ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ (MASLD) ಅನಾರೋಗ್ಯಕರ ಆಹಾರ ಪದ್ಧತಿ ಪ್ರಮುಖ ಕಾರಣವಾಗಿದೆ. ಆದರೆ, ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಅಡುಗೆ ವಿಧಾನವನ್ನು ಪಾಲಿಸುವುದು ಅಷ್ಟೇ ಮುಖ್ಯವೆಂದು ಈ ಸ್ಟೋರಿ ಹೇಳುತ್ತದೆ.
ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಈಗ ವೈದ್ಯಕೀಯವಾಗಿ ಮೆಟಾಬಾಲಿಕ್ ಡಿಸ್ಫಂಕ್ಷನ್ ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್ (MASLD) ಎಂದು ಕರೆಯಲಾಗುತ್ತಿದೆ. ಈ ಸಮಸ್ಯೆಯಲ್ಲಿ ಯಕೃತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ. ಆರಂಭದಲ್ಲಿ ಯಾವುದೇ ಲಕ್ಷಣಗಳು ಕಾಣಿಸದಿದ್ದರೂ, ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಯಕೃತ್ತಿನ ಉರಿಯೂತ, ಹಾನಿ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ತಜ್ಞರು ಹೇಳುವುದೇನು?
ತಜ್ಞರ ಪ್ರಕಾರ, ಈ ಕಾಯಿಲೆಗೆ ಪ್ರಮುಖ ಕಾರಣಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ ಮೊದಲ ಸ್ಥಾನದಲ್ಲಿದೆ. ಸಂಸ್ಕರಿಸಿದ ಆಹಾರಗಳು, ಹೆಚ್ಚು ಸಕ್ಕರೆ ಇರುವ ಪದಾರ್ಥಗಳು, ಮೈದಾ ಮತ್ತು ಇತರೆ ಕಾರ್ಬೋಹೈಡ್ರೇಟ್‌ಗಳು, ಸ್ಯಾಚುರೇಟೆಡ್ ಕೊಬ್ಬುಗಳು ಹಾಗೂ ಕಳಪೆ ಗುಣಮಟ್ಟದ ಪ್ರಾಣಿ ಪ್ರೋಟೀನ್‌ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಇದರ ಜೊತೆಗೆ ದೈಹಿಕ ವ್ಯಾಯಾಮದ ಕೊರತೆ, ಅಧಿಕ ತೂಕ, ಆನುವಂಶಿಕ ಕಾರಣಗಳು ಮತ್ತು ಕೆಲವರಲ್ಲಿ ಮದ್ಯಪಾನವೂ ಈ ಸಮಸ್ಯೆಗೆ ಕಾರಣವಾಗಬಹುದು.
ಯಕೃತ್ತಿನ ಆರೋಗ್ಯಕ್ಕೆ ಮೀನು ಸೂಕ್ತ!
ಮಣಿಪಾಲ್ ಆಸ್ಪತ್ರೆಯ ಪೌಷ್ಟಿಕ ತಜ್ಞೆ ನವನೀತಾ ಸಹಾ ಅವರ ಪ್ರಕಾರ, ಯಕೃತ್ತಿನ ಆರೋಗ್ಯವು ನಮ್ಮ ದಿನನಿತ್ಯದ ಆಹಾರ ಪದ್ಧತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸರಿಯಾದ ಆಹಾರವನ್ನು ಆಯ್ಕೆ ಮಾಡಿಕೊಂಡರೆ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ಕಡಿಮೆ ಮಾಡಬಹುದು ಮತ್ತು ಈ ಕಾಯಿಲೆಯ ಅಪಾಯವನ್ನೂ ತಗ್ಗಿಸಬಹುದು. ಯಕೃತ್ತಿನ ಆರೋಗ್ಯಕ್ಕೆ ಮೀನು ಉತ್ತಮ ಆಹಾರಗಳಲ್ಲಿ ಒಂದಾಗಿದೆ. ವಿಶೇಷವಾಗಿ ಸಾಲ್ಮನ್, ಟ್ಯೂನ, ಸಾರ್ಡೀನ್, ಮ್ಯಾಕೆರೆಲ್, ಹೆರಿಂಗ್ ಮತ್ತು ಕ್ಯಾಟ್‌ಫಿಶ್‌ನಂತಹ ಕೊಬ್ಬಿನ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇವುಗಳಲ್ಲಿ ಆಲ್ಫಾ-ಲಿನೋಲೆನಿಕ್ ಆಮ್ಲ, ಐಕೋಸಾಪೆಂಟೆನೊಯಿಕ್ ಆಮ್ಲ ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲ ಹೆಚ್ಚಾಗಿ ದೊರೆಯುತ್ತವೆ. ಈ ಪೋಷಕಾಂಶಗಳು ಯಕೃತ್ತಿನ ಉರಿಯೂತವನ್ನು ಕಡಿಮೆ ಮಾಡಲು, ಕೊಬ್ಬಿನ ಶೇಖರಣೆಯನ್ನು ತಗ್ಗಿಸಲು ಮತ್ತು ಯಕೃತ್ತಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಸ್ನಾಯು ಬೆಳವಣಿಗೆಗೆ ಸಹಾಯಕ!
ಮೀನುಗಳಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಕೂಡ ದೊರೆಯುತ್ತದೆ. ಇದು ದೇಹಕ್ಕೆ ಅಗತ್ಯವಾದ ಅಮೈನೋ ಆಮ್ಲಗಳನ್ನು ಒದಗಿಸಿ ಸ್ನಾಯುಗಳ ಬೆಳವಣಿಗೆ ನೆರವಾಗುತ್ತದೆ. ಜೊತೆಗೆ, ಮೀನಿನಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಯಕೃತ್ತಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತವೆ. ಆದರೆ ಮೀನು ತಿನ್ನುವುದರಿಂದ ಮಾತ್ರ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ಭಾವಿಸುವುದು ಸರಿಯಲ್ಲ. ಇದು ಆರೋಗ್ಯಕರ ಜೀವನಶೈಲಿಯ ಒಂದು ಭಾಗ ಮಾತ್ರ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ ಮತ್ತು ವೈದ್ಯರ ಸಲಹೆಗಳನ್ನು ಪಾಲಿಸುವುದು ಕೂಡ ಅಷ್ಟೇ ಮುಖ್ಯ.
ಬೇಯಿಸುವಿಕೆ ಎನ್ನುವುದು ಬಹು ಮುಖ್ಯ!
ಮೀನು ಹೇಗೆ ಬೇಯಿಸಲಾಗುತ್ತದೆ ಎಂಬುದೂ ಬಹಳ ಮುಖ್ಯ. ಹೆಚ್ಚು ಎಣ್ಣೆಯಲ್ಲಿ ಡೀಪ್ ಫ್ರೈ ಅಥವಾ ಪ್ಯಾನ್ ಫ್ರೈ ಮಾಡಿದ ಮೀನು ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ. ಅಡುಗೆ ವೇಳೆ ಹೆಚ್ಚುವರಿ ಎಣ್ಣೆ ಮತ್ತು ಸ್ಯಾಚುರೇಟೆಡ್ ಕೊಬ್ಬು ಬಳಸುವುದರಿಂದ ಮೀನಿನಲ್ಲಿರುವ ಪೋಷಕಾಂಶಗಳ ಲಾಭ ಕಡಿಮೆಯಾಗಬಹುದು. ಇದರಿಂದ ಯಕೃತ್ತಿನ ಮೇಲೆ ಹೆಚ್ಚುವರಿ ಒತ್ತಡ ಬೀಳುವ ಸಾಧ್ಯತೆ ಇದೆ.
ಹೀಗೆ ತಿಂದರೆ ಉತ್ತಮ!
ಅದರ ಬದಲು ಮೀನುಗಳನ್ನು ಬೇಯಿಸಿ, ಗ್ರಿಲ್ ಮಾಡಿ ಅಥವಾ ಸ್ಟೀಮ್ ಮಾಡಿ ತಿನ್ನುವುದು ಉತ್ತಮ. ಈ ವಿಧಾನಗಳಿಂದ ಮೀನಿನಲ್ಲಿರುವ ಪೋಷಕಾಂಶಗಳು ಹೆಚ್ಚು ಉಳಿಯುತ್ತವೆ ಮತ್ತು ದೇಹಕ್ಕೂ ಹೆಚ್ಚು ಪ್ರಯೋಜನವಾಗುತ್ತದೆ. ಹಾಗೆಯೇ ಬೆಣ್ಣೆ, ಕೆನೆ ಅಥವಾ ಹೆಚ್ಚಿನ ಕೊಬ್ಬಿನ ಸಾಸ್‌ಗಳನ್ನು ಬಳಸಿ ತಯಾರಿಸಿದ ಮೀನು ಪದಾರ್ಥಗಳನ್ನು ಮಿತವಾಗಿ ಸೇವಿಸುವುದು ಒಳಿತು. ಇವು ಯಕೃತ್ತಿನ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಈಗಾಗಲೇ ಕೊಬ್ಬಿನ ಪಿತ್ತಜನಕಾಂಗದ ಸಮಸ್ಯೆ ಇರುವವರು ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ಯಕೃತ್ತಿನ ತಜ್ಞರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆದು ಆಹಾರ ಯೋಜನೆ ರೂಪಿಸಿಕೊಳ್ಳುವುದು ಉತ್ತಮ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.


