ಸ್ವಾತಂತ್ರ್ಯೋತ್ಸವದ ದಿನ, ಧ್ವಜ ಹಿಡಿದು ಮೆರವಣಿಗೆ ಸಾಗಿದ ಬಾಲ್ಯದ ಸವಿ ಸವಿ ನೆನಪು
ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆ ಬಂದಾಗಲೂ ಮನಸ್ಸು ಮತ್ತೆ ಬಾಲ್ಯಕ್ಕೆ ಮರಳುತ್ತದೆ. ಬಾಲ್ಯದ ಸ್ವಾತಂತ್ರ್ಯೋತ್ಸವದ ದಿನಗಳೇ ತುಂಬಾ ಚೆನ್ನಾಗಿತ್ತು ಅನಿಸುತ್ತದೆ. ಶಾಲೆ, ಅಸೆಂಬ್ಲಿ,ದೇಶಭಕ್ತಿ ಹಾಡು, ಧ್ವಜ ಹಿಡಿದು ಮಾಡೋ ಮೆರವಣಿಗೆ ಎಲ್ಲವೂ ಕಣ್ಮುಂದೆ ಹಾಗೇ ಹಾದು ಹೋದಂತಾಗುತ್ತೆ. ನಿಮಗೂ ಹಾಗೇ ಆಗುತ್ತಾ?
ಭಾರತವು ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ. ಈ ದಿನದಂದು ಜನರು ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ಅವರ ತ್ಯಾಗವನ್ನು ನೆನಪಿಸಿಕೊಂಡು ಗೌರವಿಸುತ್ತಾರೆ. ಭಾರತವು ಆಗಸ್ಟ್ 15, 1947ರಂದು ಸ್ವತಂತ್ರ ದೇಶವೆಂದು ಪರಿಗಣಿಸಲ್ಪಟ್ಟಿತು. ಹಳೆಯ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾಯಿತು. ಬ್ರಿಟಿಷ್ ವಸಾಹತುಶಾಹಿಯಿಂದ ಭಾರತದ ಸ್ವಾತಂತ್ರ್ಯದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ನೆನಪಿಸುವುದರಿಂದ ಈ ದಿನವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನದಂದು, ರಾಷ್ಟ್ರದಾದ್ಯಂತ, ಮನೆಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಸ್ವಾತಂತ್ರ್ಯೋತ್ಸವ ಎಂದರೆ ಹಿಂದೆಯೂ ಇಂದಿಗೂ ಮುಂದೆಯೂ ಯಾವತ್ತಿಗೂ ಹಬ್ಬವೇ. ಆದರೆ ಬಾಲ್ಯದ ಆ ಸ್ವಾತಂತ್ರ್ಯೋತ್ಸವ ದಿನಗಳಿವೆಯಲ್ಲಾ..ಅದು ಬೆಲೆಕಟ್ಟಲಾಗದಷ್ಟು ಅಮೂಲ್ಯ.
ಸ್ವಾತಂತ್ರ್ಯೋತ್ಸವದ ದಿನ ಬಾಲ್ಯಕ್ಕೆ ಮರಳುತ್ತೆ ಮನಸ್ಸು
ಸ್ವಾತಂತ್ರ್ಯೋತ್ಸವದ ದಿನ ಅಂದರೆ ತಕ್ಷಣಕ್ಕೆ ಮನಸ್ಸು ಬಾಲ್ಯಕ್ಕೆ (Childhood) ಮರಳುತ್ತದೆ. ಅಂದೆಲ್ಲಾ ಸ್ವಾತಂತ್ರ್ಯೋತ್ಸವ ಅಂದರೆ ಅಕ್ಷರಶಃ ಹಬ್ಬ. ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ತಿಂಗಳು ಬಾಕಿಯಿದೆ ಎನ್ನುವಾಗಲೇ ದೇಶಭಕ್ತಿ ಹಾಡು (Patriotic Song)ಗಳನ್ನು ಪ್ರಾಕ್ಟೀಸ್ ಮಾಡಲು ಶುರು ಮಾಡಿಯಾಗಿರುತ್ತಿತ್ತು. ಒಂದು ರೂಪಾಯಿ ಕೊಟ್ಟು ಫ್ಲಾಗ್ ತೆಗೆದು, ನನ್ನ ಫ್ಲಾಗ್ ಸಾಕಷ್ಟು ಎತ್ತರಕ್ಕೆ ಏರಬೇಕು ಎಂಬ ಆಸೆಯಿಂದ ಫ್ಲಾಗ್‌ಗೆ ಸಿಕ್ಕಿಸಲು ಉದ್ದುದ್ದ ಕೋಲು ಹುಡುಕಲು ಶುರು ಮಾಡಿಯಾಗಿರುತ್ತಿತ್ತು.
Independence Day 2023: ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ 76 ಅಥವಾ 77, ಯಾಕಿಷ್ಟು ಕನ್‌ಫ್ಯೂಶನ್!
ಧ್ವಜ ಹಿಡಿದು ಮಕ್ಕಳೆಲ್ಲಾ ಮೆರವಣಿಗೆ ಹೋಗುವ ಸವಿ ನೆನಪು
ಸ್ವಾತಂತ್ರ್ಯೋತ್ಸವ ದಿನದಂದು ಬೆಳಗ್ಗೆ ಬೇಗನೇ ಎದ್ದು ಶಾಲೆ ಸೇರುವುದೇ ಚೆಂದ. ಊರಿನ ಗಣ್ಯರು ಬಂದು ಧ್ವಜಾರೋಹಣ (Flag Hoisting) ಮಾಡುವುದು, ಅವರ ಭಾಷಣ (Speech), ಬಹುಮಾನ ವಿತರಣೆ ಎಲ್ಲವೂ ಮನಸ್ಸಿನಲ್ಲಿ ಅಚ್ಚಳಿಯದೆ ಮೂಡಿ ನಿಂತಿದೆ. ಕೊನೆಗೆ ಎಲ್ಲರೂ ಕಾತುರದಿಂದ ಕಾಯುವ ಸಮಯ. ಎಲ್ಲರಿಗೂ ಲಡ್ಡು ವಿತರಣೆ.
ಹಿಂದೆಯೆಲ್ಲಾ ಸ್ವಾತಂತ್ರ್ಯೋತ್ಸವದಂದು ಕೈಯಲ್ಲಿ ಪುಟ್ಟ ಪುಟ್ಟ ಧ್ವಜ ((Flag) ಹಿಡಿದು ಮಕ್ಕಳು ಸಾಲಾಗಿ ಮೆರವಣಿಗೆ ಹೋಗೋದನ್ನು ನೋಡೋಕೆ ಎಲ್ಲರೂ ಕಾಯುತ್ತಿದ್ದರು. ಭಾರತಮಾತೆ ಗಾಂಧೀಜಿ, ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಬ್ಬಕ್ಕ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರ ಬಟ್ಟೆ ಧರಿಸಿದ ಮಕ್ಕಳು (Children) ಎಲ್ಲರ ಕಣ್ಮನ ಸೆಳೆಯುತ್ತಿದ್ದರು. ಮಕ್ಕಳು ರಸ್ತೆಯಲ್ಲಿ ಪುಟ್ಟ ಪುಟ್ಟ ಫ್ಲಾಗ್ ಹಿಡಿದು ಭಾರತ್ ಮಾತಾಕೀ ಜೈ, ವಂದೇ ಮಾತರಂ ಎಂದೆಲ್ಲಾ ಘೋಷಣೆ ಕೂಗುತ್ತಾ ಹೋಗುತ್ತಿದ್ದರೆ ಊರವರು ಸಹ ಅಲ್ಲಲ್ಲಿ ಗುಂಪು ಕಟ್ಟಿ ನಿಂತು ಮಕ್ಕಳನ್ನು ನೋಡುತ್ತಿದ್ದರು. ಎಲ್ಲರ ಮೈ ರೋಮಾಂಚನಗೊಳ್ಳುತ್ತಿತ್ತು.
Har ghar Tiranga ವೆಬ್‌ಸೈಟ್‌ನಲ್ಲಿ ಸೆಲ್ಫಿ ಅಪ್‌ಲೋಡ್ ಮಾಡಿ ಸರ್ಟಿಫಿಕೇಟ್ ಪಡೆಯೋದು ಹೇಗೆ ?
ಮತ್ತೆ ಮತ್ತೆ ಮರಳಿ ಕಾಡುತ್ತೆ ಬಾಲ್ಯ
ಆಗೆಲ್ಲಾ ದೊಡ್ಡ ದೊಡ್ಡ ಸ್ಪೀಕರ್ ಹಾಕಿ ದೇಶಭಕ್ತಿ ಗೀತೆಗಳನ್ನು ಪ್ಲೇ ಮಾಡೋಕೆ ಸಾಧ್ಯವಿಲ್ಲದಿದ್ದರೂ ಮಕ್ಕಳಲ್ಲಿ ಅತ್ಯುತ್ಸಾಹವಿರುತ್ತಿತ್ತು. ದೇಶಭಕ್ತಿಯಿರುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮತ್ತಷ್ಟು, ಇನ್ನಷ್ಟು ತಿಳಿದುಕೊಳ್ಳುವ ಕುತೂಹಲವಿರುತ್ತಿತ್ತು. ಮಕ್ಕಳಲ್ಲಿ ದೇಶಪ್ರೇಮ ಮೂಡಿಸಲು ಅಬ್ಬರದ ಹಾಡು ಪ್ಲೇ ಮಾಡುವುದು ಬೇಕಿರಲ್ಲಿಲ್ಲ. ಇವತ್ತಿನ ದಿನಗಳಲ್ಲಿ ಎಲ್ಲವೂ ಬದಲಾಗಿದೆ. ಇಂಡಿಪೆಂಡೆನ್ಸ್ ಡೇ ಎಂಬುದು ಹಾಲಿಡೇ ಎಂಬಂತೆ ಹೆಚ್ಚು ಹೈಲೈಟ್ ಆಗುತ್ತಿದೆ. ದೇಶಭಕ್ತಿಯನ್ನು ಮೂಡಿಸುವ ಬದಲು ಇವತ್ತು ಆಫ್ ಅಥವಾ ರಜೆ ಎಂಬುದು ಹೆಚ್ಚು ನೆನಪಾಗುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಬಾಲ್ಯದ ಸ್ವಾತಂತ್ರ್ಯೋತ್ಸವದ ದಿನಗಳೇ ತುಂಬಾ ಅಂದರೆ ತುಂಬಾ ಚೆನ್ನಾಗಿತ್ತು ಅನಿಸುತ್ತದೆ. ಬಾಲ್ಯವೂ, ಆ ಸ್ವಾತಂತ್ರ್ಯೋತ್ಸವದ ದಿನಗಳೂ ಪ್ರತಿ ವರ್ಷವೂ ಇಂಡಿಪೆಂಡೆನ್ಸ್ ದಿನದಂದು ಮತ್ತೆ ಮತ್ತೆ ಮರಳಿ ಕಾಡುತ್ತದೆ. ಮರಳಿ ಬಾಲ್ಯಕ್ಕೆ ಮರಳಿ ಹೋಗಬಾರದೇ ಅನಿಸುತ್ತದೆ.