Bread Medu Vada Kannada: ಗರಿಗರಿಯಾದ ಮೆದು ವಡೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಉದ್ದಿನಬೇಳೆ ನೆನೆಸಿ, ರುಬ್ಬಿ ವಡೆ ಮಾಡುವುದು ಸ್ವಲ್ಪ ಸಮಯ ಹಿಡಿಯುವ ಕೆಲಸ. ಹಠಾತ್ ಅತಿಥಿಗಳು ಬಂದಾಗ ಅಥವಾ ಸಂಜೆ ಟೀ ಜೊತೆಗೆ ಏನಾದರೂ ಕುರುಕಲು ತಿಂಡಿ ಬೇಕೆನಿಸಿದಾಗ ಈ 'ಬ್ರೆಡ್ ಮೆದು ವಡೆ' ಅತ್ಯುತ್ತಮ ಆಯ್ಕೆಯಾಗಿದೆ. ಬನ್ನಿ, ಈ ಸುಲಭ ರೆಸಿಪಿಯನ್ನು ಹೇಗೆ ಮಾಡುವುದು ಎಂದು ತಿಳಿಯೋಣ.

ಸಾಮಾನ್ಯವಾಗಿ ಮೆದು ವಡೆ ಅಥವಾ ಉದ್ದಿನ ವಡೆ ಮಾಡಬೇಕೆಂದರೆ ಉದ್ದಿನಬೇಳೆಯನ್ನು ಗಂಟೆಗಟ್ಟಲೆ ನೆನೆಸಬೇಕಾಗುತ್ತದೆ. ಹದವಾಗಿ ರುಬ್ಬಬೇಕಾಗುತ್ತದೆ. ಇದೆಲ್ಲಾ ದೊಡ್ಡ ಕೆಲಸ ಎಂದು ಭಾವಿಸಿ ಅನೇಕರು ಈ ತಿಂಡಿಯ ಸಹಾಸವೇ ಬೇಡವೆಂದು ದೂರ ಉಳಿಯುತ್ತಾರೆ. ಆದರೆ ಈಗ ಮೆದು ವಡೆಯ ಅಸಲಿ ರುಚಿಯನ್ನು ಸವಿಯಲು ನೀವು ಅಷ್ಟೊಂದು ಕಷ್ಟಪಡಬೇಕಿಲ್ಲ. ಮನೆಯಲ್ಲಿ ಉಳಿದಿರುವ ಬ್ರೆಡ್ ಸ್ಲೈಸ್‌ಗಳನ್ನು ಬಳಸಿಕೊಂಡು ಕೇವಲ 15 ರಿಂದ 20 ನಿಮಿಷಗಳಲ್ಲಿ ಹೋಟೆಲ್ ಶೈಲಿಯ ಗರಿಗರಿ ವಡೆಯನ್ನು ಅತ್ಯಂತ ಸುಲಭವಾಗಿ ತಯಾರಿಸಬಹುದು. ಇದು ಹೊರಗಡೆ ಗೋಲ್ಡನ್ ಬ್ರೌನ್ ಬಣ್ಣದೊಂದಿಗೆ ಕ್ರಿಸ್ಪಿಯಾಗಿ, ಒಳಗಡೆ ಮೃದುವಾಗಿರುವುದರಿಂದ ಸಂಜೆ ಟೀ ಜೊತೆಗೆ ಅಥವಾ ದಿಢೀರ್ ಉಪಹಾರಕ್ಕೆ ಒಂದು ಅದ್ಭುತವಾದ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು
ಬ್ರೆಡ್ ಸ್ಲೈಸ್‌ಗಳು: 6-7 (ಯಾವುದೇ ಬಗೆಯ ಬ್ರೆಡ್ ಬಳಸಬಹುದು)
ಉಪ್ಪಿಟ್ಟು ರವೆ: 1 ಕಪ್ (ವಡೆಗೆ ಗಟ್ಟಿಯಾದ ಹದ ಮತ್ತು ಗರಿಗರಿತನ ನೀಡಲು ಇದು ಬಹಳ ಮುಖ್ಯ)
ಮೊಸರು: 1 ಕಪ್(ಸ್ವಲ್ಪ ಹುಳಿ ಇದ್ದರೆ ವಡೆಯ ರುಚಿ ಇನ್ನು ಅದ್ಭುತವಾಗಿರುತ್ತದೆ)
ತರಕಾರಿಗಳು: ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿ ಕೊತ್ತಂಬರಿ ಸೊಪ್ಪು
ಮಸಾಲೆಗಳು: ಜೀರಿಗೆ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ (ತಲಾ 1 ಚಮಚ)
ಪೇಸ್ಟ್: ಶುಂಠಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್ (1 ಚಮಚ)
ರುಚಿ ಹೆಚ್ಚಿಸಲು: 1 ಚಮಚ ಸಾಂಬಾರ್ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು: ಶುದ್ಧವಾದ ಅಡುಗೆ ಎಣ್ಣೆ 

ತಯಾರಿಸುವ ಹಂತ ಹಂತದ ವಿಧಾನ

ಪುಡಿ ಮಾಡಿ
ಮೊದಲು ಬ್ರೆಡ್ ಸ್ಲೈಸ್‌ಗಳನ್ನು ಸಣ್ಣದಾಗಿ ತುಂಡು ಮಾಡಿ ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.

ಮಿಕ್ಸ್ ಮಾಡಿ
ಒಂದು ದೊಡ್ಡ ಪಾತ್ರೆಯಲ್ಲಿ ಈ ಬ್ರೆಡ್ ಪುಡಿ, ರವೆ ಮತ್ತು ಮೊಸರನ್ನು ಹಾಕಿಕೊಳ್ಳಿ. ಇವುಗಳನ್ನು ಚೆನ್ನಾಗಿ ಬೆರೆಸಿ ಸುಮಾರು 10 ನಿಮಿಷಗಳ ಕಾಲ ನೆನೆಯಲು ಬಿಡಿ. ಇದರಿಂದ ರವೆಯು ಮೊಸರನ್ನು ಹೀರಿಕೊಂಡು ಮೃದುವಾಗುತ್ತದೆ.

ಮಸಾಲಾ ಸೇರಿಸಿ
ಈಗ ಈ ನೆನೆದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ-ಮೆಣಸಿನಕಾಯಿ ಪೇಸ್ಟ್, ಸಾಂಬಾರ್ ಮಸಾಲಾ ಮತ್ತು ಜೀರಿಗೆಯನ್ನು ಸೇರಿಸಿ.

ಬಣ್ಣ ಮತ್ತು ಖಾರಕ್ಕೆ
ನಂತರ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಹಿಟ್ಟು ತಯಾರಿಸಿ
ಈ ಮಿಶ್ರಣವು ಸಾಂಪ್ರದಾಯಿಕ ಮೆದು ವಡೆಯ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟು ತುಂಬಾ ಗಟ್ಟಿಯೆನಿಸಿದರೆ ಮಾತ್ರ ಒಂದೆರಡು ಚಮಚ ನೀರು ಸೇರಿಸಿ ಹದಗೊಳಿಸಿ.

ವಡೆ ಆಕಾರ
ಕೈಗೆ ಸ್ವಲ್ಪ ಎಣ್ಣೆ ಅಥವಾ ನೀರು ಸವರಿಕೊಂಡು ಸಣ್ಣ ಉಂಡೆಗಳನ್ನು ಮಾಡಿ, ಮಧ್ಯದಲ್ಲಿ ಬೆರಳಿನಿಂದ ರಂಧ್ರ ಮಾಡುವ ಮೂಲಕ ಮೆದು ವಡೆಯ ಸುಂದರ ಆಕಾರ ನೀಡಿ.

ಗರಿಗರಿಯಾಗಿ ಕರಿಯಿರಿ
ಕಾದ ಎಣ್ಣೆಯಲ್ಲಿ ವಡೆಗಳನ್ನು ಬಿಡಿ. ಅವು ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ನಿಧಾನವಾಗಿ ಚೆನ್ನಾಗಿ ಕರಿಯಿರಿ.

ಈ ಬ್ರೆಡ್ ಮೆದು ವಡೆಯು ಸಾಂಪ್ರದಾಯಿಕ ಉದ್ದಿನ ವಡೆಯಷ್ಟೇ ರುಚಿಯಾಗಿರುತ್ತದೆ ಮತ್ತು ನಿಮ್ಮ ಸಮಯವನ್ನೂ ಉಳಿಸುತ್ತದೆ. ಇದನ್ನು ಮನೆಯಲ್ಲೇ ತಯಾರಿಸಿದ ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಕೆಚಪ್ ಜೊತೆ ಬಿಸಿಯಾಗಿ ಸವಿಯಲು ನೀಡಿ. ನಿಮ್ಮ ಅತಿಥಿಗಳು ಇದನ್ನು ಬ್ರೆಡ್‌ನಿಂದ ಮಾಡಿದ್ದು ಎಂದು ನಂಬಲೇ ಸಾಧ್ಯವಿಲ್ಲ!

ಉಪಯುಕ್ತ ಟಿಪ್

ವಡೆ ಮಾಡುವಾಗ ಹಿಟ್ಟು ತುಂಬಾ ಮೆತ್ತಗಾಗಿ ಆಕಾರ ಬರುತ್ತಿಲ್ಲ ಎಂದರೆ, ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸೇರಿಸಿ. ಇದರಿಂದ ವಡೆ ಎಣ್ಣೆಯನ್ನು ಕಡಿಮೆ ಹೀರುತ್ತದೆ ಮತ್ತು ಇನ್ನು ಹೆಚ್ಚು ಗರಿಗರಿಯಾಗಿ ಬರುತ್ತದೆ.