ಇದು ವಿಚಿತ್ರ ಅಲ್ಲ, ಇದೊಂದು ವಿಶಿಷ್ಟ ಮದುವೆ| ಮಗಳ ಕನ್ಯಾದಾನ ಮಾಡಲೊಪ್ಪದ ತಂದೆ| ಕನ್ಯಾದಾನ ಮಾಡದೇ ಮದುವೆ ಮಾಡಿಕೊಟ್ಟ ಅಪ್ಪ| ದಾನ ಮಾಡಲು ಮಗಳು ಆಸ್ತಿಯಲ್ಲ ಎಂದ ಫಾದರ್| ಮಹಿಳಾ ಪುರೋಹಿತರಿಂದಲೇ ಮಂತ್ರಘೋಷ| ಕೋಲ್ಕತ್ತಾದಲ್ಲಿ ನಡೆದ ಈ ವಿಶಿಷ್ಟ ಮದುವೆ ಇದೀಗ ಇಂಟರ್ನೆಟ್ ಸನ್ಸೇಶನ್
ಕೋಲ್ಕತ್ತಾ(ಫೆ.06): ಮುದ್ದು ಮಗಳ ತಂದೆಯಾದವನಿಗೆ ಆಕೆಯ ಮದುವೆ ಸಂದರ್ಭದಲ್ಲಿ ಕನ್ಯಾದಾನ ಮಾಡುವುದು ಅತ್ಯಂತ ಕಷ್ಟದ ಕೆಲಸ. ಮುದ್ದಾಗಿ ಸಾಕಿ ಸಲುಹಿದ ಮಗಳನ್ನು, ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಕಂದಮ್ಮಳನ್ನು ಬೀಳ್ಕೊಡುವುದು ತಂದೆಗೆ ಅಷ್ಟು ಸುಲಭವಲ್ಲ.
ಮಗಳ ಮದುವವೆಯಲ್ಲಿ ನೆಂಟರಿಂದ ಹಿಡಿದು ಅಡುಗೆವರೆಗೂ, ಛತ್ರದಿಂದ ಹಿಡಿದು ಮಂತ್ರದವರೆಗೂ ಜವಾಬ್ದಾರಿ ವಹಿಸಿಕೊಳ್ಳುವ ತಂದೆ, ಕನ್ಯಾದಾನ ಸಮಯದಲ್ಲಿ ಮಾತ್ರ ಅಧೀರನಾಗಿ ಬಿಡುತ್ತಾನೆ. ಮಗಳು ಕೆಲವೇ ಕ್ಷಣಗಳಲ್ಲಿ ದೂರವಾಗುತ್ತಾಳೆ ಎಂಬ ಭಾವನೆಯೇ ಆತನನ್ನು ಅಧೀರನನ್ನಾಗಿಸುತ್ತದೆ.
ಆದರೆ ಕಾಲ ಬದಲಾಗಿದೆ. ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂಬುದೆಲ್ಲಾ ಇದೀಗ ಮಾನ್ಯತೆ ಕಳೆದುಕೊಂಡಿವೆ. ಮದುವೆಯಾದರೇನಂತೆ ಕರುಳ ಸಂಬಂಧವನ್ನು ಕಡಿದುಕೊಳ್ಳುವುದು ಯಾವ ನ್ಯಾಯ ಎಂದು ಕೇಳುತ್ತಿದೆ ಇಂದಿನ ಆಧುನಿಕ ಮಹಿಳಾ ಸಮಾಜ.
ಅದರಂತೆ ಕೋಲ್ಕತ್ತಾದಲ್ಲಿ ನಡೆದ ವಿಶಿಷ್ಟ ಮದುವೆ ಇದಕ್ಕೆ ಪುಷ್ಠಿ ಒದಗಿಸಿದೆ. ಮದುವೆಯಲ್ಲಿ ಕನ್ಯಾದಾನ ಮಾಡಲೊಪ್ಪದ ತಂದೆ, ‘ದಾನ ಮಾಡಲು ನನ್ನ ಮಗಳೇನು ಆಸ್ತಿಯಲ್ಲ..’ಎಂದಿರುವ ತಂದೆ, ಕನ್ಯಾದಾನ ಮಾಡದೇ ಮಗಳ ಮದುವೆ ಮಾಡಿ ಮುಗಿಸಿದ್ದಾರೆ.
ಅಷ್ಟೇ ಅಲ್ಲ ಮಗಳ ಮದುವೆಗೆ ಮಹಿಳಾ ಪುರೋಹಿತರನ್ನಷ್ಟೇ ಕರೆಸಿ ಶಾಸ್ತ್ರೋಕ್ತವಾಗಿ ಮಗಳ ಮದುವೆ ಮಾಡಿದ್ದಾರೆ ಈ ತಂದೆ. ಮಗಳ ಕನ್ಯಾದಾನ ಮಾಡದೇ ಅಚ್ಚುಕಟ್ಟಾಗಿ ಮದುವೆ ಮಾಡಿ ಕೊಟ್ಟಿರುವುದು ಮಗಳ ಮೇಲಿನ ತಂದೆಯ ಪ್ರೀತಿಗೆ ಸಾಕ್ಷಿ.
ಆಸ್ಮಿತಾ ಘೋಷ್ ಎಂಬುವವರು ಟ್ವಿಟ್ವರ್ ನಲ್ಲಿ ಶೇರ್ ಮಾಡಿದ ಈ ಪೋಸ್ಟ್ ಗೆ ಇದುವರೆಗೂ 2,300 ಲೈಕ್ಸ್ ಗಳು ಬಂದಿದ್ದು, ಸಾವಿರಾರು ಜನ ಕಮೆಂಟ್ ಮಾಡುವ ಮೂಲಕ ತಂದೆಗೆ ಸಲಾಂ ಹೇಳಿದ್ದಾರೆ.
