ಆಪತ್ತಿಗಾಗೋನೇ ನೆಂಟ ಎಂಬ ಮಾತಿದೆ. ಆದರೆ, ನೆಂಟರಾರೂ ಆಪತ್ತಿಗಾದ ಉದಾಹರಣೆಗಳು ವಿರಳ. ಅಂತೆಯೇ ಗೆಳೆಯರು ಆಪತ್ತಿಗಾಗದ ಉದಾಹರಣೆಗಳು ಕೂಡಾ ವಿರಳ. ಇಂಥ ಗೆಳೆಯರು ನಿಮಗಿದ್ದರೆ ಈ ಅನುಭವಗಳು ನಿಮಗಾಗಿರುತ್ತವೆ...


1. ಪರೀಕ್ಷೆ ಹಿಂದಿನ ರಾತ್ರಿ ಇಡೀ ಸಿಲಬಸ್ ಹೇಳಿಕೊಡಬಲ್ಲರು!
ಅದೇನೋ ಗೊತ್ತಿಲ್ಲ, ಇಡೀ ಒಂದು ಸೆಮಿಸ್ಟರ್‌ನಲ್ಲಿ ಕ್ಲಾಸಲ್ಲಿ ಹೇಳಿದ ಪಾಠ ನಾವು ಕೇಳಿರುವುದಿಲ್ಲ, ಏಕಾಗ್ರತೆ ಸಾಧ್ಯವಾಗಿರುವುದಿಲ್ಲ, ಟೀಚರ್ ಧ್ವನಿಗೆ ನಿದ್ರೆ ನಿಲ್ಲಿಸಲಾಗುತ್ತಿರುವುದಿಲ್ಲ, ಮನೆಗೆ ಬಂದು ಓದಿರುವುದಿಲ್ಲ, ಹೋಂವರ್ಕ್ ಮಾಡಿರುವುದಿಲ್ಲ. ಆದರೂ, ಪರೀಕ್ಷೆ ಎಂದರೆ ನಮಗೆ ಭಯವಿಲ್ಲ. ಏಕೆಂದರೆ ಗೆಳೆಯರಿದ್ದಾರಲ್ಲ... ಇಲ್ಲ, ನಾನು ಅವರು ಕಾಪಿ ಹೊಡೆಯೋಕೆ ಹೆಲ್ಪ್ ಮಾಡ್ತಾರಂತ ಹೇಳ್ತಿಲ್ಲ. ಆದರೆ, ಪರೀಕ್ಷೆ ಹಿಂದಿನ ರಾತ್ರಿ ಅವರು ಗಲಿವರ್‌ನಂತಿರುವ ಇಡೀ ಸಿಲಬಸನ್ನು ಲಿಲಿಪುಟ್ ಆಗಿ ಪರಿವರ್ತಿಸಿ ಪಟಪಟನೆ ವಿಷಯ ಹೇಳ್ತಾರಲ್ಲ... ಅಬ್ಬಾ! ಇಷ್ಟೇನಾ, ಬರೆದು ಪಾಸಾಗೋದೇನ್ ಮಹಾ ಅನಿಸೋದೇ ಆಗ. ಇನ್ನು ಎಕ್ಸಾಂಗೆ ಹೋಗುವ ಕಡೆ ಕ್ಷಣದಲ್ಲಿ ಅವರು ಹೇಳುವ ಆ ನಾಲ್ಕೈದು ಮುಖ್ಯವಾದ ಪಾಯಿಂಟ್ಸ್‌ಗಳು, ಇದು ಬಂದೇ ಬರುತ್ತೆ ನೋಡ್ಕೋ ಅಂತ ಹೇಳಿ ವಿವರಿಸೋ ವಿಷಯಗಳು ನಾವು ಯಾವ ವಿಷಯದಲ್ಲೂ ಹಿಂದೆ ಉಳಿಯಲು ಬಿಡೋಲ್ಲ. 

2. ಫಸ್ಟ್ ಇಂಪ್ರೆಶನ್ ಮೂಡಿಸೋಕೆ ಅವರ ಬೆಸ್ಟ್ ಬಟ್ಟೆ ಕೊಡಬಲ್ಲರು!
ನೀವು ನಿಮ್ಮ ಕ್ರಶ್ ಭೇಟಿಯಾಗೋಕೆ ಹೋಗ್ತಾ ಇದೀರಿ, ಮೊದಲ ಬಾರಿ ಡೇಟ್‌ಗೆ ಹೋಗ್ತಾ ಇದೀರಿ ಎಂದರೆ ಯಾವ ಬಟ್ಟೆ ಹಾಕೋದೆಂಬುದೇ ತಲೆನೋವು. ಆಗ ನಿಮ್ಮೆಲ್ಲ ವಾರ್ಡ್ರೋಬ್ ಜಾಲಾಡಿ, ಅಲ್ಲಿ ಯಾವುದೂ ಸರಿ ಕಾಣದೆ, ಕಡೆಗೆ ತಮ್ಮದೇ ವಿಶೇಷವಾದ ಕಾಸ್ಟ್ಲಿ ಬಟ್ಟೆಯನ್ನು ನಿಮಗೆ ಹಾಕಿ, ಯಾವ ಹೇರ್‌ಸ್ಟೈಲ್ ಮಾಡಬೇಕು, ಹೇಗೆ ನಗಬಾರದು, ಏನು ಮಾತಾಡಬೇಕು ಪ್ರತಿಯೊಂದನ್ನೂ ಹೇಳಿ ಆಲ್ ದಿ ಬೆಸ್ಟ್ ಹೇಳಿ ಕಳಿಸಿ, ನೀವು ಬರೋದನ್ನೇ ಕಾಯುತ್ತಾ ಕತೆ ಕೇಳಲು ಕುಳಿತುಕೊಳ್ಳಲು ಬೆಸ್ಟ್ ಫ್ರೆಂಡ್‌ನಿಂದ ಮಾತ್ರ ಸಾಧ್ಯ. ಉಳಿದ ದಿನಗಳಲ್ಲಿ ಕೂಡಾ ಅವರು ನಾವು ಕೋಣೆಯಿಂದ ಹೊರ ಹೋಗುವಾಗ ನಮಗೆ ಉತ್ತಮ ಫ್ಯಾಷನ್ ಅಡ್ವೈಸ್ ಕೊಟ್ಟು, ಸರಿ ಕಾಣುತ್ತಿದ್ದೀವೋ ಇಲ್ಲವೋ ಎಂದು ಹೇಳುವ ಕೆಲಸವನ್ನೂ ತಪ್ಪದೇ ಮಾಡುತ್ತಾರೆ. 

ಈ ಗೆಳೆತನಕ್ಕೆ ನೆಟ್ಟಿಗರು ಫುಲ್ ಫಿದಾ

3. ಕೌನ್ಸೆಲರ್‌ಗಿಂತ ಚೆನ್ನಾಗಿ ರಿಲೇಶನ್‌ಶಿಪ್ ಅಡ್ವೈಸ್ ಕೊಡಬಲ್ಲರು!
ನಿಮ್ಮ ಸಂಬಂಧಗಳ ಬಗ್ಗೆ ನಿಮಗಿಂತ ಹೆಚ್ಚಿನ ಕಾಳಜಿ ವಹಿಸಿ, ನೀವು ನಿಮ್ಮ ಸಂಗಾತಿಯನ್ನು ನೋಯಿಸದೆ ಮಾತನಾಡುವುದು ಹೇಗೆ, ಅವರು ನಿಮ್ಮನ್ನು ನೋಯಿಸಿದಾಗ ಹೇಗೆ ಪ್ರತಿಕ್ರಿಯಿಸಬೇಕು, ಮುನಿಸಿಕೊಂಡ ಗೆಳತಿಯನ್ನು ತಣಿಸುವುದು ಹೇಗೆ, ಅಪ್ಪನಿಗೆ ಸಾರಿ ಹೇಳಲು, ಅಮ್ಮನಿಗೆ ಅಪ್ಪಿಕೊಂಡು ಮುದ್ದು ಮಾಡಲು ಕೂಡಾ ಅವರು ಹೇಳಿಕೊಡಬಲ್ಲರು. ದುಃಖವಾದಾಗ ಮನಸ್ಸಿಗೆ ಚೈತನ್ಯ ತುಂಬಲು ಅವರಿಗಿಂತ ಉತ್ತಮ ಕೌನ್ಸೆಲರ್ ಬೇರೆಲ್ಲೂ ಸಿಗಲಾರರು. 

4. ಕಣ್ಣು ಕೂಡಾ ಮಿಟುಕಿಸದೆ ನಮ್ಮನ್ನು ಬಚಾವ್ ಮಾಡಬಲ್ಲರು!
ಕ್ಲಬ್‌ಗೆ ಹೋಗಿ ತಡವಾಗಿ ಮನೆಗೆ ಮರಳಿ ಕಂಬೈನ್ಡ್ ಸ್ಟಡಿ ಎಂದಾಗ, ಗರ್ಲ್‌ಫ್ರೆಂಡ್ ಜೊತೆ ಸುತ್ತಾಡಿ ಬೆಸ್ಟ್ ಫ್ರೆಂಡ್ ಜೊತೆ ಇದ್ದೆ ಎಂದಾಗ- ಪೋಷಕರು ನಿಮ್ಮ ಗೆಳೆಯರನ್ನು ವಿಚಾರಿಸಿದರೆ ನೀವೊಂದು ಕಣ್ಣು ಮಿಟುಕಿಸಿ ಕೇಳುವ ಅಗತ್ಯವೂ ಇಲ್ಲದೆ ಅವರು ನಿಮ್ಮನ್ನು ಬಚಾವ್ ಮಾಡಬಲ್ಲರು. ನಿಮ್ಮ ಕುರಿತಾಗಿ ಯಾರಿಗೆ ಯಾವ ಉತ್ತರ ನೀಡಬೇಕು, ಯಾವುದು ನೀಡಬಾರದು ಎಂಬುದೆಲ್ಲ ಅವರಿಗೆ ಚೆನ್ನಾಗಿ ಗೊತ್ತು. ಹಾಸ್ಟೆಲ್‌ನಲ್ಲಿರುವವರಾದರೆ ಅದೆಷ್ಟು ಬಾರಿ ವಾರ್ಡನ್ ಸಹಿ ಫೋರ್ಜರಿ ಮಾಡಿ ನಿಮ್ಮನ್ನು ಬಚಾವ್ ಮಾಡಿದ್ದಾರೋ ದೇವರಿಗೇ ಗೊತ್ತು. 

ಸ್ಯಾಂಡಲ್‌ವುಡ್ ಬೆಸ್ಟ್ ಫ್ರೆಂಡ್ಸ್ ನಡುವೇಕೆ ಮುನಿಸು?

5. ನಿಮ್ಮ ಮದುವೆ ಎಂದರೆ ಎ ಟು ಝಡ್ ಕೆಲಸ ನಿಭಾಯಿಸಬಲ್ಲರು!
ಗೆಳೆಯರಿಗೆ ಗೆಳೆಯನೊಬ್ಬನ ಮದುವೆ ಎಂಬ ವಿಷಯ ತಿಳಿದರೆ ಸಾಕು, ಮನೆಯವರಿಗಿಂತ ಹೆಚ್ಚು ಸಂಭ್ರಮಿಸುತ್ತಾರೆ. ನಾಲ್ಕು ದಿನ ಮೊದಲೇ ಮನೆಗೆ ಬಂದು ಫೋಟೋಗ್ರಫಿ, ಕಾಲ್ ಅಟೆಂಡ್ ಮಾಡುವುದು, ಎಲ್ಲ ಮೇಲ್ವಿಚಾರಣೆ ನೋಡುವುದು, ಸಾಮಾನು ಹೊರುವುದು, ಡೆಕೋರೇಶನ್ನಿಂದ ಹಿಡಿದು ನೆಂಟರಿಷ್ಟರನ್ನು ಬಸ್‌ಸ್ಟ್ಯಾಂಡ್‌ನಿಂದ ಕರೆ ತರುವ ತನಕ ಎಲ್ಲ ಜವಾಬ್ದಾರಿಗಳನ್ನೂ ಹೇಳದೆಯೇ ಹೆಗಲಿಗೆ ಹಾಕಿಕೊಳ್ಳಬಲ್ಲರು. ಇಷ್ಟು ಕೆಲಸಗಳ ನಡುವೆಯೂ ತಮಾಷೆ ಮಾಡುತ್ತಾ, ಮನರಂಜಿಸುತ್ತಾ ನಿಮ್ಮ ಮನೆಯವರೆಲ್ಲರ ಪ್ರೀತಿಗೆ ಪಾತ್ರರಾಗಬಲ್ಲರು.