ಹೆತ್ತಮ್ಮನಿಗೆ ಮಾತ್ರವಲ್ಲ, ಅಪ್ಪನಿಗೂ ಸಿಗುತ್ತೆ ಪೆಟರ್ನಿಟಿ ಲೀವ್..
ಆಹಾರ ಸರಬರಾಜು ಸಂಸ್ಥೆ ಝೊಮ್ಯಾಟೋ ತನ್ನ ಉದ್ಯೋಗಿಗಳಿಗೆ 26 ವಾರಗಳ ಸಂಬಳಸಹಿತ ಮೆಟರ್ನಿಟಿ ಹಾಗೂ ಪೆಟರ್ನಿಟಿ ರಜೆ ಘೋಷಿಸಿದೆ. ಅಷ್ಟೇ ಅಲ್ಲ, ತನ್ನ ಉದ್ಯೋಗಿಯ ಪ್ರತಿ ಮಗುವಿಗೆ 1000 ಡಾಲರ್ ಹಣವನ್ನೂ ಉಡುಗೊರೆಯಾಗಿ ಕೊಡುವುದಾಗಿ ಹೇಳಿದೆ. ತಾಯಂದಿರಿಗೆ ಆರೂವರೆ ತಿಂಗಳು ರಜೆ ಓಕೆ, ಅಪ್ಪಂದಿರು ಅಷ್ಟು ತಿಂಗಳು ಮನೆಯಲ್ಲಿ ಕುಳಿತು ಮಾಡುವುದೇನು ಎಂಬುದಕ್ಕೆ ಇಲ್ಲಿದೆ ಉತ್ತರ.
ಮಗುವನ್ನು ಒಂಬತ್ತು ತಿಂಗಳು ಹೊರೋದು ತಾಯಿ, ಹೆರೋದು ತಾಯಿ, ನಂತರ ಹಾಲೂಡಿಸಿ ಸಾಕಿ ಸಲಹೋದು ತಾಯಿ. ಅಂದ ಮೇಲೆ ಈ ಅಪ್ಪಂದಿರಿಗೆ ಮಗು ಹುಟ್ಟಿದ ಬಳಿಕ 3-4 ದಿನ ರಜೆ ಸಿಕ್ಕರೆ ಸಾಕಲ್ಲವೆ? ಆರು ತಿಂಗಳು ಮನೆಯಲ್ಲಿ ಕುಳಿತು ಅವರು ಮಾಡುವುದೇನು ಎಂಬ ಯೋಚನೆ ನಿಮ್ಮದಾದರೆ, ಅದು ಖಂಡಿತಾ ತಪ್ಪು. ಅಪ್ಪಂದಿರಿಗೂ ಪೆಟರ್ನಿಟಿ ಲೀವ್ ಅಗತ್ಯವಿದೆ. ಅದರಿಂದ ಹಲವು ಪ್ರಯೋಜನಗಳಿವೆ. ಅವೇನೇನು ನೋಡೋಣ ಬನ್ನಿ.
1. ಮಹಿಳಾ ಸಬಲೀಕರಣ
ಹೌದು, ಸಾಮಾನ್ಯವಾಗಿ ಕಂಪನಿಗಳಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳುವಾಗ ಎಚ್ಆರ್ ಹತ್ತು ಬಾರಿ ಯೋಚಿಸುತ್ತಾರೆ. ಮಕ್ಕಳಾದ ಮೇಲೆ 6 ತಿಂಗಳು ಇವರಿಗೆ ಸುಮ್ಮನೆ ಸಂಬಳಸಹಿತ ರಜೆ ಕೊಡಬೇಕು. ಅದಕ್ಕಿಂತಾ, ಯುವಕರನ್ನು ಈ ನೌಕರಿಗೆ ತೆಗೆದುಕೊಳ್ಳೋಣ ಎಂದು ಆಲೋಚಿಸುತ್ತಾರೆ. ಒಂದು ವೇಳೆ ತೆಗೆದುಕೊಂಡರೂ ಮಗುವಿನ ಜವಾಬ್ದಾರಿಯನ್ನು ಸಂಪೂರ್ಣ ತಾಯಿಯೇ ಹೊತ್ತುಕೊಳ್ಳುವುದರಿಂದ ರಜೆ ಮುಗಿದ ಬಳಿಕ ಅವರು ಕೆಲಸ ಬಿಡುವುದೇ ಹೆಚ್ಚು. ಇದೇ ಕಾರಣಕ್ಕೆ ಮಹಿಳೆಯರು ದೊಡ್ಡ ದೊಡ್ಡ ಪೋಸ್ಟ್‌ಗಳನ್ನು ತಲುಪಿ ನಿರ್ವಹಿಸುವ ಅವಕಾಶದಿಂದ ವಂಚಿತರಾಗುತ್ತಾರೆ. ಅದೇ ಅಪ್ಪಂದಿರಿಗೂ ಪೇಯ್ಡ್ ಪೆಟರ್ನಿಟಿ ಲೀವ್ ಸಿಕ್ಕರೆ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಎಚ್ಆರ್ ಕೂಡಾ ಯೋಚಿಸಬೇಕಿಲ್ಲ, ಅಲ್ಲದೆ, ಈಗಿನ ಕಚೇರಿಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವ ಲಿಂಗ ತಾರತಮ್ಯವನ್ನೂ ತಪ್ಪಿಸಬಹುದು ಎನ್ನುತ್ತಾರೆ ಝೊಮ್ಯಾಟೋ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್. ತಮ್ಮ ಸಂಸ್ಥೆಯಲ್ಲಿ ಇದಕ್ಕಾಗಿಯೇ 26 ವಾರಗಳ ಪೇಯ್ಡ್ ಪೆಟರ್ನಿಟಿ ಲೀವ್ ನೀಡಲಿರುವುದಾಗಿ ಅವರು ಘೋಷಿಸಿದ್ದಾರೆ.
ಮಗುವಿಗೆ ಎದೆ ಹಾಲು ಕಮ್ಮಿ ಆಗ್ತಿದ್ಯಾ? ಇದನ್ನು ತಿಂದು ನೋಡಿ...
2. ಸಮಾನತೆ
ಸಮಾನತೆ ಎಂಬುದು ಮಹಿಳೆಗೆ ಸಂಬಂಧಿಸಿದ ವಿಷಯವಲ್ಲ. ಅದು ಉದ್ಯೋಗ ಹಾಗೂ ಬ್ಯುಸಿನೆಸ್‌ಗೆ ಸಂಬಂಧಿಸಿದ್ದು. ಕೆಲಸ ಆರಂಭಿಸಿದಾಗಿನಿಂದ ಕಡೆಯವರೆಗೂ ಗಾಣದ ಎತ್ತಿನಂತೆ ದುಡಿವ ಪುರುಷರಿಗೂ ಒಂದು ಬ್ರೇಕ್ ಬೇಕು. ಫ್ಯಾಮಿಲಿ ದೊಡ್ಡದಾದಾಗ ಖರ್ಚು ಹೆಚ್ಚುವುದರಿಂದ ಪುರುಷರು ಮತ್ತಷ್ಟು ಒತ್ತಡಕ್ಕೆ ಸಿಲುಕುತ್ತಾರೆ. ಅಷ್ಟೇ ಅಲ್ಲ, ಇದೇ ಕಾರಣಕ್ಕೆ, ಕಚೇರಿಗಳಲ್ಲಿ ಮಹಿಳೆಯರ ಮೇಲೆ ಪುರುಷರು ಹಗೆ ಸಾಧಿಸುವುದೂ ಇದೆ. ಆದರೆ, ಕಡ್ಡಾಯ ಪೇಯ್ಡ್ ಪೆಟರ್ನಿಟಿ ಲೀವ್ ಸಿಕ್ಕರೆ ಅವರು ಚಿಂತೆಯಿಲ್ಲದೆ ಫ್ಯಾಮಿಲಿಗೆ ಸಮಯ ಕೊಡಬಹುದು.
3. ಒತ್ತಡ ರಹಿತ ಪೇರೆಂಟಿಂಗ್
ಇಂದು ಎಲ್ಲೆಡೆ ನ್ಯೂಕ್ಲಿಯರ್ ಕುಟುಂಬಗಳು ಹೆಚ್ಚುತ್ತಿದ್ದು, ಮಗು ಸಾಕಲು ತಾಯಿಯೊಬ್ಬಳೇ ಹೆಣಗಬೇಕಾಗುತ್ತದೆ. ಅಜ್ಜ, ಅಜ್ಜಿ ಯಾರ ನೆರವೂ ಸಿಕ್ಕದೆ, ಮಗುವೊಂದನ್ನೇ ಬಿಟ್ಟು ಟಾಯ್ಲೆಟ್‌ಗೆ ಹೋಗಲೂ ಇಂದಿನ ಪೋಷಕರು ಚಿಂತಿಸುತ್ತಾರೆ. ಇಂಥ ಸನ್ನಿವೇಶದಲ್ಲಿ ಪತ್ನಿಗೆ ಪತಿಯ ಸಹಾಯ ಸಿಗಲೇಬೇಕು. ಆಗ ಪತಿಪತ್ನಿಯಿಬ್ಬರೂ ಮಗುವಿನ ಕೆಲಸ ಶೇರ್ ಮಾಡಿಕೊಂಡು ಆರಾಮವಾಗಿ ಮಗುವನ್ನು ಬೆಳೆಸಬಹುದು. ಇದರಿಂದ ಹೆರಿಗೆಯ ಬಳಿಕ ಮಹಿಳೆಯರಲ್ಲಿ ಕಾಡುವ ಖಿನ್ನತೆಯನ್ನು ತಪ್ಪಿಸಬಹುದು.
ದೇಹ ಅಂದವಿದ್ದ ಮಾತ್ರಕ್ಕೆ ಸೌಂದರ್ಯ ಹೆಚ್ಚೋಲ್ಲ, ಮತ್ತೆ?
4. ಗುಡ್ ಪೇರೆಂಟ್
ನಮ್ಮ ಸಮಾಜದಲ್ಲಿ ತಂದೆಯ ಪಾತ್ರ ಹಲವೆಡೆ ತಂದು ಹಾಕುವುದಕ್ಕಷ್ಟೇ ಸೀಮಿತವಾಗಿದೆ. ಆದರೆ, ಅವರಿಗೂ ಇಡೀ ದಿನ ಮಗುವಿನೊಂದಿಗೆ ಕಳೆಯಲು ಸಿಕ್ಕಾಗ, ಡೈಪರ್ ಚೇಂಜ್ ಮಾಡುವುದರಿಂದ ಹಿಡಿದು ಅದರ ಆಟ, ಊಟ ಎಲ್ಲದರಲ್ಲಿಯೂ ಭಾಗಿಯಾಗಬಹುದು. ಇದು ತಂದೆಯನ್ನು ಬೆಟರ್ ಪೇರೆಂಟ್ ಹಾಗೂ ಉತ್ತಮ ಪತಿಯಾಗಿಸುತ್ತದೆ. ಮನೆಗೆಲಸದಲ್ಲೂ ಸಾಧ್ಯವಾದಷ್ಟು ಸಹಾಯ ಮಾಡಬಹುದು. ಇದರಿಂದ ಪತ್ನಿಯ ಕಷ್ಟದ ಅರಿವೂ ಆಗುತ್ತದೆ.
5. ಮಗುವಿನ ಉತ್ತಮ ಬೆಳವಣಿಗೆ
ಮಕ್ಕಳು ಹುಟ್ಟಿದ ಬಳಿಕ ತಂದೆಯ ಪಾತ್ರ ಹೆಚ್ಚಿದ್ದಲ್ಲಿ ಆ ಮಕ್ಕಳ ಮೆದುಳಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಎನ್ನುತ್ತವೆ ಅಧ್ಯಯನಗಳು. ಇದರಿಂದ ಶಾಲೆಯಲ್ಲಿ ಕೂಡಾ ಹೆಚ್ಚಿನ ಫಲಿತಾಂಶ ಪಡೆಯುತ್ತವೆ. ಅಲ್ಲದೆ, ತಾಯಿ ಹಾಗೂ ತಂದೆಯೊಂದಿಗೆ ಸಮಾನವಾಗಿ ಆಡಿಕೊಂಡು ಬೆಳೆದ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಹೆಚ್ಚು ಸದೃಢವಾಗಿರುತ್ತದೆ.
ಸಂಬಂಧ ಸುಧಾರಿಸಬಲ್ಲ ಸೈಕಿಕ್ ಟ್ರಿಕ್ಸ್ ಅರಿತರೆ, ಬದುಕು ಬಿಂದಾಸ್!
6. ಉತ್ತಮ ಲೀಡರ್ಸ್
ಉತ್ತಮ ಕಾಳಜಿ ವಹಿಸುವವರು ಉತ್ತಮ ನಾಯಕರಾಗಲು ಸಾಧ್ಯ. ಮಗುವಿನೊಂದಿಗೆ ಸಮಯ ಕಳೆಯುವುದು ಪೋಷಕರಿಗೆ ತಾಳ್ಮೆ, ಪ್ರೀತಿ, ಕಾಳಜಿ ತೋರುವುದು, ಸಿಟ್ಟು ಕಡಿಮೆ ಮಾಡಿಕೊಳ್ಳುವುದು ಮುಂತಾದ ಪಾಸಿಟಿವ್ ಗುಣಗಳನ್ನು ಕಲಿಸುತ್ತದೆ. ಇದರಿಂದ ನಂತರ ಅವರು ಉದ್ಯೋಗಕ್ಕೆ ಮರಳಿದಾಗ ಪರ್ಫಾರ್ಮೆನ್ಸ್ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಹೆಚ್ಚಿನ ನಾಯಕತ್ವ ಗುಣಗಳನ್ನು ತೋರಬಲ್ಲರು.