Workplace burnout: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಘಟನೆಯು, ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸದ ಒತ್ತಡ ಮತ್ತು ವೈಯಕ್ತಿಕ ಆರೋಗ್ಯದ ನಡುವಿನ ಸಂಘರ್ಷವನ್ನು ಬಿಂಬಿಸುತ್ತದೆ. ತೀವ್ರ ಕೆಲಸದ ಹೊರೆಯಿಂದ ಬೇಸತ್ತ ಉದ್ಯೋಗಿಯೊಬ್ಬರು ಪ್ರಮುಖ ಪ್ರಾಜೆಕ್ಟ್ ನಡೆಯುತ್ತಿದ್ದರೂ ರಾಜೀನಾಮೆ ನೀಡಲು ನಿರ್ಧರಿಸಿದಾಗ, ಮ್ಯಾನೇಜರ್ ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ..

ಇಂದಿನ ಧಾವಂತದ ಜಗತ್ತಿನಲ್ಲಿ ಕೆಲಸದ ಒತ್ತಡ (Burnout) ಎನ್ನುವುದು ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಮಸ್ಯೆ. ಈ ನಡುವೆ, ರಾಜೀನಾಮೆ ನೀಡಲು ನಿರ್ಧರಿಸಿದ ಉದ್ಯೋಗಿಯೊಬ್ಬರು ತನ್ನ ಬಾಸ್‌ಗೆ ನೀಡಿದ ಮರುಉತ್ತರವು ಇಡೀ ಕಾರ್ಪೊರೇಟ್ ಜಗತ್ತಿಗೆ ಕನ್ನಡಿ ಹಿಡಿಯುವಂತಿದೆ.

ಏನಿದು ಘಟನೆ?

ಅದಾಗಲೇ ಕೆಲಸದ ಹೊರೆಯಿಂದ ಆ ಉದ್ಯೋಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತರಾಗಿದ್ದರು. ಅಂದಹಾಗೆ ತಂಡವು ಒಂದು ಪ್ರಮುಖ ಪ್ರಾಜೆಕ್ಟ್‌ನ ಮಧ್ಯದಲ್ಲಿರುವಾಗಲೇ ಉದ್ಯೋಗಿಯು ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಇದು ಮ್ಯಾನೇಜರ್‌ನಲ್ಲಿ ಅಸಮಾಧಾನ ಮತ್ತು ಆತಂಕ ಮೂಡಿಸಿತು.

ಕಚೇರಿಯಲ್ಲಿ ನಡೆದ ಸಂಭಾಷಣೆ ಇಂತಿದೆ...

ಸಮಯದ ಪ್ರಶ್ನೆ: ರಾಜೀನಾಮೆ ನೀಡಿದಾಗ ಮ್ಯಾನೇಜರ್ ಮೊದಲು ಹೇಳಿದ್ದೇ ಸಮಯದ ಬಗ್ಗೆ. "ಈಗಾಗಲೇ ಪ್ರಮುಖ ಕೆಲಸಗಳು ನಡೆಯುತ್ತಿವೆ, ಈಗ ಹೋಗುವುದು ಸರಿಯಲ್ಲ" ಎಂದು ತಿಳಿಸಿದರು. ಆದರೆ ಆ ಉದ್ಯೋಗಿಗೆ ತನ್ನ ಸುಸ್ತು ಭರಿಸಲಾಗದ ಮಟ್ಟಕ್ಕೆ ತಲುಪಿತ್ತು.

ಹೊಸಬರ ನೆಪ: "ನಿಮ್ಮ ಜಾಗಕ್ಕೆ ಬೇರೆಯವರು ಬರುವವರೆಗಾದರೂ ಇರಿ" ಎಂದು ಮ್ಯಾನೇಜರ್ ಕೇಳಿಕೊಂಡರು. ಆದರೆ ಒಮ್ಮೆ ದೃಢ ನಿರ್ಧಾರ ಮಾಡಿದ್ದ ಉದ್ಯೋಗಿ ಅದಕ್ಕೆ ಮಣಿಯಲಿಲ್ಲ.

ಜವಾಬ್ದಾರಿಯ ಪಾಠ: ಕರ್ತವ್ಯದ ಬಗ್ಗೆ ಬಾಸ್ ಮಾತನಾಡಿದಾಗ, ಆ ಉದ್ಯೋಗಿ ಒಂದು ದೊಡ್ಡ ಸತ್ಯವನ್ನು ನೆನಪಿಸಿದರು. ಕೆಲಸ ಮಾಡುವುದು ಎಷ್ಟು ಜವಾಬ್ದಾರಿಯೋ, ನಮ್ಮ ಸ್ವಂತ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ದೊಡ್ಡ ಜವಾಬ್ದಾರಿ.

ಕೆಲಸದ ಹೊರೆ ಇಳಿಸುವ ಆಮಿಷ: ಹೇಗಾದರೂ ಮಾಡಿ ಉದ್ಯೋಗಿಯನ್ನ ಉಳಿಸಿಕೊಳ್ಳಲು ಮ್ಯಾನೇಜರ್ ಕೆಲಸದ ಹೊರೆಯನ್ನು ಕಡಿಮೆ ಮಾಡುವ ಭರವಸೆ ನೀಡಿದರು. ಆದರೆ ಹದಗೆಟ್ಟ ಆರೋಗ್ಯವನ್ನು ಇಂತಹ ಸಣ್ಣ ಬದಲಾವಣೆಗಳಿಂದ ತಕ್ಷಣ ಸರಿಪಡಿಸಲು ಸಾಧ್ಯವಿಲ್ಲ ಎಂದು ಆ ಉದ್ಯೋಗಿ ಸ್ಪಷ್ಟಪಡಿಸಿದರು.

ಕೊನೆಗೆ ಎಲ್ಲರನ್ನೂ ಮೌನವಾಗಿಸಿದ ಆ ಒಂದು ಮಾತು

ಹೌದು. ಆ ಉದ್ಯೋಗಿ ಬಾಸ್ ಎದುರು ಒಂದು ಪ್ರಶ್ನೆ ಇಟ್ಟರು: "ಸರ್, ನೀವು ನನ್ನ ಜಾಗಕ್ಕೆ ಮೂರೇ ದಿನದಲ್ಲಿ ಹೊಸಬರನ್ನು ಕೆಲಸಕ್ಕೆ ತರಬಹುದು, ಆದರೆ ಈ ಕೆಲಸದ ಒತ್ತಡದಿಂದ ನನ್ನ ಆರೋಗ್ಯ ಹಾಳಾದರೆ ಅದನ್ನು ಸರಿಪಡಿಸಲು ಯಾರಿಂದ ಸಾಧ್ಯ?". ಈ ಮಾತು ಇಡೀ ಕಚೇರಿಯಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿತು.

ಈ ಘಟನೆಯು ನಮಗೆ ಕೆಲವು ಕಟು ಸತ್ಯಗಳನ್ನು ಕಲಿಸುತ್ತದೆ:

ಬದಲೀ ವ್ಯವಸ್ಥೆ: ಯಾವುದೇ ಕಂಪನಿಗೆ ಉದ್ಯೋಗಿ ಅನಿವಾರ್ಯವಲ್ಲ, ಅಲ್ಲಿ ಯಾವಾಗಲೂ ಮತ್ತೊಬ್ಬರು ಬಂದೇ ಬರುತ್ತಾರೆ.
ಆರೋಗ್ಯಕ್ಕೆ ಪರ್ಯಾಯವಿಲ್ಲ: ಆದರೆ ನಮ್ಮ ದೇಹ ಮತ್ತು ಮನಸ್ಸಿಗೆ ಯಾವುದೇ ಬದಲೀ ವ್ಯವಸ್ಥೆ ಇಲ್ಲ. ಒಮ್ಮೆ ಆರೋಗ್ಯ ಕೆಟ್ಟರೆ ಅದನ್ನು ಸರಿಪಡಿಸುವುದು ಬಹಳ ಕಷ್ಟ.
ನಿಮ್ಮ ಮಿತಿ ಅರಿಯಿರಿ: ಅತಿಯಾದ ಕೆಲಸದ ನಡುವೆ ವಿಶ್ರಾಂತಿಯ ಅಗತ್ಯವನ್ನು ಗುರುತಿಸುವುದು ದೌರ್ಬಲ್ಯವಲ್ಲ, ಅದು ಬದುಕಿನ ಅನಿವಾರ್ಯತೆ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಕೆಲಸವು ಜೀವನದ ಭಾಗವಾಗಬೇಕೇ ಹೊರತು, ಕೆಲಸವೇ ಜೀವನವಾಗಬಾರದು" ಎಂಬ ಸಂದೇಶವನ್ನು ಸಾರುತ್ತಿದೆ.

ಕೆಲಸದ ಒತ್ತಡ ತಾಳಲಾರದೆ ಆತ್ಮ*ಹ*ತ್ಯೆ

ಅನೇಕ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಿಗಳು ಕಚೇರಿಯಲ್ಲೇ ಕುಸಿದು ಬಿದ್ದ ಅಥವಾ ಕೆಲಸದ ಒತ್ತಡ ತಾಳಲಾರದೆ ಆತ್ಮ*ಹ*ತ್ಯೆಗೆ ಶರಣಾದ ಘಟನೆಗಳನ್ನು ನಾವು ಕೇಳಿದ್ದೇವೆ. ಅಂತಹ ಪ್ರತಿಯೊಂದು ಘಟನೆಯೂ ಸಾರುವ ಸತ್ಯ ಒಂದೇ: "ನೀವು ಕೆಲಸ ಮಾಡುವುದು ಬದುಕುವುದಕ್ಕಾಗಿ, ಬದುಕುತ್ತಿರುವುದು ಕೆಲಸ ಮಾಡುವುದಕ್ಕಾಗಿ ಅಲ್ಲ." ಮೇಲಿನ ಉದ್ಯೋಗಿ ನೀಡಿದ ಉತ್ತರವು ಇಂತಹ ಸಾವಿರಾರು ಜನರ ನೋವಿನ ಪ್ರತಿಧ್ವನಿಯಾಗಿದೆ.