Earning 1 lakh in village: ತಿಂಗಳಿಗೆ ₹1 ಲಕ್ಷ ಖಾತೆಗೆ ಜಮಾ ಆಗುತ್ತೆ, ಹಳ್ಳಿಯಲ್ಲೇ ಇರುವುದರಿಂದ ಯಾವುದೇ ಖರ್ಚೂ ಇಲ್ಲ. ಆದರೆ ಇಷ್ಟೆಲ್ಲಾ ಇದ್ದರೂ ಆತ ಇದ್ದಕ್ಕಿದ್ದಂತೆ ಬ್ಯಾಗ್ ಪ್ಯಾಕ್ ಮಾಡಿಕೊಂಡು ಪಟ್ಟಣಕ್ಕೆ ಹೊರಟುನಿಂತಿದ್ದಾನೆ! ಕೈತುಂಬಾ ದುಡ್ಡಿದ್ದರೂ ಆತ ಹಳ್ಳಿಯನ್ನು ಬಿಡಲು ಹೊರಟಿದ್ದು ಯಾಕೆ? ಆತನ ಈ ನಿರ್ಧಾರದ ಹಿಂದಿರುವ ಅಸಲಿ ಸೀಕ್ರೆಟ್ ಇಲ್ಲಿದೆ ನೋಡಿ.

ಕೊರೊನಾ ನಂತರ ಐಟಿ ಕ್ಷೇತ್ರದಲ್ಲಿ 'ವರ್ಕ್ ಫ್ರಂ ಹೋಮ್' (WFH) ಸಂಸ್ಕೃತಿ ವ್ಯಾಪಕವಾಗಿ ಜನಪ್ರಿಯತೆ ಪಡೆಯಿತು. ಮೆಟ್ರೋ ನಗರಗಳ ಟ್ರಾಫಿಕ್ ಕಿರಿಕಿರಿ, ವಿಪರೀತ ಬಾಡಿಗೆ ಹಾಗೂ ಮಾಲಿನ್ಯದಿಂದ ತಪ್ಪಿಸಿಕೊಂಡು ಅನೇಕರು ತಮ್ಮ ಹುಟ್ಟೂರು, ಹಳ್ಳಿ ಅಥವಾ ಪ್ರಕೃತಿಯ ಮಡಿಲಿಗೆ ಮರಳಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಹಳ್ಳಿಯ ನಿಶ್ಯಬ್ದ ಜೀವನ ಎಲ್ಲರಿಗೂ ಅಷ್ಟು ಸುಲಭವಾಗಿ ಒಗ್ಗುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದರೂ, ಹಳ್ಳಿಯ ಬದುಕಿಗೆ ಸಂಪೂರ್ಣ ಬೇಸತ್ತು ನಗರಕ್ಕೆ ಶಿಫ್ಟ್ ಆಗಲು ಚಿಂತಿಸುತ್ತಿರುವ ಯುವ ಟೆಕ್ಕಿಯೊಬ್ಬನ ಕಥೆ ಈಗ ಸೋಶಿಯಲ್ ಮೀಡಿಯಾ ವೇದಿಕೆಯಾದ ರೆಡ್ಡಿಟ್‌ನಲ್ಲಿ (Reddit) ಭರ್ಜರಿ ಚರ್ಚೆಗೆ ಗ್ರಾಸವಾಗಿದೆ.

"ಹಣ ಉಳಿಯುತ್ತಿದೆ ನಿಜ, ಆದ್ರೆ ಲೈಫೇ ಬೋರ್ ಆಗಿದೆ!"

ಸುಮಾರು ಒಂದು ವರ್ಷದ ಕೆಲಸದ ಅನುಭವ ಹೊಂದಿರುವ ಈ ಸಾಫ್ಟ್‌ವೇರ್ ಇಂಜಿನಿಯರ್, ಹಳ್ಳಿಯಲ್ಲೇ ಕುಳಿತು ಸಂಪೂರ್ಣ 'ರಿಮೋಟ್' (ಮನೆಯಿಂದಲೇ ಕೆಲಸ) ಮಾಡುತ್ತಿದ್ದಾರೆ. ರೆಡ್ಡಿಟ್‌ನ r/developersIndia ಪೇಜ್‌ನಲ್ಲಿ ತಮ್ಮ ಅಳಲು ತೋಡಿಕೊಂಡಿರುವ ಅವರು

"ಆರ್ಥಿಕ ದೃಷ್ಟಿಯಿಂದ ನೋಡಿದರೆ ಹಳ್ಳಿಯ ಜೀವನ ಅತ್ಯುತ್ತಮವಾಗಿದೆ. ಮನೆ ಬಾಡಿಗೆ ಇಲ್ಲ, ಖರ್ಚು ತೀರಾ ಕಡಿಮೆ. ತಿಂಗಳ ಸಂಬಳದಲ್ಲಿ ಸಿಂಹಪಾಲು ಉಳಿತಾಯ ಮಾಡಬಹುದು. ಆದರೆ, ನಿಜ ಹೇಳಬೇಕೆಂದರೆ ಇಲ್ಲಿನ ಜೀವನ ನನಗೆ ಸಿಕ್ಕಾಪಟ್ಟೆ ಬೋರ್ ಎನಿಸುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಜಿಮ್ ಇಲ್ಲ, ಸಿನಿಮಾ ಇಲ್ಲ, ಸ್ವಿಗ್ಗಿ-ಝೊಮ್ಯಾಟೋ ಕೂಡ ಇಲ್ಲ!

ಹಳ್ಳಿಯ ದಿನಚರಿ ತಮಗೆ ಏಕೆ ಕಷ್ಟವಾಗುತ್ತಿದೆ ಎಂಬುದನ್ನು ವಿವರಿಸಿರುವ ಟೆಕ್ಕಿ, "ವಾರಾಂತ್ಯದಲ್ಲಿ ಎಲ್ಲಿಗಾದರೂ ಹೋಗೋಣ ಎಂದರೆ ಇಲ್ಲಿ ಯಾವುದೇ ಜಾಗಗಳಿಲ್ಲ. ಜಿಮ್ ಇಲ್ಲ, ಸಿನಿಮಾ ಥಿಯೇಟರ್ ಇಲ್ಲ (ನನಗೆ ಸಿನಿಮಾ ನೋಡುವುದೆಂದರೆ ತುಂಬಾ ಇಷ್ಟ), ಕೆಫೆಗಳಿಲ್ಲ. ಅಷ್ಟೇ ಏಕೆ, ಹೊರಗಡೆಯಿಂದ ಏನಾದರೂ ರುಚಿಯಾಗಿ ತಿನ್ನಲು ಸ್ವಿಗ್ಗಿ (Swiggy) ಅಥವಾ ಝೊಮ್ಯಾಟೋ (Zomato) ಡೆಲಿವರಿ ಕೂಡ ಇಲ್ಲ! ಬೆಳಗ್ಗೆ ಏಳುವುದು, ಕೆಲಸ ಮಾಡುವುದು, ಮೊಬೈಲ್ ನೋಡುವುದು, ಮಲಗುವುದು... ನನ್ನ ಬದುಕು ಕೇವಲ ಇಷ್ಟೇ ಆಗಿದೆ. ಎಲ್ಲಾದರೂ ಹೊರಗೆ ಹೋಗಿ ತಿನ್ನಲು ಅಥವಾ ತಿರುಗಾಡಲು ಜಾಗವೇ ಇಲ್ಲ" ಎಂದು ಬೇಸರ ಹೊರಹಾಕಿದ್ದಾರೆ.

ಉಳಿತಾಯ ಮುಖ್ಯವೋ? ಜೀವನಶೈಲಿ ಮುಖ್ಯವೋ?

ಈ ಬೇಸರದಿಂದ ಹೊರಬರಲು ಅವರು ತಮ್ಮ ಗ್ರಾಮದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ 'ಕೋಟಾ' ನಗರಕ್ಕೆ ಶಿಫ್ಟ್ ಆಗಲು ಯೋಜಿಸುತ್ತಿದ್ದಾರೆ. ನಗರಕ್ಕೆ ಹೋದರೆ ಜಿಮ್, ಥಿಯೇಟರ್, ರೆಸ್ಟೋರೆಂಟ್‌ಗಳು ಸಿಗುತ್ತವೆ. ಆದರೆ, ಕುಟುಂಬವನ್ನು ಬಿಟ್ಟು ನಗರಕ್ಕೆ ಹೋದರೆ ಮನೆ ಬಾಡಿಗೆ, ಊಟ, ವಿದ್ಯುತ್ ಬಿಲ್ ಎಲ್ಲವೂ ಸೇರಿ ಉಳಿತಾಯ ಕಡಿಮೆಯಾಗುತ್ತದೆ ಎಂಬ ಚಿಂತೆ ಅವರದ್ದು.

"ಯೌವನದಲ್ಲೇ ಜೀವನವನ್ನು ಆನಂದಿಸದಿದ್ದರೆ, ಕೈತುಂಬಾ ಸಂಪಾದಿಸಿ ಏನು ಪ್ರಯೋಜನ? ಬೇರೆಡೆ ಹೋಗಿ ಬದುಕುವ ಸ್ವಾತಂತ್ರ್ಯ ನನಗಿರುವಾಗ ನಾನೇಕೆ ಹಳ್ಳಿಯಲ್ಲೇ ಕೊಳೆಯಬೇಕು?" ಎಂದು ಅವರು ನೆಟ್ಟಿಗರ ಮುಂದೆ ಪ್ರಶ್ನೆ ಇಟ್ಟಿದ್ದಾರೆ.

ನೆಟ್ಟಿಗರು ನೀಡಿದ ಕ್ರಿಯೇಟಿವ್ ಸಲಹೆಗಳೇನು?

ಈ ಪೋಸ್ಟ್‌ಗೆ ನೂರಾರು ನೆಟ್ಟಿಗರು ಕಮೆಂಟ್ ಮಾಡಿದ್ದು, ರಿಮೋಟ್ ಕೆಲಸ ಮಾಡುವವರಿಗೆ ಹಲವು ಅದ್ಭುತ ಐಡಿಯಾಗಳನ್ನು ನೀಡಿದ್ದಾರೆ…

"ಕೇವಲ ಅನುಭವಕ್ಕಾಗಿಯಾದರೂ ನೀವು ನಗರಕ್ಕೆ ಹೋಗಿ ಸ್ವತಂತ್ರವಾಗಿ ಬದುಕಿ ನೋಡಿ. ಅದು ಇಷ್ಟವಾಗದಿದ್ದರೆ ಮತ್ತೆ ಹಳ್ಳಿಗೆ ಮರಳಬಹುದು. ಕನಿಷ್ಠ ಪ್ರಯತ್ನಿಸಲಿಲ್ಲ ಎಂಬ ಪಶ್ಚಾತ್ತಾಪವಾದರೂ ಉಳಿಯುವುದಿಲ್ಲ" ಎಂದು ಒಬ್ಬರು ಸಲಹೆ ನೀಡಿದ್ದಾರೆ.

ನಗರದ ಬದಲು 'ವರ್ಕೇಶನ್' (Workation) ಮಾಡಿ

ಮತ್ತೊಬ್ಬ ಬಳಕೆದಾರರು, "ಕೇವಲ ಒಂದೇ ನಗರಕ್ಕೆ ಹೋಗಿ ಬಾಡಿಗೆ ಕಟ್ಟಿ ಉಳಿಯುವ ಬದಲು, ಹಿಮಾಚಲ ಪ್ರದೇಶ, ಮನಾಲಿ, ರಿಷಿಕೇಶ್ ಅಥವಾ ಗೋವಾದಂತಹ ಪ್ರವಾಸಿ ತಾಣಗಳಿಗೆ ಹೋಗಿ. ಅಲ್ಲಿ ಉತ್ತಮ ವೈಫೈ ಇರುವ ಅಗ್ಗದ ಹಾಸ್ಟೆಲ್‌ಗಳು (Zostels/Workstations) ಸಿಗುತ್ತವೆ. ತಿಂಗಳಿಗೆ 2-3 ವಾರ ಪ್ರವಾಸ ಮಾಡುತ್ತಲೇ ಕೆಲಸ ಮುಗಿಸಿ, ನಂತರ ಮತ್ತೆ ಮನೆಗೆ ಬನ್ನಿ. ಇದರಿಂದ ಹೊಸ ಜಾಗಗಳೂ ಪರಿಚಯವಾಗುತ್ತವೆ, ಪ್ರಕೃತಿ ಸೌಂದರ್ಯವೂ ಸಿಗುತ್ತದೆ ಮತ್ತು ಕೆಲಸವೂ ಸುಲಭವಾಗುತ್ತದೆ" ಎಂದು ಕಿವಿಮಾತು ಹೇಳಿದ್ದಾರೆ.

ಒಟ್ಟಿನಲ್ಲಿ, ದುಡ್ಡಿನ ಉಳಿತಾಯ ಮುಖ್ಯವೋ ಅಥವಾ ಮಾನಸಿಕ ಉಲ್ಲಾಸ ಮತ್ತು ಉತ್ತಮ ಜೀವನಶೈಲಿ ಮುಖ್ಯವೋ ಎಂಬ ಗೊಂದಲದಲ್ಲಿರುವ ಈ ಯುವ ಟೆಕ್ಕಿಯ ಕಥೆ, ಇಂದಿನ ಅನೇಕ 'ವರ್ಕ್ ಫ್ರಂ ಹೋಮ್' ಉದ್ಯೋಗಿಗಳ ನಿಜವಾದ ವಾಸ್ತವಕ್ಕೆ ಕನ್ನಡಿ ಹಿಡಿದಿದೆ.