಯಲ್ಲಿ ಹೋಗುವ ಯುವಕರಿಗೆ ಕರೆದು ಕೊಡುತ್ತಾರೆ. ಹೀಗೆ ಕೊಟ್ಟ ಆಹಾರದ ನಡುವೆ ಅವರ ಪ್ರೀತಿಯ ಹಣೆಬರಹ ಅಡಗಿರುತ್ತದೆ. ಅದರೊಳಗೆ ಎರಡು ಚಾಪ್‌ಸ್ಟಿಕ್ಸ್ ಇಟ್ಟಿದ್ದರೆ ಪ್ರೀತಿ ಇದೆ ಎಂದರ್ಥ. ಬೆಳ್ಳುಳ್ಳಿ ತುಂಡಿದೆ ಎಂದರೆ ಪ್ರೀತಿ ಶುರುವಾಗುವ ಮುನ್ನವೇ ಕಮರಿದೆ ಎಂದರ್ಥ. 

ರೊಮಾನಿಯಾ
ಫೆಬ್ರವರಿ 24ರಂದು ರೊಮಾನಿಯಾದಲ್ಲಿ ಪ್ರೇಮಿಗಳು ಎಂಗೇಜ್ ಆಗುವ ದಿನ. ಅಂದು  ಯುವಕ ಯುವತಿಯರು ಕಾಡಿಗೆ ತೆರಳಿ ಅಪರೂಪದ ಬಣ್ಣಬಣ್ಣದ ಹೂಗಳನ್ನು ಆರಿಸಿ ತರುತ್ತಾರೆ. ಇತರೆ ಜೋಡಿಗಳು ಅದೃಷ್ಟದ ಸಂಕೇತವಾಗಿ ಹಿಮದಿಂದ ತಮ್ಮ ಮುಖ ತೊಳೆದುಕೊಳ್ಳುತ್ತಾರೆ.