ಭಾರತದಲ್ಲಿ ಕೀಳಾಗಿ ಕಾಣುವ ಪ್ಲಂಬರ್, ಕಾರ್ಪೆಂಟರ್‌ನಂತಹ ಕೈಕೆಲಸಗಳಿಗೆ ಆಸ್ಟ್ರೇಲಿಯಾದಲ್ಲಿ ಸಿಗುವ ಗೌರವ ಮತ್ತು ಕೋಟಿಗಟ್ಟಲೆ ಸಂಬಳದ ಬಗ್ಗೆ ಅನಿವಾಸಿ ಭಾರತೀಯ ಯುವಕನೊಬ್ಬ ವಿಡಿಯೋದಲ್ಲಿ ವಿವರಿಸಿದ್ದಾನೆ. ಈ 'ಬ್ಲೂ ಕಾಲರ್' ಉದ್ಯೋಗಗಳಿಗೆ ಅಲ್ಲಿರುವ ಅಗಾಧ ಬೇಡಿಕೆ, ಸಾಮಾಜಿಕ ಮನ್ನಣೆ ಇದೆ.
ಭಾರತದಲ್ಲಿ ಸಾಮಾನ್ಯವಾಗಿ 'ಹಳ್ಳಿಯ ಜನರು ಮಕ್ಕಳು ಸರಿಯಾಗಿ ಓದಿಲ್ಲ ಅಂದರೆ ದನ ಅಥವಾ ಕತ್ತೆ ಕಾಯೋನು ಆಗ್ತೀಯಾ ಎಂದರೆ, ಸಿಟಿಯ ಜನರು ನೀನು ಬಿಲ್ಡಿಂಗ್ ಕಟ್ಟೋ ಲೇಬರ್ ಅಥವಾ ಪ್ಲಂಬರ್ ಆಗ್ತೀಯಾ' ಎಂದು ಮಕ್ಕಳನ್ನು ಹೆದರಿಸುವುದು ಅಥವಾ ಲೇವಡಿ ಮಾಡುವುದು ನಮಗೆಲ್ಲಾ ತಿಳಿದಿರುವ ಸಂಗತಿ. ಆದರೆ, ವಿದೇಶಗಳಲ್ಲಿ ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಅಲ್ಲಿ ಕೈಯಿಂದ ಕೆಲಸ ಮಾಡುವ ಕುಶಲಕರ್ಮಿಗಳಿಗೆ ಸಿಗುವ ಸಂಬಳ ಮತ್ತು ಸಾಮಾಜಿಕ ಗೌರವದ ಬಗ್ಗೆ ಅನಿವಾಸಿ ಭಾರತೀಯ ಯುವಕನೊಬ್ಬ ಹಂಚಿಕೊಂಡಿರುವ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.
ಒಂದು ವಿಡಿಯೋ, ಸಾವಿರ ಚರ್ಚೆ:
ಅಡ್ಡಿ ಖನೇಜಾ ಎಂಬ ಯುವಕ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ, ಭಾರತ ಮತ್ತು ಆಸ್ಟ್ರೇಲಿಯಾದ ಉದ್ಯೋಗ ಸಂಸ್ಕೃತಿಯಲ್ಲಿರುವ ಅಗಾಧ ವ್ಯತ್ಯಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. 'ಭಾರತದಲ್ಲಿ ಪ್ಲಂಬರ್ ಅಥವಾ ಕಾರ್ಪೆಂಟರ್ ಕೆಲಸವನ್ನು ಕೆಳಮಟ್ಟದ ಕೆಲಸವೆಂದು ನೋಡಲಾಗುತ್ತದೆ. ಆದರೆ ಆಸ್ಟ್ರೇಲಿಯಾದಲ್ಲಿ ಮಕ್ಕಳು ದೊಡ್ಡವರಾದ ಮೇಲೆ ಇಂತಹ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಮ್ಮೆ ಪಡುತ್ತಾರೆ' ಎಂದು ಆತ ಹೇಳಿದ್ದಾನೆ.
ಬರೋಬ್ಬರಿ 1 ಕೋಟಿಗೂ ಅಧಿಕ ಸಂಬಳ!
ಆಸ್ಟ್ರೇಲಿಯಾದಲ್ಲಿ ಈ 'ಬ್ಲೂ ಕಾಲರ್' ಕೆಲಸಗಳಿಗೆ ಸಿಗುವ ಸಂಬಳ ಕೇಳಿದರೆ ಐಟಿ ಉದ್ಯೋಗಿಗಳೂ ಒಂದು ಕ್ಷಣ ಆಶ್ಚರ್ಯಪಡುತ್ತಾರೆ.
ಖನೇಜಾ ನೀಡಿರುವ ಮಾಹಿತಿಯ ಪ್ರಕಾರ:
- ಒಬ್ಬ ಕನ್‌ಸ್ಟ್ರಕ್ಷನ್ ಮ್ಯಾನೇಜರ್ ವರ್ಷಕ್ಕೆ ಸುಮಾರು $2,00,000 (ಅಂದಾಜು 1.10 ಕೋಟಿ ರೂ.) ವರೆಗೆ ಸಂಪಾದಿಸಬಹುದು.
- ಎಲೆಕ್ಟ್ರಿಷಿಯನ್ ಅಥವಾ ಪ್ಲಂಬರ್ ಕೆಲಸ ಮಾಡುವವರು ವರ್ಷಕ್ಕೆ ಸುಲಭವಾಗಿ $1,20,000 (ಅಂದಾಜು 66 ಲಕ್ಷ ರೂ.) ಗಿಂತ ಹೆಚ್ಚು ಗಳಿಸುತ್ತಾರೆ.
- ತಮ್ಮ ಮನೆಯಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡಿರುವ ಅಡ್ಡಿ, 'ನಮ್ಮ ಮನೆಯ ಲಾಕ್ ರಿಪೇರಿ ಮಾಡಲು ಬಂದ ಕಾರ್ಪೆಂಟರ್ ಕೇವಲ 15 ನಿಮಿಷ ಕೆಲಸ ಮಾಡಿದ್ದಕ್ಕೆ 150 ಡಾಲರ್ (ಸುಮಾರು 8,300 ರೂ.) ಚಾರ್ಜ್ ಮಾಡಿದ' ಎಂದು ತಿಳಿಸಿದ್ದಾರೆ. ಇದರಿಂದ ಅಲ್ಲಿನ ಕುಶಲಕರ್ಮಿಗಳ ಬೇಡಿಕೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ.
ಗೌರವ ಮತ್ತು ಘನತೆ:
ಸಂಬಳವಷ್ಟೇ ಅಲ್ಲದೆ, ಆಸ್ಟ್ರೇಲಿಯಾದಲ್ಲಿ ಇಂತಹ ಕೆಲಸ ಮಾಡುವವರಿಗೆ ಸಿಗುವ ಸಾಮಾಜಿಕ ಮನ್ನಣೆ ಅತ್ಯಂತ ದೊಡ್ಡದು. ಅಲ್ಲಿ ಯಾರೂ ಒಬ್ಬ ಪ್ಲಂಬರ್‌ನನ್ನು ಅಥವಾ ಎಲೆಕ್ಟ್ರಿಷಿಯನ್‌ನ್ನು ಕೀಳಾಗಿ ನೋಡುವುದಿಲ್ಲ. 'ಕೈಯಿಂದ ದುಡಿಯುವವರಿಗೆ ಅಲ್ಲಿ ದೊಡ್ಡ ಗೌರವವಿದೆ. ಯಾವುದಾದರೂ ಒಂದು ಕೌಶಲ್ಯ (Skill) ನಿಮ್ಮ ಕೈಯಲ್ಲಿದ್ದರೆ, ಆಸ್ಟ್ರೇಲಿಯಾದಲ್ಲಿ ನೀವು ರಾಜನಂತೆ ಬದುಕಬಹುದು' ಎಂದು ಆತ ವಿವರಿಸಿದ್ದಾನೆ.
ಭಾರತದಲ್ಲಿ ಯಾಕಿಂತಾ ಸ್ಥಿತಿ?
ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಅಧಿಕ ಜನಸಂಖ್ಯೆ ಇರುವುದರಿಂದ ಕಾರ್ಮಿಕರು ಕಡಿಮೆ ಸಂಬಳಕ್ಕೆ ಸಿಗುತ್ತಾರೆ, ಹಾಗಾಗಿ ಅವರಿಗೆ ಬೆಲೆ ಇಲ್ಲ ಎಂಬ ಅಭಿಪ್ರಾಯ ಒಂದೆಡೆಯಾದರೆ, ಕಾಯಕದ ಗೌರವ (Dignity of Labor) ನಮ್ಮಲ್ಲಿ ಕಡಿಮೆ ಇರುವುದು ಇದಕ್ಕೆ ಕಾರಣ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಕೆಲಸ ಯಾವುದಾದರೂ ಇರಲಿ, ಅದರಲ್ಲಿ ನೈಪುಣ್ಯತೆ ಇದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಗೌರವ ಮತ್ತು ಹಣ ಎರಡೂ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.


