ಮನೆಯ ಅಂಗಳದಲ್ಲಿ ಬೆಳೆಸುವ ತುಳಸಿ ಗಿಡದಲ್ಲಿ ಹೂವುಗಳು ಅರಳಿದಾಗ, ಅವುಗಳನ್ನು ಕಿತ್ತು ಎಸೆಯುವುದು ಸಾಮಾನ್ಯ. ದೇವರಿಗೆ ಅರ್ಪಿಸಿದ ತುಳಸಿ ಹೂವುಗಳನ್ನೂ ಮರುದಿನ ತೆಗೆದು ಬಿಸಾಡುತ್ತೇವೆ. ಆದರೆ ಹೀಗೆ ಮಾಡುವ ಬದಲು ಅವುಗಳನ್ನು ಒಂದು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಬಹುದು.
Homemade Incense: ತುಳಸಿ ಹೂವುಗಳನ್ನು ಇನ್ಮುಂದೆ ಎಸೆಯಬೇಡಿ! ಮನೆಯಲ್ಲೇ ತಯಾರಿಸಿ ರಾಸಾಯನಿಕ ಮುಕ್ತ ಸುಗಂಧ ಧೂಪ
ಮನೆಯ ಅಂಗಳದಲ್ಲಿ ಅಥವಾ ದೇವರ ಕೋಣೆಯ ಬಳಿ ಬೆಳೆಸುವ ತುಳಸಿ ಗಿಡದಲ್ಲಿ ಹೂವುಗಳು ಅರಳಿದಾಗ, ಗಿಡದ ಬೆಳವಣಿಗೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಅವುಗಳನ್ನು ಕಿತ್ತು ಎಸೆಯುವುದು ಸಾಮಾನ್ಯ. ದೇವರಿಗೆ ಅರ್ಪಿಸಿದ ತುಳಸಿ ಹೂವುಗಳನ್ನೂ ಮರುದಿನ ತೆಗೆದು ಬಿಸಾಡುತ್ತೇವೆ. ಆದರೆ ಇನ್ನು ಮುಂದೆ ಹೀಗೆ ಮಾಡುವ ಬದಲು ಅವುಗಳನ್ನು ಒಂದು ಉತ್ತಮ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಹೌದು, ಒಣಗಿದ ತುಳಸಿ ಹೂವುಗಳಿಂದ ಮನೆಯಲ್ಲೇ ಸುಗಂಧಭರಿತ, ರಾಸಾಯನಿಕ ಮುಕ್ತ ಧೂಪವನ್ನು ತಯಾರಿಸಬಹುದು.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಧೂಪ ಮತ್ತು ಸಾಂಬ್ರಾಣಿಗಳಲ್ಲಿ ವಿವಿಧ ರಾಸಾಯನಿಕ ಪದಾರ್ಥಗಳು ಇರಬಹುದು. ಇವುಗಳ ಬದಲಿಗೆ ಮನೆಯಲ್ಲೇ ಲಭ್ಯವಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಧೂಪ ತಯಾರಿಸುವುದು ಉತ್ತಮ ಪರ್ಯಾಯವಾಗಬಹುದು. ವಿಶೇಷವೆಂದರೆ ಇದಕ್ಕೆ ದುಬಾರಿ ವಸ್ತುಗಳ ಅಗತ್ಯವೂ ಇಲ್ಲ.
ತುಳಸಿ ಹೂವಿನ ಧೂಪಕ್ಕೆ ಬೇಕಾಗುವ ಸಾಮಗ್ರಿಗಳು:
ಒಣಗಿದ ತುಳಸಿ ಹೂವುಗಳು
5ರಿಂದ 6 ಪಲಾವ್ ಎಲೆಗಳು
ಕೆಲವು ಲವಂಗಗಳು
12ರಿಂದ 13 ಕರ್ಪೂರದ ತುಂಡುಗಳು
ಸ್ವಲ್ಪ ಅರಿಶಿನ ಪುಡಿ
ರೋಸ್ ವಾಟರ್
ಹಸುವಿನ ತುಪ್ಪ
ಧೂಪ ತಯಾರಿಸುವ ಸುಲಭ ವಿಧಾನ:
ಮೊದಲಿಗೆ ತುಳಸಿ ಹೂವುಗಳನ್ನು ಸಂಗ್ರಹಿಸಿ ಎರಡರಿಂದ ಮೂರು ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಕೊಳ್ಳಿ. ನಂತರ ಒಣಗಿದ ಹೂವುಗಳನ್ನು ಮಿಕ್ಸಿ ಜಾರ್ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದಕ್ಕೆ ಪಲಾವ್ ಎಲೆ, ಲವಂಗ, ಕರ್ಪೂರ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಪುಡಿಮಾಡಿ. ಇನ್ನಷ್ಟು ಸುಗಂಧಕ್ಕಾಗಿ ಸ್ವಲ್ಪ ಶ್ರೀಗಂಧದ ಪುಡಿ ಅಥವಾ ಹವನ ಸಾಮಗ್ರಿಯನ್ನೂ ಸೇರಿಸಬಹುದು.
ಈಗ ಸಿದ್ಧಪಡಿಸಿದ ಪುಡಿಯನ್ನು ಒಂದು ಅಗಲವಾದ ತಟ್ಟೆಗೆ ಹಾಕಿ. ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು ಹಸುವಿನ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ಮೃದುವಾದ ಹಿಟ್ಟಿನ ಹದ ಬಂದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಅವುಗಳಿಗೆ ಧೂಪದ ಕೋನ್ ಆಕಾರ ನೀಡಿ.
ಒಣಗಿಸುವಾಗ ಇರಲಿ ಎಚ್ಚರಿಕೆ:
ಸಿದ್ಧವಾದ ಧೂಪದ ಕೋನ್ಗಳನ್ನು ಸ್ವಚ್ಛವಾದ ತಟ್ಟೆ ಅಥವಾ ಬಟ್ಟೆಯ ಮೇಲೆ ಜೋಡಿಸಿ, ಗಾಳಿಯಾಡುವ ನೆರಳಿನ ಜಾಗದಲ್ಲಿ ಎರಡು ಮೂರು ದಿನಗಳ ಕಾಲ ಒಣಗಲು ಬಿಡಿ. ಫ್ಯಾನ್ ಅಡಿಯಲ್ಲಿಯೂ ಒಣಗಿಸಬಹುದು. ಧೂಪದಲ್ಲಿ ತೇವಾಂಶ ಉಳಿಯದಂತೆ ನೋಡಿಕೊಳ್ಳುವುದು ಮುಖ್ಯ. ಆದರೆ ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸುವುದನ್ನು ತಪ್ಪಿಸಿ. ಇದರಿಂದ ಅದರ ನೈಸರ್ಗಿಕ ಪರಿಮಳ ಕಡಿಮೆಯಾಗಬಹುದು.
ಹೀಗೆ ಮನೆಯಲ್ಲೇ ಸುಲಭವಾಗಿ ತಯಾರಿಸಿದ ತುಳಸಿ ಹೂವಿನ ಧೂಪವನ್ನು ಬಳಸುವ ಮೂಲಕ ವ್ಯರ್ಥವಾಗುತ್ತಿದ್ದ ಹೂವುಗಳಿಗೆ ಮರುಬಳಕೆಯ ಅವಕಾಶ ಕಲ್ಪಿಸಬಹುದು. ಆದರೆ ಧೂಪವನ್ನು ಸುಡುವಾಗ ಹೊಗೆ ಉಂಟಾಗುವುದರಿಂದ ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಮಾತ್ರ ಬಳಸಿ.














