Chinese couple donated 7 crores: ದಿನಕ್ಕೆ ಕೇವಲ ₹200 ಖರ್ಚು ಮಾಡಿ ಸರಳವಾಗಿ ಬದುಕುತ್ತಿದ್ದ ಮಕ್ಕಳಿಲ್ಲದ ವೃದ್ಧ ದಂಪತಿ, ತಮ್ಮ ಜೀವನದ ಇಡೀ ಉಳಿತಾಯವಾದ ₹7 ಕೋಟಿಯನ್ನು ದಾರಿದ್ರ್ಯ ನಿವಾರಣೆ ಮತ್ತು ಚಿಕಿತ್ಸೆಗೆ ದಾನ ಮಾಡಿದರು. 

ಚೀನಾದ ಶಾಂಘೈನಲ್ಲಿದ್ದ ಡು ಯಿಂಗ್ರಾಂಗ್ ಮತ್ತು ಲು ಸುಯಿಂಗ್ ದಂಪತಿಗೆ ಮಕ್ಕಳಿರಲಿಲ್ಲ. ಡು ಅವರು ಶಿಕ್ಷಕರಾಗಿ ಮತ್ತು ಲು ಅವರು ವೈದ್ಯರಾಗಿ ನಿವೃತ್ತರಾಗಿದ್ದರು. ಇಬ್ಬರಿಗೂ ಸಾಕಷ್ಟು ಪೆನ್ಷನ್ ಬರುತ್ತಿದ್ದರೂ, ಅವರು ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ಹಳೆಯ ಪೀಠೋಪಕರಣಗಳನ್ನು ಬಳಸುವುದು, ಸುಮಾರು 238 ರೂಪಾಯಿಯ ಮಧ್ಯಾಹ್ನದ ಊಟವನ್ನು ಇಬ್ಬರು ಹಂಚಿಕೊಂಡು ತಿನ್ನುವಷ್ಟು ಮಿತವ್ಯಯದ ಬದುಕು ಇವರದ್ದಾಗಿತ್ತು. ಅಂದರೆ ದಿನಕ್ಕೆ ಅಂದಾಜು 200 ರೂಪಾಯಿಯಷ್ಟೇ ಖರ್ಚು ಮಾಡುತ್ತಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

7 ಕೋಟಿ ರೂಪಾಯಿ ದಾನ ಮಾಡಿದ್ರು! 

2018ರಲ್ಲಿ ಆಸ್ಪತ್ರೆಯೊಂದರ ಮುಂದೆ ಜನ್ಮಜಾತ ಹೃದ್ರೋಗದಿಂದ ಬಳಲುತ್ತಿರುವ ಬಡ ಮಕ್ಕಳ ಚಿಕಿತ್ಸೆಗೆ ಸಹಾಯ ಕೇಳುವ ಪೋಸ್ಟರ್ ಅನ್ನು ಇವರು ನೋಡಿದರು. ಇದನ್ನು ಕಂಡ ತಕ್ಷಣವೇ ದಂಪತಿ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದರು. ತಮಗಾಗಿ ಹಣವನ್ನು ಉಳಿಸಿಕೊಳ್ಳುವಂತೆ ಆಸ್ಪತ್ರೆಯ ಸಿಬ್ಬಂದಿ ವಿನಂತಿಸಿದರೂ ಕೇಳದ ಡು ಅವರು, "ನಮ್ಮಿಬ್ಬರಿಗೂ ಇನ್ನು ಹೆಚ್ಚು ಸಮಯ ಉಳಿದಿಲ್ಲ. ನಮಗೆ ಪೆನ್ಷನ್ ಬರುತ್ತದೆ, ನಮಗೆ ಇಷ್ಟೊಂದು ಹಣದ ಅಗತ್ಯವಿಲ್ಲ" ಎಂದು ಹೇಳಿ ತಮ್ಮ ಜೀವಿತಾವಧಿಯ ಸಂಪೂರ್ಣ ಉಳಿತಾಯವಾದ 7 ಕೋಟಿ ರೂಪಾಯಿಯನ್ನು (5 ಮಿಲಿಯನ್ ಯುವಾನ್) ಚಾರಿಟಿಗೆ ದಾನ ಮಾಡಿದರು.

ಏಪ್ರಿಲ್‌ನಲ್ಲಿ ಅಂತ್ಯಕ್ರಿಯೆ

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಡು ಅವರು 2018ರಲ್ಲಿ ನಿಧನರಾದರೆ, ಅವರ ಪತ್ನಿ ಲು ಕಳೆದ ವರ್ಷ (2025) ನಿಧನರಾದರು. ಇವರ ಕೊನೆಯ ಆಸೆಯಂತೆ ಈ ವರ್ಷದ ಏಪ್ರಿಲ್‌ನಲ್ಲಿ ಸಮುದ್ರದಲ್ಲಿ ಅಂತ್ಯಕ್ರಿಯೆ (ಚಿತಾಭಸ್ಮ ವಿಸರ್ಜನೆ) ನೆರವೇರಿಸಲಾಯಿತು.

ಇತ್ತೀಚೆಗೆ ಶಾಂಘೈನಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಅಧಿಕಾರಿಗಳು ಈ ದಂಪತಿಯ ದಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ದಂಪತಿ ನೀಡಿದ ಈ ದೊಡ್ಡ ಮೊತ್ತದಿಂದಾಗಿ ಇದುವರೆಗೆ ಒಟ್ಟು 455 ಕಡುಬಡ ಮಕ್ಕಳ ಹೃದಯದ ಚಿಕಿತ್ಸೆ ಸಾಧ್ಯವಾಗಿದೆ. ತಮಗಾಗಿ ಏನನ್ನೂ ಬಯಸದೆ, ನೂರಾರು ಮಕ್ಕಳ ಜೀವ ಉಳಿಸಿದ ಈ ವೃದ್ಧ ದಂಪತಿಯ ಕರುಣೆ ಮತ್ತು ತ್ಯಾಗದ ಕಥೆ ಇಂದು ಜಗತ್ತಿಗೆ ದೊಡ್ಡ ಮಾದರಿಯಾಗಿದೆ.