ಆಯುರ್ವೇದ ಎಂಬುದು ಜೀವನವಿಧಾನ ಮಾತ್ರವಲ್ಲ, ಅದು ವಿಜ್ಞಾನ ಕೂಡಾ. ಇದು ಕಾಯಿಲೆಗಳ ವಿರುದ್ಧ ಚಿಕಿತ್ಸಾತ್ಮಕ ಹಾಗೂ ಮುಂಜಾಗೃತಾ ಕ್ರಮಗಳ ಕಡೆ ಗಮನ ಹರಿಸುವುದರೊಂದಿಗೆ ದೇಹವನ್ನು ಒಳಗಿನಿಂದ ಶುದ್ಧಿಗೊಳಿಸುವ ಹಾಗೂ ನವಚೈತನ್ಯ ಕಾಯ್ದಿರಿಸುವ ಕೆಲಸವನ್ನೂ ಮಾಡುತ್ತದೆ. ಈ ಆಯುರ್ವೇದದ ಪ್ರಮುಖ ಚಿಕಿತ್ಸೆಯಾದ ಪಂಚಕರ್ಮ ಚಿಕಿತ್ಸೆಯು ದೇಹ, ಮನಸ್ಸು ಹಾಗೂ ಆತ್ಮವನ್ನು ಸಮತೋಲನವಾಗಿ ಕಾಪಾಡುವ ಗುರಿ ಹೊಂದಿದೆ. ಇದು ಕೇವಲ ರೋಗಿಗಳಲ್ಲದೆ ಆರೋಗ್ಯವಂತರು ಕೂಡಾ ಪಡೆಯಬಹುದಾದ ಚಿಕಿತ್ಸೆ. ದೇಹದಿಂದ ಟಾಕ್ಸಿನ್ಸ್ ಹೊರತೆಗೆದು, ಕಟ್ಟಿಕೊಂಡ ನಾಳಗಳನ್ನು ಸ್ವಚ್ಛತೆ, ಜೀರ್ಣಕ್ರಿಯೆ ಸರಾಗ, ಮೆಟಾಬಾಲಿಸಂ ಹೆಚ್ಚಳ, ತೂಕ ಇಳಿಕೆ, ಒತ್ತಡ ಶಮನ, ರೋಗ ನಿರೋಧಕ ಶಕ್ತಿ ಹೆಚ್ಚಳ ಮುಂತಾದ ಆರೋಗ್ಯ ಲಾಭಗಳು ಪಂಚಕರ್ಮದಿಂದ ಸಿಗುತ್ತವೆ. 

ಪಂಚಕರ್ಮ ಚಿಕಿತ್ಸೆ ಎಂದರೇನು?
ಐದು ಚಿಕಿತ್ಸೆಗಳ ಒಂದು ಸೆಟ್ ಆಗಿರುವ ಪಂಚಕರ್ಮವು ದೇಹದಿಂದ ವಿಷಕಾರಕಗಳನ್ನು ಹೊರತೆಗೆಯುವ ಕೆಲಸ ಮಾಡುತ್ತದೆ. ಆಯುರ್ವೇದದ ಪ್ರಕಾರ, ಯಾವುದೇ ಥೆರಪಿ ನೀಡುವ ಮುನ್ನ, ದೇಹವನ್ನು ಒಳಗಿನಿಂದ ಶುದ್ಧಗೊಳಿಸುವುದು ಅಗತ್ಯ. ಪಂಚಕರ್ಮ ಚಿಕಿತ್ಸೆಯನ್ನು ಎರಡು ಭಾಗಗಳಾಗಿ ಮಾಡಿದ್ದಾರೆ. 

ಓಲಿಯೇಶನ್ ಹಾಗೂ ಫರ್ಮೆಂಟೇಶನ್
ಓಲಿಯೇಶನ್‌ನಲ್ಲಿ ಸಸ್ಯಜನ್ಯ ಹಾಗೂ ಮಿನರಲ್ ವಸ್ತುಗಳಿಂದ ತಯಾರಿಸಿದ ವಿವಿಧ ತೈಲಗಳನ್ನು ದೇಹಕ್ಕೆ ಹಚ್ಚಲಾಗುತ್ತದೆ.  ಎಣ್ಣೆಯೊಂದೇ  ಅಲ್ಲದೆ, ತುಪ್ಪವನ್ನೂ ದೇಹಕ್ಕೆ ಹಚ್ಚಲಾಗುತ್ತದೆ. ಈ ಹರ್ಬಲ್ ತೈಲ ಹಾಗೂ ತುಪ್ಪವು ದೇಹದ ಒಳಭಾಗಗಳಿಗೆ ತಲುಪಿ ಕೋಶಗಳಲ್ಲಿ ಕುಳಿತ ಟಾಕ್ಸಿನ್ಸ್ ಹೊರದಬ್ಬಲು ಸಹಾಯ ಮಾಡುತ್ತವೆ. 
ಫರ್ಮಂಟೇಶನ್ ಥೆರಪಿಯಲ್ಲಿ ಬೆವರಿನ ಮೂಲಕ ಟಾಕ್ಸಿನ್ಸ್ ಹೊರ ಹಾಕಲಾಗುತ್ತದೆ. ಮೊದಲಿಗೆ ತೈಲ ಬಳಸಿ ಅಂಗಾಶಗಳನ್ನು ಮೃದುಗೊಳಿಸಲಾಗುತ್ತದೆ.  ಫರ್ಮೆಂಟೇಶನ್ ವಿಧಾನದಿಂದ ಅವುಗಳು ಮತ್ತಷ್ಟು ಸಾಫ್ಟ್ ಆಗುತ್ತವೆ. ಈ ಎರಡು ತತ್ವಗಳನ್ನು ಕೆಲ ಥೆರಪಿಗಳ ಮೂಲಕ ಅಳವಡಿಸಲಾಗುತ್ತದೆ. ಅವುಗಳೆಂದರೆ,

ನೆಮ್ಮದಿ ಅರಸಿ ಭಾರತಕ್ಕೆ ಬಂದ ರಷ್ಯಾ ನಟಿ

ಅಭ್ಯಂಗ
ಅಭ್ಯಂಗ ಎಂದರೆ ಎಣ್ಣೆಯ ಮಜ್ಜನ. ಅಭ್ಯಂಗದಲ್ಲಿ ಹರ್ಬಲ್ ಹಾಗೂ ಮಿನರಲ್ ಎಣ್ಣೆಗಳನ್ನು ಬಳಸಿ ದೇಹಕ್ಕೆ ಮಸಾಜ್ ಮಾಡಲಾಗುತ್ತದೆ. ಇದು ಇಡೀ ದೇಹಕ್ಕೆ ಇಲ್ಲವೇ ಕೆಲವೇ ಅಂಗಗಳಿಗೆ - ಅಗತ್ಯಕ್ಕೆ ತಕ್ಕಂತೆ ಮಾಡಲಾಗುತ್ತದೆ. ಇದು ದೇಹದ ವಾತ ದೋಷ ತೊಲಗಿಸುವಲ್ಲಿ ಸಹಾಯ ಮಾಡುತ್ತದೆ.  

ಶಿರೋಧಾರಾ
ಈ ಥೆರಪಿಯು ತಲೆಯ ಭಾಗದ ಸಮಸ್ಯೆಗಳನ್ನು ನಿವಾರಿಸುವ ಗುರಿ ಹೊಂದಿದೆ. ಈ ಚಿಕಿತ್ಸೆಯಲ್ಲಿ ಹಣೆಯ ಮಧ್ಯೆ ಭಾಗಕ್ಕೆ ಬೆಚ್ಚಗಿನ ಎಣ್ಣೆಯನ್ನು ಒಂದೇ ವೇಗ ಹಾಗೂ ಉಷ್ಣತೆಯಲ್ಲಿ ಸುರಿಯಲಾಗುತ್ತದೆ. ಸುಮಾರು 30-60 ನಿಮಿಷಗಳ ಕಾಲ ಶಿರೋಧಾರಾ ನಡೆಸಲಾಗುತ್ತದೆ. 

ಅಭ್ಯಂಗ ಸ್ನಾನ: ಮಗುವಾದ ತೀರ್ಥರ ನೋಡಿ ಪಾವನರಾಗಿ

ತೈಲಧಾರಾ
ಈ ಚಿಕಿತ್ಸೆಯು ಸ್ನಾಯು, ಗಂಟುಗಳು ಹಾಗೂ ನರಸಂಬಂಧಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಎತ್ತಿದ ಕೈ.  ಪಾರ್ಶ್ವ ವಾಯು ಸಮಸ್ಯೆ ,ಲೈಂಗಿಕ ದೌರ್ಬಲ್ಯ, ದೇಹದ ನೋವುಗಳಿಗೆ ತೈಲ ಧಾರಾ ಬಳಸಲಾಗುತ್ತದೆ. ಈ ಥೆರಪಿಯಲ್ಲಿ ಬಿಸಿಯಾದ ಎಣ್ಣೆಯನ್ನು ದೇಹಕ್ಕೆ ಹೊಯ್ಯುತ್ತಾ, ಮೃದುವಾದ ಮಸಾಜ್ ಮಾಡುತ್ತಾ, ಒಂದು ರಿದಂನಲ್ಲಿ ಬೆರಳಾಡಿಸುತ್ತಾರೆ. 

ಪೊತಾಲಿ ಮಸಾಜ್
ಈ ಚಿಕಿತ್ಸೆಗೆ ಸಸ್ಯೌಷಧಗಳನ್ನೊಳಗೊಂಡ ಸಣ್ಣ ಬ್ಯಾಗನ್ನು ಬಳಸಲಾಗುತ್ತದೆ. ಬ್ಯಾಗನ್ನು ಮೊದಲು ಬೆಚ್ಚಗಿನ ಎಣ್ಣೆಯಲ್ಲಿ ಕೆಲ ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಅದರಿಂದ ಮಸಾಜ್ ಮಾಡಲಾಗುತ್ತದೆ. ಮೈಕೈ ನೋವು ನಿವಾರಿಸಿ, ಒತ್ತಡ ತಗ್ಗಿಸಿ, ದೇಹವನ್ನು ಚೈತನ್ಯಗೊಳಿಸಲು ಇದು ಉತ್ತಮ ವಿಧಾನ.