Asianet Suvarna News Asianet Suvarna News

ತೀವ್ರ ಆತಂಕಕ್ಕೊಂದು ಸ್ಟೈಲಿಶ್ ಪರಿಹಾರ ಫಿಡ್ಜೆಟ್ ಜ್ಯುವೆಲ್ಲರಿ!

ವರ್ಷದ ಹಿಂದೆ ಎಲ್ಲರ ಕೈ ಬೆರಳ ಮೇಲೆ ಆಡಿದ ಫಿಡ್ಜೆಟ್ ಸ್ಪಿನ್ನರ್ಸ್ ಜನಪ್ರಿಯತೆ ಕುಗ್ಗಿರಬಹುದು. ಆದರೆ, ಇದೀಗ ಫಿಡ್ಜೆಟ್ ಆಭರಣಗಳು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಅದರ ಹಿಂದೆ ಅಂದವೊಂದೇ ಅಲ್ಲ, ಬೇರೆಯದೇ ಕಾರಣವಿದೆ. 

Fidget Jewellery can help fix anxiety
Author
Bangalore, First Published Jun 22, 2019, 3:29 PM IST

ಅತಿಯಾದ ಸಮಸ್ಯಾತ್ಮಕ ಒತ್ತಡವೇ ಬೇರೆ, ದಿನನಿತ್ಯದ ಒತ್ತಡವೇ ಬೇರೆ. ಪ್ರತಿನಿತ್ಯ ಆತಂಕ, ಖಿನ್ನತೆ, ಚಿಂತೆ, ಒತ್ತಡವಿದ್ದಾಗ ಸಣ್ಣ ಸಣ್ಣ ಸಮಸ್ಯೆಗಳೂ ದೊಡ್ಡದಾಗಿ ಕಾಣಿಸಲಾರಂಭಿಸುತ್ತವೆ. ಇದನ್ನು ನಿವಾರಿಸಿಕೊಳ್ಳಲು ಜನರು ಸಾಮಾನ್ಯವಾಗಿ ಔಷಧ, ವರ್ಕೌಟ್, ರಿಲ್ಯಾಕ್ಸೇಶನ್ ತಂತ್ರಗಳ ಮೊರೆ ಹೋಗುತ್ತಾರೆ. ಇದೀಗ ಆತಂಕ ನಿವಾರಣೆಗೆ ಆಭರಣಗಳೂ ಸಹಾಯ ಮಾಡಲಾರಂಭಿಸಿವೆ. ಇಲ್ಲಾ ಸ್ವಾಮಿ, ಇದು ನೀವಂದುಕೊಂಡಂತೆ ಜ್ಯೋತಿಷಿಗಳು ಹೇಳುವ ಪಚ್ಚೆ, ನವರತ್ನ ಮುಂತಾದ ಹರಳನ್ನು ಧರಿಸುವುದಲ್ಲ, ಕರಿದಾರಕ್ಕೆ ತಾಯಿತ ಕಟ್ಟುವುದೂ ಅಲ್ಲ. ಈ ಆಭರಣಗಳು ಸ್ವಲ್ಪ ಮಾಡರ್ನ್ ಆಗಿ, ವೆರೈಟಿಯಲ್ಲಿ ಬಂದು ವ್ಯಕ್ತಿಯ ಸ್ಟೈಲ್ ಹಾಗೂ ಸ್ಮೈಲ್ ಹೆಚ್ಚಿಸುತ್ತಿವೆ. ಇವೇ ಫಿಡ್ಜೆಟ್ ಜ್ಯುವೆಲ್ಲರಿಗಳು. 

ಚುನಾವಣೆ ಹೊತ್ತು ತಂದ ಆತಂಕ; ನಿಭಾಯಿಸುವುದು ಹೇಗೆ?

ಫಿಡ್ಜೆಟ್ ಸ್ಪಿನ್ನರ್ಸ್‌ನ್ನು ನೀವು ನೋಡಿಯೇ ಇರುತ್ತೀರಿ. ವರ್ಷದ ಹಿಂದೆ ಮಕ್ಕಳು ಹೋಗಲಿ, ದೊಡ್ಡವರಲ್ಲೂ ಫಿಡ್ಜೆಟ್ ಆಟದ ಹುಚ್ಚು ಹಚ್ಚಿಸಿ ಎಲ್ಲರ ಕೈ ಬೆರಳ ಮೇಲೆ ಸುತ್ತಾಡಿತ್ತು. ಅದು ವ್ಯಕ್ತಿಯ ಏಕಾಗ್ರತೆ ಹಾಗೂ ಸಂಯಮ ಹೆಚ್ಚಿಸಿ, ಒತ್ತಡದ ಪರಿಸ್ಥಿತಿ ನಿಭಾಯಿಸಲು ಸಹಾಯ ಮಾಡುವುದೆಂದೂ ಹೇಳಲಾಗಿತ್ತು. ಈಗ ಇದೇ ಮಾದರಿಯಲ್ಲಿ ಫಿಡ್ಜೆಟ್ ಆಭರಣಗಳು ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿವೆ.  

ಬಳೆ, ಸರ, ಉಂಗುರ, ಬ್ರೇಸ್ಲೆಟ್, ಪದಕಗಳು ಮುಂತಾದ ರೂಪದಲ್ಲಿ ಫಿಡ್ಜೆಟ್ ಆಭರಣಗಳು ದೊರೆಯುತ್ತಿವೆ. ಯಾವುದೇ ಬಟ್ಟೆಗೂ ಹೊಂದುವಂತೆ ಧರಿಸಬಹುದಾದ ಈ ಆಭರಣಗಳು ನೀವು ಸ್ವಲ್ಪ ವೀಕ್ ಮೈಂಡ್‌ನವರಾಗಿದ್ದರೆ, ಅತಿ ಭಾವುಕ ಜೀವಿಗಳಾಗಿದ್ದರೆ, ಪುಕ್ಕಲರಾಗಿದ್ದರೆ, ಒತ್ತಡದಿಂದ ಹೈರಾಣಾಗಿದ್ದರೆ ನಿಮ್ಮ ಸಹಾಯಕ್ಕೆ ನಿಲ್ಲುತ್ತವೆ. ಮುಟ್ಟಲು ಸುಲಭವಾದ ಮಣಿಗಳು, ರಿಂಗ್‌ಗಳು ಹಾಗೂ ಇತರೆ ಮೆಟೀರಿಯಲ್ಸ್‌ನಿಂದ ಮಾಡಿರುವ ಇವನ್ನು ಧರಿಸುವುದೂ, ಬಳಸುವುದೂ ಸುಲಭ. ಇದೊಂತರಾ ಋುಷಿಮುನಿಗಳು ಬಳಸುತ್ತಿದ್ದ ಜಪಮಣಿಯ ಹಾಗೆ, ಗಮನ ಕೇಂದ್ರೀಕರಿಸಲು ನೆರವಾಗುತ್ತದೆ. ನೀವು ಮಣಿಗಳನ್ನು ಸುತ್ತಬಹುದು, ರಬ್ಬರ್ ಎಳೆಯಬಹುದು, ರಿಂಗ್‌ನೊಂದಿಗೆ ಬೆರಳಿನಲ್ಲೇ ಸರಸವಾಡಬಹುದು, ಬಾಯಿಗೆ ಹಾಕಲೂಬಹುದು. 

ಈ ಆಭರಣಗಳು ಗಮನದ ಕೊರತೆ (ಎಡಿಎಚ್‌ಡಿ) ತೊಂದರೆ ಇರುವವರಿಗೆ, ಪಿಟಿಎಸ್‌ಡಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಗೂ ನರವನ್ನು ಶಾಂತಗೊಳಿಸಲು ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ನಿಲ್ಲುತ್ತವೆ ಎನ್ನುತ್ತಾರೆ ತಜ್ಞರು. ಇವು ಒತ್ತಡದ ಸಂದರ್ಭಗಳಲ್ಲಿ ನಮ್ಮ ಗಮನವನ್ನು ಬೇರೆಡೆ ಸೆಳೆಯುವುದರಿಂದ ಆ ಸನ್ನಿವೇಶವನ್ನು ಎದುರಿಸುವುದು ಸುಲಭಗೊಳಿಸುತ್ತದೆ ಎಂಬುದು ಅವರ ವ್ಯಾಖ್ಯಾನ. 

ಸುಖ ನಿದ್ರೆಗಿವು ಬೆಸ್ಟ್ ಫುಡ್

ಫಿಡ್ಜೆಟ್ ಜ್ಯುವೆಲ್ಲರಿ ಹೇಗೆ ಕೆಲಸ ಮಾಡುತ್ತದೆ?

ಅವುಗಳನ್ನು ಧರಿಸಿದರೆ, ಆತಂಕ, ಚಿಂತೆ ಎದುರಾದಾಗೆಲ್ಲ ಮಣಿಗಳನ್ನು ತಿರುಗಿಸುತ್ತಿದ್ದರೆ ತಾತ್ಕಾಲಿಕವಾಗಿ ನಿಮ್ಮ ಗಮನ ಆತಂಕದಿಂದ ಹೊರ ಬರುತ್ತದೆ. ಪೆನ್ನು ಕುಟ್ಟುವುದು, ಕಾಲು ಕುಣಿಸುವುದು ಮುಂತಾದ ತಂತ್ರಗಳಂತೆಯೇ ಫಿಡ್ಜೆಟ್ ಕೂಡಾ ಕೆಲಸ ಮಾಡುತ್ತದೆ. ಇದೀಗ ವೈದ್ಯರೂ ತಮ್ಮ ಪೇಶೆಂಟ್‌ಗಳಿಗೆ ಈ ಆಭರಣ ಬಳಸಲು ಹೇಳುತ್ತಿದ್ದಾರೆ. ಏಕೆಂದರೆ ಅವು ಎಲ್ಲೆಂದರಲ್ಲಿ ಕೆಲಸಕ್ಕೆ ಬರುತ್ತವೆ. ಅಷ್ಟೇ ಅಲ್ಲ, ತಕ್ಷಣಕ್ಕೆ ಸಹಾಯಕ್ಕೆ ಒದಗುತ್ತವೆ. ಇದರ ಹಿಂದೆ ಉತ್ತಮ ವೈಜ್ಞಾನಿಕ ಉದ್ದೇಶವೂ ಇದೆ. ವೈದ್ಯರ ಪ್ರಕಾರ, ನಾವು ಫಿಡ್ಜೆಟ್ ಜ್ಯುವೆಲ್ಲರಿ ಬಳಸಿದಾಗ, ದೇಹದ ಸೆನ್ಸರಿ ಟಚ್ ಪವರ್ ಮೇಲೆ ಅವಲಂಬಿತರಾಗಿ, ಮೆದುಳಿನ ಅಗತ್ಯ ನರಗಳೊಂದಿಗೆ ಮರುಸಂಪರ್ಕ ಸಾಧಿಸುತ್ತೇವೆ. ಇದು ದೇಹವನ್ನು ಶಾಂತಗೊಳಿಸುತ್ತದೆ. ಇದು ಧ್ಯಾನ ಮತ್ತಿತರೆ ಗಮನ ಕೇಳುವ ರಿಲ್ಯಾಕ್ಸಿಂಗ್ ತಂತ್ರಗಳಷ್ಟೇ ಪರಿಣಾಮ ಬೀರುತ್ತದೆ. 

- ಎಡಿಎಚ್‌ಡಿಯಿಂದ ಬಳಲುವ ಮಕ್ಕಳಿಗೆ ಫಿಡ್ಜೆಟ್ ಜ್ಯುವೆಲ್ಲರಿ ಬಹಳ ಲಾಭದಾಯಕ. ಅವರು ದೊಡ್ಡವರಿಗಿಂತ ಸುಲಭವಾಗಿ ಈ ಜ್ಯುವೆಲ್ಲರಿಯನ್ನು ಬಳಸಬಲ್ಲರು. 

- ರಿಲ್ಯಾಕ್ಸೇಶನ್ ಅಭ್ಯಸಿಸಲು ಉತ್ತಮ ವಿಧಾನ

- ಆತಂಕದಿಂದ ಅಂಗೈ, ಅಂಗಾಲು ಬೆವರುವುದು, ಹೃದಯ ಜೋರಾಗಿ ಬಡಿದುಕೊಳ್ಳುವುದು, ಜೋರಾದ ಉಸಿರಾಟ, ಎದೆನೋವು ಮುಂತಾದ ದೈಹಿಕ ಲಕ್ಷಣಗಳು ಕಂಡುಬಂದಾಗ ಫಿಡ್ಜೆಟ್ ಜ್ಯುವೆಲ್ಲರಿಯು ನಿಮಗೆ ರಕ್ಷಣೆ ಹಾಗೂ ನಿಯಂತ್ರಣ ಭಾವ ತಂದುಕೊಡುವುದು. ಇಂಥ ಸಂದರ್ಭಗಳಲ್ಲಿ ಇವನ್ನು ಬಳಸಿಕೊಳ್ಳಬಹುದೆಂಬ ವಿಷಯವೇ ನಿಮ್ಮನ್ನು ಹೆಚ್ಚು ಧೈರ್ಯಶಾಲಿಯಾಗಿಸುತ್ತದೆ. ವರ್ತನಾ ಸಮಸ್ಯೆಗಳಿಗೆ ಇದೊಂದು ಸ್ಟೈಲಿಶ್ ಪರಿಹಾರವಾಗಬಲ್ಲದು. 

Follow Us:
Download App:
  • android
  • ios