ನಮ್ಮ ದೇಹದ ಅತ್ಯಂತ ಕೊಳಕಾದ ಭಾಗಗಳಿವು!
ನಿಮ್ಮ ದೇಹವನ್ನು ನೀವು ಸರಿಯಾಗಿ ಸ್ವಚ್ಛಗೊಳಿಸುತ್ತಿದ್ದೀರಾ? ನಮ್ಮಲ್ಲಿ ಬಹುತೇಕರಿಗೆ ದೇಹದ ಈ ಭಾಗಗಳು ಎಷ್ಟು ಕೊಳಕು ಎಂಬ ಅರಿವಿರುವುದಿಲ್ಲ.
ಮನುಷ್ಯನ ದೇಹ ಒಳಗಿನಿಂದಲೂ ಹೊರಗಿನಿಂದಲೂ ಕೋಟ್ಯಂತರ ಬ್ಯಾಕ್ಟೀರಿಯಾಗಳ ವಾಸಸ್ಥಾನ. ಪ್ರತಿ ದಿನ ಸ್ನಾನ ಮಾಡುವ ಹೊರತಾಗಿಯೂ, ಮಣ್ಣಿನಲ್ಲಿ ಆಡದ ಹೊರತಾಗಿಯೂ ನಮ್ಮ ದೇಹ ಮರುದಿನ ಸ್ನಾನಕ್ಕೆ ಹೋಗುವ ಸಮಯಕ್ಕೆ ಕ್ರಿಮಿಗಳಿಂದ ಮಿಜಿಗುಡುತ್ತಾ ವಾಸನೆ ಬರುತ್ತದೆ. ಮನುಷ್ಯರಿಗೆಲ್ಲಾದರೂ ಮೈಕ್ರೋಸ್ಕೋಪಿಕ್ ಕಣ್ಣಿದ್ದಿದ್ದರೆ, ಖಂಡಿತಾ ನಾವೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆವು ಅಷ್ಟೆ.
ತಲೆ
ನೀವು ತಲೆ ತುರಿಸಿಕೊಂಡಾಗ ಹೊಟ್ಟು ಹಾಗೂ ಬ್ಯಾಕ್ಟೀರಿಯಾ ಮಿಕ್ಸ್ ಆಗಿ ಇನ್ಫೆಕ್ಷನ್ ಆಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಪ್ರತಿ ಎರಡು ದಿನಗಳಿಗೊಮ್ಮೆ ತಲೆ ಸ್ನಾನ ಮಾಡುವುದು ಉತ್ತಮ.
ಕಂಕುಳು
ದೇಹದ ಈ ಭಾಗದಲ್ಲಿ 80,000ಕ್ಕೂ ಅಧಿಕ ಬ್ಯಾಕ್ಟೀರಿಯಾಗಳಿರುತ್ತವೆ ಎಂದು ನಿಮಗೆ ಗೊತ್ತಾ? ಹಾಗಾಗಿಯೇ ಕಂಕುಳು ಕೆಟ್ಟ ನಾತ ಬರುವುದು. ಡಿಯೋಡ್ರಂಟ್‌ಗಳು ಇವಕ್ಕೆ ಪರಿಹಾರವಲ್ಲ. ಬದಲಿಗೆ ಆ ಭಾಗವನ್ನು ಪದೇ ಪದೆ ತೊಳೆದುಕೊಳ್ಳಿ ಹಾಗೂ ಮನೆಮದ್ದು ಉಪಯೋಗಿಸಿ ನೋಡಿ.
ಬಾಯಿ
ಬಾಯಿಯಲ್ಲಿ 600ಕ್ಕೂ ಅಧಿಕ ರೀತಿಯ ಬ್ಯಾಕ್ಟೀರಿಯಾಗಳು ಬದುಕುತ್ತವೆ ಎಂದು ಕೇಳಿದರೆ ಬಾಯಿ ಬಾಯಿ ಬಿಟ್ಟೀರಿ. ಅದೇ ಕಾರಣಕ್ಕೆ ಬಾಯಿ ವಾಸನೆ ಬರುತ್ತದೆ. ಇದು ದೇಹದ ಅತಿ ಕೊಳಕು ಭಾಗಗಳಲ್ಲಿ ಒಂದು ಎಂಬುದಕ್ಕೆ ಯಾವುದೇ ಅನುಮಾನ ಬೇಡ. ಇನ್ನಾದರೂ ಪ್ರಶ್ನೆ ಮಾಡದೆ ದಿನಕ್ಕೆರಡು ಬಾರಿ ಬ್ರಶ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ಕಿವಿ
ಹೊರಗಿನ ಕೊಳಕು ಒಳ ದಾಟದಂತೆ ನೋಡಿಕೊಳ್ಳಲು ಕಿವಿಯಲ್ಲಿ ವ್ಯಾಕ್ಸ್ ಇರುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ಕಿವಿ ಬಹಳ ಕೊಳಕಾದ ಜಾಗ. ಆದರೆ, ಅದಕ್ಕೆ ಸ್ವಯಂ ಸ್ವಚ್ಛವಾಗುವ ಸಾಮರ್ಥ್ಯ ಇರುವುದರಿಂದ ನೀವು ಸುಮ್ಮನಿದ್ದರೂ ನಡೆಯುತ್ತದೆ.
ನಾಲಿಗೆ
ಬಾಯಿ ಕೊಳಕು ಎಂದು ಗೊತ್ತಾಯಿತು. ಅಂದ ಮೇಲೆ ಬಾಯಿಯೊಳಗೆ ಕುಳಿತ ನಾಲಿಗೆ ಸ್ವಚ್ಛವಿರುವುದು ಹೇಗೆ ಸಾಧ್ಯ? ಅಧು ಸ್ಪಾಂಜ್‌ನಂತೆ ಬ್ಯಾಕ್ಟೀರಿಯಾಗಳನ್ನು ಬಳಿದೆಳೆದುಕೊಳ್ಳುತ್ತದೆ. ಪ್ರತಿ ಬಾರಿ ಬ್ರಶ್ ಮಾಡುವಾಗಲೂ ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ.
ಹೊಕ್ಕಳು
ಇಲ್ಲಿ ಅಡಗಿ ಕೂರಲು ಜಾಗವಿದೆ ಎಂದೋ ಏನೋ ಬ್ಯಾಕ್ಟೀರಿಯಾಗಳು ಹೊಕ್ಕಳೊಳಗೆ ಮನೆ ಮಾಡುತ್ತವೆ. ಇದರ ಅರಿವಿದ್ದರೆ ಇನ್ನೊಮ್ಮೆ ಹೀರೋಯಿನ್ ಹೊಕ್ಕುಳಿಗೆ ದ್ರಾಕ್ಷಿ ಹಣ್ಣು ಉರುಳಿಸಿ ತಿನ್ನುವ ದೃಶ್ಯ ನೋಡಿದರೆ ನಿಮಗೆ ವಾಕರಿಕೆ ಬರದಿರಲಾರದು. ಹೀಗಾಗಿ, ಹೊಕ್ಕುಳನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಂಡು ಸರಿಯಾಗಿ ಒಣಗಿಸಿಕೊಳ್ಳಿ.
ಮೂಗಿನ ಹೊಳ್ಳೆಗಳು
ಕಿವಿಯಂತೇ ಮೂಗು ಕೂಡಾ ಹೊರಗಿನ ಧೂಳು ಬ್ಯಾಕ್ಟೀರಿಯಾ ಒಳಗೆ ಹೋಗಲು ಬಿಡದಂತೆ ಕಾಯುವ ಹೋರಾಟದಲ್ಲಿ ಗಬ್ಬೆದ್ದು ಹೋಗುತ್ತದೆ. ಹಾಗಂತ ಬೆರಳನ್ನು ಮೂಗಿನಲ್ಲಿ ಆಡಿಸಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ.
ಉಗುರುಗಳು
ಉಗುರುಗಳು ಕಸ ಮೊಗೆವ ಮೊರದಂತೆ. ತಲೆ ತುರಿಸಿದರೆ ಅಲ್ಲಿನ ಹೊಟ್ಟು, ತಿಂದರೆ ಆಹಾರದ ಉಳಿಕೆ, ನೆಲ ಒರೆಸಿದರೆ ಆ ಬಟ್ಟೆಯ ಕೊಳೆ, ಪಾತ್ರೆ ತೊಳೆದರೆ ಅದರಲ್ಲಿದ್ದ ಜಿಡ್ಡಿನ ಅಂಟು ಇತ್ಯಾದಿ ಇತ್ಯಾದಿ ಎಲ್ಲವನ್ನೂ ತುಂಬಿಕೊಳ್ಳುವ ಉಗುರುಗಳು ನಿಜಕ್ಕೂ ದೇಹದ ಅತಿ ಕೊಳಕು ಭಾಗ. ನೇಲ್ ಪಾಲಿಶ್ ಹಚ್ಚಿ ಮುಚ್ಚಿಕೊಳ್ಳುವ ಬದಲು ಉಗುರನ್ನು ಕತ್ತರಿಸುವ ರೂಢಿ ಮಾಡಿಕೊಳ್ಳಿ.
ಇನ್ನೊಂದೆರಡು ಭಾಗಗಳ ಬಗ್ಗೆ ವಿವರಣೆ ಬೇಕಿಲ್ಲ. ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಅಷ್ಟೇ.