ಬೆಂಗಳೂರಿನ ಸೈಬರ್ ಕಮಾಂಡ್ ಪೊಲೀಸರು, ಅಮೆರಿಕದ ಪ್ರಜೆಗಳಿಗೆ ತೆರಿಗೆ ಸೇವೆಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಅಂತಾರಾಷ್ಟ್ರೀಯ ನಕಲಿ ಕಾಲ್ ಸೆಂಟರ್ ಜಾಲವನ್ನು ಭೇದಿಸಿದ್ದಾರೆ. ನಗರದ ನಾಲ್ಕು ಕೇಂದ್ರಗಳ ಮೇಲೆ ದಾಳಿ ನಡೆಸಿ, 40 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ವಹಿವಾಟನ್ನು ಪತ್ತೆಹಚ್ಚಿದ್ದಾರೆ.

ಬೆಂಗಳೂರು (ಮೇ 21): ಬೆಂಗಳೂರಿನಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಅಂತಾರಾಷ್ಟ್ರೀಯ ನಕಲಿ ಕಾಲ್ ಸೆಂಟರ್ ಜಾಲವನ್ನು ಸೈಬರ್ ಕಮಾಂಡ್ ಪೊಲೀಸರು ಭೇದಿಸಿದ್ದಾರೆ. ಈ ಕಾರ್ಯಾಚರಣೆಯ ಕುರಿತು ಸೈಬರ್ ಕಮಾಂಡ್ ಡಿಜಿಪಿ ಪ್ರಣವ ಮಹಾಂತಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ಸೈಬರ್ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಮೆರಿಕನ್ನರೇ ಇವರ ಟಾರ್ಗೆಟ್!

ಕಳೆದ ಕೆಲವು ದಿನಗಳಿಂದ ಲಭ್ಯವಿದ್ದ ಖಚಿತ ಮಾಹಿತಿಯ ಮೇರೆಗೆ ಸೈಬರ್ ಪೊಲೀಸರು ನಗರದ ವಿವಿಧೆಡೆ ದಾಳಿ ನಡೆಸಿದ್ದಾರೆ. ಈ ತಂಡವು ಅಮೆರಿಕದ ಹೆಸರಾಂತ ಅಕೌಂಟಿಂಗ್ ಮತ್ತು ಸಾಫ್ಟ್‌ವೇರ್ ಕಂಪನಿಗಳ ಹೆಸರನ್ನು ಬಳಸಿಕೊಂಡು ಅಲ್ಲಿನ ನಾಗರಿಕರಿಗೆ ವಂಚಿಸುತ್ತಿತ್ತು. ವಿಶೇಷವಾಗಿ 'ಟ್ಯಾಕ್ಸ್ ರಿಲೇಟೆಡ್' (ತೆರಿಗೆ ಸಂಬಂಧಿತ) ಸೇವೆಗಳನ್ನು ನೀಡುವುದಾಗಿ ನಂಬಿಸಿ, ಅಮೆರಿಕನ್ ಪ್ರಜೆಗಳಿಂದ ಕೋಟ್ಯಂತರ ಹಣವನ್ನು ಲೂಟಿ ಮಾಡುತ್ತಿದ್ದರು. ಫೇಕ್ ಸರ್ವಿಸಸ್ ನೀಡುವ ಮೂಲಕ ಈ ಜಾಲವು ಅಮೆರಿಕನ್ನರ ನಿದ್ದೆಗೆಡಿಸಿತ್ತು.

ದಾಳಿ ನಡೆದ ಸ್ಥಳಗಳು:

ಸೈಬರ್ ಪೊಲೀಸರು ನಗರದ ನಾಲ್ಕು ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ. ಕೋರಮಂಗಲದಲ್ಲಿ ಎರಡು ಕೇಂದ್ರಗಳು, ಚೂಡಸಂದ್ರ ಮತ್ತು ಹೆಚ್.ಎಸ್.ಆರ್ ಲೇಔಟ್‌ನಲ್ಲಿ ತಲಾ ಒಂದೊಂದು ಕೇಂದ್ರಗಳನ್ನು ಪತ್ತೆ ಹಚ್ಚಲಾಗಿದೆ. ಪ್ರತೀ ಕಾಲ್ ಸೆಂಟರ್‌ನಲ್ಲಿ 25 ರಿಂದ 30 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

40 ಕೋಟಿ ರೂಪಾಯಿ ಅಕ್ರಮ ವಹಿವಾಟು:

ಡಿಜಿಪಿ ಪ್ರಣವ ಮಹಾಂತಿ ಅವರ ಪ್ರಕಾರ, ಈ ಜಾಲವು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಸುಮಾರು 40 ಕೋಟಿ ರೂಪಾಯಿಗೂ ಅಧಿಕ ಹಣದ ವಹಿವಾಟು ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಹಣವು ವಂಚನೆಯ ಮೂಲಕವೇ ಸಂಗ್ರಹವಾಗಿದ್ದು, ಇದರ ಮೂಲದ ಬಗ್ಗೆ ತನಿಖೆ ಮುಂದುವರಿದಿದೆ. ಫೇಕ್ ಡೊಮೈನ್‌ಗಳನ್ನು ಕ್ರಿಯೇಟ್ ಮಾಡಲಾಗಿದ್ದು, ಈ ಬಗ್ಗೆ ಡೊಮೈನ್ ಕಂಪನಿಗಳಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ.

ಫೇಕ್ ಸ್ಕ್ರಿಪ್ಟ್ ಮತ್ತು ಸೀಜ್ ಆದ ವಸ್ತುಗಳು:

ದಾಳಿಯ ವೇಳೆ ಪೊಲೀಸರು ನೂರಾರು ಸಿಪಿಯು (CPU), ಸಿಮ್ ಕಾರ್ಡ್‌ಗಳು ಮತ್ತು ಕಂಪ್ಯೂಟರ್ ಸಿಸ್ಟಮ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಪೊಲೀಸರಿಗೆ 'ಫೇಕ್ ಸ್ಕ್ರಿಪ್ಟ್' ಲಭ್ಯವಾಗಿದೆ. ಅಮೆರಿಕನ್ ಪ್ರಜೆಗಳಿಗೆ ಕರೆ ಮಾಡಿದಾಗ ಏನು ಮಾತನಾಡಬೇಕು? ಅವರನ್ನು ಹೇಗೆ ನಂಬಿಸಬೇಕು? ಎಂಬ ಬಗ್ಗೆ ಹಂತ ಹಂತವಾಗಿ ಈ ಸ್ಕ್ರಿಪ್ಟ್‌ನಲ್ಲಿ ಬರೆಯಲಾಗಿತ್ತು. ಸಿಬ್ಬಂದಿಗಳಿಗೆ ಈ ಸ್ಕ್ರಿಪ್ಟ್ ಮೂಲಕವೇ ತರಬೇತಿ ನೀಡಲಾಗುತ್ತಿತ್ತು.

ವಂಚನೆಗೂ ಇತ್ತು ಜಿಎಸ್‌ಟಿ ಮತ್ತು ಸ್ಯಾಲರಿ ಫಿನಿಶಿಂಗ್!

ಈ ನಕಲಿ ಕಾಲ್ ಸೆಂಟರ್ ನಡೆಸುತ್ತಿದ್ದವರು ಪೊಲೀಸರ ಕಣ್ಣಿಗೆ ಮಣ್ಣೆರಚಲು ಎಲ್ಲವನ್ನೂ ಅಧಿಕೃತ ಎಂಬಂತೆ ತೋರಿಸಿಕೊಳ್ಳುತ್ತಿದ್ದರು. ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲಾಗುತ್ತಿತ್ತು ಮತ್ತು ಜಿಎಸ್‌ಟಿ (GST) ಕೂಡ ಪಾವತಿಸುತ್ತಿದ್ದರು. ಈ ಮೂಲಕ ಹೊರನೋಟಕ್ಕೆ ಇದೊಂದು ಕಾನೂನುಬದ್ಧ ಕಂಪನಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ಪ್ರಸ್ತುತ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದು, ಇದರಲ್ಲಿ ಸ್ಥಳೀಯರು ಮತ್ತು ಹೊರರಾಜ್ಯದವರು ಭಾಗಿಯಾಗಿರುವುದು ತಿಳಿದುಬಂದಿದೆ.