ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ, ಚಿನ್ನ ಮಿಶ್ರಿತ ಮಣ್ಣನ್ನು ಕಳವು ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಹಲವರನ್ನು ಉರಿಗಾಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಣಿ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಕೋಲಾರ: ದಿನೇ ದಿನೇ ಚಿನ್ನದ ಬೆಲೆ ಕಾಣುತ್ತಿರುವ ಸಂದರ್ಭದಲ್ಲಿ 2001ರಲ್ಲಿ ಮುಚ್ಚಿರುವ ಚಿನ್ನದ ಗಣಿಗಳ ಪ್ರದೇಶದಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಕೊರೆದು ಚೀಲಗಳಲ್ಲಿ ತುಂಬಿಕೊಂಡು ಕಳವು ಮಾಡುತ್ತಿದ್ದ ಮಹಿಳೆಯರನ್ನು ಉರಿಗಾಂ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉರಿಗಾಂ ಠಾಣಾ ವ್ಯಾಪ್ತಿಗೆ ಸೇರಿದ ಬಿಜಿಎಂಎಲ್‌ಗೆ ಸೇರಿದ ಗಿಲ್ಬರ್ಟ್ ಶಾಫ್ಟ್‌ನ ಹಿಂಭಾಗದಲ್ಲಿ ಸೆಕ್ಯೂರಿಟಿ ಗಾರ್ಡ್ ತ್ಯಾಗವೇಲು ಗಸ್ತು ಮಾಡುತ್ತಿದ್ದಾಗ ಆರೋಪಿಗಳಾದ ಕಾರ್ತಿಕ್, ಶ್ಯಾಮ್ ವಿಜಯ್, ವೇಲಾಂಗಣಿ, ಸೌಂದರಿ, ಸುಜಾತ, ಮೇರಿ, ರಿಚರ್ಡ್ ಎಂಬುವವರು ಬಿಜಿಎಂಎಲ್‌ಗೆ ಸೇರಿದ ಗಿಫ್ಫಾರ್ಟ್ ಶಾಫ್ಟ್ ಕಾಂಪೌಂಡ್‌ಗೆ ಅಳವಡಿಸಿದ್ದ ಕಬ್ಬಿಣದ ಕಂಬಿಗಳಿಂದ ಕೂಡಿದ್ದ ಬೇಲಿಯನ್ನು ಕಿತ್ತು ಒಳಗೆ ಪ್ರವೇಶಿಸಿ ಗಿಫ್ಫಾರ್ಟ್ ಶಾಫ್ಟ್ನ ಹಿಂಭಾಗದಲ್ಲಿ ಬಿದ್ದಿರುವ ಚಿನ್ನ ಮಿಶ್ರಿತ ಮಣ್ಣನ್ನು ಕೊರೆದು ಮೂಟೆಗಳಲ್ಲಿ ತುಂಬಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದುದು ಪತ್ತೆಯಾಗಿದ್ದು, ಕೂಡಲೇ ಆರೋಪಿಗಳನ್ನು ಹಿಡಿದು ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿದ್ದಾರೆ.

41 ಸಾವಿರ ಬೆಲೆ ಬಾಳುವ ಚಿನ್ನ ಮಿಶ್ರಿತ ಮಣ್ಣು ವಶಕ್ಕೆ

ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 12 ಸಿಮೆಂಟ್ ಮೂಟೆಗಳಲ್ಲಿ ತುಂಬಿಸಿದ್ದ 41 ಸಾವಿರ ಬೆಲೆ ಬಾಳುವ ಚಿನ್ನ ಮಿಶ್ರಿತ ಮಣ್ಣು, 6 ಕಬ್ಬಿಣದ ಕೊಕ್ಕಿಗಳು, 2 ಪ್ಲಾಸ್ಟಿಕ್ ಬಾಣಲಿ, 2 ಸನಿಕೆ, ಒಂದು ಕಬ್ಬಿಣದ ಹಾರೆಯನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಚಿನ್ನದ ಗಣಿಗಳ ಪ್ರದೇಶದಲ್ಲಿ ಚಿನ್ನದ ಅಧಿರು ಮಿಶ್ರಿತ ಮಣ್ಣಿನ ಎರಡು ಪ್ರಕರಣಗಳು ದಾಖಲಾಗಿದ್ದು, 12 ಸಿಮೆಂಟ್ ಚೀಲಗಳ ಚಿನ್ನ ಮಿಶ್ರಿತ ಮಣ್ಣನ್ನು ವಶಪಡಿಕೊಳ್ಳಲಾಗಿದೆ ಎಂದು ಎಸ್ಪಿ ಶಿವಾಂಶು ರಜಪೂತ್ ತಿಳಿಸಿದ್ದಾರೆ. 

ಇದನ್ನೂ ಓದಿ: ಕೋಲಾರಕ್ಕೆ ಜಪಾನ್‌ ಜಾಕ್‌ಪಾಟ್, 600 ಕೋಟಿ ಹೂಡಿಕೆಗೆ ಅಸ್ತು; ಧಾರವಾಡದಲ್ಲಿ ಎಂಜಿನಿಯರ್ ಉದ್ಯೋಗ ಸೃಷಿ

ಚಿನ್ನದ ಗಣಿಗಳ ಭದ್ರತಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ

ಈಗಾಗಲೇ ಚಿನ್ನದ ಗಣಿಗಳ ಪ್ರದೇಶದಲ್ಲಿ ಪೊಲೀಸ್‌ರು ಪಹರೆಯನ್ನು ಬಿಗಿಗೊಳಿಸಲಾಗಿದ್ದು, ಇದರ ಜೊತೆಗೆ ಚಿನ್ನದ ಗಣಿಗಳ ಭದ್ರತಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ನಿಷೇದಿತ ಚಿನ್ನದ ಗಣಿಗಳ ಪ್ರದೇಶದಲ್ಲಿ ಚಿನ್ನದ ಅದಿರು ಮಿಶ್ರಿತ ಮಣ್ಣನ್ನು ತೆಗೆಯಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಕೋಲಾರದಲ್ಲಿ 10 ಸಾವಿರ ಕೋಟಿ ಚಿನ್ನದ ಗಣಿಗಾರಿಕೆ ಯೋಜನೆ!