ನೀವು ನಿಮ್ಮ ಮ್ಯಾಟ್ರಿಮೋನಿಯಲ್ ಸೈಟ್‌ನ ಅಥವಾ ಡೇಟಿಂಗ್ ಪ್ರೊಫೈಲನ್ನು ಅದ್ಭುತವಾಗಿ ರೆಡಿ ಮಾಡಿರಬಹುದು. ಆದರೆ, ನೀವು ಹಾಕಿರುವ ಪೋಟೋವೇ ನಿಮಗೆ  ಉತ್ತಮ ಮ್ಯಾಚ್‌ಗಳು ಸಿಗದಿದ್ದಂತೆ ತಪ್ಪಿಸುತ್ತಿರುವ ವಿಲನ್ ಆಗಿರಬಹುದು. ಹಾಗಂತ ಇದು ನಿಮ್ಮ ರೂಪದ ವಿಷಯವಲ್ಲ, ಯಾವ ರೀತಿಯ ಫೋಟೋ ಹಾಕಿದ್ದೀರಿ ಎಂಬುದರ ಬಗ್ಗೆ. ಡೇಟಿಂಗ್ ಸೈಟ್‌ಗೆ ಫೋಟೋ ಹಾಕುವಾಗ ಈ ತಪ್ಪುಗಳನ್ನು ಮಾಡಬೇಡಿ. 

1. ಕಟೌಟ್

ನೀವು ಹಾಗೂ ನಿಮ್ಮ ಎಕ್ಸ್ ಜೊತೆ ತೆಗೆಸಿಕೊಂಡ ಆ ಫೋಟೋ ನಿಮ್ಮ ಎಲ್ಲ ಫೋಟೋಗಳಲ್ಲೇ ಬೆಸ್ಟ್ ಇರಬಹುದು. ಆದರೆ, ಅದನ್ನು ಡೇಟಿಂಗ್ ಸೈಟ್‌ಗೆ ಹಾಕುವ ಐಡಿಯಾ ಬಹಳ ಕೆಟ್ಟದ್ದು. ನೀವು ನಿಮ್ಮ ಎಕ್ಸ್‌ನ ಪೋಟೋವನ್ನು ಕ್ರಾಪ್ ಮಾಡಿರಬಹುದು, ಅಥವಾ ಫೋಟೋಶಾಪ್ ಬಳಸಿ ಮತ್ತೊಬ್ಬರ ಫೋಟೋ ಕಾಣದಂತೆ ಮಾಡಿರಬಹುದು. ಆದರೂ, ನಿಮ್ಮ ಪ್ರೊಫೈಲನ್ನು ನೋಡುವವರು ಮೊದಲು ಯೋಚಿಸುವುದೇ ಈ ಫೋಟೋದಲ್ಲಿ ಈಕೆಯ ಜೊತೆ ನಿಂತಿದ್ದವರು ಯಾರಿರಬಹುದು ಎಂದು!

2. ಗ್ಲಾಮರ್ ಶೂಟ್

ಪ್ರೊಫೆಶನಲ್ ಫೋಟೋಶೂಟ್ ನಡೆಸಿದಾಗ ತೆಗೆಸಿದ ಆ ಗ್ಲಾಮರಸ್ ಫೋಟೋ ಕ್ವಾಲಿಟಿಯಲ್ಲೂ, ಲುಕ್‌ನಲ್ಲೂ ಮಸ್ತ್ ಇರಬಹುದು. ಆದರೆ ಅದನ್ನು ನೋಡಿದವರು ನಿಮ್ಮನ್ನು ಜಡ್ಜ್ ಮಾಡುವ ಸಾಧ್ಯತೆ ಹೆಚ್ಚು. ಅಲ್ಲದೆ ಫೋಟೋಶೂಟ್ ಮಾಡಿಸಿದ ಫೋಟೋಗಳಂತೆ ನೀವು ನಿಜವಾಗಿಯೂ ಇರುವುದಿಲ್ಲ ಎಂಬುದು ಎಲ್ಲರೂ ಊಹಿಸಬಹುದಾದದ್ದೇ. 

ದಾಂಪತ್ಯವನ್ನೇ ಕುಲಗೆಡಿಸೋ ಐದು ವರ್ತನೆಗಳಿವು..

3. ಯಾರು ಯಾರು?

ನಿಮ್ಮ ಪ್ರೊಫೈಲ್ ಫೋಟೋದಲ್ಲಿ ನೀವಿರಬೇಕೇ ಹೊರತು ನಿಮ್ಮ ಅತ್ತೆ ಮಗಳು, ಚಿಕ್ಕಮ್ಮನ ಮಗಳು, ಅಮ್ಮ, ಆಂಟಿ, ಗೆಳತಿಯರು ಅಲ್ಲ. ನೀವು ಇನ್ನೊಬ್ಬರೊಂದಿಗೆ ನಿಂತ ಫೋಟೋ ಹಾಕಲೇ ಬೇಡಿ. ಮ್ಯಾಚ್‌ಗಳು ನಿಮ್ಮ ಫೋಟೋ ನೋಡಲು ಬಯಸಿ ತೆರೆದಾಗ ಯಾರು ಯಾರು ಎಂದೇ ತಿಳಿಯದೆ ಗೊಂದಲದಲ್ಲಿ ನಿಮ್ಮ ಅತ್ತೆ ಮಗಳನ್ನೇ ಇಷ್ಟಪಡಬಹುದು. ಅಥವಾ ಗೊಂದಲವೇ ಬೇಡ ಎಂದು ನಿಮ್ಮ ಪ್ರೊಫೈಲ್‌ನಿಂದಲೇ ದೂರ ಓಡಬಹುದು. 

4. ಸೆಲ್ಫೀ

ಫೋಟೋ ಯಾರು ಹುಡುಕುತ್ತಾರೆಂದೋ, ಸ್ಟುಡಿಯೋಗೆ ಹೋಗಿ ತೆಗೆಸುವುದು ರಗಳೆಯೆಂದೋ ಅಥವಾ ಪ್ರೊಫೈಲ್ ಹಾಕುವ ಸಮಯದಲ್ಲಿ ನಿಮ್ಮ ಬಳಿ ಬೇರೆ ಫೋಟೋಗಳಿಲ್ಲದಿದ್ದ ಕಾರಣಕ್ಕೆ ಅಲ್ಲೇ ಸೆಲ್ಫೀ ತೆಗೆದುಕೊಂಡು ಅದನ್ನು ಪ್ರೊಫೈಲ್‌ಗೆ ಅಪ್ಲೋಡ್ ಮಾಡಿಬಿಟ್ಟಿರಿ ಎಂದುಕೊಳ್ಳಿ. ಈ  ಹುಡುಗ/ಹುಡುಗಿಗೆ ಸೀರಿಯಸ್ನೆಸ್ ಇಲ್ಲವೆಂದೋ, ಇನ್ನೂ ಕಾಲೇಜು ಮೂಡಲ್ಲಿರುವ ಇಮ್ಮೆಚೂರ್ ಫೆಲೋ ಎಂದೋ ನೋಡಿದವರು ಭಾವಿಸಬಹುದು. ಇಷ್ಟಕ್ಕೂ ನಿಮ್ಮ ಬೈಸೆಪ್ಸ್ ನೋಡುವ ತವಕ ಯಾರಿಗೂ ಇರದು. ಅಲ್ಲದೆ, ಸೆಲ್ಫೀಗಳಲ್ಲಿ ಕಾಣುವ ಮುಖಕ್ಕೂ, ಆಧಾರ್ ಕಾರ್ಡಿನಲ್ಲಿ ಕಾಣುವ ಭಯಾನಕ ಮುಖಕ್ಕೂ ಅಷ್ಟೇನು ವ್ಯತ್ಯಾಸವಿರದು ಅಲ್ಲವೇ? 

5. ರೆಟ್ರೋ

ಬಹಳ ಹಿಂದಿನ ಫೋಟೋದಲ್ಲಿ ನೀವು ಯಂಗ್ ಕಾಣಿಸುತ್ತಿದ್ದೀರೆಂದೋ ಅಥವಾ ಬಾಲ್ಯದ ಫೋಟೋ ಹಾಕಿ ಈಗ ಹೇಗಾಗಿರಬಹುದೆಂದು ನೋಡಿದವರೇ ಗೆಸ್ ಮಾಡಲಿ ಎಂಬ ದೂರದಾಸೆಗೋ ಹಳೆಯ ಫೋಟೋವೊಂದನ್ನು ಅಪ್‌ಲೋಡ್ ಮಾಡಬೇಡಿ. ಒಂದು ವೇಳೆ ಯಾರಾದರೂ ಆಸಕ್ತಿ ವ್ಯಕ್ತಪಡಿಸಿ ಮುಂದುವರಿದರೂ ಎದುರಿನಿಂದ ನೋಡಿದಾಗ ನಿಮ್ಮ ಅಪ್ರಾಮಾಣಿಕತೆಗೆ ಕೋಪಗೊಳ್ಳುತ್ತಾರೆ. ಈಗ ಹೇಗಿದ್ದೀರೋ ಅದನ್ನೇ ತೋರಿಸಿಕೊಳ್ಳಿ.

ಪ್ರೀತಿ ಮಾಡಿ ತಪ್ಪೇನಿಲ್ಲ; ಆದರೆ ಈ 7 ಸಂಗತಿ ನಿಮಗೆ ಗೊತ್ತಿರಲಿ

6. ದೂರ, ದೂರ

ನೀವು ಬೆಟ್ಟದ ತುದಿಯಲ್ಲೆಲ್ಲೋ ದೂರದಲ್ಲಿ ನಿಂತಿರುವ, ಸ್ಕೀಯಿಂಗ್ ಮಾಡುತ್ತಿರುವ, ಸ್ಕೂಬಾ ಡೈವಿಂಗ್ ಮಾಡುತ್ತಿರುವ, ಪ್ಯಾರಾಚೂಟ್‌ನಲ್ಲಿ ಹಾರುತ್ತಿರುವ ಫೋಟೋಗಳನ್ನು ಹಾಕಿದರೆ ನಿಮ್ಮ ಸಾಹಸಪ್ರವೃತ್ತಿ ಮೆಚ್ಚಿ ಮ್ಯಾಚ್‌ಗಳು ಬರುತ್ತಾರೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಅನಿಸಿಕೆ. ಪ್ರಥಮ ಬಾರಿ ಇಂಪ್ರೆಸ್ ಆಗಲು ಆವರು ನಿಮ್ಮ ಮುಖ ನೋಡಲು ಬಯಸುತ್ತಾರೆಯೇ ವಿನಾ ವಾಲ್‌ಪೇಪರ್ ತರದ ಫೋಟೋವನ್ನಲ್ಲ. 

7. ಪಾರ್ಟಿ

ನೈಟ್ ಔಟ್ ಪಾರ್ಟಿಯಲ್ಲಿ ತೆಗೆದ ಫೋಟೋ ಹಾಕಿದರೆ ಎಂಜಾಯ್ ಮಾಡಲು ನಿಮಗೂ ಬರುತ್ತದೆ ಎಂದು ತೋರಿಸಬಹುದೆಂದುಕೊಂಡಿದ್ದರೆ ಖಂಡಿತಾ ತಪ್ಪು. ಅದದರ ಬದಲು ಟೆಕಿಲಾ ಶಾಟ್‌ಗಳನ್ನು ತೆಗೆದುಕೊಂಡ ಬಳಿಕ ನೀವು ಎಷ್ಟೊಂದು ಬೆವರಿದ್ದೀರಾ  ಎಂದು ಫೋಟೋ ತೋರಿಸುತ್ತದೆ. 

8. ವೆಬ್‌ಕ್ಯಾಮ್

ವೆಬ್‌ಕ್ಯಾಮ್ ಫೋಟೋಗಳು ಸೆಲ್ಫೀಯ ಕಸಿನ್ಸ್ ಇದ್ದಂತಿರುತ್ತವೆ. ಮಂಗವೊಂದು ತನ್ನ ಫೋಟೋ ತೆಗೆದುಕೊಂಡು ವೈರಲ್ ಆದ ಫೋಟೋ ನಿಮಗೆ ನೆನಪಿರಬಹುದು. ಹೀಗೆ ವೆಬ್‌ಕ್ಯಾಮ್‌ನಲ್ಲಿ ತೆಗೆವ ಫೋಟೋವೂ ಅದಕ್ಕಿಂತ ಭಿನ್ನವೇನಲ್ಲ!