ಒತ್ತಡವೆಂಬುದು ಸ್ವಲ್ಪ ಅಪಾಯಕಾರಿಯಾದ ಕಾಯಿಲೆಯಾದರೂ ಈ ಬಗ್ಗೆ ಬಹುತೇಕರು ಗಮನ ಹರಿಸುವುದಿಲ್ಲ. ಮತ್ತಷ್ಟು ಜನರಿಗೆ ತಾವು ಒತ್ತಡಕ್ಕೊಳಗಾಗಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. ಆದರೆ, ಒತ್ತಡವು ಹೃದಯ ರೋಗಗಳು, ಖಿನ್ನತೆ, ರೆಸ್ಟ್‌ಲೆಸ್‌ನೆಸ್ ಮುಂತಾದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗಾಗಿ, ಒತ್ತಡದ ಆರಂಭದಲ್ಲೇ ಅದನ್ನು ನಿಭಾಯಿಸುವ ಛಾತಿ ಬೆಳೆಸಿಕೊಳ್ಳುವುದು ಆರೋಗ್ಯಕರ ಮಾರ್ಗ.

ವ್ಯಾಯಾಮ ಹಾಗೂ ರಿಲ್ಯಾಕ್ಸೇಶನ್- ಒತ್ತಡ ನಿಭಾಯಿಸಲು ಅತ್ಯುತ್ತಮ ದಾರಿಗಳು. ರಿಲ್ಯಾಕ್ಸೇಶನ್ ಎಂದರೆ ಯೋಗ, ಧ್ಯಾನ, ಪ್ರಾಣಾಯಾಮ, ನಿದ್ರೆ ಎಂದಷ್ಟೇ ತಿಳಿದಿದ್ದರೆ, ಇನ್ನೂ ಹತ್ತು ಹಲವು ರಿಲ್ಯಾಕ್ಸೇಶನ್ ಟೆಕ್ನಿಕ್‌ಗಳಿವೆ. ಅವು ಕೂಡಾ ಒತ್ತಡ ನಿವಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಮನಸ್ಸಿಗೆ ನೆಮ್ಮದಿ ನೀಡುವ ಈ ರಿಲ್ಯಾಕ್ಸೇಶನ್ ತಂತ್ರಗಳು ಯಾವುವೆಂದು ತಿಳಿದುಕೊಳ್ಳಲು ಮುಂದೆ ಓದಿ.

ಹೆಬ್ಬಾವಿನ ಮಸಾಜ್ ಮಾಡಿಸಿಕೊಳ್ಳೊ ಧೈರ್ಯ ನಿಮಗಿದ್ಯಾ?

1. ಸಸ್ಯಗಳು

ನಿಸರ್ಗದ ನಡುವೆ ಇದ್ದಾಗ, ಕಾಡಿನಲ್ಲಿ ಕಳೆದುಹೋದಾಗ ಎಲ್ಲ ಟೆನ್ಷನ್‌ಗಳು ಮರೆಯಾಗಿ ಎಷ್ಟು ಹಾಯೆನಿಸುತ್ತದೆಯಲ್ಲವೇ? ಇದೇ ಅನುಭವವನ್ನು ಮನೆಯಲ್ಲೇ ಪಡೆಯುವಂತಾದರೆ? ಇದಕ್ಕಾಗಿ ಸಣ್ಣ ಸಣ್ಣ ಸಸ್ಯಗಳನ್ನು ಮನೆಯ ಒಳಗೂ ಹೊರಗೂ ಬೆಳೆಸಿ. ಪ್ರತಿದಿನ ಅವಕ್ಕೆ ನೀರುಣಿಸಿ, ಅವುಗಳೊಂದಿಗೆ ಮಾತನಾಡಿ, ಸಸ್ಯಗಳ ಪರಿಮಳ ಆಸ್ವಾದಿಸಿ, ಸ್ಪರ್ಶಿಸಿ... ಇದು ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ತಗ್ಗಿಸುವ ಚಮತ್ಕಾರವನ್ನು ಸ್ವತಃ ಅನುಭವಿಸಿ ನೋಡಿ.

2. ಹೈಡ್ರೋಥೆರಪಿ

ಈ ನೇಚರೋಪತಿಕ್ ಥೆರಪಿಯಲ್ಲಿ ನೀರನ್ನು ನೀರು, ಮಂಜುಗಡ್ಡೆ, ಹರಿವ ತೊರೆ ಮುಂತಾದ ಯಾವುದೇ ರೂಪದಲ್ಲಿ ಒತ್ತಡ ನಿವಾರಣೆಗಾಗಿ ಬಳಸಲಾಗುತ್ತದೆ. ಈ ನೀರನ್ನು ದೇಹದ ಹೊರಗೂ, ಒಳಗೂ ಬಳಸಬಹುದು. ಅಲ್ಲದೆ, ಬೇರೆ ಬೇರೆ ಉಷ್ಣತೆಯ ನೀರಿಗೆ ಮೂಡ್ ಬದಲಿಸುವ, ದೇಹದ ಕೆಲಸ ಬದಲಿಸುವ ಶಕ್ತಿಯಿದೆ. ಹೀಗಾಗಿ, ಬೇರೆ ಬೇರೆ ಉಷ್ಣತೆಯಲ್ಲಿ, ಬೇರೆ ಬೇರೆ ಸಮಯದಲ್ಲಿ, ಬೇರೆಯದೇ ಒತ್ತಡ ಹಾಗೂ ಸ್ಥಳದಲ್ಲಿ ನೀರನ್ನು ಬಳಸಿ ಮನಸ್ಸು ರಿಲ್ಯಾಕ್ಸ್ ಆಗುವಂತೆ ಮಾಡಲಾಗುತ್ತದೆ. 

3. ಅರೋಮಾಥೆರಪಿ

ಸಸ್ಯಗಳಿಂದ ಸಂಗ್ರಹಿಸಿದ ಸುಗಂಧಭರಿತ ಎಸ್ಸೆನ್ಷಿಯಲ್ ತೈಲಗಳನ್ನು ಮೂಗಿನ ಮೂಲಕ ಅಥವಾ ದೇಹಕ್ಕೆ ಮಸಾಜ್ ಮಾಡುವ ಮೂಲಕ ಬಳಸಲಾಗುತ್ತದೆ. ಇದು ಆತಂಕ ನಿವಾರಿಸಿ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ. ಜೊತೆಗೆ ಹೆಚ್ಚು ಪಾಸಿಟಿವ್ ಆಗಿಸುತ್ತದೆ.

4. ಕ್ವಿಗಾಂಗ್

ಚೈನೀಸ್ ಯೋಗ ಎಂದೇ ಹೆಸರಾಗಿರುವ ಕ್ವಿಗಾಂಗ್, ಶತಮಾನಗಳಿಂದ ಚಾಲ್ತಿಯಲ್ಲಿದೆ. ಇಲ್ಲಿ ಏಕಾಗ್ರತೆ ಹಾಗೂ ಉಸಿರಾಟ ಬಳಸಿ ನಿಧಾನವಾದ ಆಂಗಿಕ ಚಲನೆಗಳನ್ನು ಮಾಡಲಾಗುತ್ತದೆ. ಇದು ಕೂಡಾ ಆತಂಕ ಹಾಗೂ ಒತ್ತಡ ನಿವಾರಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 

ಇದು ಮಣ್ಣಾಂಗಟ್ಟಿಯಲ್ಲ, ಆರೋಗ್ಯ ಭಾಗ್ಯ ತರುವ ಮಣ್ಣಿನ ಚಿಕಿತ್ಸೆ!

5. ಸ್ವಪ್ರೀತಿ

ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಕೊರತೆಗಳು, ವೀಕ್ನೆಸ್ ಇರುತ್ತದೆ. ನೀವೇನು ಮಾಡಬೇಕೆಂದರೆ ಧ್ಯಾನಮುಖರಾಗಿ, ನಿಮ್ಮ ಇಂಥ ಕೊರತೆಗಳ ಪಟ್ಟಿ ಮಾಡಬೇಕು ಹಾಗೂ ಸೆಲ್ಫ್ ಕಂಪ್ಯಾಶನ್ ಮೂಲಕ, ಹೀಗಿರುವುದರಲ್ಲಿ ತಪ್ಪಿಲ್ಲ, ನಾನಿದನ್ನು ಒಪ್ಪಿಕೊಳ್ಳುತ್ತೇನೆ ಎಂದು ಪ್ರತಿದಿನ ಹೇಳಿಕೊಳ್ಳಬೇಕು. ನಮ್ಮನ್ನು ನಾವು ಪ್ರೀತಿಸಬಲ್ಲೆವಾದರೆ, ಇತರರನ್ನೂ ಎಲ್ಲ ಕೊರತೆಗಳ ಹೊರತಾಗಿಯೂ ಪ್ರೀತಿಸಬಲ್ಲೆವು. ಪ್ರೀತಿ ಇದ್ದಲ್ಲಿ ಒತ್ತಡಕ್ಕೆ ಅವಕಾಶವೆಲ್ಲಿ?

6. ಜರ್ನಲ್

ಬರವಣಿಗೆಯು ನಿಮ್ಮೊಳಗೆ ಆಸೆ, ಕನಸುಗಳು, ನೋವು ನಲಿವುಗಳೆಲ್ಲವನ್ನೂ ಹೊರ ಹಾಕಲು ಸಹಾಯ ಮಾಡುತ್ತದೆ. ಇವೆಲ್ಲವೂ ಬರವಣಿಗೆ ರೂಪದಲ್ಲಿ ಒಮ್ಮೆ ಹೊರ ಬಂದಾಗ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಹಾಗಾಗಿ, ಪ್ರತಿದಿನ ಡೈರಿ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ.

7. ಸ್ವಯಂ ಮಸಾಜ್

ಸೆಲ್ಫ್ ಮಸಾಜ್ ಒತ್ತಡ ನಿವಾರಣೆಗೆ ಅದ್ಭುತ ತಂತ್ರ. ಉದಾಹರಣೆಗೆ ತಲೆನೋವು ಬಂದಾಗ ನಿಮ್ಮ ಹಣೆ, ತಲೆ ಹಾಗೂ ಮುಖದ ಮೇಲೆ ನೀವೇ ಮಸಾಜ್ ಮಾಡಿಕೊಳ್ಳಿ. ಬಹುಬೇಗ  ತಲೆನೋವು ಮಾಯವಾಗುತ್ತದೆ. 

8. ಮಸ್ಕ್ಯುಲಾರ್ ಮೆಡಿಟೇಶನ್

ಯಾವುದೇ ವರ್ಕೌಟ್ ಮಾಡುವಾಗ ಒಂದೇ ಗತಿಯಲ್ಲಿ ಧೀರ್ಘ ಉಸಿರಾಟ ನಡೆಸುತ್ತಿದ್ದರೆ ಅದು ದೇಹಕ್ಕೆ ಸಂಪೂರ್ಣ ರಿಲ್ಯಾಕ್ಸೇಶನ್ ನೀಡುತ್ತದೆ. ವಾಕಿಂಗ್, ಸ್ವಿಮ್ಮಿಂಗ್ ಅಥವಾ ಯಾವುದೇ ಎಕ್ಸರ್ಸೈಸನ್ನು ಉಸಿರಾಟದೊಂದಿಗೆ ಮಿಳಿತಗೊಳಿಸಿದಾಗ ಅದನ್ನು ಮಸ್ಕ್ಯುಲಾರ್ ಮೆಡಿಟೇಶನ್ ಎನ್ನಲಾಗುತ್ತದೆ.