ಕರ್ಪೂರದ ಗೊಂಬೆಯಂತಿರುವ ಕರೀನಾ ಕಪೂರಳ ಹೊಳೆವ ತ್ವಚೆಯ ಗುಟ್ಟೇನು ಅಂತ ಕೇಳಿದ್ರೆ ಎಬಿಸಿ ಜ್ಯೂಸ್ ಅಂತಾರೆ ಆಕೆಯ ಡಯಟೀಶಿಯನ್ ರುಜುತಾ ದಿವೇಕರ್. 

ಅರೆ ಎಬಿಸಿ ಜ್ಯೂಸಾ? ಇದ್ಯಾವುದಪ್ಪಾ ಹೊಸದು, ನಾವು ಕೇಳೇ ಇಲ್ವಲ್ಲಾ ಅಂದ್ರಾ? ಎಬಿಸಿ ಅಂದ್ರೆ ಆ್ಯಪಲ್, ಬೀಟ್ರೂಟ್ ಮತ್ತು ಕ್ಯಾರಟ್.  ಈ ಮೂರನ್ನು ಮಿಕ್ಸ್ ಮಾಡಿ ರಸ ತೆಗೆದು ಅದಕ್ಕೆ ನಿಂಬೆರಸ ಹಾಗೂ ತಂಪಾದ ನೀರನ್ನು ಬೆರೆಸಿದರೆ ಎಬಿಸಿ ಜ್ಯೂಸ್ ರೆಡಿ. 

ತರಕಾರಿ ಜ್ಯೂಸ್ ಯಾಕೆ ಕುಡಿಯಬೇಕು?

ಈ ಮ್ಯಾಜಿಕಲ್ ಜ್ಯೂಸ್ ದೇಹದೊಳಗಿನ ವಿಷಕಾರಿ ಅಂಶಗಳನ್ನು ಹೊರಹಾಕಿ, ನಿಮ್ಮ ತ್ವಚೆಯ ಮೇಲೆ ಜಾದೂ ಮಾಡುತ್ತದೆ. ಕೆಲವೊಮ್ಮೆ ನಮಗೆ ಸುಸ್ತೆ ಎಸುತ್ತದೆ, ಹೊಟ್ಟೆ ಗುಡುಗುಡು ಎನ್ನುತ್ತದೆ, ಅಥವಾ ವಿನಾ ಕಾರಣ ಮೂಡ್ ಔಟ್ ಆಗುತ್ತದೆ. ಆಗ ಎನರ್ಜಿ ಪಡೆದು ಕೊಳ್ಳಲು ಸಕ್ಕರೆ ಪದಾರ್ಥಗಳ ಮೊರೆ ಹೋಗುತ್ತೇವೆ. ಆದರೆ, ನಿಜವೆಂದರೆ ಸಕ್ಕರೆ ದೇಹಕ್ಕೆ ಒಳಿತಿಗಿಂತ ಕೆಡುಕನ್ನೇ ಮಾಡುವುದು ಹೆಚ್ಚು. 

ಎಲ್ಲ ಸಮಯದಲ್ಲೂ ನಿದ್ದೆ ಬರುವುದು, ಸುಸ್ತಾಗುವುದು ದೇಹದಲ್ಲಿ ಟಾಕ್ಸಿನ್ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತದೆ. ಇದರಿಂದಕೆಲಸದಲ್ಲಿಆಸಕ್ತಿ ತಗ್ಗುತ್ತದೆ. ಆಗಲೇ ನೀವು ಎಚ್ಚೆತ್ತು ಡಿಟಾಕ್ಸಿಕೇಟ್ ಮಾಡಿಕೊಳ್ಳಬೇಕು. ಹೀಗೆ ಡಿಟಾಕ್ಸಿಕೇಟ್ ಮಾಡುವ ಸುಲಭ ವಿಧಾನವೆಂದರೆ ಎಬಿಸಿ ಜ್ಯೂಸ್. 

ಮುಂಜಾವನ್ನು ಎಬಿಸಿ ಜ್ಯೂಸ್‌ನೊಂದಿಗೇ ಆರಂಭಿಸಿದಿರಾದರೆ ಅದು ನಿಮ್ಮನ್ನು ದಿನ ಪೂರ್ತಿ ಎನರ್ಜಿಟಿಕ್ ಆಗಿಡುತ್ತದೆ. ಸೇಬು ವಿಟಮಿನ್ ಎ, ಬಿ1, ಬಿ2, ಬಿ6, ಸಿ, ಇ ಹಾಗೂ ಕೆಗಳನ್ನು ಹೊಂದಿದ್ದು, ಹೇರಳ ಪೋಷಕ ಸತ್ವಗಳು ಇದರಲ್ಲಡಗಿವೆ. ಇನ್ನು ಬೀಟ್ರೂಟ್ ಮತ್ತು ಕ್ಯಾರೆಟ್ ಉತ್ತಮ ಆ್ಯಂಟಿ ಆಕ್ಸಿಡೆಂಟ್‌ಗಳಾಗಿದ್ದು, ಫೋಲಿಕ್ ಆ್ಯಸಿಡ್, ವಿಟಮಿನ್ಸ್, ಪೊಟಾಶಿಯಂ, ಫೈಬರ್ ಹಾಗೂ ಮಿನರಲ್‌ಗಳನ್ನು ಹೊಂದಿವೆ. 

ಪ್ರತಿದಿನ ಎಬಿಸಿ ಜ್ಯೂಸ್ ಏಕೆ ಕುಡಿಯಬೇಕು?

  • ಇದರಲ್ಲಿರುವ ಪೋಷಕಾಂಶಗಳು ನಿಮ್ಮ ವಯಸ್ಸನ್ನು ಮರೆಮಾಚಿ, ಹರೆಯದವರಂತೆ ಕಾಣಲು ಸಹಾಯಕವಾಗುತ್ತವೆ.
  • ತ್ವಚೆಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಹೊಳೆಯುವ, ಟೋನ್ಡ್ ತ್ವಚೆ ನಿಮ್ಮದಾಗುತ್ತದೆ. ಚರ್ಮದ ಕಲೆಗಳನ್ನು ಹೇಳ ಹೆಸರಿಲ್ಲದಂತೆ ಮಾಡುತ್ತದೆ. 
  • ಕಡಿಮೆ ಕ್ಯಾಲೋರಿಯ ಜ್ಯೂಸ್ ಇದಾಗಿರುವುದರಿಂದ ತೂಕ ಇಳಿಸಲು ಸಹಕಾರಿ.
  • ಜ್ಯೂಸ್‌ನಲ್ಲಿರುವ ಬೀಟ್‌ರೂಟ್ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ತಗ್ಗಿಸುತ್ತದೆ.
  • ಎಬಿಸಿ ಜ್ಯೂಸ್‌ನಲ್ಲಿರುವ ಹೇರಳ ವಿಟಮಿನ್ ಎ ಸತ್ವವು ನಿಮ್ಮ ಕಣ್ಣುಗಳ ಆರೋಗ್ಯ ಕಾಪಾಡುತ್ತವೆ. ಜೊತೆಗೆ, ಕಣ್ಣುಗಳ ದಣಿವಿಗೆ ಶಮನ ನೀಡುತ್ತವೆ. 
  • ಪ್ರತಿದಿನ ಈ ಜ್ಯೂಸ್ ಸೇವನೆಯಿಂದ ನಿಮ್ಮಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಿ, ಉತ್ಪಾದಕ ಶಕ್ತಿ ಏರುತ್ತದೆ.
  • ಈ ಜ್ಯೂಸಿನಲ್ಲಿ ವಿಟಮಿನ್ ಸಿ ಕೂಡಾ ಅಧಿಕವಾಗಿದ್ದು, ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ.