ಸಾಮಾಜಿಕ ಮಾಧ್ಯಮದ ಐಷಾರಾಮಿ ಪ್ರದರ್ಶನ ಯುವಜನರಲ್ಲಿ ಮನಿ ಡಿಸ್ಮಾರ್ಫಿಯಾ ಹೆಚ್ಚಿಸುತ್ತಿದೆ. ದುಬಾರಿ ಜೀವನಶೈಲಿ ಅನುಕರಿಸುವ ಒತ್ತಡದಿಂದಾಗಿ ಅತಿಯಾದ ಖರ್ಚು, ಸಾಲದ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಲೋ ಬಜೆಟಿಂಗ್ ಜನಪ್ರಿಯವಾಗುತ್ತಿದ್ದು, ಮಿತವ್ಯಯದ ಮೂಲಕ ಆರ್ಥಿಕ ಸ್ಥಿರತೆ ಸಾಧಿಸಲು ಪ್ರೋತ್ಸಾಹಿಸುತ್ತಿದೆ.

ಸೋಶಿಯಲ್ ಮೀಡಿಯಾ ಕೂಡ ರೋಗವಾಗಿ ಮಾರ್ಪಟ್ಟಿ ಬಹಳ ವರ್ಷಗಳೇ ಕಳೆದಿವೆ. ಇದು ಕೆಲವರಿಗೆ ವರದಾನವಾದರೆ, ಮತ್ತೆ ಕೆಲವರಿಗೆ ಶಾಪವಾಗಿದೆ. ಇತ್ತೀಚಿನ ದಿನಗಳಲ್ಲಂತೂ ಯುವ ಪೀಳಿಗೆ ಬಿಡಿ, ವಯಸ್ಕರ ಬಾಯಿಯಲ್ಲೂ ಇದರ ಬಗ್ಗೆಯೇ ಮಾತು ಮಾತು. ನೀವು ಇನ್‌ಸ್ಟ್ರಾಗ್ರಾಮ್ (Instagram viral) ಮತ್ತು ಫೇಸ್‌ಬುಕ್ (Facebook Post) ತೆರೆದರೆ ಸಾಕು ದುಬಾರಿ ಕಾರುಗಳಲ್ಲಿ ಸುತ್ತಾಡುವ ಜನರನ್ನು ಮತ್ತು ದೊಡ್ಡ ಮನೆಗಳಲ್ಲಿ ವಾಸಿಸುವ ಜನರ ಜೀವನವನ್ನು ಮಾತ್ರ ಕಾಣಲು ಸಾಧ್ಯ. ಇದನ್ನೆಲ್ಲಾ ನೋಡಿದ ಹೆಚ್ಚಿನ ಜನರಿಗೆ ಇದೇ ರೀತಿಯ ಜೀವನವನ್ನು ನಡೆಸಲು ಬಯಕೆಯಾಗುವುದು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೋರಿಸುವ ಇಂತಹ ಗ್ಲಾಮರ್ ಟ್ರೆಂಡ್ ನಿಂದ ಯುವಕರಲ್ಲಿ ಮನಿ ಡಿಸ್ಮಾರ್ಫಿಯಾದಂತಹ( Money Dysmorphia) ಸಮಸ್ಯೆಗಳು ಹೆಚ್ಚುತ್ತಿವೆ. ಇದರಿಂದ ಯಾವುದೇ ಯುವಕ/ಯುವತಿಗೆ ತನ್ನ ಖರ್ಚುಗಳನ್ನು ಅರ್ಥಮಾಡಿಕೊಳ್ಳಲು ಸಹ ಸಾಧ್ಯವಾಗದ ಹಂತ ತಲುಪಿ ಒಂದರ ನಂತರ ಒಂದರಂತೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಹೋಗುತ್ತಾರೆ. ಇದನ್ನು ಸಕಾಲದಲ್ಲಿ ನಿಯಂತ್ರಿಸದಿದ್ದರೆ, ಅದು ತುಂಬಾ ಗಂಭೀರ ಸಮಸ್ಯೆಯಾಗಬಹುದು ಎಂಬುದರಲ್ಲಿ ಸಂದೇಹವಿಲ್ಲ. 

ಏನಿದು ಮನಿ ಡಿಸ್ಮಾರ್ಫಿಯಾ?
ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ತೋರಿಸಿರುವಂತೆ ಅದಕ್ಕೆ ಹೊಂದಿಕೆಯಾಗುವಂತೆ ನಿಮ್ಮ ಅಭ್ಯಾಸಗಳು ಮತ್ತು ಆದರ್ಶಗಳನ್ನು ಬದಲಾಯಿಸಲು ಬಯಸಿದಾಗ ಮನಿ ಡಿಸ್ಮಾರ್ಫಿಯಾಕ್ಕೆ ಬಲಿಯಾಗಿದ್ದೀರಿ ಎಂದರ್ಥ. ಉದಾಹರಣೆಗೆ ಇಟಲಿಯಲ್ಲಿ ರಜೆ ಕಳೆಯುವುದು, ಐಷಾರಾಮಿ ಗಡಿಯಾರ ಧರಿಸುವುದು ಅಥವಾ ಟೇಲರ್ ಸ್ವಿಫ್ಟ್ ಪ್ರದರ್ಶನದಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವುದು ಕೂಡ ಇದೆಲ್ಲಾ ಈ ಪಟ್ಟಿಯಲ್ಲಿರುತ್ತದೆ. ಇವೆಲ್ಲಕ್ಕೂ ನಿಮ್ಮ ಬಳಿ ಹಣವಿಲ್ಲದಿದ್ದರೂ ಸಹ ಸಾಮಾಜಿಕ ಮಾಧ್ಯಮವು ಕ್ರಿಯೇಟ್ ಮಾಡಿರುವ ಆದರ್ಶ ಜೀವನವನ್ನು ನೀವು ನಡೆಸುತ್ತಿದ್ದೀರಿ ಎಂದು ತೋರಿಸಿಕೊಳ್ಳಲು ಪ್ರಾರಂಭಿಸುವಿರಿ.

ಐಷಾರಾಮಿ ಜೀವನಶೈಲಿಯತ್ತ ಆಕರ್ಷಣೆ 
2013ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿಯೇ ಹಲವು ಪ್ರಮುಖ ವಿಷಯಗಳು ಬಹಿರಂಗಗೊಂಡವು. ಇವರಲ್ಲಿ 59%- 45% ಜನರು ತಮ್ಮ ಹಣದ ಗುರಿಗಳ ಬಗ್ಗೆ ತಿಳಿದಿಲ್ಲ ಅಥವಾ ಅವುಗಳನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಇನ್‌ಸ್ಟ್ರಾಗ್ರಾಮ್. ಹೌದು ಇನ್ಸ್ಟಾಗ್ರಾಂ ಅವರನ್ನು ಐಷಾರಾಮಿ ಜೀವನಶೈಲಿಯತ್ತ ಆಕರ್ಷಿಸಿದೆ. ಇದರಿಂದಾಗಿ ಯುವ ಪೀಳಿಗೆಯ ಆರ್ಥಿಕ ಆಕಾಂಕ್ಷೆಗಳು ಬದಲಾಗಿವೆ. ಆಕ್ಸೈಜೆನ್ ಫೈನಾನ್ಶಿಯಲ್‌ ಸಿಇಒ ಟೆಡ್ ಜೆಂಕಿನ್ ಪ್ರಕಾರ, ಯುವಜನರು ಮನಬಂದಂತೆ ರಜೆಗಳು, ಡಿಸೈನರ್ ಬ್ಯಾಗ್‌ಗಳು ಮತ್ತು ಸಂಪೂರ್ಣ ಸುಸಜ್ಜಿತ ಅಡುಗೆಮನೆಗಳಂತಹ ಐಷಾರಾಮಿ ವಸ್ತುಗಳ ಹಿಂದೆ ಓಡುವಂತೆ ಒತ್ತಾಯಿಸುತ್ತಿರುವುದು ಸಾಮಾಜಿಕ ಮಾಧ್ಯಮ. ಈ ಒತ್ತಡದಿಂದಾಗಿ ಇಂದಿನ ಯುವಕರು ಮನಿ ಡಿಸ್ಮಾರ್ಫಿಯಾದಂತಹ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. 

ಹೆಚ್ಚಿನ ಹಣವಿದೆ ಎಂಬಂತೆ ನಟನೆ 
ಈ ಅಧ್ಯಯನವು ಇನ್ನೊಂದು ವಿಷಯವನ್ನು ಬಹಿರಂಗಪಡಿಸುತ್ತದೆ. ಅನೇಕ ಬಾರಿ ಯುವಕರು ತಮ್ಮ ಜೇಬಿನಲ್ಲಿ ಮತ್ತು ಬ್ಯಾಂಕ್ ಖಾತೆಗಳಲ್ಲಿ ಹೆಚ್ಚಿನ ಹಣವಿದೆ ಎಂದು ನಟಿಸಲು ಪ್ರಾರಂಭಿಸುತ್ತಾರೆ. ಆರ್ಥಿಕ ಸ್ಥಿರತೆ ಸಾಧಿಸುವ ಮೊದಲೇ ಎಲ್ಲರೂ ಪ್ರಪಂಚದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಸುತ್ತಾಡಲು ಪ್ರಾರಂಭಿಸುತ್ತಾರೆ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಲ್ ಝಡ್ ( 1997 ಮತ್ತು 2012 ರ ನಡುವೆ ಜನಿಸಿದ ವ್ಯಕ್ತಿಗಳು) 2024ರಿಂದ ಹೊಸ ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಅವರು ಈಗ ಲೋ ಬಜೆಟಿಂಗ್‌ನಂತಹ ಆಯ್ಕೆಗಳತ್ತ ಗಮನಹರಿಸಲು ಪ್ರಾರಂಭಿಸಿದ್ದಾರೆ. 

ಬಂತು ಲೋ ಬಜೆಟಿಂಗ್
ಹೆಚ್ಚು ಹಣ ಖರ್ಚು ಮಾಡುವುದರ ವಿರುದ್ಧದ ಅಭಿಯಾನವೇ ಲೌಡ್ ಬಜೆಟಿಂಗ್. ಇದು ಜನರು ಸಾಮಾಜಿಕ ಒತ್ತಡಕ್ಕೆ ಬಲಿಯಾಗದಂತೆ ಮತ್ತು ದುಬಾರಿ, ಐಷಾರಾಮಿ ಜೀವನದ ಪ್ರಲೋಭನೆಗೆ ಬಲಿಯಾಗದಂತೆ ಮತ್ತು ಬುದ್ಧಿವಂತಿಕೆಯಿಂದ ಜೀವನ ಕಳೆಯುವಂತೆ ಜನರಲ್ಲಿ ತಿಳುವಳಿಕೆಯನ್ನು ಬೆಳೆಸುತ್ತದೆ. ಟಿಕ್‌ಟಾಕ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ಲೌಡ್ ಬಜೆಟಿಂಗ್ ಮಾಡುವುದನ್ನು ಪ್ರಚಾರ ಮಾಡಲಾಗುತ್ತಿದೆ. ಈ ಕಲ್ಪನೆಯು ಯುವಜನರನ್ನು ತಲುಪುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ ಈ ವಿಧಾನವು ಪೀಳಿಗೆಯನ್ನು ಸಾಮಾಜಿಕ ಒತ್ತಡದಿಂದ ರಕ್ಷಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.