ಚೀನಾದ ಬೀಜಿಂಗ್‌ನಲ್ಲಿರುವ 109 ಅಂತಸ್ತಿನ ಸಿಟಿಕ್ ಟವರ್‌ಗೆ ಲಘು ವಿಮಾನವೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಕಟ್ಟಡಕ್ಕೆ ಹಾನಿಯಾಗಿದ್ದು, ತಕ್ಷಣವೇ ಅದನ್ನು ತೆರವುಗೊಳಿಸಲಾಗಿದೆ ಮತ್ತು ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.
ಬೀಜಿಂಗ್ (ಜೂ.26): ಚೀನಾದಲ್ಲಿ ತಯಾರಾದ ಲಘು ವಿಮಾನವೊಂದು ಬೀಜಿಂಗ್ ನಗರದ ಅತ್ಯಂತ ಎತ್ತರದ ಮತ್ತು ಪ್ರಸಿದ್ಧ ಗಗನಚುಂಬಿ ಕಟ್ಟಡವಾದ 109 ಅಂತಸ್ತಿನ 'ಸಿಟಿಕ್ ಟವರ್' (CITIC Tower) ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. 'ಚೀನಾ ಜುನ್' ಎಂದೂ ಕರೆಯಲ್ಪಡುವ ಈ ದೈತ್ಯ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆಯುತ್ತಿದ್ದಂತೆ ಅದರ ಎರಡು ಬೃಹತ್ ಗಾಜಿನ ಕಿಟಕಿಗಳು ಸಂಪೂರ್ಣವಾಗಿ ಚೂರುಚೂರಾಗಿವೆ.
ಅಪಘಾತಕ್ಕೆ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಸುಮಾರು 1,700 ಅಡಿ ಎತ್ತರದ ಈ ಬೃಹತ್ ಕಟ್ಟಡದಿಂದ ಸಣ್ಣ ವಿಮಾನದ ಅವಶೇಷಗಳು ಮತ್ತು ಗಾಜಿನ ತುಣುಕುಗಳು ಕೆಳಗೆ ಬೀಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಟ್ಟಡದ ನೆಲ ಮಹಡಿಯಲ್ಲಿ (Ground floor) ವಿಮಾನದ ಮುರಿದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲ್ಲಿಂದ ದಟ್ಟವಾದ ಹೊಗೆ ಮೇಲೇಳುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಕಟ್ಟಡವನ್ನು ತಕ್ಷಣವೇ ತೆರವುಗೊಳಿಸಲಾಗಿದೆ (Evacuated). ಆದರೆ, ಅಪಘಾತದಲ್ಲಿ ಸಂಭವಿಸಿದ ಸಾವುನೋವುಗಳ ನಿಖರ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.

ಚೀನಾದ 3ನೇ ಅತ್ಯಂತ ಎತ್ತರದ ಗೋಪುರ!
ಈ ಸೂಪರ್ ಹೈ-ರೈಸ್ ಗಗನಚುಂಬಿ ಕಟ್ಟಡವು ಬೀಜಿಂಗ್‌ನ ಚಾವೊಯಾಂಗ್ ಜಿಲ್ಲೆಯ ಕೇಂದ್ರ ಬಿಸಿನೆಸ್ ಪ್ರದೇಶದಲ್ಲಿದೆ (CBD). ಇದು ಶಾಂಘೈ ಟವರ್ ಮತ್ತು ಪಿಂಗ್ ಆನ್ ಫೈನಾನ್ಸ್ ಸೆಂಟರ್ ನಂತರ ಇಡೀ ಚೀನಾದಲ್ಲೇ ಮೂರನೇ ಅತ್ಯಂತ ಎತ್ತರದ ಗೋಪುರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಚೀನಾದ ಅತ್ಯಂತ ಯಶಸ್ವಿ ದೇಶೀಯ ಲಘು ವಿಮಾನಗಳಲ್ಲಿ ಒಂದಾದ 'ಸನ್‌ವರ್ಡ್ ಎಸ್‌ಎ 60ಎಲ್ ಅರೋರಾ' (Sunward SA 60L Aurora - B-12PP ಮಾಡೆಲ್) ವಿಮಾನದ ಒಂದು ರೆಕ್ಕೆ ಕಟ್ಟಡದ ಪಕ್ಕದಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಮತ್ತೊಂದು ಚಿತ್ರದಲ್ಲಿ ಕಟ್ಟಡದ ಗೋಡೆಗೆ ದೊಡ್ಡದೊಂದು ರಂಧ್ರ ಬಿದ್ದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ವರದಿಯ ಪ್ರಕಾರ, ಅಪಘಾತಕ್ಕೀಡಾದ ಬಿ-12ಪಿಪಿ (B-12PP) ವಿಮಾನದಲ್ಲಿದ್ದ ಪೈಲಟ್ ಒಬ್ಬನೇ ಪ್ರಯಾಣಿಸುತ್ತಿದ್ದ (Solo flight). ಘಟನೆ ನಡೆಯುವ ಅರ್ಧ ಗಂಟೆ ಮುಂಚೆಷ್ಟೇ ಆತ 'ಶಿಫೋಸಿ' ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆಗಿದ್ದ. ಸಂಜೆ 5:40 ಕ್ಕೆ ವಿಮಾನವು ಮರಳಿ ಲ್ಯಾಂಡಿಂಗ್ ಮಾಡಲು ಸಿದ್ಧತೆ ನಡೆಸುತ್ತಿತ್ತಾದರೂ, ಇದ್ದಕ್ಕಿದ್ದಂತೆ ನಿಗದಿತ ಫ್ಲೈಟ್ ಪಾತ್ ಬಿಟ್ಟು ಬೇರೆಡೆಗೆ ಸಾಗಿತ್ತು. ಫ್ಲೈಟ್ ಮಾನಿಟರಿಂಗ್ ವ್ಯವಸ್ಥೆಯು ಬೀಜಿಂಗ್‌ನ 'ಈಸ್ಟ್ ಫಿಫ್ತ್ ರಿಂಗ್ ರೋಡ್' ಪ್ರದೇಶದವರೆಗೆ ವಿಮಾನವನ್ನು ಟ್ರ್ಯಾಕ್ ಮಾಡಿತ್ತಾದರೂ, ತದನಂತರ ವಿಮಾನದ ರೇಡಾರ್ ಸಿಗ್ನಲ್ ಸಂಪೂರ್ಣವಾಗಿ ಕಟ್ ಆಗಿತ್ತು. ಆ ಬಳಿಕ ಪೈಲಟ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಸ್ಥಳಕ್ಕೆ ನುಗ್ಗಿದ ಪೊಲೀಸರು; ಫೋಟೋ ತೆಗೆಯದಂತೆ ನಿರ್ಬಂಧ!
ಅಪಘಾತದ ಬೆನ್ನಲ್ಲೇ ರಾಯಿಟರ್ಸ್ (Reuters) ಸುದ್ದಿ ಸಂಸ್ಥೆಯು ವರದಿ ಮಾಡಿದ್ದು, ಸಿಟಿಕ್ ಟವರ್ ಸುತ್ತಲೂ ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕಟ್ಟಡದ ಸುತ್ತಮುತ್ತ ಓಡಾಡುವ ಸಾರ್ವಜನಿಕರು ಅಥವಾ ದಾರಿಹೋಕರು ಮೊಬೈಲ್‌ನಲ್ಲಿ ಫೋಟೋ ಅಥವಾ ವಿಡಿಯೋಗಳನ್ನು ತೆಗೆದುಕೊಳ್ಳದಂತೆ ಪೊಲೀಸರು ಕಟ್ಟುನಿಟ್ಟಾಗಿ ತಡೆಯುತ್ತಿದ್ದಾರೆ. ತುರ್ತು ರಕ್ಷಣಾ ಸಿಬ್ಬಂದಿ (Emergency crews) ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಸಿಟಿಕ್ ಟವರ್ ಸುತ್ತಮುತ್ತಲಿನ ಹಲವು ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ವಿಮಾನ ನಿಯಂತ್ರಣ ತಪ್ಪಲು ತಾಂತ್ರಿಕ ದೋಷ ಕಾರಣವೇ ಅಥವಾ ಪೈಲಟ್‌ನ ಬೇಜವಾಬ್ದಾರಿಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.


