ಚುನಾವಣೆ ಹೊತ್ತು ತಂದ ಆತಂಕ; ನಿಭಾಯಿಸುವುದು ಹೇಗೆ?
ಚುನಾವಣೆ, ರಾಜಕೀಯ ಇವೆಲ್ಲವೂ ಹಲವರಲ್ಲಿ ಮಾನಸಿಕ ಒತ್ತಡ, ಆತಂಕಕ್ಕೆ ಕಾರಣವಾಗಬಹುದು. ಅದರಲ್ಲೂ ಈ ಸಾಮಾಜಿಕ ಜಾಲತಾಣಗಳು, ನ್ಯೂಸ್ ಚಾನೆಲ್‌ಗಳು ಚುನಾವಣಾ ಕಾವು ಹೆಚ್ಚಿಸುತ್ತಲೇ ಇವೆ. ಈ ಬಗೆಹರಿಯದ ಟೆನ್ಷನ್ ಕಳೆದುಕೊಳ್ಳುವುದು ಹೇಗೆ?
ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಆದರೆ, ಜನರಿನ್ನೂ ರಾಜಕೀಯ ಚರ್ಚೆಗಳಿಂದ ಹೊರಬಂದಿಲ್ಲ. ಈ ಚರ್ಚೆಗಳು, ತಮ್ಮ ನೆಚ್ಚಿನ ನಾಯಕನ ಸೋಲು, ಅವರ ಮೇಲಿನ ಟ್ರೋಲ್‌ಗಳು, ಸೋಷ್ಯಲ್ ಮೀಡಿಯಾಗಳಲ್ಲಿ ಜಗಳ ಇವೆಲ್ಲವೂ ಹಲವರಲ್ಲಿ ಆತಂಕ, ಖಿನ್ನತೆಯನ್ನು ಹೊತ್ತು ತರುತ್ತವೆ. ಅದರಲ್ಲೂ ನಿಮ್ಮ ಹತ್ತಿರದವರದೂ ನಿಮ್ಮದೂ ರಾಜಕೀಯ ಐಡಿಯಾಲಜಿ ಬೇರೆ ಬೇರೆಯಾಗಿದ್ದರೆ ಒತ್ತಡ ಇನ್ನೂ ಹೆಚ್ಚು. ಇದನ್ನೇ ಪೋಸ್ಟ್ ಎಲೆಕ್ಷನ್ ಸ್ಟ್ರೆಸ್ ಡಿಸಾರ್ಡರ್ ಎನ್ನುವುದು. ಇದನ್ನು ನಿಭಾಯಿಸಲು ಏನು ಮಾಡಬೇಕು?
1. ಚುನಾವಣಾ ಸಂಬಂಧಿ ಸುದ್ದಿಗಳು ಮಿತಿಯಲ್ಲಿರಲಿ
ವ್ಯಕ್ತಿಯ ಸಾಮಾಜಿಕ ಗುರುತು ಅವರು ನಂಬಿರುವ ಸಿದ್ಧಾಂತ, ಬೆಂಬಲಿಸುವ ರಾಜಕೀಯ ನಾಯಕ, ಪಕ್ಷ ಎಲ್ಲವನ್ನೂ ಒಳಗೊಂಡು ರೂಪುಗೊಂಡಿರುತ್ತದೆ. ಯಾವಾಗ ಇವುಗಳಲ್ಲಿ ಯಾವುದಕ್ಕಾದರೂ ಧಕ್ಕೆಯಾಗುತ್ತದೋ ಆಗ ಅದು ಆ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ ಹೆಚ್ಚುತ್ತದೆ. ಇಂಥ ಸಂದರ್ಭದಲ್ಲಿ ಮತ್ತಷ್ಟು ಅವೇ ಸುದ್ದಿಗಳಲ್ಲಿ ಮುಳುಗಿ ತಲೆಗೆ ಮತ್ತಷ್ಟು ಒತ್ತಡ ಕೊಡುವುದು ಜಾಣತನವಲ್ಲ. ಹೀಗಾಗಿ, ಕೆಲ ದಿನಗಳ ಕಾಲ ಫೇಸ್ಬುಕ್, ಟ್ವಿಟ್ಟರ್‌ನಿಂದ ಲಾಗ್‌ಔಟ್ ಆಗಿ. ಏಕೆಂದರೆ ಅಲ್ಲಿಯೇ ರಾಜಕೀಯ ವಿಷಯಗಳು ಟ್ರೋಲ್, ಮೆಮೆ, ವ್ಯಂಗ್ಯ, ನಗೆಪಾಟಲು ಇತ್ಯಾದಿ ರೂಪ ತಾಳಿ ನೆಗೆಟಿವ್ ಆಗಿ ಮನಸಿನ ಮೇಲೆ ಪರಿಣಾಮ ಬೀರುವುದು ಹೆಚ್ಚು. ಫೋನ್‌ನಲ್ಲಿಯೂ ನ್ಯೂಸ್ ಅಲರ್ಟ್‌ಗಳನ್ನು ಡಿಆ್ಯಕ್ಟಿವೇಟ್ ಮಾಡಿ. ವಾಟ್ಸ್‌ಆ್ಯಪ್ ಫಾರ್ವರ್ಡ್ ಸಂದೇಶಗಳು ತಲೆನೋವು ತರಬಹುದು. ಹೀಗಾಗಿ ಒಂದೆರಡು ದಿನದ ಮಟ್ಟಿಗೆ ವಾಟ್ಸಾಪ್ ನೋಟಿಫಿಕೇಶನ್ ಬರದಂತೆ ಸೆಟಿಂಗ್ಸ್ ಮಾಡಿ.
ಬ್ರೆಸ್ಟ್ ಚೆಕ್ ಮಾಡ್ಕೊಳ್ಳಿ: ಕ್ಯಾನ್ಸರ್ ಬಾರದಂತೆ ನೋಡ್ಕೊಳ್ಳಿ!
2. ಚರ್ಚೆಗಳಿಂದ ದೂರವಿರಿ
ರಾಜಕೀಯ ಚರ್ಚೆಗಳು ನಿಮ್ಮಲ್ಲಿ ಆತಂಕ ಹುಟ್ಟುಹಾಕುತ್ತಿವೆ, ಹೀಗಾಗಿ ನಿಮ್ಮೆದುರು ಆ ವಿಷಯ ಚರ್ಚೆ ಬೇಡ ಎಂಬುದನ್ನು ಗೆಳೆಯರು ಹಾಗೂ ಕುಟುಂಬ ಸದಸ್ಯರಿಗೆ ತಿಳಿಸಿ. ಕಚೇರಿಯಲ್ಲಿ ಸಹೋದ್ಯೋಗಿಗಳು ರಾಜಕೀಯ ಚರ್ಚೆ ಮಾಡುವಾಗ ನಿಮ್ಮ ಪಾಡಿಗೆ ನೀವು ಕೆಲಸದಲ್ಲಿ ತೊಡಗಿಸಿಕೊಳ್ಳಿ ಇಲ್ಲವೇ ಕ್ಯಾಂಟೀನ್‌ಗೆ ಕಾಫಿ ಕುಡಿಯಲು ಹೋಗಿಬನ್ನಿ.
3. ನಂಬಿಕೆಯಂತೆ ಮುನ್ನಡೆಯಿರಿ
ಎಲೆಕ್ಷನ್ ವಿಷಯದಿಂದಾಗಿ ರಾತ್ರಿ ನಿದ್ದೆ ಬರುತ್ತಿಲ್ಲ, ಆಯ್ಕೆಯಾದ ಅಭ್ಯರ್ಥಿ ಬಗ್ಗೆ ಅಸಮಾಧಾನದಿಂದ ಚಿಂತೆಗೀಡಾಗಿದ್ದೀರಿ ಎಂದಾದಲ್ಲಿ, ಮೊದಲು ಧ್ಯಾನ ಮಾಡಿ. ಮನಸ್ಸು ಸ್ವಲ್ಪ ತಿಳಿಯಾದ ಬಳಿಕ ಸಮಾಜಕ್ಕಾಗಿ ನೀವೇನು ಮಾಡಬಹುದು ಯೋಚಿಸಿ. ಕೇವಲ ಓಟ್ ಹಾಕಿದರೆ ನಿಮ್ಮ ಕರ್ತವ್ಯ ಮುಗಿಯಲಿಲ್ಲ. ಬದಲಿಗೆ ಸಣ್ಣದಾದರೂ ಸರಿ, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ.
ನಮ್ಮ ದೇಹದ ಅತ್ಯಂತ ಕೊಳಕಾದ ಭಾಗಗಳಿವು!
4. ಯಾವುದೂ ಸ್ಥಿರವಲ್ಲ ಎಂಬುದನ್ನು ನೆನಪಿಡಿ
ಚುನಾವಣಾ ಫಲಿತಾಂಶದ ಬಗ್ಗೆ ನಿಮಗೆ ಸಂತೋಷವಿಲ್ಲ ಎಂದಾದಲ್ಲಿ, ಯಾವುದೂ ನಿಮ್ಮ ಕೈಯಲ್ಲಿಲ್ಲ ಎಂಬುದನ್ನು ಹೇಳಿಕೊಳ್ಳಿ. ಇಷ್ಟಕ್ಕೂ ಈ ಅಭ್ಯರ್ಥಿಗಳು, ಫಲಿತಾಂಶ ಯಾವುದೂ ಸ್ಥಿರವಲ್ಲ. ಎಲ್ಲಕ್ಕೂ ಟೈಂ ಲಿಮಿಟ್ ಇದೆ ಎಂಬುದು ನೆನಪಿರಲಿ. ನಿಮ್ಮ ಹತ್ತಿರದವರು ಎಲೆಕ್ಷನ್ ಸುದ್ದಿಗೆ ಪ್ರತಿಕ್ರಿಯಿಸುತ್ತಿರುವ ರೀತಿ ಇಷ್ಟವಾಗುತ್ತಿಲ್ಲವೆಂದಾದಲ್ಲಿ, ನೀವು ಅವರನ್ನು ರಾಜಕೀಯ ಕಾರಣಕ್ಕಾಗಿ ಪ್ರೀತಿಸುತ್ತಿರುವುದು ಅಲ್ಲ ಎಂಬುದು ಗೊತ್ತಿರಲಿ. ನಿಮ್ಮಿಂದ ಬದಲಾಯಿಸಲಾಗದ ರಾಜಕೀಯ ಕಾರಣಗಳಿಗಾಗಿ ಪ್ರೀತಿಪಾತ್ರರನ್ನು ದೂರ ಮಾಡಿಕೊಳ್ಳಬೇಡಿ.