Asianet Suvarna News Asianet Suvarna News

ಎಲ್‌ಜಿಬಿಟಿ ಬಗ್ಗೆ ಅರಿವು ಮುಖ್ಯ, ನೈತಿಕ ಪ್ರಶ್ನೆಯಲ್ಲ!

ತುಳಿತಕ್ಕೊಳಪಟ್ಟಿದ್ದ ಸಮುದಾಯಗಳು ಸಂವಿಧಾನದ ಫಲವಾಗಿ ಹೇಗೆ ಮುಖ್ಯವಾಹಿನಿಗೆ ಬಂದವೋ ಹಾಗೆಯೇ ಸಲಿಂಗಿಗಳಿಗೂ ಸ್ಥಾನ ದೊರಕಿಸುವುದು ಮತ್ತು ಹೊಸತಾದ ಇತಿಹಾಸಕ್ಕೆ ಮುನ್ನುಡಿ ಬರೆಯುವುದು ಸಾಂವಿಧಾನಿಕ ಧರ್ಮವಾಗಿದೆ.

Awareness about LGBT is more important than morality
Author
Bengaluru, First Published Aug 20, 2019, 1:22 PM IST

ಬೆಂಗಳೂರು (ಆ. 20): ನಮ್ಮ ಸಂಪ್ರದಾಯಬದ್ಧ ಸಮಾಜದಲ್ಲಿ ಸಾಮಾನ್ಯವಾಗಿ ಹೆಚ್ಚು ವೈರಲ್‌ ಆಗುವುದು, ಹೆಚ್ಚಿನವರ ಗಮನ ಸೆಳೆಯುವುದು ಅಂದರೆ ದೈನಂದಿನ ಬದುಕಿನಲ್ಲಿ ಘಟಿಸುವ, ಅಸಹಜ ಎನ್ನಿಸುವ ವಿಚಾರಗಳು. ಸೆಕ್ಸ್‌ ವರ್ಕರ್‌ ಒಬ್ಬಳು ಬಾತ್‌ರೂಮಿನಲ್ಲಿ ಸಿಕ್ಕಿಬಿದ್ದದ್ದು ಮತ್ತು ಆಕೆ ವಿಡಿಯೋ ಚಿತ್ರಣ ಮಾಡುತ್ತಿದ್ದವನನ್ನು ‘ಯಾಕಣ್ಣ?’ ಎಂದು ದಯನೀಯವಾಗಿ ಕೇಳಿದ್ದು ಇತ್ತೀಚೆಗೆ ವೈರಲ್‌ ಆಯಿತು.

ಹಾಗೆಯೇ ವಕೀಲೆಯರಿಬ್ಬರು ಲೆಸ್ಬಿಯನ್‌ ಹಕ್ಕುಗಳಿಗೆ ಹೋರಾಟ ಮಾಡಿ ಸುಪ್ರೀಂಕೋರ್ಟಿನ ತೀರ್ಪು ಸಲಿಂಗಿಗಳ ಪರವಾಗುವಂತೆ ಮಾಡಿ ಕಡೆಗೆ ತಾವೇ ಮದುವೆ ಮಾಡಿಕೊಂಡದ್ದೂ ಮೊನ್ನೆಮೊನ್ನೆ ಸುದ್ದಿಯಾಗಿ ಎಲ್ಲೆಡೆ ಹರಿದಾಡಿತು. ಒಂದರ್ಥದಲ್ಲಿ ನಮಗೆ ಲೈಂಗಿಕತೆಯ ವಿಚಾರದಲ್ಲಿ ತಿಳಿವಳಿಕೆಗಿಂತ ಅದರ ಬಗೆಗಿನ ನೈತಿಕತೆಯೇ ಮುಖ್ಯವಾಗಿದೆ.

ಸೆಪ್ಟೆಂಬರ್ ತಿಂಗಳು: ಸುಪ್ರೀಂ ಕೋರ್ಟ್ ಮಹಾ ತೀರ್ಪುಗಳ ಗೊಂಚಲು!

ಹಾಗಾಗಿ ಭಾರತದ ಸಂದರ್ಭದಲ್ಲಿ ಇಂತಹ ಸಂಗತಿಗಳು ಹೆಚ್ಚು ಸುದ್ದಿಯಾಗುತ್ತವೆ. ಇದು ಕಳವಳಕಾರಿ ಬೆಳವಣಿಗೆ. ಇಂತಹ ಸಂದರ್ಭಗಳಲ್ಲಿ ಅರಿವು ಮತ್ತು ವೈಚಾರಿಕತೆ ಮುಖ್ಯವಾಗಬೇಕೇ ಹೊರತು, ಕೇವಲ ಮೌಢ್ಯ ಅಥವಾ ಬಹುಕಾಲದಿಂದಲೂ ಕಟ್ಟಿಕೊಂಡು ಬಂದಿರುವ ನೈತಿಕತೆ ಅನೈತಿಕತೆಯ ಪ್ರಶ್ನೆಯಲ್ಲ.

ಮಾನವ ನಿರ್ಮಿತ ಸಮಾಜಗಳಲ್ಲಿ ಹೊರಗಿಡಲ್ಪಟ್ಟವರು, ಮೂಲೆಗುಂಪಾಗಿರುವವರು, ಏಣಿಯ ಬುಡದಲ್ಲಿರುವವರು ಮುಂತಾದ ಅಲಕ್ಷಿತ ಸಮುದಾಯಗಳ ಸೃಷ್ಟಿಯು ನೈಸರ್ಗಿಕವಾಗಿರುವುದಲ್ಲ. ಈ ಸಮುದಾಯಗಳು ಹಲವಾರು ಸಾಂಸ್ಕೃತಿಕ, ರಾಜಕೀಯ ಕಾರಣಗಳಿಂದ ಮತ್ತು ಪ್ರಬಲಗೊಂಡ ಇತರೆ ಸಮುದಾಯಗಳ ಮೇಲುಗೈ ದೆಸೆಯಿಂದ ಹುಟ್ಟಿಕೊಂಡಿರುತ್ತವೆ.

ಮಾನವ ಇತಿಹಾಸದಲ್ಲಿ ಹೆಣ್ಣುಮಕ್ಕಳು, ದಲಿತರು ಮತ್ತು ಕರಿಯರು, ಅಲಕ್ಷಿತರು ಎಂದು ಗುರುತಿಸಲ್ಪಟ್ಟಿರುವುದು ಹಾಗೂ ಕೀಳಾಗಿ ಕಾಣಲ್ಪಟ್ಟಿರುವುದು ಪ್ರಪಂಚದಾದ್ಯಂತ ಕಂಡುಬರುತ್ತದೆ. ಈ ಮೂರೂ ಸಮುದಾಯಗಳ ಒಂದು ಸಾಮಾನ್ಯ ಸಂಗತಿಯೆಂದರೆ ಇವರೆಲ್ಲರೂ ‘ಗೌರವ’ ಮತ್ತು ‘ಸ್ವೀಕೃತಿ’ ಎಂಬುದಕ್ಕೆ ಅನರ್ಹರು ಎಂಬ ಸಾರ್ವತ್ರಿಕ ತಿಳಿವಳಿಕೆ ಅಥವಾ ನಂಬಿಕೆಗೆ ಜನರು ಒಳಗಾಗಿರುವುದು.

ಸಲಿಂಗ ಕಾಮಿಗಳಿಗಾಗಿ ಆಶ್ರಮ ನಿರ್ಮಾಣ

ಈ ಅಲಕ್ಷಿತ ಸಮುದಾಯಗಳ ಪಟ್ಟಿಗೆ ಇತ್ತೀಚಿನ ಇನ್ನೊಂದು ಸೇರ್ಪಡೆಯೆಂದರೆ ಸಲಿಂಗಿಗಳ ಸಮುದಾಯ. ಅವರ ಕುರಿತಾಗಿ ಈಗೀಗ ಚರ್ಚೆಗಳಾಗುತ್ತಿವೆಯೇ ಹೊರತೂ ನಿಜವಾಗಿಯೂ ಅವರ ಅಸ್ತಿತ್ವಕ್ಕೆ ಕಾರಣವೇನು ಎಂಬ ಬಗ್ಗೆ ಅಷ್ಟಾಗಿ ವಿಶ್ಲೇಷಣೆ, ಚರ್ಚೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಆಗಿಲ್ಲ.

ಅದಕ್ಕೆ ಲೈಂಗಿಕತೆಯ ಕುರಿತಾಗಿನ ನಮ್ಮ ‘ಮಡಿವಂತಿಕೆ’ ಮನೋಭಾವವೂ ಒಂದು ಕಾರಣ. ಈ ಹಿನ್ನೆಲೆಯಲ್ಲಿ ಲೈಂಗಿಕತೆಯ ವಿಚಾರದಲ್ಲಿ ಬಹುತೇಕವಾಗಿ ತೋರ್ಪಡಿಕೆಯ ಮಡಿವಂತಿಕೆಯನ್ನು ಪ್ರದರ್ಶಿಸುವ ಸಮಾಜಕ್ಕೆ ಎಲ್‌ಜಿಬಿಟಿಗಳ ಅಸ್ತಿತ್ವದಿಂದಾಗಿ ಧಕ್ಕೆಯುಂಟಾಗಬಾರದೆಂದರೆ ನಮ್ಮ ರೂಢಿಗತ ನಡವಳಿಕೆಗಳನ್ನು ಪುನರ್ಮೌಲ್ಯೀಕರಿಸಿಕೊಳ್ಳುವುದು ಸರಿಯಾದ ದಾರಿ.

ಪುರುಷನ ಮೇಲೆ ಪುರುಷತ್ವದ ಒತ್ತಡ

ಲಿಂಗ, ಜಾತಿ, ಧರ್ಮ, ಜನಾಂಗ ಮುಂತಾದ ಪರಿಕಲ್ಪನೆಗಳು ಸೈದ್ಧಾಂತಿಕ ವಿಚಾರಗಳಿಂದ ಕಟ್ಟಿಕೊಂಡಿರುವ ಸಂಗತಿಗಳೇ ಹೊರತು ಪ್ರಾಕೃತಿಕ ಅಂಶಗಳಲ್ಲ. ಪ್ರತಿ ಸಮಾಜದಲ್ಲಿ ಚಾಲ್ತಿಯಲ್ಲಿರುವ ರೂಢಿಗತ ನಡವಳಿಕೆಗಳು ಜನರ ನಿತ್ಯಜೀವನದಲ್ಲಿ ಎಷ್ಟುಅಂತರ್ಗತವಾಗಿರುತ್ತವೆ ಎಂದರೆ ಪುರುಷನಾಗಿ ಹುಟ್ಟಿದವ ತನ್ನ ಪುರುಷತ್ವವನ್ನು ನಿರೂಪಿಸಲು ಅದಕ್ಕೆ ತಕ್ಕನಾದ ಕೆಲಸ ಆಯ್ದುಕೊಂಡು ಮತ್ತು ಅದಕ್ಕೆ ತಕ್ಕನಾದ ಪಾತ್ರ ನಿರ್ವಹಿಸುತ್ತಾ ಕೊನೆತನಕ ತನ್ನ ‘ಗಂಡಸು’ ಎಂಬ ಅಸ್ಮಿತೆಯನ್ನು ಕಾಪಾಡಿಕೊಳ್ಳುವ ಕರಾರಿಗೆ ಒಳಪಟ್ಟಿರುತ್ತಾನೆ.

ಒಂದು ಪಕ್ಷ ತನ್ನ ಗಂಡಸ್ತನಕ್ಕೆ ಧಕ್ಕೆ ತರುವಂತಹ ಯಾವುದೇ ಗುಣವು ತುಸುವಾದರೂ ಕಾಣಿಸಿಕೊಂಡರೆ ಅದು ‘ಗಂಡಸು’ ಎಂಬ ರೂಢಿಗತ ನಡವಳಿಕೆಯನ್ನು ಧಿಕ್ಕರಿಸಿದಂತೆ ಎಂಬ ನೈತಿಕತೆಯ ಬಂಧನದಲ್ಲಿರುತ್ತಾನೆ. ಈ ರೀತಿಯ ಬಂಧನಕ್ಕೆ ಗೌರವ ತೋರಬೇಕು ಎಂಬುದು ನಮ್ಮ ರೂಢಿಗತ ನಡವಳಿಕೆಗಳ ಪ್ರಮುಖ ಬೇಡಿಕೆಯಾಗಿರುತ್ತದೆ.

ಜಾನ್‌ ಬೇಯ್ನನ್‌ ಎಂಬ ಸಂಶೋಧಕ ತನ್ನ ‘ಮಾಸ್ಕು್ಯಲೈನಿಟೀಸ್‌ ಅಂಡ್‌ ಕಲ್ಚರ್‌’ ಎಂಬ ಪುಸ್ತಕದಲ್ಲಿ ಪುರುಷತ್ವ ಎಂಬುದು ಗಂಡಸಿನ ಆಂತರಿಕ ಗುಣವಲ್ಲ ಎಂದು ವಿವರಿಸುತ್ತಾನೆ. ಗಂಡಾದವನು ಹೆಣ್ಣನ್ನೇ ಪ್ರೀತಿಸಬೇಕು ಎಂಬುದು ಸಾಮಾಜಿಕವಾಗಿ ಬೆಳೆದು ಬಂದಿರುವ ನಮ್ಮ ರೂಢಿಗತ ನಡವಳಿಕೆಗಳ ಪ್ರಮುಖ ಬೇಡಿಕೆಯಷ್ಟೇಎಂದು ಅವನು ಅಭಿಪ್ರಾಯ ಪಡುತ್ತಾನೆ. ಅಷ್ಟೇಅಲ್ಲದೆ ಪುರುಷತ್ವ ಎಂಬುದು ನಮ್ಮ ಜನನಾಂಗಕ್ಕೆ ಸಂಬಂಧಪಟ್ಟವಿಷಯವಾಗಿರದೆ ನಮ್ಮ ಸಂಸ್ಕೃತಿಯ ಕಟ್ಟಳೆಯಾಗಿರುತ್ತದೆ ಎಂದೂ ವಿವರಿಸುತ್ತಾನೆ.

ಪುರುಷತ್ವ ಎಂಬುದು ಹುಟ್ಟಿನಿಂದ ಬಂದಂತಹ ಗುಣವಲ್ಲ, ಬದಲಿಗೆ ಅದು ನಮ್ಮ ನಿತ್ಯ ನಡವಳಿಕೆಗೆ ಸಂಬಂಧಿಸಿರುತ್ತದೆ. ಪುರುಷತ್ವ ಎಂಬುದು ಸಾಮಾಜಿಕ ವ್ಯವಸ್ಥೆ ಎಂಬ ಒಂದೇ ಕಾರಣದಿಂದ ಮತ್ತು ಸಮಾಜದ ಗುಣಾತ್ಮಕ ಬೆಳವಣಿಗೆ ಎಂಬ ಒಂದೇ ದೃಷ್ಟಿಯಿಂದ ಹುಟ್ಟಿಕೊಂಡಿರುವ ನಂಬಿಕೆ ಎನ್ನುತ್ತಾನೆ ಬೇಯ್ನನ್‌.

ನಂಬಿಕೆಗಳೂ ಬದಲಾಗಬೇಕು

ಈ ದೃಷ್ಟಿಯಲ್ಲಿ ಬೇಯ್ನನ್‌ ವಾದಗಳಲ್ಲಿ ಪ್ರಮುಖವಾಗಿ ಅರ್ಥವಾಗಬೇಕಿರುವ ಅಂಶವೇನೆಂದರೆ ‘ಪುರುಷತ್ವ’ ಎಂಬುದು ಗಂಡು ಮಕ್ಕಳ ಸ್ಥಿರವಾದ ಅಸ್ಮಿತೆಯಲ್ಲ. ಬದಲಾಗುತ್ತಿರುವ ಸಮಾಜದಲ್ಲಿ ನಮ್ಮ ನಂಬಿಕೆಗಳೂ ಬದಲಾಗಬೇಕಾದ ಅವಶ್ಯಕತೆಯಿದೆ. ಹಾಗೆಯೇ ಪುರುಷತ್ವದ ವಿಚಾರದಲ್ಲಿ ಈಗೀಗ ಜನರ ಮನಸ್ಸಿನಲ್ಲಿ ಬದಲಾಗುತ್ತಿರುವ ಅಂಶಗಳೂ ಗಮನಾರ್ಹ ಎಂಬುದು ನಮಗೆ ಅರಿವಾಗಬೇಕು. ಈ ಚಿಂತನೆಯನ್ನು ಮಾಡಿದರಷ್ಟೇನಮಗೆ ಸಲಿಂಗಕಾಮದ ಕುರಿತಾದ ಸುಪ್ರೀಂಕೋರ್ಟಿನ ತೀರ್ಪಿನ ಮಹತ್ವದ ಅರಿವಾಗುವುದು. ವಿವಿಧ ಕಾರಣಗಳಿಂದ ಸಲಿಂಗಕಾಮ ಎಂಬುದು ಭಾರತದ ಸಾಮಾಜಿಕ ಪರಿಧಿಯಲ್ಲಿ ನಿಷಿದ್ಧವಾಗಿತ್ತು.

ಅಷ್ಟೇ ಅಲ್ಲದೆ ಅದೊಂದು ಕಳಂಕಭರಿತವಾದ ವಿಷಯವೂ ಆಗಿತ್ತು. ಸಲಿಂಗಿಗಳ ಸಮುದಾಯಗಳ ವಿರುದ್ಧ ದೈಹಿಕ, ಮಾನಸಿಕ ಮತ್ತು ಭಾವಾನಾತ್ಮಕ ದಾಳಿಗಳು ಬಹಳವಾಗಿ ಆಗಿ ಅವರ ಅಸ್ತಿತ್ವಕ್ಕೆ ತೀವ್ರ ಧಕ್ಕೆಯುಂಟಾಗಿತ್ತು. ಐತಿಹಾಸಿಕವಾಗಿ ನೋಡಿದರೆ, ಬ್ರಿಟಿಷ್‌ ಸರ್ಕಾರವು ಸಲಿಂಗಿಗಳಿಗೆ ಕಾರಾಗೃಹ ಶಿಕ್ಷೆ ವಿಧಿಸುತ್ತಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೂಡ ಸಲಿಂಗಕಾಮಕ್ಕೆ ಅಧಿಕೃತ ಅನುಮತಿ ದೊರಕಿರಲಿಲ್ಲ.

ಬಹಳ ಚರ್ಚೆಗಳು ಮತ್ತು ಗೊಂದಲಗಳ ನಡುವೆ ಸೆಪ್ಟೆಂಬರ್‌ 6, 2018ರಂದು ಮಹತ್ವವಾದ ತೀರ್ಪನ್ನು ಸುಪ್ರೀಂಕೋರ್ಟು ನೀಡಿ, ಸೆಕ್ಷನ್‌ 377ರ ಅನ್ವಯ ಸಲಿಂಗಕಾಮಕ್ಕೆ ಅಧಿಕೃತ ಅನುಮತಿ ನೀಡಿತು. ಇದರಿಂದಾಗಿ ಲೈಂಗಿಕತೆಯನ್ನು ಧರ್ಮದ ಅಥವಾ ಸಂಸ್ಕೃತಿಗಳ ನಿರ್ದಿಷ್ಟಗೆರೆಗಳ ಹಿನ್ನೆಲೆಯಲ್ಲಿ ನೋಡದೆ ಪ್ರಜಾಪ್ರಭುತ್ವದ ಪರಿಕಲ್ಪನೆಯ ಮೂಲಕ ವ್ಯಕ್ತಿಗಳ ಸ್ವಾಯತ್ತೆಗೆ ಆದ್ಯತೆ ನೀಡುವಷ್ಟುಭಾರತದ ಚಿಂತನಾ ಕ್ರಮ ಬದಲಾಯಿತು.

ಲೈಂಗಿಕತೆ ಕೇವಲ ಸಂತಾನೋತ್ಪತ್ತಿಗಲ್ಲ

ಈಗ ಲೈಂಗಿಕತೆಯ ಬಗ್ಗೆ ನಮ್ಮ ನಿಲುವುಗಳು ಬದಲಾಗಬೇಕಾದ ಸಂದರ್ಭವಿದೆ. ಬೇಯ್ನನ್‌ ಪ್ರತಿಪಾದಿಸಿದಂತೆ ಸಮಾಜದ ಸಮತೋಲನ ಉಳಿಯಬೇಕೆಂದರೆ ನಾವು ಬದಲಾವಣೆಗಳನ್ನು ಗೌರವಿಸಬೇಕು. ಇಲ್ಲವಾದರೆ ಬಹಳ ಕಾಲದಿಂದ ಅಸ್ತಿತ್ವದಲ್ಲಿರುವ ಎಲ್‌ಜಿಬಿಟಿ ಸಮುದಾಯಗಳು ತಮ್ಮ ಲೈಂಗಿಕ ಸ್ವಾತಂತ್ರ್ಯದಿಂದ ವಂಚಿತರಾಗಬಹುದು. ಲೈಂಗಿಕತೆಯ ಮೂಲ ಉದ್ದೇಶವು ಸಂತಾನೋತ್ಪತ್ತಿ ಎಂಬುದು ನಿಜ. ಆದರೆ ನೈಸರ್ಗಿಕವಾದ ಮತ್ತು ಸಹಜವಾದ ಲೈಂಗಿಕ ಕ್ರಿಯೆಯನ್ನು ಕೇವಲ ಸಂತಾನೋತ್ಪತ್ತಿಯ ಉದ್ದೇಶದಿಂದ ಪರಿಗಣಿಸದೇ ಪ್ಲೇಟೋನಿಕ್‌ ಪ್ರೀತಿಯ ಪರಿಕಲ್ಪನೆಯ ಮೂಲಕವೂ ನೋಡುವ ದಿನಗಳಲ್ಲಿ ನಾವಿದ್ದೇವೆ.

ಸಲಿಂಗರತಿಗೆ ಭಾರತದಲ್ಲಿ ವಿರೋಧ ವ್ಯಕ್ತವಾಗಲು ಮೂಲ ಕಾರಣ ಇದೊಂದು ಪಶ್ಚಿಮದಿಂದ ಬಂದಿರುವ ಮಾನಸಿಕ ಕಾಯಿಲೆ ಎಂಬ ನಂಬಿಕೆ. ಸ್ವತಂತ್ರ ದೇಶವಾದ ಭಾರತದಲ್ಲಿ ಸಂವಿಧಾನ ಅನುಷ್ಠಾನಗೊಂಡು ‘ಸಾಮಾಜಿಕ ನ್ಯಾಯ’ ಮತ್ತು ‘ಸಾಮಾಜಿಕ ಒಳಗೊಳ್ಳಲ್ಪಡುವಿಕೆ’ ಪರಿಕಲ್ಪನೆಗಳಿಗೆ ಆದ್ಯತೆಯಿದೆ.

ಇತಿಹಾಸವನ್ನು ಅರಿಯುವುದು ಮತ್ತು ಹೊಸತಾದ ಇತಿಹಾಸಕ್ಕೆ ನಾಂದಿ ಹಾಡುವುದು ಈ ಸಂವಿಧಾನದ ಮೂಲ ಉದ್ದೇಶ. ಆದ್ದರಿಂದ ನಾವು ಈ ಹೊಸ ಬೆಳವಣಿಗೆಯನ್ನು ಹಾಗೂ ಸಲಿಂಗಿಗಳನ್ನು ‘ಚೌಕಟ್ಟಿನಾಚೆಯವರು’ ಎಂದು ಹೊರದೂಡುವುದು ಅಮಾನವೀಯ.

ತುಳಿತಕ್ಕೊಳಪಟ್ಟಿದ್ದ ಸಾವಿರಾರು ಸಮುದಾಯಗಳು ಸಂವಿಧಾನದ ಫಲವಾಗಿ ಹೇಗೆ ಮೇಲ್ಮುಖವಾಗಿ ಚಲನಶೀಲಗೊಂಡವೋ ಹಾಗೆಯೇ ಸಲಿಂಗಿಗಳಿಗೂ ಸ್ಥಾನ ದೊರಕಿಸುವುದು ಮತ್ತು ಹೊಸತಾದ ಇತಿಹಾಸಕ್ಕೆ ಮುನ್ನುಡಿ ಬರೆಯುವುದು ಸಾಂವಿಧಾನಿಕ ಧರ್ಮವಾಗಿದೆ.

- ಶಿವಲಿಂಗಸ್ವಾಮಿ ಎಚ್‌ ಕೆ ತುಮಕೂರು

Follow Us:
Download App:
  • android
  • ios