ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಕಾನ್ಸ್‌ಟೇಬಲ್ ರಾಜೇಶ್ ಅವರ ಪತ್ನಿ ರಶ್ಮಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮಗಳ ಸಾವಿಗೆ ಪತಿಯ ಕಿರುಕುಳವೇ ಕಾರಣ ಎಂದು ಪೋಷಕರು ದೂರು ನೀಡಿದ್ದು, ಇದೀಗ ಕಾನ್ಸ್‌ಟೇಬಲ್ ರಾಜೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು (ಮೇ 23): ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಕಾನ್ಸ್‌ಟೇಬಲ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ರಶ್ಮಿ ಸಾವಿಗೆ ಶರಣಾದ ದುರ್ದೈವಿ ಮಹಿಳೆಯಾಗಿದ್ದಾರೆ. ಈ ಘಟನೆ ಪೊಲೀಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮೂಲಗಳ ಪ್ರಕಾರ, ಮೃತ ರಶ್ಮಿ ಹಾಗೂ ಆಕೆಯ ಪತಿ ರಾಜೇಶ್ ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದಾರೆ. ರಾಜೇಶ್ ಸದ್ಯ ಬೆಂಗಳೂರಿನ ಹೆಚ್‌ಎಎಲ್ (HAL) ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಂಪತಿ ಕೆ.ಆರ್. ಪುರಂ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು. ಆದರೆ ನಿನ್ನೆ ರಶ್ಮಿ ತೀವ್ರ ಬೇಸರದಿಂದ ಸಾಯುವಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಕಾನ್ಸ್‌ಟೇಬಲ್ ರಾಜೇಶ್ ವಿರುದ್ಧ ಎಫ್‌ಐಆರ್ ದಾಖಲು!
ಘಟನೆಗೆ ಸಂಬಂಧಿಸಿದಂತೆ ಮೃತ ರಶ್ಮಿ ಅವರ ಪೋಷಕರು ಕೆ.ಆರ್. ಪುರಂ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪೋಷಕರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಕೆ.ಆರ್. ಪುರಂ ಪೊಲೀಸರು ಕಾನ್ಸ್‌ಟೇಬಲ್ ರಾಜೇಶ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹ ಅಥವಾ ಪತಿಯ ಕಿರುಕುಳವೇ ಈ ಸಾವಿಗೆ ಕಾರಣವೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಣ್ಣೀರಲ್ಲಿ ಮುಳುಗಿದ ಕುಟುಂಬ, ಮಳವಳ್ಳಿಗೆ ಶವ ರವಾನೆ
ಮಗಳ ಹಠಾತ್ ಸಾವಿನ ಸುದ್ದಿಕೇಳಿ ರಶ್ಮಿ ಪೋಷಕರು ಹಾಗೂ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಪೋಷಕರು ರಶ್ಮಿ ಅವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನ್ಸ್‌ಟೇಬಲ್ ರಾಜೇಶ್‌ನನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.


