ಮಗು ಹುಟ್ಟಿದ ಸುದ್ದಿ ಪರಿಚಯಸ್ಥರೆಲ್ಲರಿಗೂ ಸಂತೋಷದ ವಿಷಯವೇ. ಮಗುವನ್ನು ಮೊದಲ ಬಾರಿ ನೋಡುವವರೆಲ್ಲರೂ ಹಣ ಅಥವಾ ಇನ್ನಾವುದೇ ಉಡುಗೊರೆ ಕೊಟ್ಟು ಪಾಪುವಿನ ಆಗಮನವನ್ನು ಸಂಭ್ರಮಿಸುವವರೇ. ಹಾಗಿದ್ದರೆ ಮಗುವಿಗೆ ಏನೇನು ಕೊಡಬಹುದು?

ಕಸ್ಟಮೈಸ್ಡ್ ಉಡುಗೊರೆಗಳು

ಕಸ್ಟಮೈಸ್ಡ್ ಉಡುಗೊರೆಗಳು ಹೆಚ್ಚು ಜನರ ಮನಸ್ಸು ಗೆಲ್ಲುತ್ತವಲ್ಲದೆ, ನೀವು ಆ ಉಡುಗೊರೆಗಾಗಿ ಶ್ರಮ ಹಾಗೂ ಸಮಯ ನೀಡಿದ್ದನ್ನು ತೋರಿಸುತ್ತವೆ. ಅವು ಬಹುಕಾಲ ವಿಶೇಷವಾಗಿಯೇ ಉಳಿದು ಮನೆಯಲ್ಲಿ ವಿಶೇಷ ಸ್ಥಾನ ಪಡೆಯುತ್ತವೆ. ಮಗುವಿನ ಹೆಸರು ಹೊಂದಿದ ಶರ್ಟ್, ಮಗುವಿನ ಫೋಟೋ ಹೊಂದಿದ ಸ್ಕರ್ಟ್, ಮಗುವಿನ ಯಾತ್ರೆ ದಾಖಲು ಮಾಡುವ ಡೈರಿ, ಪರ್ಸನಲೈಸ್ಡ್ ಸಾಫ್ಟ್ ಟಾಯ್ಸ್, ಕ್ಲಾಕ್, ಬರ್ತ್ ಅನೌನ್ಸ್‌ಮೆಂಟ್ ದಿಂಬುಗಳು ಮುಂತಾದವು ಉತ್ತಮ ಆಯ್ಕೆ. 

ಚೊಚ್ಚಲ ಮಗುವಿನ ತಾಯಿ? ಮೂಢನಂಬಿಕೆಗಳಿಗೆ ಗೋಲಿ ಹೊಡಿ!

ಬೇಬಿ ಬಾತಿಂಗ್ ಸೆಟ್

ಮಗು ಹುಟ್ಟಿದ ದಿನವೇ ನೋಡಲು ಹೋಗುತ್ತೀರಾದರೆ, ಬೇಬಿ ಬಾತಿಂಗ್ ಸೆಟ್ ಉತ್ತಮ ಆಯ್ಕೆ. ಶಾಂಪೂ, ಬೇಬಿ ಕ್ರೀಂ, ಪೌಡರ್, ವೆಟ್ ವೈಪ್ಸ್ ಮುಂತಾದ ಬಹೂಪಯೋಗಿ ಕ್ರೀಂಗಳನ್ನು ಹೊಂದಿರುವ ಸೆಟ್ ನೀಡಬಹುದು. 

ಕ್ಲೋತ್ ಡೈಪರ್ಸ್

ನವಜಾತ ಶಿಶುವಿನ ಸುಸೂ ಬಟ್ಟೆ ಬದಲಿಸುವುದು ಬಹಳ ಶ್ರಮದಾಯಕ ಕೆಲಸ. ಗಂಟೆಗೆರಡು ಬಾರಿಯಂತೆ ಬಟ್ಟೆ ಬದಲಿಸಿ ಬದಲಿಸಿ ಹೊಸದಾಗಿ ಪೋಷಕರಾದವರು ಹೈರಾಣಾಗುತ್ತಾರೆ. ಇನ್ನು ಪ್ಲ್ಯಾಸ್ಟಿಕ್ ಡೈಪರ್ಸ್ ಮಕ್ಕಳಿಗೆ ಅಲರ್ಜಿಯಾಗುವ ಭಯ. ಅಲ್ಲದೆ, ಅವು ಎಕೋಫ್ರೆಂಡ್ಲಿ ಕೂಡಾ ಅಲ್ಲ. ಹೀಗಾಗಿ, ನವಜಾತ ಶಿಶುವಿಗೆ 3-4 ಕ್ಲೋತ್ ಡೈಪರ್ಸ್ ನೀಡಬಹುದು. ಇವು ಸುಮಾರು 2 ವರ್ಷಗಳವರೆಗೆ ಮಕ್ಕಳಿಗೆ ಬಳಸುವಂತೆ ಅಡ್ಜಸ್ಟೇಬಲ್ ಆಗಿರುತ್ತವಲ್ಲದೆ, 3-4 ಗಂಟೆ ಅನಾಯಾಸವಾಗಿ ಬಳಸಬಹುದು. ಪ್ರತಿದಿನ ಮಕ್ಕಳಿಗಾಗಿ ಇದನ್ನು ಬಳಸುವಾಗ ಪೋಷಕರು ನಿಮ್ಮನ್ನು ನೆನೆಸಿಕೊಳ್ಳದೇ ಇರುವುದಿಲ್ಲ. 

ಹೆತ್ತಮ್ಮನಿಗೆ ಮಾತ್ರವಲ್ಲ, ಅಪ್ಪನಿಗೂ ಸಿಗುತ್ತೆ ಪೆಟರ್ನಿಟಿ ಲೀವ್..

ಮಗುವಿನ ಬಟ್ಟೆ

ಪುಟ್ಟ ಮಕ್ಕಳಿಗೆ ಬಟ್ಟೆಗಳು ಎಷ್ಟಿದ್ದರೂ ಕಡಿಮೆಯೇ. ಪದೇ ಪದೇ ಒದ್ದೆಯಾಗುವ ಸಂಭವಗಳು ಜಾಸ್ತಿ, ಜೊತೆಗೆ ಅವಕ್ಕೆ ಹತ್ತು ಹಲವು ಬಟ್ಟೆ ಹಾಕಿ ನೋಡುವ ಕಾತರ ಪೋಷಕರದು. ಹೀಗಾಗಿ, ಮಿಟನ್ಸ್, ಸಾಕ್ಸ್, ಬಿಬ್ಸ್, ಕ್ಯಾಪ್ಸ್, ಹಾಗೂ ಅಂಗಿಯಿರುವ ಬಟ್ಟೆಯ ಸೆಟ್ ನೀಡಬಹುದು. 

ಬೆಳ್ಳಿಯ ವಸ್ತುಗಳು

ನವಜಾತ ಶಿಶುವಿಗೆ ಬೆಳ್ಳಿಯ ಉಡುಗೊರೆಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ. ಮಗು ಕಾಲು ಕುಣಿಸುವಾಗೆಲ್ಲ ಗೆಜ್ಜೆ ಝಲ್ ಎನ್ನುತ್ತಿದ್ದರೆ ಅದನ್ನು ನೋಡಲು, ಕೇಳಲು ಕಣ್ಣಿಗೆ ತಂಪು, ಕಿವಿಗೆ ಇಂಪು. ಬೆಳ್ಳಿಯ ಗೆಜ್ಜೆ, ಬೆಳ್ಳಿಯ ಸೊಂಟದ ಚೈನ್, ಬಳೆಗಳು, ಒಳಲೆ ಮುಂತಾದವನ್ನು ಕೊಡಬಹುದು. ಅಲ್ಲದೆ, ಪುಟಾಣಿ ಮಕ್ಕಳಿಗೆ 6 ತಿಂಗಳ ಬಳಿಕ ಮೇಲಿನ ಆಹಾರ ಕೊಡುವಾಗ ಭಾರತೀಯರು ಬೆಳ್ಳಿಯ ಬಟ್ಟಲು ಬಳಸುವುದು ವಾಡಿಕೆ. ಹಾಗಾಗಿ ಬೆಳ್ಳಿಯ ಬಟ್ಟಲು, ಲೋಟ, ಚಮಚವನ್ನೂ ಕೊಡಬಹುದು.

ನಿಮಗೆ ಗೊತ್ತಾಗದೆ ಮಕ್ಕಳು ಹೇಳಿಕೊಡುವ ತಿನ್ನೋ ಪಾಠ!

ಡೈಪರ್ ಬ್ಯಾಗ್

ಮಗು ಹುಟ್ಟಿದ ಮೇಲೆ ಎಲ್ಲೇ ಹೋಗುವುದಾದರೂ, ಕೇವಲ 2-3 ಗಂಟೆಗಳ ಭೇಟಿಯೇ ಆದರೂ ಪೋಷಕರು ಮಗುವಿನೊಂದಿಗೆ ದೊಡ್ಡದೊಂದು ಬ್ಯಾಗ್ ತೆಗೆದುಕೊಂಡು ಹೋಗುವುದು ಅವಶ್ಯಕ. 4 ಜೊತೆ ಮಗುವಿನ ಬಟ್ಟೆಗಳು, ವೈಪ್ಸ್, ಡೈಪರ್, ಮಗುವಿಗೆ ಹಾಸಲು, ಹೊದೆಯಲು ಕಾಟನ್ ಬಟ್ಟೆಗಳು, ಫೀಡಿಂಗ್ ಬಾಟಲ್, ಸ್ಯಾನಿಟೈಸರ್, ಕ್ರೀಮ್‌ಗಳು ಮುಂತಾದ ವಸ್ತುಗಳಿಲ್ಲದೆ ಎಲ್ಲಿಯೂ ಹೋಗಲಾಗದು. ಹೀಗಾಗಿ, ಡೈಪರ್ ಬ್ಯಾಗ್ ನೀಡಿದರೆ ವರ್ಷಗಳ ಕಾಲ ಬಹಳ ಚೆನ್ನಾಗಿ ಬಳಕೆಯಾಗುತ್ತದೆ.

ಗಿಲಿಗಿಚ್ಚಿ ಹಾಗೂ ಮ್ಯೂಸಿಕ್ ಟಾಯ್ಸ್

ನವಜಾತ ಶಿಶುಗಳಿಗೆ ಸಮಾಧಾನ ಪಡಿಸಲು, ಅವುಗಳನ್ನು ಖುಷಿಪಡಿಸಲು ಗಿಲಿಗಿಚ್ಚಿ, ಮ್ಯೂಸಿಕಲ್ ಟಾಯ್ಸ್‌ಗಳು ಬಹಳ ಬಳಕೆಗೆ ಬರುತ್ತವೆ. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ, ಬಣ್ಣಗಳ ಮುದ್ದುಮುದ್ದಾದ ಸಾಕಷ್ಟು ಪುಟಾಣಿ ಟಾಯ್ಸ್‌ಗಳು ದೊರೆಯುತ್ತವೆ. ಇದೂ ಕೂಡಾ ಉಡುಗೊರೆಗೆ ಉತ್ತಮ ಚಾಯ್ಸ್.