- ಆಶಿತಾ ಎಸ್‌. ಗೌಡ ಬಿಳಿನೆಲೆ

ಜೀವನ ಅನ್ನುವಂತದ್ದು ಎಲ್ಲಿ ಹೇಗೆ ಯಾವಾಗ ಶುರುವಾಗುತ್ತದೆ ಎನ್ನುವುದು ಊಹೆಗೆ ನಿಲುಕದ್ದು. ಜೀವ ಬಂದು ಜೀವನ ಆರಂಭಗೊಳ್ಳುವುದು ಅದೊಂದು ಅದ್ಭುತವು ಹೌದು. ಒಬ್ಬ ಅರಸನಂತೆ ಜೀವನ ನಡೆಸಿದರೆ ಇನ್ನೊಬ್ಬ ಆಳಿನಂತೆ ಜೀವನ ನಡೆಸುತ್ತಾನೆ. ಅಂತಹ ಏರುಪೇರಿನ ಜೀವನ ನಮ್ಮದು.

ಅದೊಂದು ಬೃಹತ್‌ ನಗರ ಅಲ್ಲಿ ಎಷ್ಟುಸಿರಿವಂತರು ಇದ್ದರೋ ಅಷ್ಟೇ ಒಂದು ಹೊತ್ತಿನ ಊಟಕ್ಕೆ ಪರಾದಾಡುವವರೂ ಇದ್ದಾರೆ. ಮುಂಜಾನೆಯೇ ಗಾಡಿ ತಳ್ಳಿಕೊಂಡು ತರಕಾರಿ ಮಾರೋರು ಮನೆ ಮನೆಗಳ ಮುಂದೆ ನಿಂತು ಸೋಪ್ಪು ತರಕಾರಿ ಟೋಮಟೋ, ಸೌತೆ ಕಾಯಿ ಅಂತ ಕೂಗಿಯೇ 2 ಅಂತಸ್ತಿನ ಮನೆಯೊಳಗೆ ಏಸಿ ಹಾಕಿ ಬೆಚ್ಚಗೆ ಬೆಡ್‌ ಮೇಲೆ ಮಲಗಿರೋರನ್ನು ಎಬ್ಬಿಸುತ್ತಾರೆ. ಅವರ ಧ್ವನಿಗೆ ಓ ಗೊಟ್ಟಿಮನೆಯ ಹೆಂಗಸರು ತರಕಾರಿ ಮಾರುವವರ ಹತ್ರ 20ರೂಪಾಯಿಗೆ ಸಿಗೋ ತರಕಾರಿನ್ನ ಚೌಕಾಸಿ ಮಾಡಿ 10 ರೂಪಾಯಿಗೊ ಅಥವಾ 15 ರೂಪಾಯಿಗೊ ತೆಗೆದುಕೊಳ್ಳುವುದುಂಟು.

ಇಷ್ಟಿದ್ದರೆ ಅಷ್ಟು, ಅಷ್ಟಿದ್ದರೆ ಮತ್ತಷ್ಟು, ಮತ್ತಷ್ಟುಇದ್ದರೆ ಮಗದಷ್ಟುಎನ್ನುವಂತೆ ದಾರಿಹೋಕರಲ್ಲಿ ಈ ಶ್ರೀಮಂತರ ದಬ್ಬಾಳಿಗೆ ಇನ್ನೂ ಕೊನೆಗಾಣುವಂತೆ ಕಾಣಿಸುತ್ತಿಲ್ಲ. ದಿನದ 24 ಗಂಟೆಯು ಶಬ್ದಕ್ಕೆ ವಿರಾಮವಿಲ್ಲದೆ ಓಡಾಡುವ ವಾಹನಗಳು. ವಿಸ್ತಾರವಾದ ರಸ್ತೆಯಿದ್ದರೂ ಓಡಾಡಲು ಜಾಗವಿಲ್ಲ ಅಷ್ಟೊಂದು ವಾಹನಗಳು. ಪಾದಚಾರಿಗಳಿಗೆ ಓಡಾಡಲು ಸರಿಯಾದ ಫುಟ್‌ಪಾತ್‌ಗಳಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿಗಳು, ಗಬ್ಬು ನಾರುವ ವ್ಯವಸ್ಥೆ. ಈ ಮಧ್ಯೆ ಅಲ್ಲೊಬ್ಬಳು ಕೈ ರೇಖೆಗಳು ಮಾಸಿ ಹೋಗುವಷ್ಟುದುಡಿಯುತ್ತಿದ್ದಳು. ಹೌದು ನಾನು ಆ ಅಜ್ಜಿಗಾಗಿ ಇನ್ನು ಆಳಾಗಿ ದುಡಿಯುತ್ತಿದ್ದೇನೆ.

ನಾವು ಅಮ್ಮನಿಗೆ ಮೂರು ಜನ ಹೆಣ್ಣು ಮಕ್ಕಳು. ನನಗಿಬ್ಬರು ಅಕ್ಕಂದಿರು. ನಾನು ಐದು ವರ್ಷದ ಮಗುವಾಗಿದ್ದಾಗಲೇ ನನ್ನಮ್ಮ ಶ್ರೀಮಂತರ ಮನೆ ಕೆಲಸಕ್ಕೆ ಸೇರಿಕೊಂಡರು. ಕಾರಣ ನಾವು ಮೂವರು ಹೆಣ್ಣು ಮಕ್ಕಳಾಗಿದ್ದರಿಂದ ನಮ್ಮ ಹೊಟ್ಟೆಗಾಗಿ ದುಡಿಯುವುದು ಅನಿವಾರ್ಯ. ನನ್ನ ಅಕ್ಕಂದಿರೂ ಅಮ್ಮನ ಜೊತೆಗೆ ದುಡಿಯಲು ಆರಂಭಿಸಿದರು. ನನಗೂ ಓದು ಎಂದರೆ ಏನೂ ಗೊತ್ತಿರಲಿಲ್ಲ, ದುಡಿಯುತ್ತಿದ್ದೆವು ಅಷ್ಟೆ. ಆ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರು. ಅವರ ಶೂ ಪಾಲಿಶ್‌, ಅವರ ಟಿಫಿನ್‌ ಬಾಕ್ಸ್‌ ತೊಳೆಯುವುದು ಅಷ್ಟೇ ಗೊತ್ತಿತ್ತು. ಆ ಮನೆಯವರೆಲ್ಲರ ಊಟವಾದ ನಂತರ ನಮಗೆ ಊಟ ಕೊಡುತ್ತಿದ್ದರು. ಹೆಚ್ಚೇನೂ ಇರದಿದ್ದರೂ ಹೊಟ್ಟೆಮಾತ್ರ ಖಾಲಿ ಇರುತ್ತಿರಲಿಲ್ಲ. ಹೀಗೆ ದಿನಗಳು ಉರುಳುತ್ತಿದ್ದವು.

ಅಕ್ಕರಿಬ್ಬರೂ ಮದುವೆ ವಯಸ್ಸಿಗೆ ಬಂದರು. ಈ ಸಮಯದಲ್ಲಿ ಒಂದಷ್ಟುಮಂದಿಯಿಂದ ಅಕ್ಕಂದಿರಿಗೆ ಹಿಂಸೆ ಎದುರಾಯಿತು. ಎಷ್ಟೆಂದರು ನಾವು ಕೆಲಸದವರು ಹಾಗಾಗಿ ಜನ ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗಿತ್ತು. ಹಣಕ್ಕಾಗಿ ದುಡಿಯುತ್ತೇವೆ ಎಂದು, ಹಣದಲ್ಲೆ ನನ್ನ ಅಕ್ಕಂದಿರನ್ನು ಅಳೆದಿದ್ದರು. ಆದರೆ ಇದಕ್ಕೆ ತಲೆಬಾಗದೆ ಅಮ್ಮ, ಹತ್ತಿರದ ಸಂಬಂಧಿಕರಿಗೆ ಮದುವೆಯ ಮಾಡಿ ಕೊಟ್ಟರೂ. ನಂತರ ಸ್ವಲ್ಪ ನೆಮ್ಮದಿಯಾಯಿತು. ಮದುವೆಯ ನಂತರವೂ ಅಕ್ಕಂದಿರು ಮತ್ತೆ ಅದೇ ಕೆಲಸಕ್ಕೆ ನಮ್ಮ ಜೊತೆಗೆ ಬಂದರೂ.

ಅಮ್ಮನಿಗೆ ವಯಸ್ಸಾಗಿದ್ದರಿಂದ ಮನೆಯಲ್ಲೇ ಇದ್ದರು. ನಾನು ಹಾಗೂ ಅಕ್ಕಂದಿರು ಕೆಲಸ ಮುಂದುವರಿಸಿದ್ದೆವು. ಈವರೆಗೂ ಅಷ್ಟುಇಷ್ಟುಅಂತ ಆ ಮನೆಯವರು ಸಂಬಳ ಕೊಟ್ಟವರಲ್ಲ, ನಾವೂ ಕೇಳಿದವರಲ್ಲ. ಆದರೆ ಆ ಮನೆಯಲ್ಲಿದ್ದ ಹಿರಿಯ ಜೀವವೊಂದು ನಮಗೇ ಗೊತ್ತಿಲ್ಲದಂತೆ ಸಹಾಯ ಮಾಡುತ್ತಿತ್ತು. ಆ ಮನೆಗೆ ನಾವು ದುಡಿಯುವುದು ಅನಿವಾರ್ಯವಾಗಿತ್ತು. ದಿನ ಕಳೆದಂತೆ ನನ್ನ ಅಕ್ಕಂದಿರು ಬೇರೆ ಮನೆಯ ಕೆಲಸಕ್ಕೆ ಹೋಗಲು ತಿಳಿಸಿದರು. ನಾನು ಕೆಲಸ ಮಾಡುತ್ತಿದ್ದ ಮನೆಯ ಪಕ್ಕದ ಬಿಲ್ಡಿಂಗ್‌ನಲ್ಲಿ ಅವರ ಕೆಲಸ. ಅಕ್ಕಂದಿರು ಕಾರು ತೊಳೆಯುವುದು, ರಸ್ತೆ ಗುಡಿಸುತ್ತಿದ್ದರು. ಇದನ್ನೆಲ್ಲಾ ಮರೆಯಲ್ಲೇ ನಿಂತು ನೋಡುತ್ತಿದ್ದೆ.

ಮನೆಯ ಯಜಮಾನರು ನನ್ನನ್ನು ಕಿಂಚಿತ್ತು ವಿರಾಮ ನೀಡದಂತೆ ದುಡಿಸಿಕೊಳ್ಳುತ್ತಿದ್ದರು. ಇದರಿಂದ ನನ್ನ ಅಂಗೈನ ರೇಖೆಗಳಿಲ್ಲದೆ ಮರುಭೂಮಿಯಂತಾಗಿದೆ. ಆದರೂ ಅದೇ ಮನೆಯಲ್ಲಿದ್ದೇನೆ. ಅದಕ್ಕೆ ಕಾರಣ ಆ ಹಿರಿಯ ಮುದಿ ಜೀವ. ಆ ಜೀವಾ ನಿದ್ದೆಯಿಂದ ಏಳಲೆಂದೇ ಕಾಯುತ್ತಿರುವೆ. ಅವರು ಎದ್ದಾಗಷ್ಟೇ ಆ ಮನೆಯಲ್ಲಿ ಉಸಿರಾಡಲು ಸ್ವಾತಂತ್ರ್ಯ. ನನಗೆ ಯಾವುದೇ ಅಕ್ಷರಭ್ಯಾಸವಿಲ್ಲ. ಓದು ಬರಹದಲ್ಲಿ ನಾನೂ ಶೂನ್ಯ. ಅಜ್ಜಿ ಒಂದು ಪರ್ಸ್‌ನಲ್ಲಿ ಹಣ ಹಾಕಿ ಕೈಯಲ್ಲೊಂದು ಪುಸ್ತಕ ಕೊಟ್ಟು ಹತ್ತಿರದ ಬ್ಯಾಂಕ್‌ಗೆ ಕಳುಹಿಸುತ್ತಿದ್ದರು. ಅವರು ಹೇಳಿದ ಕೆಲಸ ಮಾಡಿ ಬರುತ್ತಿದ್ದೆ.

ಒಂದು ದಿನ ಪಕ್ಕದ ಮನೆಯಲ್ಲಿ ಕೆಲಸ ಮಾಡುವ ಒಬ್ಬರು ನಾನು ಬ್ಯಾಂಕ್‌ಗೆ ಹೋಗುವುದನ್ನು ಗಮನಿಸಿ, ನನ್ನ ಬಳಿ ನಾನೂ ಬ್ಯಾಂಕ್‌ಗೆ ಹೋಗ್ತಾ ಇದ್ದೇನೆ ನಿಂಗೆ ಹೋಗ್ಲಿಕ್ಕೆ ಇದ್ದರೆ ಹೇಳು ಎಂದಿದ್ದರು. ಅದರಂತೆ ನಾನೂ ಬ್ಯಾಂಕ್‌ಗೆ ಹೋಗುವ ಬದಲು ಮುಂದಿನ ದಿನ ಅದರ ಬಳಿ ನನ್ನ ಬ್ಯಾಂಕ್‌ ಪುಸ್ತಕ ಕೊಟ್ಟುಬಿಟ್ಟೆ. ಅವರು ಎಂದಿನಂತೆ ಕೆಲಸ ಮುಗಿಸಿ ನನ್ನ ಕೈಲಿಟ್ಟು ಹೋದರು.

ನಮ್ಮನ್ನು ಪ್ರೀತಿಸದೇ ಇನ್ನೊಬ್ಬರನ್ನು ಪ್ರೀತಿಸುವುದು ಹೇಗೆ ಸಾಧ್ಯ?

ಹೀಗೆ ದಿನ ಉರುಳುತ್ತಿತ್ತು. ಒಂದು ದಿನ ಅಜ್ಜಿ ಬ್ಯಾಂಕ್‌ ಪುಸ್ತಕವನ್ನು ನನ್ನ ಕೈಗೆ ಇಟ್ಟು ‘ಇದರಲ್ಲಿ ನಿನ್ನ ಮದುವೆಗೆ ಬೇಕಾಗುವಷ್ಟುಹಣ ಕೂಡಿ ಇಟ್ಟಿದ್ದೇನೆ’ ಯಾರಿಗೂ ಈ ಪುಸ್ತಕವನ್ನು ತಪ್ಪಿಯು ಕೊಡಬೇಡ ಎಂದರು. ಆ ಕ್ಷಣವೊಮ್ಮೆ ದಂಗಾಗಿ ಹೋದೆ. ನಮ್ಮಂತ ಕೆಲಸದವಳನ್ನು ಯಾರು ಮದುವೆಯಾಗುತ್ತಾರೆ. ಆದರೂ ಮತ್ತದೇ ಜೀವನ ಕೆಲಸದವಳಾಗಿಯೇ ಕಳೆಯುತ್ತೇನೆ ಅಷ್ಟೇ ಎಂದು ಸುಮ್ಮನಾದೆ. ಆದರೆ ನನಗೆ ಆ ಪುಸ್ತಕದಲ್ಲಿದ್ದ ಲೆಕ್ಕದ ಅರಿವಿರಲಿಲ್ಲ. ನನಗೆ ಕೇವಲ ಸಾವಿರ ರೂಪಾಯಿಗಳು ಇತ್ತೇನೋ ಅನ್ನಿಸಿ ಸುಮ್ಮನಾದೆ. ಆದರೆ ಯಾರಿಗೂ ಈ ಪುಸ್ತಕ ತಪ್ಪಿಯೂ ಕೊಡಬೇಡ ಎಂದ ಮಾತು ನನ್ನನ್ನು ಕಾಡಲು ಆರಂಭಿಸಿತು. ಅದಕ್ಕಾಗಿ ಒಂದು ದಿನ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದ ಓದುವ ಹುಡುಗಿಯ ಜೊತೆ ಆ ಪುಸ್ತಕವನ್ನು ಕೊಟ್ಟು ಆದರಲ್ಲಿ ಇರೊ ಮೊತ್ತವೇನೂ ಎಂದು ತಿಳಿದುಕೊಂಡೆ. ಆಗಾ ಆಕೆ ಅದನ್ನು ನೋಡಿ ದಂಗಾಗಿ ಹೋದಳು. ಹೌದು ಆ ಅಜ್ಜಿ ನನ್ನ ಎಣಿಕೆಗೆ ಮೀರಿದ ಮೊತ್ತದ ಹಣವನ್ನು ನನ್ನ ಮದುವೆಗಾಗಿ ಜಮೆ ಮಾಡಿದ್ದರು.

ಜೊತೆಗೆ ಒಂದಿಷ್ಟುದಿನಗಳ ಹಿಂದೆ ಅದೇ ಅಕೌಂಟ್‌ನಿಂದ ಒಂದಷ್ಟುಸಾವಿರ ಹಣವೂ ತೆಗೆಯಲಾಗಿತ್ತು ಎನ್ನುವ ಸತ್ಯವೂ ತಿಳಿಯಿತು. ನನ್ನ ಅಸಹಾಯಕತೆಯನ್ನು ಬಳಸಿಕೊಂಡು ಉಂಡವರು ಹಲವರು. ಇವೆಲ್ಲವನ್ನು ಬದಿಗೊತ್ತಿ ನಾನೂ ದುಡಿಯುತ್ತಿರುವುದು ಆ ಮನೆಯಲ್ಲಿ ಇರುವ ಆ ಹಿರಿಯ ಜೀವಕ್ಕಾಗಿ ಎಂದು ಆಕೆ ತನ್ನ ಮನದಾಳದ ನೋವನ್ನ ಹಂಚಿಕೊಂಡರು.

ಆಪತ್ತಿಗಾದವನೇ ನೆಂಟ