ಸರ್ಕಾರಿ ಕೆಲಸ ಮತ್ತು ಆಸ್ತಿಗಾಗಿ 23 ವರ್ಷದ ಮಗಳು ತನ್ನ ತಾಯಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ. ಅಪಘಾತವೆಂದು ಬಿಂಬಿಸಲು ಯತ್ನಿಸಿದ ಈ ಕೃತ್ಯವನ್ನು ಪೊಲೀಸರು ತನಿಖೆ ನಡೆಸಿ, ಮಗಳು ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಸ್ತಿ ಮತ್ತು ಕೆಲಸದ ಆಸೆ ಮನುಷ್ಯನನ್ನು ಎಷ್ಟರಮಟ್ಟಿಗೆ ಕುರುಡಾಗಿಸಬಹುದು ಎಂಬುದಕ್ಕೆ ರಾಜಸ್ಥಾನದ ಜೈಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸರ್ಕಾರಿ ಕೆಲಸ ಮತ್ತು ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ 23 ವರ್ಷದ ಮಗಳೇ ತನ್ನ ತಾಯಿಯನ್ನು ಸುಪಾರಿ ಕೊಟ್ಟು ಕೊಲ್ಲಿಸಿರುವ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.
ಅಪಘಾತವೆಂದು ನಂಬಿಸಲು ಯತ್ನ:
ಜೈಪುರದ ಪ್ರತಾಪ್ ನಗರದ ನಿವಾಸಿ ನೀರಜ್ ಶರ್ಮಾ (45) ಜುಲೈ 3 ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವೇಗವಾಗಿ ಬಂದ ಸ್ಕಾರ್ಪಿಯೋ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಮೇಲ್ನೋಟಕ್ಕೆ ಇದು ಸಾಮಾನ್ಯ ಅಪಘಾತದಂತೆ ಕಂಡರೂ, ಮೃತ ಮಹಿಳೆಯ ಸಹೋದರ ರಾಕೇಶ್‌ಗೆ ತಂಗಿಯ ಸಾವಿನ ಬಗ್ಗೆ ಬಲವಾದ ಅನುಮಾನವಿತ್ತು. ಇದು ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂದು ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ಅಸಲಿ ಸತ್ಯ ಹೊರಬಂದಿದೆ.
ಕೆಲಸದ ಮೇಲೆ ಕಣ್ಣಿಟ್ಟಿದ್ದ ಮಗಳು:
ಮೃತ ನೀರಜ್ ಶರ್ಮಾ ಅವರು ಜೈಪುರ ನ್ಯಾಯಾಲಯದಲ್ಲಿ ಎಲ್‌ಡಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತಿ ವಿಜಯ್ ಕುಮಾರ್ ಶರ್ಮಾ ಅವರ ಮರಣದ ನಂತರ, ಅನುಕಂಪದ ಆಧಾರದ (Compassionate Appointment) ಮೇಲೆ ನೀರಜ್‌ಗೆ ಈ ಕೆಲಸ ಸಿಕ್ಕಿತ್ತು. ಆದರೆ, ಪದವೀಧರೆಯಾಗಿದ್ದ ಮಗಳು ಆಯುಷಿಗೆ ಆ ಸರ್ಕಾರಿ ಕೆಲಸದ ಮೇಲೆ ಕಣ್ಣಿತ್ತು. ತಾಯಿ ಬದುಕಿರುವವರೆಗೆ ಆ ಕೆಲಸ ತನಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಕೆ ತಾಯಿಯನ್ನೇ ಮುಗಿಸಲು ಸಂಚು ರೂಪಿಸಿದ್ದಳು.
ಸಂಬಂಧಿಕರ ಜೊತೆಗೂಡಿ ಸ್ಕೆಚ್:
ಈ ಕೃತ್ಯಕ್ಕೆ ಆಯುಷಿಗೆ ಆಕೆಯ ಸ್ವಂತ ಮಾವ (ತಾಯಿಯ ಇನ್ನೊಬ್ಬ ಸಹೋದರ), ಕಸಿನ್ ಮತ್ತು ಇತರ ನಾಲ್ವರು ಸಂಬಂಧಿಕರು ಸಾಥ್ ನೀಡಿದ್ದರು. ತಾಯಿಯನ್ನು ಅಪಘಾತದ ರೂಪದಲ್ಲಿ ಕೊಂದರೆ ಯಾರೂ ಅನುಮಾನಿಸುವುದಿಲ್ಲ ಮತ್ತು ತಾಯಿಯ ಮರಣದ ನಂತರ ಅನುಕಂಪದ ಆಧಾರದಲ್ಲಿ ತನಗೇ ಆ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಆಯುಷಿ ನಂಬಿದ್ದಳು. ಈ ಕೊಲೆಗಾಗಿ ಸುಪಾರಿ ಕೂಡ ನೀಡಲಾಗಿತ್ತು.
ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಗಳು ಆಯುಷಿ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆಸ್ತಿ ಮತ್ತು ಕೆಲಸಕ್ಕಾಗಿ ಹೆತ್ತ ತಾಯಿಯನ್ನೇ ಬಲಿ ಪಡೆದ ಮಗಳ ಕ್ರೌರ್ಯಕ್ಕೆ ಜೈಪುರದ ಜನತೆ ಬೆಚ್ಚಿಬಿದ್ದಿದ್ದಾರೆ.


