ಆಧ್ಯಾತ್ಮವೆಂದರೆ ಇಡೀ ಜಗದ ಸುಖವನ್ನ ಬಯಸುತ್ತಾ, ಧ್ಯಾನಿಸುತ್ತಾ, ಎಲ್ಲರಲ್ಲೂ, ಎಲ್ಲದರಲ್ಲೂ ದೈವಿಕತೆಯನ್ನ ಕಾಣುತ್ತಾ, ಜೀವವನ್ನ, ಜೀವನವನ್ನ ಆತ್ಮಾನಂದದಲ್ಲಿ ಲೀನಗೊಳಿಸುವ ಪ್ರಕ್ರಿಯೆ ಎಂಬುದು ನಿಜವೇ ಆದರೂ, ಸ್ವಯಂಪ್ರೀತಿ ಎಂಬ ನಾವಿಕನಿಲ್ಲದೆ ಆಧ್ಯಾತ್ಮದ ಕಡಲನ್ನು ಸೇರಲು ಸಾಧ್ಯವಿಲ್ಲ. ನಮಗೆ ನಮ್ಮ ಬಗ್ಗೆ ಇರಬೇಕಾದ ಅಭಿಮಾನ, ಪ್ರೀತಿ ಎಂದಿಗೂ ನಮ್ಮ ಕೈಜಾರಿ ಹೋಗದಂತೆ ನೋಡಿಕೊಳ್ಳಬೇಕು.

ಬದುಕು ನೀಡುವ ಪ್ರತಿಯೊಂದು ಪ್ರಶ್ನೆಗೂ ನಾನು ಉತ್ತರ ಹುಡುಕಬಲ್ಲೆ, ನಾನೇ ಆ ಉತ್ತರ ಎಂಬ ಆತ್ಮಸ್ಥೈರ್ಯ ಎಂದಿಗೂ ನಮ್ಮಲ್ಲಿರಬೇಕು.  ಆಧ್ಯಾತ್ಮದ ಟ್ರಕ್ಕಿಂಗ್ ಶುರುವಾಗಬೇಕಾದ್ದೇ ಸ್ವಯಂ ಪ್ರೀತಿ ಎಂಬ ಮೊದಲ ಹಂತದಿಂದಲೇ. ಹೀಗಾಗಿಯೇ ಆತ್ಮಸ್ಥೈರ್ಯದ ಸಾರವನ್ನು ಸಾರಿದ ವಿವೇಕಾನಂದರು ಎಲ್ಲರಿಗಿಂತ ಆತ್ಮೀಯರೆನಿಸುವುದು, ಅದಷ್ಟೇ ಅಲ್ಲ, ಬಹುತೇಕ ಅದ್ವೈತ ಸಾರವು ತನ್ನನ್ನು ತಾನು ಅರಿಯುವುದರ ಬಗ್ಗೆಯೇ ಆಗಿದೆ.

ಮಾಡರ್ನ್ ಲೈಫಲಿ ನಾವೇಕೆ ಒಂಟಿಯಾಗುತ್ತಿದ್ದೇವೆ ಗೊತ್ತೇ?

ಆಧ್ಯಾತ್ಮದ ಸವಿಯನ್ನು ಸವಿಯುವ ವ್ಯಕ್ತಿ ಮೊದಲು ಪೂರ್ತಿ ಒಳಮುಖನಾಗಬೇಕು, ತನ್ನನ್ನು ತಾನು ಸರಿ ಮಾಡಿಕೊಳ್ಳುವುದರ ಬಗ್ಗೆ ಮತ್ತು ನೆಮ್ಮದಿಯ ಜೀವನವನ್ನು ಪಡೆದೆ ಎಂಬ ಹೆಮ್ಮೆಯ ಸಾಧಿಸುವ ಬಗ್ಗೆ ಅವನ ಚಿತ್ತ ನೆಟ್ಟಿರಬೇಕು. ‘ಮನಸ್ಸು ಒಂದು ಕೊಳವಿದ್ದಂತೆ, ಅಲ್ಲಿ ಪ್ರತಿನಿತ್ಯ ಪಾಚಿಯು ಬೆಳೆಯುತ್ತಲೇ ಇರುತ್ತದೆ, ಹೀಗಾಗಿ ಧ್ಯಾನಭ್ಯಾಸದಿಂದ ಪ್ರತಿನಿತ್ಯ ಮನೋಶುದ್ಧಿಯ ಕೆಲಸವಾಗಬೇಕು’ ಎಂದರು ಸ್ವಾಮಿ ವಿವೇಕಾನಂದರು.

ಶಂಕರರ ಸ್ವಾತ್ಮ ಪ್ರಕಾಶನಾ ಸ್ತೋತ್ರ, ಸ್ವರೂಪಾನುಸಂಧಾನಾಷ್ಟಕಂ, ನಿರ್ವಾಣ ಶತಕಂ ಕೃತಿಗಳಲ್ಲಿ ಸ್ವಯಂ ಪ್ರೀತಿಯ ದೈವಿಕತೆಯನ್ನು ತಿಳಿಸಿದ್ದಾರೆ. ಒಬ್ಬ ಸಾಧಕ ಮೊದಲು ತನ್ನ ಮೂಲ ಪ್ರಕೃತಿಯ ಅರಿವನ್ನು ಪಡೆದುಕೊಳ್ಳದ ಹೊರತು ಮುಂದೆ ಹೆಜ್ಜೆಯಿಡಲು ಸಾಧ್ಯವಿಲ್ಲ. ನನ್ನ ಏಳ್ಗೆಯ ಬಗ್ಗೆ ನಾನು ಹೋರಾಡಬೇಕು ಎಂಬ ಇಚ್ಛೆ ತಪ್ಪಲ್ಲ. ಅದು ಸ್ವಾರ್ಥಕ್ಕಿಂತ ಮಿಗಿಲಾಗಿ ಬೆಳವಣಿಗೆಯ ಭಾಗ. ಪ್ರತೀ ಮನುಷ್ಯನಿಗೂ

ಇರಬೇಕಾದ ಸ್ವಯಂ ಪ್ರೀತಿ!

ಎಲ್ಲಕ್ಕಿಂತ ಮೊದಲು ತನ್ನ ಇರುವಿಕೆಯನ್ನ ಕಡೆಗಣಿಸಿ ನೋಡುತ್ತಿರುವ ವ್ಯಕ್ತಿಗಳಿಂದ, ತನ್ನ ಸ್ವಾಭಿಮಾನಕ್ಕೆ ಪೆಟ್ಟಾಗುತ್ತಿರುವ ಜಾಗದಿಂದ, ನೋವು ಕೊಡುತ್ತಿರುವ ಯಾವುದೇ ವಿಷಯದಿಂದ ಸಾಧಕರು ದೂರವಿರಬೇಕು, ನಂತರ ತಮ್ಮ ಅಷ್ಟೂ ಕೀಳರಿಮೆಯನ್ನ ಜ್ಞಾನದ ಖಡ್ಗದಿಂದ ಸಂಹರಿಸಿ ಬೆಳಕಿನ ನದಿ ಹರಿಯಲು ಅನುವು ಮಾಡಿಕೊಡಬೇಕು, ಆದ ತಪ್ಪುಗಳನ್ನೆಲ್ಲಾ ಮನ್ನಿಸಿ, ತನ್ನನ್ನು ತಾನು ಕ್ಷಮಿಸಿ, ಮುಂದೆಂದೂ ಈ ತಪ್ಪನ್ನು ಮಾಡಲಾರೆ ಎಂದು ಶಪಥ ಮಾಡಬೇಕು.

ಸದಾ ಸ್ವಯಂನ ಅರಿವು ನಮ್ಮಲ್ಲಿರಬೇಕು.

ಏಕೆಂದರೆ ಸ್ವಯಂ ಪ್ರೀತಿ ಎಂಬ ಭೂಮಿಯನ್ನ ತಿಳಿಯದೆ, ವಿಶ್ವಪ್ರೇಮವೆಂಬ ಆಗಸವನ್ನ ತಿಳಿಯಲು ಸಾಧ್ಯವಿಲ್ಲ. ಸ್ವಯಂ ಪ್ರೀತಿ ಎಂಬ ಹೂವು ಅರಳದೆ, ಅದರ ಸುಗಂಧವು ಲೋಕಕ್ಕೆ ಹರಡಲಾರದು. ಮೊದಲು ಪ್ರೀತಿ ಎಂಬ ಸಸಿ ತನ್ನೊಳಗೆ ಮೊಳಕೆಯೊಡೆಯಬೇಕು. ನಂತರ ಅದು ಹೆಮ್ಮರವಾಗಿ ಬೆಳೆದು ಬೇರೆಯವರಿಗೆ ಫಲವನ್ನು ಕೊಡಬೇಕು. ಆದ ತಪ್ಪಿಗೆಲ್ಲಾ ಮೂಲೆಯಲ್ಲಿ ಕೂತು ಅಳುವುದನ್ನ ಬಿಟ್ಟು, ಪ್ರತಿಯೊಂದು ಘಟನೆಗಳನ್ನೂ ಅರಿಯುವ ಪ್ರಯತ್ನ ಮಾಡಬೇಕು. ಆ ಅನುಭವವನ್ನ ಪಡೆದು ಬಂದ ಆತ್ಮದ ಬಗ್ಗೆ ಹೆಮ್ಮೆಯಿಂದಿರಬೇಕು. ಪ್ರತಿನಿತ್ಯ ನೀತಿ ಮಾರ್ಗದಲ್ಲಿ ನಡೆಯುತ್ತಿದ್ದೇನೆ ಎಂಬ ನೆಮ್ಮದಿ
ನಮ್ಮನ್ನಾವರಿಸಬೇಕು. ‘ನೀನೇ ಬೆಳಕು’ ಎಂದರು ಹಿರಿಯರು. ಬನ್ನಿ, ಒಮ್ಮೆ ನಮ್ಮನ್ನ ನಾವು ಅಪ್ಪಿಬಿಡೋಣ, ಆಧ್ಯಾತ್ಮ ಸಾಧನೆ ಅಲ್ಲಿಂದ ಶುರುಮಾಡೋಣ.