ಚಳಿಗಾಲವೆಂದರೆ ರೊಮ್ಯಾನ್ಸ್‌ಗೆ ಹೇಳಿ ಮಾಡಿಸಿದ ಕಾಲ. ಈ ಸಮಯ ಪ್ರವಾಸ ಕೈಗೊಳ್ಳಲೂ ಸುಸಮಯ. ಈ ಸಂದರ್ಭದಲ್ಲಿ ಭಾರತದಲ್ಲಿ ಯಾವೆಲ್ಲ ತಾಣಗಳಿಗೆ ಭೇಟಿ ನೀಡಬಹುದು ಎಂಬ ಪುಟ್ಟ ಮಾಹಿತಿ ಇಲ್ಲಿದೆ... 

ಕೊಡಗು: ಮಡಿಕೇರಿ, ಕೊಡಗು ಅಥವಾ ಕೂರ್ಗ್ ಚಳಿಗಾಲದಲ್ಲಿ ಭೇಟಿ ನೀಡಲೇಬೇಕಾದ ಸುಂದರ ತಾಣ. ಇದನ್ನು ದಕ್ಷಿಣದ ಕಾಶ್ಮೀರ ಎಂದೂ ಕರೆಯುತ್ತಾರೆ. ಇಲ್ಲಿನ ಹಸಿರು ಸಿರಿ, ಕಾಫಿ ಪ್ಲಾಂಟೇಷನ್, ವೈನ್, ಸುಂದರ ಜಲಪಾತಗಳು, ಬೆಟ್ಟ ಗುಡ್ಡಗಳು, ಜಲಧಾರೆಗಳು ಮೈ ಮನಸಿಗೆ ಮುದ ನೀಡುತ್ತವೆ. 

ಜೈಪುರ್: ಜೈಪುರ್, ಜೋಧ್ ಪುರ್ ಮತ್ತು ಜೈಸಲ್ಮೇರ್ ಸಹ ಚಳಿಗಾಲಕ್ಕೆ ಹೇಳಿ ಮಾಡಿಸಿದಂಥ ತಾಣಗಳು. ಇಲ್ಲಿನ ಹವೇಲಿ, ಅರಮನೆಗಳು ಮತ್ತು ಕೋಟೆಗಳು ಜನರನ್ನು ಮಂತ್ರಮುಗ್ಧಗೊಳಿಸುತ್ತದೆ. 

ಮನಾಲಿ:  ಉತ್ತರ ಭಾರತದಲ್ಲಿರುವ ಒಂದು ಸುಂದರವಾದ ಗಿರಿಧಾಮಗಳಲ್ಲೊಂದಿದು. ಇದಲ್ಲದೇ ಕುಲ್ಲು, ಕ್ಯಾಸೋಲ್, ರೊಹ್ ಟಾಂಗ್, ಸೋಲಾಂಗ್ ಪ್ರದೇಶಗಳನ್ನೂ ನೋಡಬಹುದು. ಫ್ಯಾಮಿಲಿ ಹಾಲಿಡೇ, ಸಾಹಸಮಯ ಯಾತ್ರೆ, ಹನಿಮೂನ್, ವಿಂಟರ್ ಹಾಲಿಡೇ ಕಳೆಯಲು ಬೆಸ್ಟ್. ದಸರಾ ವೇಳೆ ಈ ಪ್ರದೇಶಕ್ಕೆ ಭೇಟಿ ನೀಡಿದರೆ, ಕಲ್ಲು ದೇವಾಲಯಗಳ ಸೌಂದರ್ಯವನ್ನು ಸವಿಯಬಹುದು. ಮಂಜನ್ನು ಮಜಾ ಮಾಡಬಹುದು. 

ನಾರ್ಥ್ ಈಸ್ಟ್ : ಶಿಲ್ಲಾಂಗ್, ಮೊಕೊಕ್ ಚುಂಗ್, ಇಂಫಾಲ್, ಕಾಜಿರಂಗ ನ್ಯಾಷನಲ್ ಪಾರ್ಕ್ ನೋಡಬೇಕಾದ ಇತರೆ ತಾಣಗಳು. ಇಲ್ಲಿ ಲೆಕ್ಕವಿಲ್ಲದಷ್ಟು ಪಾರ್ಕ್‌ಗಳು, ಸರೋವರಗಳು , ಗುಹೆಗಳು ಮತ್ತು ಪರ್ವತಗಳನ್ನು ಕಾಣಬಹುದು. ಈ ತಾಣ ನಿಮ್ಮ ಲಿಸ್ಟ್‌ನಲ್ಲಿರಲಿ.

ಚೆನ್ನೈ: ಪಾಂಡಿಚೆರಿ, ಮಹಾಬಲಿಪುರಂ, ತಂಜಾವೂರು, ಮಧುಮಲೈ, ಎರಕಾಡು... ವಾವ್ ಸುಂದರವಾದ ಕಡಲ ತಡಿಯ ತಾಣಗಳು. ಪಾರ್ಟಿ, ಬೀಚ್ ಎಂಜಾಯ್ ಮಾಡಲು ಹೇಳಿ ಮಾಡಿಸಿದಂತಿವೆ. 

ಜಮ್ಮು-ಕಾಶ್ಮೀರ :  ಭಾರತದ ತುತ್ತ ತುದಿಯಲ್ಲಿರುವ ಜಮ್ಮು ಕಾಶ್ಮೀರವನ್ನು ಹಿಮ ಕಣಿವೆಗಳ ರಾಜ್ಯವೆಂದೇ ಕರೆಯಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ಸೌಂದರ್ಯವನ್ನು ನೋಡಲೆರಡು ಕಣ್ಣುಗಳು ಸಾಲದು. ಹನಿಮೂನ್ ಸದಾ ಕಾಲ ನೆನಪಿನಲ್ಲಿರಬೇಕೆಂದರೆ ಇಲ್ಲಿಗೆ ಹೋಗಬೇಕು. ಅದರಲ್ಲಿಯೂ ಚಳಿಗಾಲದಲ್ಲಿ ವಿಸಿಟ್ ಮಾಡಿದರೆ ಜೀವನದ ಅವಿಸ್ಮರಣೀಯ ಕ್ಷಣ ನಿಮ್ಮದಾಗುವುದರಲ್ಲಿ ಅನುಮಾನವೇ ಇಲ್ಲ. 

ಲೆಹ್ ಲಡಾಕ್:  ಸಾಹಸಮಯ ಯಾತ್ರೆ ಕೈಗೊಳ್ಳಲು ಇಷ್ಟಪಡುವವರಿಗೆ ಬೆಸ್ಟ್ ಪ್ಲೇಸ್ ಇದು. ಲಡಾಕ್ ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿದೆ. ಸರೋವರ, ಎತ್ತರವಾದ ಪರ್ವತಗಳ ಮಡಿಲಲ್ಲಿ ಕಳೆದು ಹೋಗಬಯಸಿದರೆ ಇಲ್ಲಿಗೆ ಹೋಗಿ.