ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಟಗಾನಹಳ್ಳಿ ಗ್ರಾಮದಲ್ಲಿ, ಪತ್ನಿಯೊಂದಿಗೆ ಸೋದರ ಮಾವನಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಅಳಿಯನೇ ಮಾವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಹೊಸಕೋಟೆಯಿಂದ ಬಂದಿದ್ದ ನಯಾಜ್ ಖಾನ್ ಎಂಬುವವರನ್ನು ಆರೋಪಿ ಶಾಹಿದ್ ಖಾನ್ ಕೊಲೆ ಮಾಡಿದ್ದಾನೆ.
ಕೋಲಾರ: ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ಶಂಕೆಯಿಂದ ಭೀಕರ ಹತ್ಯೆ ಪ್ರಕರಣವೊಂದು ಮಾಲೂರು ತಾಲೂಕಿನ ಮಿಟಗಾನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪತ್ನಿಯೊಂದಿಗೆ ಸೋದರ ಮಾವನಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನ ಹಿನ್ನೆಲೆಯಲ್ಲಿ ಅಳಿಯನೇ ಮಾವನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ.
ಮೃತನನ್ನು ನಯಾಜ್ ಖಾನ್ (38) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಶಾಹಿದ್ ಖಾನ್ (33) ಎಂದು ಗುರುತಿಸಲಾಗಿದೆ. ಶಾಹಿದ್ ಖಾನ್ ಮೃತ ನಯಾಜ್ ಖಾನ್ ಅವರ ಸಹೋದರಿಯ ಪುತ್ರನಾಗಿದ್ದು, ಮಾವ–ಅಳಿಯ ಸಂಬಂಧ ಹೊಂದಿದ್ದರು.
ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಶಾಹಿದ್ ಖಾನ್ ಅವರ ಪತ್ನಿಯೊಂದಿಗೆ ನಯಾಜ್ ಖಾನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಕಳೆದ ಕೆಲ ದಿನಗಳಿಂದ ಶಾಹಿದ್ ಮನಸ್ಸಿನಲ್ಲಿ ಕಾಡುತ್ತಿತ್ತು. ಇದೇ ವಿಚಾರವಾಗಿ ಕುಟುಂಬದೊಳಗೆ ಈಗಾಗಲೇ ಅಸಮಾಧಾನ ಹಾಗೂ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಇಂದು ಬೆಳಿಗ್ಗೆ ನಯಾಜ್ ಖಾನ್ ಹೊಸಕೋಟೆ ಯಿಂದ ಶಾಹಿದ್ ಖಾನ್ ವಾಸವಿದ್ದ ಮಿಟಗಾನಹಳ್ಳಿ ಗ್ರಾಮಕ್ಕೆ ಬಂದಿದ್ದಾನೆ. ಈ ವೇಳೆ ಪತ್ನಿಯೊಂದಿಗೆ ಇರುವ ಸಂಬಂಧದ ವಿಚಾರವನ್ನು ಶಾಹಿದ್ ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದು ವಾಗ್ವಾದ ತೀವ್ರ ಸ್ವರೂಪ ಪಡೆದಿದೆ. ಈ ವೇಳೆ ಶಾಹಿದ್ ಖಾನ್, ಕೈಯಲ್ಲಿದ್ದ ಚಾಕುವಿನಿಂದ ನಯಾಜ್ ಖಾನ್‌ಗೆ ಹಲವು ಬಾರಿ ಇರಿದಿದ್ದಾನೆ. ಗಂಭೀರ ಗಾಯಗಳಿಂದ ನಯಾಜ್ ಖಾನ್ ಸ್ಥಳದಲ್ಲೇ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ.
ಕುಟುಂಬ ಹಿನ್ನೆಲೆ
ಆರೋಪಿ ಶಾಹಿದ್ ಖಾನ್‌ಗೆ ಮೂರು ಹೆಣ್ಣು ಮಕ್ಕಳು ಇದ್ದು, ಕುಟುಂಬ ಸಮೇತ ಮಿಟಗಾನಹಳ್ಳಿ ಪ್ರದೇಶದಲ್ಲಿ ಜಮೀನನ್ನು ಕಾಯುವ ಕೆಲಸ ಮಾಡುತ್ತಿದ್ದರು. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನವರಾದ ಶಾಹಿದ್ ಖಾನ್, ಕೆಲ ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ನೆಲೆಸಿದ್ದರು. ಘಟನೆಯ ಮಾಹಿತಿ ಪಡೆದ ತಕ್ಷಣ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಶಾಹಿದ್ ಖಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.


