ಚಹಾ ಪ್ರಿಯರ ಪಾಲಿಗೆ ಅದು ವಿಶ್ವದ 8ನೇ ಅದ್ಭುತ ಎಂದರೂ ಅಚ್ಚರಿಯಾಗುವುದಿಲ್ಲ. ಅದರ ರುಚಿ ಮನಸ್ಸಿಗೆ ನೀಡುವ ಮುದವೇ ಬೇರೆ. ಆ ಅರೋಮಾ ತಕ್ಷಣವೇ ಚೈತನ್ಯಗೊಳಿಸಬಲ್ಲುದು. 2727 ಬಿಸಿಯಲ್ಲೇ ಚೀನಾದಲ್ಲಿ ಹುಟ್ಟಿತೆಂದು ನಂಬಲಾಗುವ ಚಹಾ ಐತಿಹಾಸಿಕವಾಗಿಯೂ ಶ್ರೀಮಂತಿಕೆಯನ್ನೇ ಹೊಂದಿದೆ. ಆರಂಭದಲ್ಲಿ ಕೇವಲ ಔಷಧೀಯ ಪಾನೀಯವಾಗಿ ಬಳಕೆಯಾಗುತ್ತಿದ್ದ ಟೀ, ಟ್ಯಾಂಗ್ ಡೈನಾಸ್ಟಿಯ ಆಡಳಿತ ಸಂದರ್ಭದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದು ದೈನಂದಿನ ಪೇಯವಾಯಿತು. ಆ ಸಂದರ್ಭದಲ್ಲೇ ಪಕ್ಕದ ಏಷ್ಯಾ ದೇಶಗಳಿಗೆ ಚಹಾದ ರುಚಿ ಹತ್ತಿದ್ದು. ಪೋರ್ಚುಗೀಸ್ ವ್ಯಾಪಾರಿಗಳು ಟೀಯ ರುಚಿಗೆ ಮಾರು ಹೋಗಿ 16ನೇ ಶತಮಾನದಲ್ಲಿ ಯೂರೋಪಿಗೆ ಕೂಡಾ ಇದನ್ನು ತೆಗೆದುಕೊಂಡು ಹೋದರು. ಹೀಗೆ ಜಗದಾದ್ಯಂತ ಹಬ್ಬಿದ ಟೀ ಹೊಸ ಹೊಸ ಪ್ರಯತ್ನಗಳಿಗೆ ಒಗ್ಗಿ ಆಯಾ ನೆಲಕ್ಕೊಂದು ರುಚಿಯಾಗಿ ಹೊರಹೊಮ್ಮಿತು. ಅಂಥ 7 ಬಗೆಯ ಟೀಗಳನ್ನಿಲ್ಲಿ ಕೊಡಲಾಗಿದೆ. 

ಮಕ್ಕಳ ಸೊಳ್ಳೆ ಕಡಿತಕ್ಕೆ ಟೀ ಬ್ಯಾಗ್ ಮದ್ದು

1. ಮೊರೋಕ್ಕನ್ ಟೀ

ಮ್ಯಾಗ್ರೆಬಿ ಟೀ, ಟೌರೆಗ್ ಟೀ, ಸಹ್ರಾವಿ ಮಿಂಟ್ ಟೀ ಎಂದೆಲ್ಲ ಕರೆಯಲ್ಪಡುವ ಈ ಟೀ ಉತ್ತರ ಆಫ್ರಿಕಾದ ಮೊರೋಕ್ಕೋ ದೇಶದ ಫೇವರೇಟ್ ಡ್ರಿಂಕ್. ಪುದೀನಾ ಎಲೆಗಳಿಂದ ತಯಾರಿಸುವ ಈ ಟೀ ಇಲ್ಲಿನ ಮ್ಯಾಗ್ರೆಬಿ ಪ್ರದೇಶದಲ್ಲಿ ಸಾಂಪ್ರದಾಯಿಕ ಚಹಾ. ದಿನಕ್ಕೆ ಒಮ್ಮೆಯಾದರೂ ಈ ಟೀ ಕುಡಿಯದೆ ಮೊರೋಕ್ಕೋ ಜನರ ಹಗಲು ಮುಗಿಯುವುದಿಲ್ಲ. ಪುದಿನಾವನ್ನು ಬಿಸಿನೀರಿನಲ್ಲಿ ಕುದಿಸಿ, ಸಕ್ಕರೆ ಸೇರಿಸಿ ಕೊಡಲಾಗುತ್ತದೆ. ಪುದೀನಾದ ಅರೋಮಾ ಮನಸ್ಸಿಗೆ ಮುದ ನೀಡುತ್ತದೆ. 

2. ಥಾಯ್ ಟೀ

ಥಾಯ್ ಐಸ್ಡ್ ಟೀ ಎಂದೇ ಜನಪ್ರಿಯವಾಗಿರುವ ಥೈಲ್ಯಾಂಡ್‌ನ ಪ್ರತಿಯೊಂದು ರೆಸ್ಟೊರೆಂಟ್‌ಗಳಲ್ಲೂ ಸಿಗುವ ಕೋಲ್ಡ್ ಡ್ರಿಂಕ್. ಸಿಲೋನ್ ಟೀಯನ್ನು ಚೆನ್ನಾಗಿ ಕುದಿಸಿ ಸ್ವಲ್ಪ ಹುಣಸೆ ಹುಳಿ ಹಾಗೂ ಹಳದಿ ಕಲರಿಂಗ್ ಸೇರಿಸಲಾಗುತ್ತದೆ. ಕುಡಿವ ಮೊದಲು ಇದಕ್ಕೆ ಸಕ್ಕರೆ ಹಾಗೂ ಕಂಡೆನ್ಸ್ಡ್ ಮಿಲ್ಕ್ ಹಾಕಲಾಗುತ್ತದೆ. ಥಾಯ್ ಟೀಯಲ್ಲಿ ಹಲವು ವೆರೈಟಿ ಇದ್ದು, ಎಲ್ಲವೂ ರುಚಿ ನೋಡಲು ಯೋಗ್ಯವಾದುವು. 

3. ರಷ್ಯನ್ ಟೀ

ರಷ್ಯನ್ ಸಂಸ್ಕೃತಿಯ ಪ್ರಮುಖ ಭಾಗವಾಗಿ ಚಹಾ ಗುರುತಿಸಿಕೊಂಡಿದೆ. ಸಾಂಪ್ರದಾಯಿಕವಾಗಿ ಇದನ್ನು ರಷ್ಯನ್ ಕ್ಯಾರವಾನ್ ಟೀ ಎನ್ನಲಾಗುತ್ತದೆ. ಮೊದಲನೆಯದಾಗಿ ಝವಾರ್ಕಾ ಎಂಬ ಎಲೆಗಳನ್ನು ಚೆನ್ನಾಗಿ ಕುದಿಸಿ ಶೋಧಿಸಿಟ್ಟುಕೊಳ್ಳಲಾಗುತ್ತದೆ. ಈ ಡಿಕಾಕ್ಷನ್ನನ್ನು ಲೋಟಕ್ಕೆ ಹಾಕಿ ಬಿಸಿ ನೀರನ್ನು ಹಾಕಲಾಗುತ್ತದೆ. ಕಾಫಿಯಂತೆ ಯಾರಿಗೆ ಎಷ್ಟು ಸ್ಟಾಂಗ್ ಬೇಕೋ ಅಷ್ಟು ಡಿಕಾಕ್ಷನ್ ಹಾಕಿಕೊಂಡು ಕುಡಿಯಬಹುದು. 

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!

4. ಚಾ-ಡವೋ

ಚಾ ಡವೋ ಸುಮಾರು 4000 ವರ್ಷ ಹಳೆಯ ಚೈನೀಸ್ ಸಂಸ್ಕೃತಿಯ ಪ್ರತೀಕವಾಗಿದೆ. ವಿಶ್ವಕ್ಕೆ ಟೀಯನ್ನು ಪರಿಚಯಿಸಿದ್ದೇ ಚೀನಾ. ಅವರಿಗೆ ಚಹಾ ಎಂದರೆ ಟೀ ಎಲೆಗಳನ್ನು ಬಿಸಿನೀರಿನಲ್ಲಿ ಅದ್ದಿ ತೆಗೆಯುವುದಷ್ಟೇ ಅಲ್ಲ, ಇದಕ್ಕಾಗಿ ಹಲವು ಅಭ್ಯಾಸ ಹಾಗೂ ಕಲಾತ್ಮಕ ವಿಧಾನಗಳನ್ನು ಅನುಸರಿಸುತ್ತಾರೆ. ಹೀಗೆ ಚಹಾ ತಯಾರಿಸುವ ಸಂಪೂರ್ಣ ವಿಧಾನಕ್ಕೆ ಗೋಂಗ್ಫು ಚಾ ಎಂದು ಕರೆಯುತ್ತಾರೆ. ಟೀ ಎಲೆಗಳಿಂದಲೇ ತಯಾರಿಸಿದರೂ, ಹಲವಾರು ಸಾಂಪ್ರದಾಯಿಕ ಚೈನೀಸ್ ವಿಧಾನಗಳನ್ನು ಬಳಸುವುದರಿಂದ ಇಲ್ಲಿನ ಟೀಗೆ ವಿಶಿಷ್ಠ ರುಚಿ ಹಾಗೂ ಅರೋಮಾ ಇರುತ್ತದೆ. ಚೀನಾದಲ್ಲಿ ಟೀ ಎಷ್ಟು ಜನಪ್ರಿಯವೆಂದರೆ, ನೀರಿನ ಬದಲು ಬಹುತೇಕ ಮನೆಗಳಲ್ಲಿ ಚಹಾವನ್ನೇ ಕುಡಿಯುತ್ತಾರೆ. 

5. ಇಂಗ್ಲಿಷ್ ಟೀ

ಬ್ರಿಟನ್‌ನಲ್ಲಿ ಹಲವಾರು ಬಗೆಯ ಟೀಗಳಿವೆ. ಸಾಮಾನ್ಯವಾಗಿ ಹಾಲು, ಸಕ್ಕರೆ, ಟೀ ಎಲೆಗಳನ್ನು ಹಾಕಿ ತಯಾರಿಸುವ ಬಿಲ್ಡರ್ಸ್ ಟೀ ಬಹಳ ಜನಪ್ರಿಯತೆ ಪಡೆದಿದೆ. ಅದಲ್ಲದೆ ಲೈಮ್ ಟೀ, ಬ್ಲ್ಯಾಕ್ ಟೀ ಕೂಡಾ ಇಲ್ಲಿ ಫೇಮಸ್. 

6. ಅರ್ಜೆಂಟೀನಾ ಟೀ

ಅರ್ಜೆಂಟೀನಾದ ಚಹಾ ಸಂಸ್ಕೃತಿ ಸ್ಥಳೀಯ ಹಾಗೂ ಆಮದು ಚಹಾ ವೈವಿಧ್ಯಗಳ ಸಮ್ಮಿಲನತೆ ಹೊಂದಿದೆ. ಸ್ಥಳೀಯ ಯೆರ್ಬಾ ಮೇಟ್ ಸಸ್ಯದಿಂದ ಸಿಗುವ ಮೇಟ್ ಕೆಫಿನ್ ಆಗಿದ್ದು, ಇದನ್ನು ಇಲ್ಲಿನ ಜನಪ್ರಿಯ ಹರ್ಬಲ್ ಟೀ ಜೊತೆ ಸೇರಿಸಲಾಗುತ್ತದೆ. ಬೊಂಬಿಲ್ಲಾ ಎಂಬ ಮೆಟಲ್ ಸ್ಟ್ರಾ ಬಳಸಿ ಇದನ್ನು ಕುಡಿಯುವುದು ಬಹಳ ವಿಶಿಷ್ಠ ಎನಿಸುತ್ತದೆ. ಇಲ್ಲಿನ ಜನರು ಈ ಚಹಾವನ್ನು ಪ್ರತಿದಿನ ಸೇವಿಸುತ್ತಾರೆ. 

ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ....

7. ಅರೇಬಿಕ್ ಟೀ

ಆತಿಥ್ಯ ನೀಡಲು ಬಳಸುವ ಅರೇಬಿಕ್ ಟೀಯಲ್ಲಿ ವಿವಿಧ ಬಗೆಗಳಿವೆ. ಬೇರೆ ಬೇರೆ ರೀತಿಯ ತಾಜಾ ಹರ್ಬ್ಸ್ ಬಳಸಿ ಬಿಸಿ ಬಿಸಿಯಾಗಿ ಹೀರುವ ಈ ಚಹಾ ಮನಸ್ಸಿಗೆ ಮುದ ನೀಡುತ್ತದೆ. ಸೇಜ್ ಎಂಬುದು ಅರೇಬಿಯಾದ ವಿಶಿಷ್ಠ ಚಹಾವಾಗಿದ್ದು, ಸಾಮಾನ್ಯವಾಗಿ ಊಟವಾದ ನಂತರ ಅದನ್ನು ಸೇವಿಸಲಾಗುತ್ತದೆ. ಒಣಗಿಸಿದ ಸೇಜ್ ಎಲೆಗಳು ಹಾಗೂ ಜೇನುತುಪ್ಪ ಬಳಸಿ ಈ ಚಹಾ ತಯಾರಿಸಲಾಗುತ್ತದೆ. ಇನ್ನು ಇದಕ್ಕೆ ಏಲಕ್ಕಿ, ಥೈಮ್, ಕ್ಯಾಮೋಮೈಲ್, ಸೋಂಪು ಮುಂತಾದ ಹರ್ಬ್ಸ್ ಸೇರಿಸಿ ರುಚಿ ಹಾಗೂ ಪರಿಮಳ ಹೆಚ್ಚಿಸುವುದೂ ಉಂಟು.