Asianet Suvarna News Asianet Suvarna News

ಆಯುರ್ವೇದದಲ್ಲಿದೆ ಮಳೆಗಾಲದ ಫಿಟ್ನೆಸ್ ಸೂತ್ರಗಳು!

ಮಳೆಗಾಲ ನಿಮ್ಮ ಫೇವರೇಟ್ ಕಾಲವಾಗಿರಬಹುದು. ಆದರೆ, ಕಾಯಿಲೆ ಹರಡುವ ಕೀಟಾಣುಗಳಿಗೂ ಅಷ್ಟೇ ಆಪ್ತಕಾಲ. ಹೀಗಾಗಿ, ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಜಾಣತನದ ಲಕ್ಷಣ.

5 ways to stay fit this monsoon
Author
Bangalore, First Published Jun 8, 2019, 3:44 PM IST

ಮಳೆಯ ಜಿಟಿಜಿಟಿ ಸದ್ದು, ಕಪ್ಪೆಗಳ ವಟಗುಟ್ಟುವಿಕೆ, ಮಣ್ಣಿನ ಘಮಲು, ದಿನವೂ ಸ್ನಾನ ಮಾಡಿ ತಾಜಾ ಆಗುವ ಪ್ರಕೃತಿ... ಇನ್ನೇನು ಮಳೆಗಾಲ ಶುರುವಾಗೇ ಬಿಡುತ್ತದೆ. ಆದರೆ ಅದರೊಂದಿಗೆ ಡೆಂಘೆ, ಮಲೇರಿಯಾ, ಅಜೀರ್ಣ, ಚಿಕನ್‌ಗೂನ್ಯದಂಥ ಸಾಂಕ್ರಾಮಿಕ ರೋಗಗಳೂ ಇದೇ ಸಕಾಲವೆಂದು ದಾಂಗುಡಿಯಿಡುತ್ತವೆ. ಮಳೆಗಾಲವು ಪಿತ್ತವನ್ನು ಕೆರಳಿಸುತ್ತಾದ್ದರಿಂದ ಜೀರ್ಣ ಸಮಸ್ಯೆಗಳು ಹೆಚ್ಚು ಎನ್ನುತ್ತದೆ ಆಯುರ್ವೇದ. ಗಾಳಿಯಲ್ಲಿರುವ ತೇವಾಂಶವು ಇನ್ಫೆಕ್ಷನ್, ಚರ್ಮ ಸಮಸ್ಯೆಗಳು ಸೇರಿ ಮತ್ತಷ್ಟು ಅನಾರೋಗ್ಯ ತರುತ್ತದೆ. ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಆಯುರ್ವೇದ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. 

1. ಆಹಾರದ ಬಗ್ಗೆ ಗಮನವಿಡಿ
ಸೊಪ್ಪುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ, ಮಳೆಗಾಲದಲ್ಲಲ್ಲ. ಮಳೆಗಾಲದಲ್ಲಿ ಸೊಪ್ಪುಗಳಲ್ಲಿ ಹುಳಗಳು ಜಾಸ್ತಿ. ಜೊತೆಗೆ ಕೊಳೆ ಹಾಗೂ ಹವಾಮಾನದ ತೇವಾಂಶವನ್ನೂ ಎಳೆದುಕೊಂಡಿರುತ್ತವೆ. ಮಸಾಲೆ ಹಾಗೂ ಎಣ್ಣೆ ಪದಾರ್ಥಗಳು ಹೊಟ್ಟೆ ಕೆಡಿಸುತ್ತವೆ. ಹುಳಿಯಾದ ಹಾಗೂ ಅಸಿಡಿಕ್ ಆಹಾರಗಳನ್ನು ಮಳೆಗಾಲದಲ್ಲಿ ದೂರವಿಡಿ. ಚಟ್ನಿಗಳ ಸೇವನೆಗೂ ಎರಡ್ಮೂರು ತಿಂಗಳು ಕಾದರೆ ಒಳಿತು. ಚೆನ್ನಾಗಿ ಬೇಯಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಕಹಿ ಆಹಾರಗಳು ಪಿತ್ತವನ್ನು ಹೊಡೆಯುತ್ತವಾದ್ದರಿಂದ ಆದಷ್ಟು ಕಹಿ ಆಹಾರ ಸೇವನೆ ಒಳಿತು. ಅಡಿಗೆಯಲ್ಲಿ ಮೆಂತ್ಯೆ, ಬೇವು, ಅರಿಶಿನ, ಉಪ್ಪು, ಪೆಪ್ಪರ್ ಬಳಕೆ ಹೆಚ್ಚು ಮಾಡಿ.

ಉದ್ಯೋಗಸ್ಥರು ಯಾವ ರೀತಿ ಸ್ಲಿಪ್ಪರ್ ಹಾಕ್ಕೊಂಡರೆ ಧನ ಪ್ರಾಪ್ತಿಯಾಗುತ್ತೆ?

2. ವ್ಯಾಯಾಮಕ್ಕೆ ರಜೆ ಬೇಡ
ಮಳೆಗಾಲದಲ್ಲಿ ಹೊರಗೆ ಹೋಗಲಾಗುವುದಿಲ್ಲ ಎಂದು ಎಕ್ಸರ್ಸೈಸ್ ನಿಲ್ಲಿಸಬೇಡಿ. ಈಜಿಗೆ ಇದು ಸಮಯವಲ್ಲ. ಹಾಗಂತ ಮನೆಯಲ್ಲೇ ಯೋಗ, ಪ್ರಾಣಾಯಾಮ, ಟ್ರೆಡ್‌ಮಿಲ್ ಇತರೆ ಎಕ್ಸರ್ಸೈಸ್ ಮಾಡುವುದನ್ನು ತಪ್ಪಿಸಬೇಡಿ. ಅತಿಯಾದ ವ್ಯಾಯಾಮ ಮಳೆಗಾಲದಲ್ಲಿ ಒಳ್ಳೆಯದಲ್ಲ.

3. ಪಂಚಕರ್ಮಕ್ಕೆ ಪರ್ಫೆಕ್ಟ್ ಟೈಮ್
ಪಂಚಕರ್ಮ ಚಿಕಿತ್ಸೆ ಪಡೆಯಲು ಮಳೆಗಾಲವೇ ಸರಿಯಾದ ಸಮಯ ಎನ್ನುತ್ತಾರೆ ಆಯುರ್ವೇದ ವೈದ್ಯರು. ವಾತಾವರಣವು ಧೂಳುರಹಿತವಾಗಿ, ತೇವಾಂಶಭರಿತವಾಗಿರುವುದರಿಂದ ಹರ್ಬಲ್ ತೈಲಗಳನ್ನು ದೇಹವು ಈ ಸಂದರ್ಭದಲ್ಲಿ ಚೆನ್ನಾಗಿ ಹೀರಿಕೊಳ್ಳುತ್ತದೆ ಎನ್ನುವುದು ವೈದ್ಯರ ವಿವರಣೆ. ಪಂಚಕರ್ಮ ಚಿಕಿತ್ಸೆ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹ ಹಾಗೂ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ. 

ನಮ್ಮ ದೇಹದ ಅತ್ಯಂತ ಕೊಳಕಾದ ಭಾಗಗಳಿವು!

4. ಹೊರಗಿನ ಆಹಾರ ಸೇವನೆ ಬೇಡ
ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರಗಳು ಸುಲಭವಾಗಿ ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಆಕರ್ಷಿಸುತ್ತವೆ. ಇದರಿಂದ ಆ ಜಂಕ್ ಆಹಾರಗಳಲ್ಲಿ ರೋಗಾಣುವೂ ಸೇರುತ್ತದೆ, ಪೋಷಕಸತ್ವವೂ ಕಾಣೆಯಾಗುತ್ತದೆ. ಹೀಗಾಗಿ, ನಿಮ್ಮ ಫೇವರೇಟ್ ಪಾನಿಪೂರಿ, ಬೇಲ್ ಸೇವನೆಗೆ ಮಳೆಗಾಲ ಮುಗಿವವರೆಗೆ ಕಾಯುವುದು ಒಳಿತು.

5. ಚರ್ಮರೋಗಗಳನ್ನು ದೂರವಿಡಿ
ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳನ್ನು ದೂರವಿಡಲು ಬಿಸಿನೀರಿನ ಸ್ನಾನಕ್ಕೂ ಮುಂಚೆ 1 ಅಥವಾ 2 ಚಮಚ ಬೇವಿನೆಣ್ಣೆ ಅಥವಾ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. 

Follow Us:
Download App:
  • android
  • ios