ಅಯ್ಯೋ ಹೊಸ ಬಟ್ಟೆ ಇಡಲು ಜಾಗವೇ ಇಲ್ಲ ಎಂಬ ಗೋಳು ಹಲವು ಹುಡುಗಿಯರದ್ದು. ಅವರ ವಾರ್ಡ್‌ರೋಬ್‌ ತೆಗೆದರೆ ಒಂದಿಷ್ಟು ಬಟ್ಟೆಗಳು ಬುತು ಬುತು ಎಂದು ಮೈ ಮೇಲೆ ಬೀಳುತ್ತವೆ, ಮತ್ತೊಂದೆರಡು ವಾಚ್ ಕೂಡಾ ಕಾಪಾಡಿ ಎಂದರಚುತ್ತಾ ನೆಲಕ್ಕೆ ಹಾರುತ್ತವೆ. ಆದರೂ ಕೂಡಾ ಹುಡುಗಿಯರು ಧರಿಸಲು ಬಟ್ಟೆಯೇ ಇಲ್ಲ ಎಂದು ಗೋಳಾಡುವುದು ಮಾಮೂಲು.

ಈ ವಾರ್ಡ್‌ರೋಬ್ ನೀಟಾಗಿದ್ದರೆ, ಆಗ ಹೀಗೆ ಬಟ್ಟೆಯಿಲ್ಲ ಎಂಬ ಗೊಂದಲ ಕಾಡದು. ಇಡಲು ಜಾಗವೇ ಇಲ್ಲದಷ್ಟು ತುಂಬಿರುವಾಗ ನೀಟ್ ಮಾಡುವುದು ಹೇಗೆ ಎಂದ್ರಾ? ಖಂಡಿತಾ ಮಾಡಬಹುದು. ಏಕೆಂದರೆ ಆ ವಾರ್ಡ್‌ರೋಬ್‌ನಲ್ಲಿ ಬೇಡದ ವಸ್ತುಗಳ ರಾಶಿಯೇ ಇದೆ. ನೀವು ಆ ಬಗ್ಗೆ ಸ್ವಲ್ಪ ವ್ಯಾಮೋಹ ಬಿಟ್ಟು ನೋಡಬೇಕಷ್ಟೇ. 

ಹಬ್ಬಕ್ಕೆ ಹೊಸ ಸೀರೆ ಬಂತು, ಬ್ಲೌಸ್‌ ಕಥೆ ಏನು?

ಮೈಗೆ ಹಿಡಿಯದ ಬಟ್ಟೆಗಳು

ಗೆಳತಿಯ ಮದುವೆಗೆ ಕೊಂಡ ಗೌನ್ ಹಾಕಿದ್ದು ಎರಡೇ ಬಾರಿ, ಹೊಸತಾಗಿಯೇ ಇದೆ ನಿಜ, ಆದರೆ ಈಗ ಅದರಲ್ಲಿ ಕೈಕಾಲು ತೂರವು. ಅಂದ ಮೇಲೆ ಚೆನ್ನಾಗಿದೆ ಎಂದು ಇಟ್ಟುಕೊಂಡು ಏನು ಮಾಡೋದು? ಬದಲಿಗೆ ನೀವದನ್ನು ತಂಗಿಗೋ, ಕಸಿನ್‌ಗೋ ಕೊಟ್ಟುಬಿಡಿ. ಬಟ್ಟೆಯೂ ಯೂಸ್ ಆಗುತ್ತದೆ, ಕಸಿನ್‌ಗೂ ಖುಷಿಯಾಗುತ್ತದೆ. ಇನ್ನು ಮೈಗೆ ಹಿಡಿಯದ ಸ್ವೆಟರ್, ಹಳೆಯ ಆ ಐದಾರು ಟಾಪ್‌ಗಳು, ಹೊಸತೇ ಆದರೂ ಕಲೆಯಾಯಿತೆಂದು ಧರಿಸಲಾಗದೆ ನೋಡಿ ನೋಡಿ ಒಳಗಿಡಬೇಕಾದ ಸಲ್ವಾರ್, ಸೊಂಟಕ್ಕೇರಲು ಕುಯ್ಯೋ ಮರ್ರೋ ಎನ್ನುವ ಪ್ಯಾಂಟ್‌ಗಳು, ಸ್ಟೈಲ್ ಹಳೆಯದಾಯಿತೆಂದು ಹೊರಬರಲು ಹಿಂದೇಟು ಹಾಕುವ ಬ್ಲೌಸ್ ಹಾಗೂ ಚೂಡಿಗಳನ್ನು ಮುಲಾಜೇ ಇಲ್ಲದೆ ದಾನ ಮಾಡಿ.

ಫಿಟ್ಟಿಂಗ್ ಸರಿಯಾಗಿರದ ಬ್ರಾಗಳು

ಫಿಟ್ಟಿಂಗ್ ಸರಿಯಿರದ ಬ್ರಾಗಳು ದೇಹದ ಆಕಾರ ಹಾಳು ಮಾಡುವುದಷ್ಟೇ ಅಲ್ಲ, ಆರೋಗ್ಯಕ್ಕೆ ಕೂಡಾ ಅವು ಒಳ್ಳೆಯದಲ್ಲ. ಲೂಸಾಗಿದ್ದರೆ ಹಾಕಿಯೂ ಪ್ರಯೋಜನವಿಲ್ಲ, ತೀರಾ ಟೈಟಾದರೆ ಚರ್ಮಕ್ಕೆ ಗಾಯ ಮಾಡಿ ಇಡೀ ದಿನ ಚುಚ್ಚುತ್ತಿರುತ್ತವೆ. ಇಂಥವುಗಳ ಮೇಲೇಕೆ ವ್ಯಾಮೋಹ? ಎಸೆದುಬಿಡಿ.

ಹಳೆ ಬ್ರಾ, ಚಪ್ಪಲ್ ಇಡ್ಕೊಂಡು ಮಾಡೋದಾದ್ರೂ ಏನು?

ಏಕಾಂಗಿ ಸಾಕ್ಸ್

ನಮ್ಮೆಲ್ಲರ ಬಳಿಯೂ ಅದೊಂದೆರಡು ಸಾಕ್ಸ್‌ಗಳು ಜೋಡಿಯಿಲ್ಲದೆ ಅನಾಥವಾಗಿ ಅಸಹಾಯಕತೆಯ ದೃಷ್ಟಿ ಬೀರುತ್ತಾ ನಿಂತಿರುತ್ತವೆ. ಮತ್ತೊಂದು ಸಾಕ್ಸ್ ಸಿಗುವ ಯಾವ ಭರವಸೆಯೂ ನಮಗಿರುವುದಿಲ್ಲ. ಆದರೂ ಅದನ್ನು ಯಾಕೆ ಇನ್ನೂ ಇಟ್ಟುಕೊಂಡಿರುತ್ತೇವೆಂದು ನಮಗೇ ಗೊತ್ತಿರುವುದಿಲ್ಲ. ಮೊದಲು ಅದರಿಂದ ಮುಕ್ತವಾಗಿ. 

ಕ್ಯಾನ್ಸರ್ ಮಣಿಸಿ ಬ್ಯೂಟಿ ಕಿರೀಟ ತೊಟ್ಟ ಸುಂದರಿ!

ಎಕ್ಸ್‌ಪೈರ್ಡ್ ಮೇಕಪ್

ನಿಮ್ಮ ಮಸ್ಕಾರಕ್ಕಿರುವ ಆಯಸ್ಸು ಮೂರೇ ತಿಂಗಳು. ಇನ್ನು ಆ ಕನ್ಸೀಲರ್, ಲಿಕ್ವಿಡ್ ಫೌಂಡೇಶನ್‌ಗಳು ಆರು ತಿಂಗಳಿಗೆಲ್ಲ ಅವಧಿ ಮುಗಿಸಿ ಕೂತಿರುತ್ತವೆ. ಆದರೂ ಇವುಗಳೆಲ್ಲ ವರ್ಷದಿಂದ ನಿಮ್ಮ ವಾರ್ಡ್‌ರೋಬ್‌ನ ಸ್ಥಳ ತಿನ್ನುತ್ತಾ ಬೆಚ್ಚಗೆ ಕುಳಿತಿವೆ. ಎಕ್ಸ್‌ಪೈರ್ಡ್ ಆಗಿದ್ದಕ್ಕೆ ಅಂತ್ಯಸಂಸ್ಕಾರ ಮಾಡಲೇಬೇಕಲ್ಲವೇ? ಇಲ್ಲದಿದ್ದರೆ ಅವು ನಿಮ್ಮ ತ್ವಚೆಗೆ ಅಪಾಯ ತಂದೊಡ್ಡುವುದರಲ್ಲಿ ಅನುಮಾನವಿಲ್ಲ.

ಹಳೆಯ ಫೂಟ್‌ವೇರ್

ಕೆಲವೊಂದು ಶೂಗಳು ಕಾಲಿಗೆ ಹಾಕಿದರೆ ಕಚ್ಚುವಷ್ಟು ಮೊಂಡು, ಮತ್ತೆ ಕೆಲವು ಔಟ್ ಆಫ್ ಫ್ಯಾಶನ್, ಇನ್ನೊಂದೆರಡು ಸಿಪ್ಪೆ ಎದ್ದು ಅನಾರೋಗ್ಯಕ್ಕೀಡಾಗಿರುತ್ತವೆ. ಮತ್ತೊಂದು ಸ್ಲಿಪ್ಪರ್, ನೀನಿವತ್ತು ನನ್ನ ಹಾಕಿಕೊಂಡರೆ ನಾನು ಹರಿದುಹೋಗಿ ನಿನ್ನನ್ನು ಪೇಚಿಗೆ ಸಿಲುಕಿಸಿ ಮಜಾ ತೆಗೆದುಕೊಳ್ಳುತ್ತೇನೆಂದು ಬೆದರಿಸುತ್ತಾ ವಾರ್ಡ್‌ರೋಬನ್ನಾಳುತ್ತಿರುತ್ತದೆ. ಇಂಥವುಗಳಿಗೆಲ್ಲ ಹೆದರಿ ಕುಳಿತರಾಗುತ್ತಾ? ಮೊದಲವನ್ನು ಎಸೆಯಿರಿ. 

ಮತ್ತೆ ಬಂದಿದೆ ಟೀ ಲೆನ್ತ್ ಟ್ರೆಂಡ್; ಮುಜುಗರಕ್ಕೆ ಹೇಳಿ ಬೈ!

ಹಳೆಯ ಜುವೆಲ್ಲರಿ

ಹಳೆಯ ಜುವೆಲ್ಲರಿಗಳಲ್ಲಿ ಕೆಲವೊಂದು ಇಯರಿಂಗ್ಸ್ ಒಂಟಿ ಪಿಶಾಚಿಗಳಂತೆ ಜೋಡಿ ಕಳೆದುಕೊಂಡು ಹಳಹಳಿಸುತ್ತಾ ಕುಳಿತಿದ್ದರೆ, ಮತ್ತೆ ಕೆಲವು ಸರಗಳು ತುಕ್ಕು ಹಿಡಿದಿರುತ್ತವೆ. ಒಂದೆರಡು ಪ್ಲ್ಯಾಸ್ಟಿಕ್ ರಿಂಗ್ಸ್, ಬಣ್ಣಬಣ್ಣದ ಗೆಜ್ಜೆ ಕಾಲೇಜು ಸಮಯದಲ್ಲಿ ತೆಗೆದುಕೊಂಡಿದ್ದು, ಈಗ ಹಾಕಿದರೆ ಯಾರಾದರೂ ನಕ್ಕಾರು ಎಂಬ ಭಯ, ಚಿಕ್ಕಂದಿನಲ್ಲಿ ಡ್ಯಾನ್ಸ್‌ಗೆ ಹಾಕುತ್ತಿದ್ದ ಬೈತಲೆ ಬಟ್ಟು, ಒಂದಿಷ್ಟು ಕೈಗೆ ಹಿಡಿಯದ ಬಳೆಗಳು.... ಅವುಗಳಾದರೂ ಎಷ್ಟು ದಿನ ಈ ಕತ್ತಲ ಕೂಪದಲ್ಲೇ ಸಾಯಬೇಕು? ಕಸಕ್ಕೆಸೆದರೆ ಬೆಳಕನ್ನು ನೋಡಿ ತೃಪ್ತಿಯಿಂದ ಪ್ರಾಣ ಬಿಟ್ಟಾವು!